ತುಮಕೂರು : ಪಿ.ಎಸ್.ಐ ಅಮಾನತ್ತಿಗೆ ಆಗ್ರಹಿಸಿ ವಕೀಲರ ರಸ್ತೆ ತಡೆ

Update: 2018-03-09 15:37 GMT

ತುಮಕೂರು, ಮಾ.09 : ವಕೀಲರ ಮೇಲೆ ವಿನಾಕಾರಣ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುವ ಪಿ.ಎಸ್.ಐ ರಾಘವೇಂದ್ರ ಅವರನ್ನು ವರ್ಗಾವಣೆ ಮಾಡಿರುವುದರಿಂದ ವಕೀಲರ ಹೋರಾಟಕ್ಕೆ ನ್ಯಾಯ ದೊರೆಕಿಲ್ಲ. ಅವರನ್ನು ಸೇವೆಯಿಂದ ಅಮಾನತ್ತು ಪಡಿಸಬೇಕೆಂದು ಆಗ್ರಹಿಸಿ ಇಂದು ವಕೀಲರು ರಸ್ತೆ ತಡೆ ನಡೆಸಿ, ಎಸ್.ಪಿ ಅವರಿಗೆ ಮನವಿ ಸಲ್ಲಿಸಿದರು.

ಕಳೆದ ಐದು ದಿನಗಳ ಹಿಂದೆ ಕುವೆಂಪು ನಗರದ ನಿವಾಸಿ ಹಿರಿಯ ವಕೀಲ ಹನುಮಂತರಾಜು ಎಂಬವರ ಮನೆಗೆ ವಿಚಾರಣೆ ನೆಪದಲ್ಲಿ ಪ್ರವೇಶಿಸಿದ ಪಿ.ಎಸ್.ಐ ರಾಘವೇಂದ್ರ, ವಕೀಲರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಪಮಾನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸೋಮವಾರದಿಂದ ವಕೀಲರು ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.ಈ ಮಧ್ಯೆ ಪೊಲೀಸ್ ಇಲಾಖೆಯ ಪಿ.ಎಸ್.ಐ ರಾಘವೇಂದ್ರ ಅವರನ್ನು ಬೆಂಗಳೂರಿಗೆ ಕರ್ತವ್ಯಕ್ಕಾಗಿ  ನಿಯೋಜಿಸಿದೆ.

ವಕೀಲರು ಅಪಾದಿಸುತ್ತಿರುವ ಪಿ.ಎಸ್.ಐ ಅವರನ್ನು ಬೇರೆಡೆಗೆ ಕೆಲಸಕ್ಕೆ ನಿಯೋಜಿಸುವುದರಿಂದ ವಕೀಲರ ಹೋರಾಟಕ್ಕೆ ನ್ಯಾಯ ದೊರಕುವುದಿಲ್ಲ. ಅವರನ್ನು ಸೇವೆಯಿಂದ ಅಮಾನತ್ತು ಪಡಿಸಿ, ಇಲಾಖಾ ತನಿಖೆಗೆ ಒಳಪಡಿಸಬೇಕು ಎಂಬುದು ವಕೀಲರ ಒತ್ತಾಯವಾಗಿದ್ದು, ಇದುವರೆಗೂ ಈ ವಿಚಾರವಾಗಿ ನ್ಯಾಯಾಲಯದ ಆವರಣದಲ್ಲಿಯೇ ಪ್ರತಿಭಟನೆ ನಡೆಸುತಿದ್ದ ವಕೀಲರು ಇಂದು ನೂರಾರು ಬೈಕ್‍ಗಳಲ್ಲಿ ನಗರದ ಅಶೋಕ ರಸ್ತೆ ಮೂಲಕ ಟೌನ್‍ಹಾಲ್‍ಗೆ ಬಂದು ಕೆಲ ಕಾಲ ರಸ್ತೆ ತಡೆ ನಡೆಸಿದರು.ಅಲ್ಲದೆ ಬೈಕ್‍ ರ್ಯಾಲಿಯಲ್ಲಿಯೇ ಎಸ್.ಪಿ.ಕಚೇರಿಗೆ ತೆರಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಅವರಿಗೆ ಮನವಿ ಸಲ್ಲಿಸಿ, ನ್ಯಾಯಾಲಯದ ಆವರಣಕ್ಕೆ ತೆರಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News