2 ಬೀದಿನಾಯಿಗಳಿಗಾಗಿ ಕಾನ್ಪುರ ಐಐಟಿ ವಿರುದ್ಧ ಗರಂ ಆದ ಸಚಿವೆ ಮೇನಕಾ ಗಾಂಧಿ

Update: 2018-03-09 05:24 GMT

ಹೊಸದಿಲ್ಲಿ, ಮಾ. 9: ಕಾನ್ಪುರ ಐಐಟಿ ಕ್ಯಾಂಪಸ್‌ನಲ್ಲಿ ನಾಯಿ ಕಡಿತದ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಕ್ಯಾಂಪಸ್‌ನಿಂದ ಎರಡು ಬೀದಿನಾಯಿಗಳನ್ನು ತೆರವುಗೊಳಿಸಿದ ನಿರ್ಧಾರ ಇದೀಗ ವಿವಾದಕ್ಕೆ ಕಾರಣವಾಗಿದೆ.

ನಾಯಿ ತೆರವುಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸಚಿವೆ ಮತ್ತು ಪ್ರಾಣಿಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವನ್ನು ಆಗ್ರಹಿಸಿದ್ದಾರೆ.ಕೆಲ ಐಐಟಿ ವಿದ್ಯಾರ್ಥಿಗಳ ದೂರಿನ ಮೇರೆಗೆ ಸಚಿವೆ ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

"ಪಾರ್ಶ್ವವಾಯುಪೀಡಿತವಾಗಿದ್ದ ಎರಡು ಮುದಿ ನಾಯಿಗಳನ್ನು ಭದ್ರತಾ ಸಿಬ್ಬಂದಿ ತೆರವುಗೊಳಿಸಿ, ಹೊರಗೆ ಬಿಟ್ಟು ಬಂದಿದ್ದಾರೆ. ಕೆಲ ವಿದ್ಯಾರ್ಥಿಗಳು ಈ ಬಗ್ಗೆ ಪ್ರಾಣಿಗಳ ವಿರುದ್ಧ ಕ್ರೌರ್ಯ ತಡೆ ಸೊಸೈಟಿ (ಎಸ್‌ಪಿಜಿಎ)ಗೆ ದೂರು ನೀಡಿದ್ದಾರೆ. ಇವುಗಳ ಆರೈಕೆ ಹೊಣೆಯನ್ನು ಎಸ್‌ಪಿಜಿಎ ವಹಿಸಲು ಸಿದ್ಧವಿದೆ. ಆದರೆ ಎಲ್ಲಿ ಅವುಗಳನ್ನು ಬಿಡಲಾಗಿದೆ ಎಂದು ಹೇಳಲು ಐಐಟಿ ಅಧಿಕಾರಿಗಳು ತಯಾರಿಲ್ಲ" ಎಂದು ಪ್ರಕರಣದ ಅರಿವು ಇರುವ ವ್ಯಕ್ತಿಯೊಬ್ಬರು ವಿವರ ನೀಡಿದ್ದಾರೆ.

"ಐಐಟಿ-ಕೆ ನಿರ್ದೇಶಕರು ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿ ಸಭೆ ಕರೆದು, ಬೀದಿನಾಯಿಗಳಿಗೆ ತಿನಸು ನೀಡುವುದು ಗೊತ್ತಾದರೆ ಅವರನ್ನು ಉಚ್ಚಾಟಿಸ ಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದು ಕಾನೂನುಬಾಹಿರ. ಈ ಬಗ್ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ದೂರು ನೀಡಲಾಗಿದೆ. ನಾಯಿಗಳ ತೆರವು ಸುಪ್ರೀಂಕೋರ್ಟ್ ಮಾರ್ಗಸೂಚಿಯ ಉಲ್ಲಂಘನೆ" ಎಂದು ಹೇಳಿದ್ದಾರೆ.

ಕ್ಯಾಂಪಸ್‌ನಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ವರ್ಷ 87 ಪ್ರಕರಣಗಳು ವರದಿಯಾಗಿವೆ ಎಂದು ಐಐಟಿ ಅಧಿಕಾರಿಗಳು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ನಿವಾಸಿಗಳು ಬೀದಿನಾಯಿ ಕಾಟದ ಬಗ್ಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಾಸಸ್ಥಳದಿಂದ ಅವುಗಳನ್ನು ಕ್ಯಾಂಪಸ್‌ನಲ್ಲೇ ಬೇರೆಡೆಗೆ ಸಾಗಿಸಲಾಗುತ್ತದೆ. ನಿವಾಸಿಗಳ ಕಲ್ಯಾಣ ನಮಗೆ ಮುಖ್ಯ ಎಂದು ಐಐಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವಿದ್ಯಾರ್ಥಿಗಳ ದೂರಿನ ಮೇರೆಗೆ ನಾಯಿಗಳ ಸ್ಥಳಾಂತರಕ್ಕೆ ಭದ್ರತಾ ಸಿಬ್ಬಂದಿಗೆ ಸೂಚಿಸಲಾಗಿದೆ. ಆದ್ದರಿಂದ ಅವರ ಮೇಲೆ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News