ನೀರೇ ಇಲ್ಲವಾಗುವ ದಿನ...

Update: 2018-03-09 18:29 GMT

ನಗರದಲ್ಲಿರುವ ನೀರಿನ ಕೊರತೆ ಮತ್ತು ಅಂತರ್ಗತವಾಗಿಯೇ ಇರುವ ನೀರಿನ ಅಸಮಾನ ಬಳಕೆ ಮತ್ತು ವಿತರಣೆಯ ವ್ಯವಸ್ಥೆಗಳು ಒಂದೆಡೆಯಾದರೆ, ನೀರನ್ನು ಹೇಗೆ ಬಳಕೆ ಮಾಡಲಾಗುತ್ತಿದೆ ಮತ್ತು ಸಂರಕ್ಷಿಸಲಾಗುತ್ತಿದೆ ಎಂಬುದರಲ್ಲೂ ಒಂದು ವಿಸ್ತೃತವಾದ ಬಿಕ್ಕಟ್ಟಿದೆ. ಈ ಅತ್ಯಮೂಲ್ಯ ಮತ್ತು ಅತ್ಯವಶ್ಯಕ ಸಾರ್ವತ್ರಿಕ ಸಂಪನ್ಮೂಲದ ಬಗ್ಗೆ ನಾವು ಕುರುಡು ಧೋರಣೆಯನ್ನು ಅನುಸರಿಸುತ್ತಿದ್ದೇವೆ. ಈ ವಿಷಯದ ಬಗ್ಗೆ ಮೌಢ್ಯ ಮತ್ತು ಭ್ರಮೆಯೆಂಬ ಉಸುಕಿನಲ್ಲಿ ತಮ್ಮ ತಲೆಯನ್ನು ಹೂತಿಟ್ಟುಕೊಂಡಿರುವ ನಮ್ಮ ನಾಗರಿಕರು ಮತ್ತು ಆಡಳಿತವರ್ಗದವರು ಪ್ರತೀವರ್ಷವೂ ಬರುವ ಮಳೆ ಹೇಗೋ ತಮ್ಮನ್ನು ಬಚಾವು ಮಾಡುತ್ತದೆ, ನಮ್ಮ ನದಿ ಕೆರೆ, ಕೊಳ್ಳಗಳನ್ನು ತುಂಬುತ್ತದೆ, ಕುಸಿಯುತ್ತಿರುವ ಅಂತರ್ಜಲ ಮಟ್ಟವನ್ನು ಮೇಲಕ್ಕೆತ್ತುತ್ತದೆ ಎಂಬ ಭ್ರಮೆಯನ್ನು ಹೊಂದಿದ್ದಾರೆ.

ನೀರು ಇಲ್ಲದ ದಿನ (ಡೇ ಜೀರೋ- ಶೂನ್ಯ ದಿನ) ಸನ್ನಿಹಿತವಾಗುತ್ತಿದೆ. ಇದು ಭವಿಷ್ಯದಲ್ಲಿ ಯಾವಾಗಲೋ ಸಂಭವಿಸಬಹುದಾದ ವಿನಾಶಕಾರಿ ಆಪತ್ತಲ್ಲ. ಇತ್ತೀಚೆಗೆ ನಡೆದ ಕೆಲವು ಸರ್ವೇಗಳ ಪ್ರಕಾರ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಮತ್ತು ಭಾರತದ ಬೆಂಗಳೂರಿನಂಥ ಕೆಲವು ನಗರಗಳಲ್ಲಿ ಈ ಸನ್ನಿವೇಶ ಅತ್ಯಂತ ತ್ವರಿತವಾಗಿ ಎದುರಾಗಲಿದೆ. ಹೀಗಾಗಿ ಕೇಪ್‌ಟೌನ್ ನಗರವು ಕಠಿಣವಾದ ಕ್ರಮಗಳನ್ನು ತೆಗೆದುಕೊಂಡು ಪ್ರತೀ ಮನುಷ್ಯರಿಗೆ ಪ್ರತೀ ದಿನಕ್ಕೆ ಕೇವಲ 50 ಲೀಟರ್ ನೀರೆಂದು ನಿಗದಿಗೊಳಿಸಿ ತಾನೆದುರಿಸಬೇಕಿದ್ದ ಶೂನ್ಯ ದಿನವನ್ನು ಎಪ್ರಿಲ್‌ನಿಂದ ಜುಲೈಗೆ ಮುಂದೂಡುವಲ್ಲಿ ಯಶಸ್ವಿಯಾಗಿದೆ. ಒಂದು ವೇಳೆ ಮೇ ತಿಂಗಳಲ್ಲಿ ಬರಬೇಕಾದ ಮಳೆಯೂ ಕೈಕೊಟ್ಟರೆ ಕೇಪ್ ಟೌನಿನ ನಾಗರಿಕರು ಸಾರ್ವಜನಿಕ ನೀರು ವಿತರಣಾ ವ್ಯವಸ್ಥೆಯ ಎದುರು ಸಾಲುಗಟ್ಟಿ ನಿಲ್ಲಬೇಕಾಗುತ್ತದೆ. ಇಂಥದ್ದೇ ಸಾಧ್ಯತೆಗಳನ್ನು ಎದುರಿಸುತ್ತಿರುವ ನಗರಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ಮಾತ್ರ ಇಂತಹ ಯಾವುದೇ ಕಠಿಣ ಕ್ರಮಗಳನ್ನು ತೆಗೆದುಕೊಂಡಿಲ್ಲ. ಇದು ಒಂದು ಜಲಬಿಕ್ಕಟ್ಟನ್ನು ಎದುರಿಸಲು ಅನುಸರಿಸಲಾಗುತ್ತಿರುವ ವಾಸ್ತವವಾದಿ ಕ್ರಮಗಳಿಗೂ ಹಾಗೂ ನೀರಿನ ದುರ್ವ್ಯಯ ಹಾಗೂ ದೂರಗಾಮಿ ವಿವೇಕವಿಲ್ಲದ ಬಳಕೆಯನ್ನೂ ಒಳಗೊಂಡು ಹಲವಾರು ಕಾರಣಗಳಿಂದ ಒಂದು ಪ್ರಮುಖ ಜೀವನಾವಶ್ಯಕ ಸಂಪನ್ಮೂಲವೇ ಬತ್ತಿಹೋಗುತ್ತಿದ್ದರೂ ತೋರುತ್ತಿರುವ ಆತ್ಮವಂಚಕ ಧೋಣೆಗಳಿಗೂ ಇರುವ ವ್ಯತ್ಯಾಸವಾಗಿದೆ.

ಕೇಪ್ ಟೌನ್ ಭಾರತಕ್ಕೆ ಒಂದು ಮುನ್ನೆಚ್ಚರಿಕೆಯ ಗಂಟೆಯಾಗಿದೆ. ಏಕೆಂದರೆ ಭಾರತದ ಹಲವಾರು ಭಾಗಗಳು ಈಗಾಗಲೇ ಹಾಗೂ ಭವಿಷ್ಯದಲ್ಲೂ ನೀರಿನ ಸಂಬಂಧೀ ತುರ್ತುಸ್ಥಿತಿಯನ್ನು ಎದುರಿಸಲಿವೆ. ಇದು ಸಾರ್ವಜನಿಕ ಸಂಪನ್ಮೂಲದ ಬಳಕೆಯಲ್ಲಿ ಅಭಿವ್ಯಕ್ತಗೊಳ್ಳುತ್ತಿರುವ ಸಾಮಾಜಿಕ ಅಸಮಾನತೆಯನ್ನು ತೋರಿಸುತ್ತದೆ. ಕೇಪ್ ಟೌನಿನಂತೆ ಭಾರತದಲ್ಲೂ ಬಡವರು ಪ್ರತಿದಿನ ಗಂಟಾನುಗಟ್ಟಲೇ ನೀರಿಗಾಗಿ ಕಾಯುತ್ತಾ, ಸಿಕ್ಕ ನೀರಿಗೂ ಬೆಲೆ ತೆರುತ್ತಾ, ಹೇಗಾದರೂ ಮಾಡಿ ತಮಗೆ ದೊರಕುತ್ತಿರುವ ನೀರಿನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಹೆಣಗಾಡುತ್ತಾ ನಿರಂತರ ‘ಡೇ ಜೀರೋ’- ‘ಶೂನ್ಯ ನೀರಿನ ದಿನ’ವನ್ನು ಎದುರಿಸುತ್ತಿರುತ್ತಾರೆ. ಆದರೆ ಶ್ರೀಮಂತರಿಗೆ ನೀರು ಪೈಪಿನ ಮೂಲಕ ಮನೆಗೇ ಬರುತ್ತದೆ. ಅದನ್ನು ಮನೆಯ ಮೇಲಿನ ಟ್ಯಾಂಕಿಯಲ್ಲಿ ತುಂಬಿಸಿಕೊಂಡರೆ ಸಾಕು. ಬಳಸಲು ಹಾಗೆಯೇ ವ್ಯರ್ಥ ಮಾಡಲು ಬೇಕಾದಷ್ಟು ನೀರು ಲಭ್ಯವಾಗುತ್ತದೆ. ಅವರು ಬಳಸುವ ನೀರಿಗೆ ಅವರು ತೆರುವ ಬೆಲೆ ನೀರನ್ನು ಉಳಿತಾಯ ಮಾಡಲೇ ಬೇಕೆಂಬುದನ್ನು ಕಡ್ಡಾಯ ಮಾಡುವಷ್ಟಿಲ್ಲ. ಒಂದು ಅಸಮಾನ ಸಮಾಜದಲ್ಲಿ ಯಾವುದೇ ಪರಿಮಿತ ಸಂಪನ್ಮೂಲವನ್ನು ಬೆಲೆತೆತ್ತು ಪಡೆದುಕೊಳ್ಳುವವರಲ್ಲಿ ತಾವು ಅನಗತ್ಯವಾಗಿ ಅಮೂಲ್ಯವಾದ ಸಂಪತ್ತನ್ನು ಪೋಲು ಮಾಡುತ್ತಿದ್ದೇವೆ ಎಂಬ ಅಪರಾಧಿ ಮನೊೀಭಾವವನ್ನೂ ನಾಶಮಾಡಿಬಿಡುತ್ತದೆ.

ನಗರದಲ್ಲಿರುವ ನೀರಿನ ಕೊರತೆ ಮತ್ತು ಅಂತರ್ಗತವಾಗಿಯೇ ಇರುವ ನೀರಿನ ಅಸಮಾನ ಬಳಕೆ ಮತ್ತು ವಿತರಣೆಯ ವ್ಯವಸ್ಥೆಗಳು ಒಂದೆಡೆಯಾದರೆ, ನೀರನ್ನು ಹೇಗೆ ಬಳಕೆ ಮಾಡಲಾಗುತ್ತಿದೆ ಮತ್ತು ಸಂರಕ್ಷಿಸಲಾಗುತ್ತಿದೆ ಎಂಬುದರಲ್ಲೂ ಒಂದು ವಿಸ್ತೃತವಾದ ಬಿಕ್ಕಟ್ಟಿದೆ. ಈ ಅತ್ಯಮೂಲ್ಯ ಮತ್ತು ಅತ್ಯವಶ್ಯಕ ಸಾರ್ವತ್ರಿಕ ಸಂಪನ್ಮೂಲದ ಬಗ್ಗೆ ನಾವು ಕುರುಡು ಧೋರಣೆಯನ್ನು ಅನುಸರಿಸುತ್ತಿದ್ದೇವೆ. ಈ ವಿಷಯದ ಬಗ್ಗೆ ಮೌಢ್ಯ ಮತ್ತು ಭ್ರಮೆಯೆಂಬ ಉಸುಕಿನಲ್ಲಿ ತಮ್ಮ ತಲೆಯನ್ನು ಹೂತಿಟ್ಟುಕೊಂಡಿರುವ ನಮ್ಮ ನಾಗರಿಕರು ಮತ್ತು ಆಡಳಿತವರ್ಗದವರು ಪ್ರತೀವರ್ಷವೂ ಬರುವ ಮಳೆ ಹೇಗೋ ತಮ್ಮನ್ನು ಬಚಾವು ಮಾಡುತ್ತದೆ, ನಮ್ಮ ನದಿ ಕೆರೆ, ಕೊಳ್ಳಗಳನ್ನು ತುಂಬುತ್ತದೆ, ಕುಸಿಯುತ್ತಿರುವ ಅಂತರ್ಜಲ ಮಟ್ಟವನ್ನು ಮೇಲಕ್ಕೆತ್ತುತ್ತದೆ ಎಂಬ ಭ್ರಮೆಯನ್ನು ಹೊಂದಿದ್ದಾರೆ. ಒಂದೊಮ್ಮೆ ಮಳೆಯು ಕೈಕೊಟ್ಟರೆ ಆಗ ಜಾಗತಿಕ ತಾಪಮಾನ ಏರಿಕೆಯನ್ನೂ, ಹವಾಮಾನ ಬದಲಾವಣೆಯನ್ನೂ ದೂರುತ್ತಾ ಕೂರುತ್ತೇವೆಯೇ ಹೊರತು ಇಂದು ನಾವು ಮಾಡುವ ಉಳಿತಾಯವೇ ನಾಳಿನ ಬಳಕೆಯನ್ನು ಸಾಧ್ಯಗೊಳಿಸುತ್ತದೆ ಎಂಬ ಸಂಪನ್ಮೂಲ ಸಂರಕ್ಷಣೆಯ ಪ್ರಾಥಮಿಕ ತತ್ವವನ್ನು ಅರ್ಥಮಾಡಿಕೊಳ್ಳುವುದಿಲ್ಲ.

 ಇಂತಹ ಉದ್ದೇಶಪೂರ್ವಕ ಉಡಾಫೆಯ ಧೋರಣೆ ಇರುವುದರಿಂದಲೇ ನೀರಿನಂಥ ಸಂಪನ್ಮೂಲದ ಲಭ್ಯತೆ ಮತ್ತು ವಿತರಣೆಯ ಬಗ್ಗೆ ಯಾವುದೇ ಗ್ರಹಿಕೆ ಇಲ್ಲದೆ ನಮ್ಮ ನಗರಗಳು ಬೆಳೆಯುತ್ತಿವೆ. ಉದಾಹರಣೆಗೆ 1991ರಲ್ಲಿ ಬೆಂಗಳೂರು ನಗರವು 226 ಚದರ ಕಿಮೀ ವ್ಯಾಪ್ತಿಯಲ್ಲಿ 45 ಲಕ್ಷ ಜನಸಂಖ್ಯೆಯನ್ನು ಹೊಂದಿತ್ತು. ಆದರೆ ಇಂದು 800 ಚದರ ಕಿ.ಮೀ.ಯಲ್ಲಿ 1.35 ಕೋಟಿ ಜನರಿರುವ ನಗರವಾಗಿ ಬೆಳೆದಿದೆ. ನೀರಿನ ಲಭ್ಯತೆ ಮತ್ತು ಹಂಚಿಕೆಯಲ್ಲಿ ಬಿಕ್ಕಟ್ಟೆಂಬುದು ಶಾಶ್ವತವಾದ ಅಂಶವಾಗಿರುತ್ತದೆ. ಆದರೂ ಬೆಂಗಳೂರಿನಂತಹ ನಗರದ ಅಭಿವೃದ್ಧಿ ಯೋಜನೆಯಲ್ಲಿ ಈ ಅಮೂಲ್ಯ ಸಂಪತ್ತನ್ನು ಸಂರಕ್ಷಿಸಿಕೊಳ್ಳುವ, ನೀರನ್ನು ವ್ಯರ್ಥವಾಗಿ ಬಳಸುವುದನ್ನು ಮತ್ತು ಪೋಲು ಮಾಡುವುದನ್ನು ಕಡಿಮೆ ಮಾಡುವ ಮತ್ತು ಅಂಥವರಿಗೆ ಶಿಕ್ಷೆ ವಿಧಿಸುವ, ಹಿಂದೊಮ್ಮೆ ಅಪಾರ ಸಂಖ್ಯೆಯಲ್ಲಿದ್ದರೂ ಈಗ ಅಳಿದುಳಿದಿರುವ ಕೆರೆ-ಕಟ್ಟೆಗಳನ್ನು ಸಂರಕ್ಷಿಸುವ ಯಾವ ಕ್ರಮಗಳೂ ಜೊತೆಗೂಡಿರುವುದಿಲ್ಲ. ಬೆಂಗಳೂರು ಕುಡಿಯುವ ನೀರಿಗಾಗಿ ಕಾವೇರಿ ನದಿಯನ್ನು ಅವಲಂಬಿಸಿದೆ. ಇತ್ತೀಚಿನ ಕಾವೇರಿ ನದಿ ನೀರು ಹಂಚಿಕೆಯ ಪ್ರಕರಣದಲ್ಲೂ ಕರ್ನಾಟಕವು ತನ್ನ ಕುಡಿಯುವ ನೀರಿನ ದಾಹವನ್ನು ತಣಿಸಿಕೊಳ್ಳಲೆಂದೇ ಕಾವೇರಿಯಿಂದ ಹೆಚ್ಚಿನ ನೀರನ್ನು ಬಿಡಬೇಕೆಂದು ನ್ಯಾಯಾಲಯವನ್ನು ಕೋರಿತ್ತು. ಹಾಗೆಯೇ ಇನ್ನೂ ಸ್ವಲ್ಪಹೆಚ್ಚಿನ ನೀರನ್ನು ಪಡೆದುಕೊಳ್ಳಲು ಕರ್ನಾಟಕವು ಯಶ್ವಸಿಯಾಯಿತು. ಆದರೆ ಅದೂ ಸಹ ಬೆಂಗಳೂರಿನ ದಾಹವನ್ನಾಗಲೀ ಅಥವಾ ನೀರಿನ ಕೊರತೆಯನ್ನು ಸಮಾನವಾಗಿ ಎದುರಿಸುತ್ತಿರುವ ಇತರ ನಗರಗಳ ಕುಡಿಯುವ ನೀರಿನ ಕೊರತೆಯನ್ನಾಗಲೀ ಕಡಿಮೆ ಮಾಡುವುದಿಲ್ಲ.

 ಮನೆಬಳಕೆಗಿಂತ ವ್ಯವಸಾಯ ಕ್ಷೇತ್ರದಲ್ಲಿ ಹೆಚ್ಚಿನ ನೀರಿನ ಬಳಕೆಯಾಗುತ್ತದೆ. ಇಲ್ಲಿ ಕೂಡಾ ಇರುವ ಸಮಸ್ಯೆಯೇನೆಂಬುದನ್ನು ಎಲ್ಲರೂ ಬಲ್ಲರು. 1960ರಲ್ಲಿ ಪರಿಚಯಿಸಲಾದ ಹಸಿರು ಕ್ರಾಂತಿಯಿಂದ ನೀರಿನ ಬೇಡಿಕೆಯು ಹೆಚ್ಚಾಗಿದ್ದರೂ ಅದಕ್ಕೆ ಸರಿಸಮಾನವಾಗಿ ಮೇಲ್ಮೈ ನೀರಾವರಿ ನೀರಿನ ಪೂರೈಕೆ ಹೆಚ್ಚಾಗಿಲ್ಲ. ಹೀಗಾಗಿ ಭಾರತದ ಹಲವಾರು ಪ್ರದೇಶಗಳಲ್ಲಿ ಅಂತರ್ಜಲದ ಮೇಲಿನ ಅತಿ ಹೆಚ್ಚು ಅವಲಂಬನೆಯಿಂದಾಗಿ ಅದರ ಮಟ್ಟ ಕುಸಿಯುತ್ತಲೇ ಹೋಗುತ್ತಿದೆ. ಬದಲಿಗೆ ಅಂತರ್ಜಲದ ಮಟ್ಟವನ್ನು ಏರಿಸಲು ಬೇಕಾದ ಯಾವುದೇ ಮರುಪೂರಣ ಯೋಜನೆಗಳು ಅದೇ ಗತಿಯಲ್ಲಿ ಅನುಷ್ಠಾನಕ್ಕೆ ಬರಲಿಲ್ಲ. ಪ್ರತೀ ಸಲ ಮಳೆ ಕೈಕೊಟ್ಟಾಗಲೂ ಪರಿಸ್ಥಿತಿ ಬಿಗಡಾಯಿಸುತ್ತದೆ. ವಿಪರ್ಯಾಸವೆಂದರೆ ಮೇಲ್ಮೈ ನೀರನ್ನು ನೀರಾವರಿಗೆಂದು ಹರಿಸಿದಾಗಲೂ ಅದು ಅಗತ್ಯಗಳನ್ನೇನೂ ಪೂರೈಸುತ್ತಿಲ್ಲ. ಉದಾಹರಣೆಗೆ ನರ್ಮದಾ ನದಿ ನೀರಾವರಿ ಯೋಜನೆಯನ್ನೇ ನೋಡಿ. ಅಪಾರ ಪ್ರತಿಭಟನೆಗಳ ನಡುವೆಯೂ ನರ್ಮದಾ ನದಿಯ ಮೇಲೆ ಸರ್ದಾರ್ ಸರೋವರ್ ಅಣೆಕಟ್ಟೆಯನ್ನೂ ಒಳಗೊಂಡಂತೆ ಹಲವಾರು ಅಣೆಕಟ್ಟೆಗಳನ್ನು ಕಟ್ಟಲಾಯಿತು. ಆದರೂ ಇಂದು ನರ್ಮದಾ ನದಿ ನೀರಿನ ಮಟ್ಟ ಕುಸಿದಿದ್ದು ನೀರಾವರಿಗಾಗಿ ನರ್ಮದಾ ನದಿ ನೀರನ್ನು ಬಳಸಲು ಕಾಯುತ್ತಿರುವವರನ್ನು ಬಿಡಿ, ಕುಡಿಯುವ ನೀರಿಗಾಗಿ ಕೇವಲ ನರ್ಮದಾ ನದಿ ನೀರಿನ ಮೇಲೆ ಅವಲಂಬಿತವಾಗಿರುವ ಹಲವಾರು ನಗರಗಳ ದಾಹವನ್ನು ನೀಗಿಸಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಅಹಮದಾಬಾದಿನ ಮೂಲಕ ಹರಿದುಹೋಗುವ ಬರಿದಾದ ಸಬರಮತಿ ನದಿಗೆ ನರ್ಮದೆಯನ್ನು ಹರಿಸಲಾಗಿದೆ. ಅಲ್ಲಿ ನಗರದ ಜನರ ದಾಹವನ್ನು ಇಂಗಿಸುವ ಹೆಸರಿನಲ್ಲಿ ನದಿದಂಡೆಯುದ್ದಕ್ಕೂ ಹಲವಾರು ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

 ಇದೇ ಮಾರ್ಚ್ 22ರಂದು ಭಾರತವೂ ಸಹ ತಥಾಕಥಿತ ‘ವಿಶ್ವ ಜಲ ದಿನ’ವನ್ನು ಆಚರಿಸಲಿದೆ. ಇದಂತೂ ಅರ್ಥರಹಿತವಾದ ಆಚರಣೆಯಾಗಿಹೋಗಿದೆ. ಪ್ರತಿವರ್ಷವೂ ಸರಕಾರಗಳು ಹೇಗೆ ನೀರನ್ನು ಸಂರಕ್ಷಿಸಬೇಕು ಮತ್ತು ವ್ಯರ್ಥ ನೀರನ್ನು ಸಂಸ್ಕರಿಸಿ ಬಳಸಬೇಕು ಎಂಬ ಬಗ್ಗೆ ಪುಂಖಾನುಪುಂಖವಾಗಿ ಉಪದೇಶಗಳನ್ನು ನೀಡುತ್ತವೆ. ವರ್ಷದ ಮಿಕ್ಕ ದಿನಗಳಲ್ಲಿ ಈ ಕಾಳಜಿಗಳು ನಮ್ಮ ನಗರಗಳ ಯೋಜನೆಗಳಲ್ಲಾಗಲೀ, ನಗರಗಳು ಬೆಳೆಯುತ್ತಿರುವ ರೀತಿಗಳಲ್ಲಾಗಲೀ, ಕೃಷಿ ಹಾಗೂ ನಮ್ಮ ಶಕ್ತಿಮೂಲ ಇಂಧನಗಳ ಯೋಜನೆಗಳಲ್ಲಾಗಲೀ ಅಭಿವ್ಯಕ್ತಗೊಳ್ಳುವುದೇ ಇಲ್ಲ. ಬದಲಿಗೆ ಹೇಗೋ ಈ ವರ್ಷವೂ ಸಹ ‘ಡೇ ಜೀರೋ- ಶೂನ್ಯ ದಿನ- ನೀರಿಲ್ಲದ ದಿನ’ದಿಂದ ಬಚಾವಾಗಿಬಿಡುತ್ತೇವೆ ಎಂಬ ಭ್ರಾಂತಿಯಿಂದಲೇ ನಮ್ಮ ಎಲ್ಲಾ ಯೋಜನೆಗಳು ರೂಪುಗೊಳ್ಳುತ್ತವೆ. ಒಂದು ದೇಶದಲ್ಲಿ ನೀರನ್ನು ಹೇಗೆ ಸಂರಕ್ಷಿಸಲಾಗುತ್ತಿದೆ ಅಥವಾ ವ್ಯರ್ಥ ಬಳಕೆಯನ್ನು ತಡೆಗಟ್ಟಲಾಗುತ್ತಿದೆ ಎಂಬುದೇ ಆ ಸಮಾಜವು ಸಾಮಾಜಿಕವಾಗಿ ನ್ಯಾಯಪರವಾಗಿಯೂ ಮತ್ತು ಪರಿಸರಾತ್ಮಕವಾಗಿ ತಾಳಿಕೆ-ಬಾಳಿಕೆಯುಳ್ಳ ಸಮಾಜವಾಗಿದೆಯೇ ಎಂಬುದಕ್ಕೆ ಒಂದು ನಿಜವಾದ ಪರೀಕ್ಷೆಯಾಗಿದೆ. ಇಂದು ಭಾರತವು ನಡೆಯುತ್ತಿರುವ ರೀತಿಯನ್ನು ನೋಡಿದರೆ ಆ ಪರೀಕ್ಷೆಯಲ್ಲಿ ಭಾರತಕ್ಕೆ ಸಿಗಬಹುದಾದ ಅಂಕ ಕೇವಲ ಸೊನ್ನೆ.

ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News

ಜಗದಗಲ
ಜಗ ದಗಲ