ಮಹಾತ್ಮಾ ಗಾಂಧಿ ಪ್ರತಿಮೆ ಧ್ವಂಸಗೈದ ಬಿಜೆಪಿ ಕಾರ್ಯಕರ್ತನ ಬಂಧನ

Update: 2018-03-08 15:16 GMT

ಹೊಸದಿಲ್ಲಿ, ಮಾ. 8: ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರತಿಮೆಗಳ ಮೇಲಿನ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದರೂ ಪ್ರತಿಮೆಗಳ ಮೇಲಿನ ದಾಳಿ ಅವ್ಯಾಹತವಾಗಿ ಮುಂದುವರಿದಿದೆ.

ಮಹಾತ್ಮಾ ಗಾಂಧಿ ಪ್ರತಿಮೆ ಧ್ವಂಸ: ಕೇರಳದ ಕಣ್ಣೂರಿನ ತಳಿಪರಂಬದ ತಾಲೂಕು ಕಚೇರಿ ಎದುರಿನ ಮಹಾತ್ಮಾ ಗಾಂಧಿ ಅವರ ಪ್ರತಿಮೆಯನ್ನು ಗುರುವಾರ ಬೆಳಗ್ಗೆ 7 ಗಂಟೆಗೆ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೆಲವೇ ಗಂಟೆಗಳಲ್ಲಿ ಪೊಲೀಸರು ದುಷ್ಕರ್ಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಯಾರಂನ ಪಳ್ಳಿಕುನ್ನು ನಿವಾಸಿ ದಿನೇಶ್ (42) ಬಂಧಿತ ಆರೋಪಿ. ಈತ ಬಿಜೆಪಿ ಕಾರ್ಯಕರ್ತ ಎಂದು ಪೊಲೀಸರು ತಿಳಿಸಿದ್ದಾರೆ. ದಿನೇಶ್ ಮಾನಸಿಕ ಅಸ್ವಸ್ಥನಾಗಿದ್ದು, ಆತ ಎರಡು ತಿಂಗಳ ಹಿಂದೆ ಚಿಕಿತ್ಸೆ ಪಡೆದಿದ್ದ ಎಂದು ಆತನ ಕುಟುಂಬದವರು ತಿಳಿಸಿದ್ದಾರೆ. ತಳಿಪರಂಬದ ತಾಲೂಕು ಕಚೇರಿ ಎದುರು ಇದ್ದ ಗಾಂಧಿ ಪ್ರತಿಮೆ ಮೇಲೆ ಹತ್ತಿದ ಈತ ಪ್ರತಿಮೆಯ ಕನ್ನಡಕ ಹಾಗೂ ಹೂಹಾರ ಕಿತ್ತೆಸೆದು ವಿರೂಪಗೊಳಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆಯನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕೆಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೆ ಈ ದೃಶ್ಯ ತಾಲೂಕು ಕಚೇರಿಯ ಸಿಸಿಟಿವಿಗಳಲ್ಲಿ ದಾಖಲಾಗಿದೆ. ಸಿಸಿಟಿವಿ ದೃಶ್ಯವನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬಿ.ಆರ್. ಅಂಬೇಡ್ಕರ್ ಪ್ರತಿಮೆ ಧ್ವಂಸ

ಚೆನ್ನೈಯಲ್ಲಿ ಬುಧವಾರ ರಾತ್ರಿ ಅಂಬೇಡ್ಕರ್ ಪ್ರತಿಮೆಗೆ ಬಣ್ಣ ಬಳಿದು ವಿರೂಪಗೊಳಿಸಲಾಗಿದೆ. ಆರೋಪಿಗಳನ್ನು ಪೊಲೀಸರು ಇದುವರೆಗೆ ಪತ್ತೆ ಹಚ್ಚಿಲ್ಲ. ರಾಜ್ಯಗಳಾದ್ಯಂತ ಪೊಲೀಸರು ಪ್ರತಿಮೆಗಳ ರಕ್ಷಣೆಗೆ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಹೊಸದಿಲ್ಲಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಾಗರೂಕವಾಗಿರುವಂತೆ ದಿಲ್ಲಿ ಪೊಲೀಸ್ ಎಲ್ಲ ಪೊಲೀಸ್ ಠಾಣೆಗಳಿಗೆ ನಿರ್ದೇಶಿಸಿದೆ. ಹನುಮಾನ್ ವಿಗ್ರಹಕ್ಕೆ ಹಾನಿ ಬಲ್ಲಿಯಾ (ಉತ್ತರಪ್ರದೇಶ): ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯಾ ಖಾರುವಾ ಗ್ರಾಮದಲ್ಲಿ ಹನುಮಾನ್ ವಿಗ್ರಹವನ್ನು ಅಪವಿತ್ರಗೊಳಿಸಲಾಗಿದೆ. ಇದರಿಂದ ಈ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಹನುಮಾನ್ ವಿಗ್ರಹಕ್ಕೆ ಹಾನಿ ಎಸಗಲಾಗಿದೆ. ವಿಗ್ರಹದ ಮೇಲೆ ಪೋಸ್ಟರ್ ಅಂಟಿಸಿರುವುದು ಕೂಡ ಪತ್ತೆಯಾಗಿದೆ ಎಂದು ನಾಗ್ರಾ ಪೊಲೀಸ್ ಠಾಣಾಧಿಕಾರಿ ರಾಮ್ ದಿನೇಶ್ ತಿವಾರಿ ತಿಳಿಸಿದ್ದಾರೆ. ಖಾರುವಾ ಗ್ರಾಮ ಮುಖ್ಯಸ್ಥ ದುಶ್ಯಂತ್ ಸಿಂಗ್ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ತೀವಾರಿ ಅವರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ತೀವಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News