ಕಾರ್ತಿ ಚಿದಂಬರಂಗೆ ಮಧ್ಯಂತರ ಪರಿಹಾರ ನೀಡಿದ ದಿಲ್ಲಿ ಹೈಕೋರ್ಟ್

Update: 2018-03-09 11:59 GMT

ಹೊಸದಿಲ್ಲಿ,ಮಾ.9 : ಐಎನ್‍ಎಕ್ಸ್ ಮೀಡಿಯಾ ಹಗರಣ ಸಂಬಂಧ ಕಳೆದ ವಾರ ಸಿಬಿಐನಿಂದ ಬಂಧಿಸಲ್ಪಟ್ಟು ಪ್ರಸಕ್ತ ಅದರ ಕಸ್ಟಡಿಯಲ್ಲಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ  ಮಾರ್ಚ್ 20ರ ತನಕ ಜಾರಿ ನಿರ್ದೇಶನಾಲಯದಿಂದ ನಡೆಯಬಹುದಾದ ಸಂಭಾವ್ಯ ಬಂಧನದಿಂದ ದಿಲ್ಲಿ ಹೈಕೋರ್ಟ್ ವಿನಾಯಿತಿ ನೀಡಿದೆ.

ಮಾರ್ಚ್ 9, ಅಂದರೆ ಇಂದು ಸಿಬಿಐ ಕಸ್ಟಡಿ ಅಂತ್ಯಗೊಳ್ಳುತ್ತಿದ್ದಂತೆಯೇ ಜಾರಿ ನಿರ್ದೇಶನಾಲಯ ತಮ್ಮನ್ನು ಬಂಧಿಸಬಹುದೆಂಬ ಭಯ ಕಾರ್ತಿಗಿತ್ತು. ಇಂದಿನ ದಿಲ್ಲಿ ಹೈಕೋರ್ಟ್ ಆದೇಶದನ್ವಯ ವಿಚಾರಣಾ ನ್ಯಾಯಾಲಯವೊಂದು ಕಾರ್ತಿ ಅವರಿಗೆ ಸಿಬಿಐ ಪ್ರಕರಣದಲ್ಲಿ ಜಾಮೀನು ನೀಡಿದ್ದೇ ಆದಲ್ಲಿ ಮುಂದಿನ ವಿಚಾರಣಾ ದಿನಾಂಕವಾದ ಮಾರ್ಚ್ 20ರ ತನಕ ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸುವ ಹಾಗಿಲ್ಲ.

ಜಾರಿ ನಿರ್ದೇಶನಾಲಯ ತಮಗೆ ನೀಡಿದ ಸಮನ್ಸ್ ರದ್ದುಪಡಿಸಬೇಕೆಂದು ಕೋರಿ ಕಾರ್ತಿ ಬುಧವಾರ ದಿಲ್ಲಿ ಹೈಕೋರ್ಟಿಗೆ ಅಪೀಲು ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಮುಂದೆ ದಾಖಲಿಸಲಾಗಿದ್ದ ಇಂತಹುದೇ ಅಪೀಲನ್ನು ವಾಪಸ್ ಪಡೆಯಲು ಅದು ಅನುಮತಿಸಿದ ನಂತರ ಕಾರ್ತಿ ಹೈಕೋರ್ಟಿಗೆ ಮೊರೆ ಹೋಗಿದ್ದರು.

ಜಾರಿ ನಿರ್ದೇಶನಾಲಯ ಕೂಡ ಐಎನ್‍ಎಕ್ಸ್ ಹಗರಣದ ಸಂಬಂಧವಾಗಿಯೇ  ಕಾರ್ತಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲು ಬಯಸಿದೆ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಕಾರ್ತಿಯನ್ನು ವಿಚಾರಣೆಗೊಳಪಡಿಸಿದೆ ಎಂದು ಕಾರ್ತಿ ಪರ ವಕೀಲರುಗಳಾದ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News