ದಾವಣಗೆರೆ: ಪ್ರತ್ಯೇಕ ಲಿಂಗಾಯತ ಧರ್ಮದ ಬಗೆಗಿನ ನ್ಯಾ. ನಾಗಮೋಹನ ದಾಸ ವರದಿ ತಿರಸ್ಕರಿಸಲು ಸರ್ಕಾರಕ್ಕೆ ಆಗ್ರಹ

Update: 2018-03-07 18:59 GMT

ದಾವಣಗೆರೆ,ಮಾ.7: ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ನ್ಯಾ. ನಾಗಮೋಹನ ದಾಸ ನೀಡಿರುವ ವರದಿಯನ್ನು ಸರ್ಕಾರ ಈ  ಕೂಡಲೇ ತಿರಸ್ಕಾರ ಮಾಡಬೇಕು. ಇಲ್ಲದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ವೀರಶೈವ ಲಿಂಗಾಯತ ಸಮುದಾಯದ ಸುಮಾರು 25ಕ್ಕೂ ಅಧಿಕ ಮಠಾಧೀಶರರು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಗರದ ಶ್ರೀಶೈಲ ಮಠದಲ್ಲಿ ಬಾಲೆಹೊಸೂರಿನ ಶ್ರೀದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಲಿಂಗಾಯತ ಒಳ ಪಂಗಡದಲ್ಲಿ ಕುರುಬ ಲಿಂಗಾಯ ಎಂದಿದ್ದು, ಕುರುಬರನ್ನು ಲಿಂಗಾಯತ ಸಮಾಜದ ವ್ಯಾಪ್ತಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದರಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.

ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಜಾಹೀರಾತಿನಲ್ಲಿ ಸಮಸ್ತ ಲಿಂಗಾಯತ ಧರ್ಮದ 99 ಒಳಪಂಗಡಗಳು ಎಂಬುದಾಗಿ ನಮೂದಿಸಲಾಗಿದೆ. ಈ 99 ಒಳ ಪಂಗಡಗಳಲ್ಲಿ ಭೋವಿ, ಗಂಗಮತ, ಕಮ್ಮಾರ-ಬಡಿಗೇರಾ, ಕುಂಚಟಿಗ, ಭಜಂತ್ರಿ, ಮೇಧಾರ, ಸುಣಗಾರ, ಚಮ್ಮಾರ, ಛಲವಾದಿ ಜಾತಿಗಳನ್ನು ಉಪ ಪಂಗಡ ಎಂಬುದಾಗಿ ದಾಖಲಿಸಲಾಗಿದೆ. ಈ ಎಲ್ಲ ಸಮಾಜ ಬಾಂಧವರು ಎಸ್ಸಿ ಅಡಿಯಲ್ಲಿ ಪಡೆಯುತ್ತಿರುವ ಮೀಸಲಾತಿಯನ್ನು ಬಿಟ್ಟು, ಲಿಂಗಾಯತ ಧರ್ಮಕ್ಕೆ ಸೇರಲು ಇಚ್ಛಿಸುತ್ತಾರೆಯೇ ಎಂದು ಪ್ರಶ್ನಿಸಿದರು.

ವೀರಶೈವ-ಲಿಂಗಾಯತ ಧರ್ಮದ ಬಗ್ಗೆ ಪರಿಶೀಲನೆ ನಡೆಸಲು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದಲ್ಲಿ ರಚಿಸಿದ್ದು, ತಜ್ಞರ ಸಮಿತಿಯಲ್ಲ. ಅದೊಂದು ಅಜ್ಞರ ಸಮಿತಿ. ವೀರಶೈವ ಸಮಾಜದ ಬಗ್ಗೆ ತಿಳುವಳಿಕೆ ಇಲ್ಲದವರನ್ನು ಸಮಿತಿಗೆ ನೇಮಿಸಿ, ಸರ್ಕಾರ ತರಾತುರಿಯಲ್ಲಿ ವರದಿ ಪಡೆದು ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಕೊಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮುಂದಾಗಿರುವುದು ಸಮಾಜಕ್ಕೆ ಮಾಡಲು ಹೊರಟಿರುವ ಘೋರ ಅನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ಕೊಡಿಸಲು ಮುಂಚೂಣಿಯಲ್ಲಿರುವ ಗದುಗಿನ ತೋಂಟದಾರ್ಯ ಸ್ವಾಮೀಜಿಗಳು ಈ ಹಿಂದೆ ಗದುಗಿನ ವೀರಶೈವ ಅಧ್ಯಯನ ಸಂಸ್ಥೆಗೆ ಸೇರಿರುವ ಜಾಗವನ್ನು ಸಂಸ್ಥೆಯ ಸ್ವಯಂ ಧರ್ಮಗುರು ಎಂದು ಹೇಳಿ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ. ಲಿಂಗಾಯತರು ಮತ್ತು ವೀರಶೈವರು ಬೇರೆ ಬೇರೆ ಎನ್ನುವ ತೋಂಟದಾರ್ಯ ಸ್ವಾಮೀಜಿಗಳಿಗೆ ವೀರಶೈವ ಸಮಾಜದ ಆಸ್ತಿ ಮಾರುವ ಅಧಿಕಾರ ಯಾರು ನೀಡಿದ್ದರು ಎಂದು ಖಾರವಾಗಿ ಪ್ರಶ್ನಿಸಿದರು.

ಅಜ್ಞರ ಸಮಿತಿ ಕೊಟ್ಟಿರುವ ವರದಿಯಂತೆ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡಲು ಶಿಫಾರಸು ಮಾಡುವ ಮೂಲಕ ರಾಜ್ಯ ಸರ್ಕಾರ ಧರ್ಮ ವಿಭಜನೆಯನ್ನು ಸರಳವಾಗಿ ಪರಿಗಣಿಸಿದರೆ, ಇನ್ನುಎರಡೇ ತಿಂಗಳಿನಲ್ಲಿ ಕೆಟ್ಟ ನೋವು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸರ್ಕಾರ ರಚಿಸಿದ್ದ ತಜ್ಞರ ಸಮಿತಿಗೂ ವೀರಶೈವ ಸಮಾಜಕ್ಕೂ ಯಾವುದೇ ಸಂಬಂಧವಿಲ್ಲ. ಸಮಾಜದಲ್ಲಿ ಗೊಂದಲ ಮೂಡಿರುವುದು ಲಿಂಗಾಯತ ಧರ್ಮದ ಬಗ್ಗೆ ಪ್ರತಿಪಾದಿಸುತ್ತಿರುವವರ ಅಲ್ಪ ಮತಿಯಿಂದ. ತಜ್ಞರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಸದ ಬುಟ್ಟಿಗೆ ಬಿಸಾಡದೇ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಹೊರಟರೆ ನ್ಯಾಯಾಂಗದ ಮೊರೆ ಹೋಗುತ್ತೇವೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಬಾಳೆಹೊನ್ನೂರಿನ ರಂಭಾಪುರಿ ಶ್ರೀ ವೀರ ಸೋಮೇಶ್ವರ ಮಾತನಾಡಿ, ರಾಜ್ಯ ಸರ್ಕಾರ ಬಹುಸಂಖ್ಯಾತರ ಮನವಿಗೆ ಸ್ಪಂದಿಸದೆ ತಜ್ಞರ ಸಮಿತಿ ರಚನೆ ಮಾಡಿತ್ತು. ತಜ್ಞರ ಸಮಿತಿ ಆರು ತಿಂಗಳ ಕಾಲ ಕಾಲಾವಕಾಶ ಕೇಳಿದ್ದರೂ ಕೆಲ ಸಚಿವರ, ಮಠಾಧೀಶರ ಒತ್ತಡದಿಂದ ಎರಡು ತಿಂಗಳ ವರದಿ ನೀಡಿದೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದ ಅವರು, ರಾಜ್ಯ ಸರ್ಕಾರ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ಈ ತರದ ತಂತ್ರಗಾರಿಕೆಯನ್ನು ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಕೆಲವು ಮಠಾಧೀಶರು ವೀರಶೈವರು ಬೇರೆ ಲಿಂಗಾಯತರು ಬೇರೆ ಎಂದು ಹೇಳುವವರು ಬಸವಣ್ಣನವರಿಗೆ ಇನ್ಯಾವ ರೀತಿಯಲ್ಲಿ ಬೆಲೆ ಕೊಟ್ಟಾರು? ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ತಜ್ಞರ ಸಮಿತಿಯನ್ನು ಕೇಂದ್ರಕ್ಕೆ ಕಳುಹಿಸದೆ ವಜಾಗೊಳಿಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಉಜ್ಜಯಿನಿ ಜಗದ್ಗುರು ರಾಜದೇಶಿ ಕೇಂದ್ರ ಶ್ರೀ, ಹಂಪಿ ಹೇಮಕೂಟ ಸಂಗಬಸವ ಶ್ರೀ, ವಿಮಲ ರೇಣುಕಾ ಶ್ರೀ, ಅಭಿನವ ಚರಂತೇಶ್ವರ ಶ್ರೀ, ಓಂಕಾರ ಶಿವಾಚಾರ್ಯ ಶ್ರೀ, ಸಿದ್ದಲಿಂಗ ಶ್ರೀ, ಮಲ್ಲಿಕಾರ್ಜು ಶ್ರೀ, ಮಹೇಶ್ವರ ಶ್ರೀ, ಮಡಿಮಹಾಂತ ಶ್ರೀ, ಶಿವಲಿಂಗ ರುದ್ರಮುನಿ ಶ್ರೀ, ಶಿವಾನಂದ ಶ್ರೀ, ಪಂಚಾಕ್ಷರ ಶ್ರೀ, ನಂದೀಶ್ವರ ಶ್ರೀ, ಅಜಾತ ಶಂಭುಲಿಂಗ ಶ್ರೀ, ರಾಚೋಟೇಶ್ವರ ಶ್ರೀ, ರುದ್ರಮುನಿ ಶ್ರೀ, ಪುಗದೇಶ್ವರ ಶ್ರೀ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News