ಮಡಿಕೇರಿ: ವಸತಿ ಹಕ್ಕಿಗಾಗಿ ಆಗ್ರಹಿಸಿ ಮಾ.12 ರಂದು ಆದಿವಾಸಿಗಳಿಂದ ಪ್ರತಿಭಟನೆ

Update: 2018-03-10 17:56 GMT

ಮಡಿಕೇರಿ, ಮಾ.10: ವಸತಿ ಹೀನ ಆದಿವಾಸಿಗಳಿಗೆ ವಸತಿ ಸೌಲಭ್ಯವನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಘಟಕ ತಾ.12 ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಕಾರ್ಯದರ್ಶಿ ವೈ.ಕೆ.ಗಣೇಶ್ ಜಿಲ್ಲಾ ವ್ಯಾಪ್ತಿಯ ಹಾಡಿಗಳಲ್ಲಿ, ಲೈನ್ ಮನೆಗಗಳಲ್ಲಿ ಹತ್ತು ಸಾವಿರಕ್ಕು ಹೆಚ್ಚಿನ ನಿರ್ವಸತಿಗರಿದ್ದಾರೆ. ನಿರಾಶ್ರಿತರಿಗೆ ವಸತಿ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ, ಆಡಳಿತ ವ್ಯವಸ್ಥೆಯಿಂದ ಸೂಕ್ತ ಸ್ಪಂದನ ದೊರಕಿಲ್ಲವೆಂದು ಆರೋಪಿಸಿದರು.

ತಾ.12 ರಂದು ಬೆಳಗ್ಗೆ 11 ಗಂಟೆಗೆ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಮುಂದಿನ 15 ದಿನಗಳೊಳಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜೈಲ್ ಬರೋ ಚಳುವಳಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಹಾಡಿ, ಕಾಲೋನಿ, ಪೈಸಾರಿ ಎನ್ನುವ ಹೆಸರಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕೊಡಗಿನ ಆದಿವಾಸಿಗಳು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತೋಟದ ಲೈನ್ ಮನೆಗಳಲ್ಲಿ ಮೂಲಭೂತ  ಸೌಲಭ್ಯಗಳಿಲ್ಲದೆ ಕಡಿಮೆ  ಕೂಲಿಗೆ ಆದಿವಾಸಿಗಳು ದುಡಿಯುತ್ತಿದ್ದಾರೆ. ಮಾಲೀಕ ನೀಡಿದ ಸಾಲದ ಕುಣಿಕೆಗೆ ಜೋತು ಬಿದ್ದ ಆದಿವಾಸಿಗಳು ಜೀತಕ್ಕೂ ಒಳಗಾಗಿದ್ದಾರೆ ಎಂದು ಗಣೇಶ್ ಆರೋಪಿಸಿದರು. 

ಕೊಡಗಿನ ಆದಿವಾಸಿಗಳು ನಿರಂತರ ಹೋರಾಟವನ್ನು ನಡೆಸಿಕೊಂಡು ಬರುತ್ತಿದ್ದು, ದಿಡ್ಡಳ್ಳಿ ಹೋರಾಟದ ಸಂದರ್ಭ ಜನಪ್ರತಿನಿಧಿಗಳು ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಅಲ್ಲದೆ, ತೋಟದ ಮನೆಗಳ ಲೈನ್ ಮನೆಗಳಲ್ಲಿರುವ ವಸತಿ ಹೀನರ ಗಣತಿಯನ್ನು ಪಡೆಯಲು ಪ್ರಯತ್ನ ನಡೆಸಿದ್ದು, ಲೈನ್‍ಮನೆಗಳಲ್ಲಿ ಎಷ್ಟು ಜನರಿದ್ದಾರೆ ಎನ್ನುವ ಯಾವುದೇ ಮಾಹಿತಿಯನ್ನು ಜಿಲ್ಲಾಡಳಿತ ನೀಡಿಲ್ಲ. ಅಲ್ಲದೆ ನಿರಂತರ ಗಿರಿಜನ ವಿಶೇಷ ಘಟಕದ ಅರ್ಜಿಯನ್ನು ಸಲ್ಲಿಸಿದ್ದರು, ಯಾವುದೇ ಉತ್ತರವನ್ನು ನೀಡದೆ ಇಲ್ಲಿಯವರೆಗೆ ಆದಿವಾಸಿಗಳಿಗೆ ವಸತಿ ನೀಡುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಗಣೇಶ್ ಆರೋಪಿಸಿದರು. 

ಬೇಡಿಕೆಗಳು
ಲೈನ್‍ಮನೆಗಳಲ್ಲಿರುವ ಆದಿವಾಸಿಗಳ ಗಣತಿ ವಿವರ ಪ್ರಕಟಗೊಳಿಸಿ ಅರ್ಹರಿಗೆಲ್ಲಾ ವಸತಿ ಸೌಲಭ್ಯ ಒದಗಿಸಬೇಕು, ಲೈನ್ ಮನೆಗಳಲ್ಲಿರುವ ಆದಿವಾಸಿಗಳ ಸಾಲದ ಹೊರೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು, ಲೈನ್ ಮನೆಗಳಲ್ಲಿರುವ ಆದಿವಾಸಿ ಕಾರ್ಮಿಕರಿಗೆ ಕನಿಷ್ಠ ಕೂಲಿ ಖಾತರಿಗೊಳಿಸಬೇಕು, ಆದಿವಾಸಿಗಳ ಹಾಡಿ, ಊರು, ಕಾಲೋನಿಗಳಿಗೆ ರಸ್ತೆ, ನೀರು, ವಿದ್ಯುತ್ ಸೌಲಭ್ಯ ಒದಗಿಸಬೇಕು, ಆದಿವಾಸಿಗಳ ಜನರಿಗೆ ಸ್ಮಶಾನ ಸೌಕರ್ಯ ವ್ಯವಸ್ಥೆಗೊಳಿಸಬೇಕು, ಆದಿವಾಸಿ ಯುವಕರಿಗೆ ಉದ್ಯೋಗಕ್ಕಾಗಿ ವಿಶೇಷ ಗಣತಿ ನಡೆಸಿ ವಿಶೇಷ ನೇಮಕಾತಿ ಕ್ರಮಕೈಗೊಳ್ಳಬೇಕು. ಮಕ್ಕಳ ಶಿಕ್ಷಣಕ್ಕೆ ವಿಶೇಷ ಗಮನನೀಡಿ ಆಶ್ರಮ ಶಾಲೆಗಳಿಗೆ ಖಾಯಂ ಶಿಕ್ಷಕರನ್ನು ನೇಮಿಸಬೇಕು, ಗುರುತಿನ ಚೀಟಿ ಇಲ್ಲದವರಿಗೆ ಮತದಾರರ ಚೀಟಿ, ಆಧಾರ್, ರೇಷನ್ ಕಾರ್ಡುಗಳನ್ನು ನೀಡಬೇಕೆಂದು ಗಣೇಶ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಜೆ.ಆರ್.ಪ್ರೇಮ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News