ತ್ರಿಪುರಾ ಹಿಂಸಾಚಾರ: ಚಾರಿಲಾಮ್ ಕ್ಷೇತ್ರದ ಚುನಾವಣೆಯಿಂದ ಹಿಂದೆ ಸರಿದ ಸಿಪಿಎಂ

Update: 2018-03-10 15:30 GMT

ಹೊಸದಿಲ್ಲಿ,ಮಾ.10: ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ತ್ರಿಪುರಾದ ಚಾರಿಲಾಮ್ ವಿಧಾನಸಭಾ ಕ್ಷೇತ್ರದ ಚುನಾವಣೆಯಿಂದ ಹಿಂದೆ ಸರಿಯಲು ಸಿಪಿಎಂ ಶನಿವಾರ ನಿರ್ಧರಿಸಿದೆ.

ಸಿಪಿಎಂ ಅಭ್ಯರ್ಥಿ ರಾಮೇಂದ್ರ ನಾರಾಯಣ ದೇಬಬರ್ಮಾ ಅವರು ಫೆ.11ರಂದು ಪ್ರಚಾರದ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನರಾದ ಬಳಿಕ ಚಾರಿಲಾಮ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾನವನ್ನು ಮಾ.12ಕ್ಕೆ ಮುಂದೂಡಲಾಗಿತ್ತು.

ಶನಿವಾರ ನಡೆದ ಪಕ್ಷದ ಸಭೆಯಲ್ಲಿ ಚಾರಿಲಾಮ್ ವಿಧಾನಸಭಾ ಕ್ಷೇತ್ರದ ಚುನಾವಣೆಯಿಂದ ಹಿಂದಕ್ಕೆ ಸರಿಯುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಪಕ್ಷದ ವಕ್ತಾರ ಗೌತಮ ದಾಸ್ ತಿಳಿಸಿದರು.

ಶುಕ್ರವಾರ ಚುನಾವಣಾ ಆಯೋಗವನ್ನು ಭೇಟಿಯಾಗಿದ್ದ ಸಿಪಿಎಂ ನಿಯೋಗವು ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ವಿರುದ್ಧ ಬಿಜೆಪಿಯು ಹಿಂಸಾಚಾರವನ್ನು ನಡೆಸುತ್ತಿದೆ ಎಂದು ಆರೋಪಿಸಿತ್ತಲ್ಲದೆ, ಪ್ರದೇಶದಲ್ಲಿ ಶಾಂತಿ ಮತ್ತು ಸಹಜ ಸ್ಥಿತಿ ಮರಳುವವರೆಗೆ ಚಾರಿಲಾಮ್ ಚುನಾವಣೆಯನ್ನು ಮುಂದೂಡುವಂತೆ ಆಗ್ರಹಿಸಿತ್ತು. ಹಾಲಿ ತ್ರಿಪುರಾದ ಉಪ ಮುಖ್ಯಮಂತ್ರಿಯಾಗಿರುವ ಜಿಷ್ಣು ದೇಬಬರ್ಮನ್ ಅವರು ಚಾರಿಲಾಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News