ರಾಜೀವ್ ಗಾಂಧಿ ರಾಜಕೀಯ ಪ್ರವೇಶಿಸಬಾರದು ಎಂದು ಸೋನಿಯಾ ಬಯಸಿದ್ದೇಕೆ?

Update: 2018-03-09 11:26 GMT

ಮುಂಬೈ,ಮಾ.9: ತಮ್ಮ ಪತಿ ರಾಜೀವ್ ಗಾಂಧಿ ಅವರು ರಾಜಕೀಯಕ್ಕೆ ಪ್ರವೇಶಿಸುವುದು ಸೋನಿಯಾ ಗಾಂಧಿ ಅವರಿಗೆ ಇಷ್ಟವಿಲ್ಲದೇ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಂಡಿಯಾ ಟುಡೇ ಕಾಂಕ್ಲೇವ್ - 2018ರ ಮೊದಲ ದಿನದಂದು ಮಾತನಾಡಿದ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ, ರಾಜೀವ್ ಆವರ ರಾಜಕೀಯ ಪ್ರವೇಶದ ಬಗ್ಗೆ ತಮಗಿದ್ದಿದ್ದ ಭಯದ ವಿಚಾರದ ಬಗ್ಗೆ ಮನಬಿಚ್ಚಿ ಮಾತನಾಡಿದರು.

"ನನ್ನ ಪತಿ ರಾಜಕೀಯ ಪ್ರವೇಶಿಸಬಾರದೆಂಬುದಕ್ಕೆ ನನಗೆ ನನ್ನದೇ ಆದ ಕಾರಣಗಳಿದ್ದವು. ರಾಜೀವ್ ರಾಜಕೀಯ ಪ್ರವೇಶಿಸಿದರೆ ನಮ್ಮ ಕುಟುಂಬ ಜೀವನ ಬಾಧಿತವಾಗುವುದು ಎಂಬ ಭಯ ನನಗಿತ್ತು,'' ಎಂದು ಸೋನಿಯಾ ಹೇಳಿಕೊಂಡರು.

1984ರಲ್ಲಿ ಸೋನಿಯಾ ಅವರ ಅತ್ತೆ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯೇ ರಾಜೀವ್ ಅವರು ರಾಜಕೀಯ ಪ್ರವೇಶಿಸುವುದು ಸೋನಿಯಾ ಆತಂಕಕ್ಕೆ ಕಾರಣವಾಗಿತ್ತು. "ಒಂದು ವೇಳೆ ರಾಜೀವ್ ರಾಜಕೀಯ ಪ್ರವೇಶಿಸುವುದಕ್ಕೆ ನನ್ನ ವಿರೋಧ ಸ್ವಾರ್ಥದಿಂದ ಕೂಡಿದ್ದಾಗಿರಬಹುದು. ಆದರೂ ಅವರು ಹೇಗಾದರೂ ಮಾಡಿ ಅವರನ್ನು ಕೊಲ್ಲುತ್ತಿದ್ದರು ಎಂದೂ ನನಗನಿಸಿತ್ತು,'' ಎಂದು ಸೋನಿಯಾ ತಿಳಿಸಿದು. "ನಾನು ಸರಿಯಾಗಿಯೇ ಯೋಚಿಸಿದ್ದೆ, ನನ್ನ ಭಯ ನಿಜವಾಗಿತ್ತು,'' ಎಂದರು ಸೋನಿಯಾ.

"ಹಾಗಾದರೆ ನಿಮಗೆ ಪೂರ್ವಸೂಚನೆಯ ಅನುಭವವಾಗಿತ್ತೇ ?'' ಎಂದು ಇಂಡಿಯಾ ಟುಡೆ ಸಮೂಹದ ಅಧ್ಯಕ್ಷ ಹಾಗೂ ಮುಖ್ಯ ಸಂಪಾದಕ ಅರುಣ್ ಪುರಿ ಪ್ರಶ್ನಿಸಿದಾಗ "ಇಲ್ಲ, ಆದರೆ ನಮ್ಮ ಸುತ್ತಮುತ್ತ ಏನು ನಡೆಯುತ್ತಿತ್ತು ಎಂದು ನನಗೆ ಗೊತ್ತಿತ್ತು. ಆದರೆ ಆ ಹಂತದಲ್ಲಿ ಅದು (ರಾಜೀವ್ ರಾಜಕೀಯ ಪ್ರವೇಶ) ಅನಿವಾರ್ಯವಾಗಿತ್ತು. ಅವರು ಕಾಲು ಹಿಂದಕ್ಕಿಡುವ ಹಾಗಿರಲಿಲ್ಲ, ಅವರು ಅದಾಗಲೇ ರಾಜಕೀಯದಲ್ಲಿದ್ದರು,'' ಎಂದು ಸೋನಿಯಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News