ನೇಪಥ್ಯಕ್ಕೆ ಸರಿದ ಸಜ್ಜನ ಕೃಷ್ಣ

Update: 2018-03-11 05:07 GMT

ತ್ತೀಚೆಗೆ ಕೆ.ಆರ್.ಪೇಟೆ ಕೃಷ್ಣರಿಗೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘‘ರಾಜಕೀಯ ಪಕ್ಷಗಳು ಒಂದು ಸಿದ್ಧಾಂತಕ್ಕೆ ಒಳಪಟ್ಟು, ಸಾಮಾಜಿಕ ಕಳಕಳಿ ಇರುವ ಅಭ್ಯರ್ಥಿಗಳನ್ನು ಗುರುತಿಸಿ ಟಿಕೆಟ್ ನೀಡಿದ್ದರೆ, ಇವತ್ತು ರಾಜಕಾರಣ ಇಷ್ಟೊಂದು ಹಾಳಾಗುತ್ತಿರಲಿಲ್ಲ. ಹಣ ವಿದ್ದವರಿಗೆ, ಖರ್ಚು ಮಾಡುವ ಶಕ್ತಿ ಇದ್ದವರಿಗೆ ಇವತ್ತು ಬಿ ಫಾರ್ಮ್ ಕೊಡಲಾಗುತ್ತಿದೆ. ಆದರೆ ಹಣ ಹೇಗೆ ಸಂಪಾದಿಸಿದರು ಎಂದು ಯಾರೂ ಕೇಳುವುದಿಲ್ಲ. ಆಶ್ಚರ್ಯಕರ ಸಂಗತಿ ಎಂದರೆ, ಎಲ್ಲರೂ ಭ್ರಷ್ಟಾಚಾರ ವಿರೋಧಿಗಳೆ. ಸಿದ್ದರಾಮಯ್ಯ-ಮೋದಿಯವರು ಮಾತನಾಡುವುದೂ ಅದನ್ನೇ. ಆದರೆ ಅವರ ಆಡಳಿತದಲ್ಲಿ ರಾಜ್ಯ-ಕೇಂದ್ರ ಸರಕಾರಿ ಕಚೇರಿಗಳೇಕೆ ಭ್ರಷ್ಟಾಚಾರದ ಗೂಡುಗಳಾಗಿವೆ? ಸರಕಾರಿ ನೌಕರರು ವಸೂಲಿ ಏಜೆಂಟ್‌ಗಳಂತಾಗಿಲ್ಲವೇ? ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಇವರಿಗೆ? ಆದರೂ ಮಾತನಾಡುತ್ತಿದ್ದಾರೆ, ಜನ ಕೇಳುತ್ತಿದ್ದಾರೆ’’ ಎಂದು ವಿಷಾದ ವ್ಯಕ್ತಪಡಿಸಿದರು. ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿದ್ದ ಕೃಷ್ಣ, ಚುನಾ ವಣಾ ಸಂದರ್ಭದಲ್ಲಿ ಹೀಗೆ ಮಾತನಾಡಿದ್ದು ಪ್ರಜ್ಞಾವಂತರನ್ನು ಚಿಂತನೆಗೆ ಹಚ್ಚಿದ್ದರೆ; ವೃತ್ತಿ ರಾಜಕಾರಣಿಗಳಿಂದ, ‘‘ಅವರೀಗ ರಾಜಕಾರಣದಲ್ಲಿ ಇಲ್ಲ, ಅದಕ್ಕೇ ಹೀಗೆಲ್ಲ ಮಾತನಾಡುತ್ತಿದ್ದಾರೆ’’ ಎಂದು ನಿರ್ಲಕ್ಷಿಸಲಾಗುತ್ತಿದೆ. ಚಾಲ್ತಿಯಲ್ಲಿಲ್ಲ ಎಂದರೆ ಬದುಕಿಲ್ಲ ಎನ್ನುವ ಕಾಲವಿದು, ಇರಲಿ. ಹಳೆ ಮೈಸೂರು ಭಾಗದಲ್ಲಿ, ಅದರಲ್ಲೂ ಮಂಡ್ಯ ಜಿಲ್ಲೆಯ ಜನರ ಮನದಲ್ಲಿ ಕೇಯಾರ್ಪೇಟೆ ಕೃಷ್ಣ ಈಗಲೂ ಜನಜನಿತ, ಮಂಡ್ಯ ಎಂದಾಕ್ಷಣ ಸಮೃದ್ಧ, ಸಕ್ಕರೆ, ಕಾವೇರಿ, ಗೌಡರ ಗತ್ತಿನ-ಗಲಾಟೆಯ ನಾಡು ಎಂದೇ ಪ್ರಸಿದ್ಧಿ. ಆದರೆ ಮಂಡ್ಯ ಅಂದರೆ ಅದಷ್ಟೇ ಅಲ್ಲ, ಮಂಡ್ಯ ಜಿಲ್ಲೆಯಲ್ಲಿ ನಾಗಮಂಗಲ ಮತ್ತು ಕೆ.ಆರ್.ಪೇಟೆ ಎಂಬ ಬರಡು ಬೆಂಗಾಡಿನ ತಾಲೂಕು ಗಳೂ ಇವೆ. ಕೆ.ಆರ್.ಪೇಟೆ ತಾಲೂಕಿನ ಸ್ವಲ್ಪಭಾಗ ನೀರಾವರಿ ಬಿಟ್ಟರೆ, ಮಿಕ್ಕಿದ್ದೆಲ್ಲ ಮಳೆಯಾಶ್ರಿತ ಒಣಭೂಮಿ. ಹುರುಳಿ, ಹುಚ್ಚೆಳ್ಳು, ರಾಗಿಯೇ ಇಲ್ಲಿನ ಬೆಳೆ. ಮಂಡ್ಯದ ಶ್ರೀಮಂತಿಕೆ, ಸಮೃದ್ಧತೆ ಇಲ್ಲಿಲ್ಲ. ಹಾಗೆಯೇ ಈ ತಾಲೂಕಿನ ಆಡುಭಾಷೆಯೂ ಬೇರೆ, ಅದು ಮಂಡ್ಯದ್ದಲ್ಲ. ಹಾಗೆ ನೋಡಿದರೆ, ಮಂಡ್ಯ ಜಿಲ್ಲೆಯ ನಾಗಮಂಗಲ, ಕೆ.ಆರ್.ಪೇಟೆಯ ಜೊತೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ- ಈ ಮೂರೂ ತಾಲೂಕುಗಳ ಭಾಷೆ, ಬೆಳೆ, ಬದುಕು- ಒಂದೆ. ಬಿಸಿಲು, ಬರ, ಬಯಲುಸೀಮೆ- ಒಂದೆ. ಬಿಸಿಲಿಗೆ ಸುಟ್ಟು ಕರಕಲಾಗಿರುವವರಂತೆ ಕಾಣುವ ಜನ, ಉದ್ಯೋಗ ಅರಸಿ ನಗರಗಳತ್ತ ಹೋಗುವುದು ಇಲ್ಲಿ ಸಮಸ್ಯೆಯಲ್ಲ, ಪರಿಹಾರ.

ಇಂತಹ ಕೆ.ಆರ್.ಪೇಟೆಯಿಂದ ಬಂದ ಕೃಷ್ಣ, ಹಳ್ಳಿಯ ಬದುಕು, ಹಸಿವು, ಅವಮಾನಗಳನ್ನು ಬೆನ್ನಿಗಿಟ್ಟುಕೊಂಡೇ ಬೆಳೆದವರು. ಅವು ಕಲಿಸಿದ ಪಾಠವನ್ನು ಬದುಕಿನುದ್ದಕ್ಕೂ ಪಾಲಿಸಿ ಕೊಂಡು ಬಂದವರು. ಮೂರು ಬಾರಿ ಶಾಸಕರಾಗಿ, ಒಂದು ಸಲ ಸಂಸದರಾಗಿ, ಎಸ್.ಆರ್.ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ರೇಷ್ಮೆ ಖಾತೆ ಸಚಿವರಾಗಿ, ವಿಧಾನಸಭಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದರೂ, ಇವತ್ತಿಗೂ- ಬಡವ ನೀ ಮಡದಂಗಿರು- ಎಂಬಂತೆಯೇ ಇದ್ದಾರೆ. ಅದೇ ಸಜ್ಜನಿಕೆ, ಅದೇ ಸರಳತೆ.

‘‘ನನಗೀಗಲೂ ನೆನಪಿದೆ. ನಾನು ಮೊದಲ ಬಾರಿಗೆ 1983ರಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ, ನಮ್ಮಳ್ಳಿಯ ಜನ ಬಂದು ಐದು-ಹತ್ತು ರೂಪಾಯಿ ಕೊಟ್ಟು, ನೀ ಗೆಲ್ಲಬೇಕು ಕಣಪ್ಪಎಂದು ಹರಸಿದ್ದರು. ಬಡವರು, ಅವರಿಗೇ ತಿನ್ನಕ್ಕೆ ಹಿಟ್ಟಿಲ್ಲ, ಅಂಥಾದ್ದರಲ್ಲೂ ನನಗೆ ಕೊಟ್ಟು, ಗೆಲ್ಲಬೇಕು ಅಂತ ಆಸೆಪಟ್ಟರಲ್ಲ, ಅವರನ್ನ ನಾನು ಬದುಕಿರುವವರೆಗೂ ಮರೆಯಲ್ಲ’’ ಎನ್ನುವ ಕೃಷ್ಣ ಅವರು ಕೆ.ಆರ್.ಪೇಟೆ ಎಂಬ ಬರದ ನಾಡಿನ ನಿಜ ಪ್ರತಿನಿಧಿ. ಅದಕ್ಕಾಗಿಯೇ ಏನೋ, ಅವರ ಹೆಸರೊಂದಿಗೆ ಕೆ.ಆರ್.ಪೇಟೆಯೂ ಬಿಡದಂತೆ ಬೆಸೆದುಕೊಂಡಿದೆ. ಕೊತ್ತಮಾರನಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ 1940ರಲ್ಲಿ ಜನಿಸಿದ ಕೃಷ್ಣ, ಊರಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಎಸೆಸೆಲ್ಸಿಗೆ ಅಕ್ಕನ ಮನೆ-ಭದ್ರಾವತಿಗೆ ಹೋಗಿದ್ದರು. ಅಲ್ಲಿ ಫೇಲ್ ಆಗಿ, ಮತ್ತೆ ಊರಿಗೆ ಬಂದು ಸಂತೆಬಾಚಹಳ್ಳಿ ಹೈಸ್ಕೂಲಿಗೆ ಸೇರಿ ಪಾಸು ಮಾಡಿಕೊಂಡವರು, ಬಿಎ ಮಾಡಲು ಮೈಸೂರಿನ ಮಹಾರಾಜ ಕಾಲೇಜು ಸೇರಿದ್ದರು. ಆನಂತರ ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಮಾಡಿದರು. ಜೀವನಾಧಾರಕ್ಕೆ 1964ರಲ್ಲಿ ಬೆಂಗಳೂರಿನ ಕಾರ್ಪೊರೇಷನ್ ಸ್ಕೂಲಿನಲ್ಲಿ ಶಿಕ್ಷಕರಾಗಿ ಒಂಬತ್ತು ವರ್ಷ ಸೇವೆ ಸಲ್ಲಿಸಿದ ಕೃಷ್ಣ ಅವರು, 1973ರಲ್ಲಿ ಶಿಕ್ಷಕ ವೃತ್ತಿ ಬಿಟ್ಟು ವಕೀಲಿಕೆ ಆರಂಭಿಸಿದರು. ನಂತರ ಮಡದಿಗೆ ಮೈಸೂರಿನಲ್ಲಿ ಕೆಲಸ ಸಿಕ್ಕಿತೆಂದು, ಮೈಸೂರಿನಲ್ಲಿ ಮನೆ ಮಾಡಿ, ಚಿಕ್ಕಬೋರಯ್ಯನವರ ಕೈ ಕೆಳಗೆ ವಕೀಲಿಕೆ ಮುಂದುವರಿಸಿದರು. ಆ ನಂತರ, ಮೈಸೂರನ್ನೂ ಬಿಟ್ಟು ಕೆ.ಆರ್.ಪೇಟೆಯಲ್ಲಿಯೇ ನೆಲೆಯಾದರು. ಜಯಪ್ರಕಾಶ್ ನಾರಾಯಣ್, ರಾಮಮನೋಹರ ಲೋಹಿಯಾರ ಸಮಾಜವಾದ, ಪುಸ್ತಕಗಳ ಓದು, ಬೆಂಗಳೂರು-ಮೈಸೂರುಗಳ ಓಡಾಟ, ದೊಡ್ಡವರ ಒಡನಾಟದಿಂದ ಭಿನ್ನ ವ್ಯಕ್ತಿಯಾಗಿ ರೂಪುಗೊಂಡರು. ಬಡವರ ಬಗ್ಗೆ ವಕಾಲತ್ತು ವಹಿಸುತ್ತಿದ್ದ ಕೃಷ್ಣ ಜನಾನುರಾಗಿ ನಾಯಕರಾಗಿ ಹೊರಹೊಮ್ಮಿದರು. ಸ್ನೇಹವಲಯ ಸಂಪಾದಿಸಿದರು. ‘‘ನಮ್ಮಪ್ಪಊರಿನ ಪಟೇಲರು. ನ್ಯಾಯ ನೀತಿ ಜಾಸ್ತಿ. ಜೋರು ಮಾತಿನ ಗತ್ತಿನ ವ್ಯಕ್ತಿ. ಇವರ ಪ್ರಭಾವ ಒಂಚೂರಿತ್ತು. ಅದು ಬಿಟ್ಟರೆ ರಾಜಕಾರಣ ನನಗೆ ಗೊತ್ತಿಲ್ಲ. ರಾಜಕಾರಣಕ್ಕೆ ಬರುವ ಯೋಚನೆಯೂ ಇರಲಿಲ್ಲ. ದುಡ್ಡು-ಕಾಸು ಕೂಡ ಇರಲಿಲ್ಲ. ಆಕಸ್ಮಿಕವಾಗಿ ಬಂದೆ’ ಎನ್ನುವ ಕೃಷ್ಣ, 1978ರಲ್ಲಿ ನಡೆದ ತಾಲೂಕು ಬೋರ್ಡ್ ಚುನಾವಣೆಗೆ ಸ್ನೇಹಿತರ ಒತ್ತಾಯಕ್ಕೆ ಮಣಿದು ಸ್ಪರ್ಧಿಸಿ, ಗೆದ್ದದ್ದಾಯಿತು. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ, ತಮ್ಮವರೇ ಕೈ ಕೊಟ್ಟ ಕಾರಣ ಸೋತದ್ದು, ರಾಜಕಾರಣದ ಒಳಸುಳಿಗಳ ಮೊದಲ ಪಾಠ ಕಲಿಸಿತು. ಭ್ರಮನಿರಸನಕ್ಕೆ ಕಾರಣವಾಗಿತ್ತು. ಆದರೆ ಅದೇ ಅವರ ರಾಜಕೀಯ ಬದುಕಿಗೆ ಟರ್ನಿಂಗ್ ಪಾಯಿಂಟ್ ಆಗಿತ್ತು. 1978ರಲ್ಲಿ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜನತಾ ಪಕ್ಷದ ಎಸ್.ಎಂ.ಲಿಂಗಪ್ಪನವರು, ‘‘ಇದೇ ನನ್ನ ಕೊನೆ ಚುನಾವಣೆ’’ ಎಂದು ಘೋಷಿಸಿದ್ದರು. ಯುವಕರನ್ನು ಬೆಳೆಸುವತ್ತ ಮನಸ್ಸು ಮಾಡಿದ್ದರು. ಕೃಷ್ಣ ಎಂಬ ತಮ್ಮ ಹಿಂಬಾಲಕ ಯುವಕ ತಮ್ಮವರಿಂದಲೇ ಅಧ್ಯಕ್ಷ ಸ್ಥಾನದಿಂದ ವಂಚಿತನಾದನಲ್ಲ ಎಂಬುದು ಲಿಂಗಪ್ಪನವರಿಗೆ ಭಾರೀ ಬೇಸರವನ್ನುಂಟುಮಾಡಿತ್ತು. ಪಶ್ಚಾತ್ತಾಪವೆಂಬಂತೆ, 1983ರ ವಿಧಾನಸಭಾ ಚುನಾವಣೆಯಲ್ಲಿ, ‘‘ನಾನು ಈ ಸಲ ನಿಲ್ಲುವುದಿಲ್ಲ, ನನ್ನ ಬದಲಿಗೆ ಬಡವ, ನೀತಿವಂತ, ಬುದ್ಧಿವಂತ, ವಿದ್ಯಾವಂತ ಕೃಷ್ಣನನ್ನು ನಿಲ್ಲಿಸುತ್ತಿದ್ದೇನೆ, ಬೆಂಬಲಿಸಿ ಗೆಲ್ಲಿಸಿ’’ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು. ಲಿಂಗಪ್ಪನವರೇನೋ ಸೀಟು ಬಿಟ್ಟುಕೊಟ್ಟು ದೊಡ್ಡ ವ್ಯಕ್ತಿ ಎನಿಸಿಕೊಂಡರು. ಆದರೆ ಅಭ್ಯರ್ಥಿಯಾದ ಕೃಷ್ಣರ ಕೈಯಲ್ಲಿ ಕಾಸಿಲ್ಲ. ಮನೆ ಕಡೆ ಸ್ಥಿತಿವಂತರೂ ಅಲ್ಲ. ಇದು ಗೊತ್ತಿದ್ದ ಜನರೇ ಕಾಸು ಕೊಟ್ಟರು, ಬೆಂಬಲಿಸಿದರು, ಓಡಾಡಿದರು. ಅಷ್ಟಾದರೂ ಕೃಷ್ಣ ಸೋತರು. ಆದರೆ ಜನರ ವಿಶ್ವಾಸ ಗಳಿಸಿ, ಮನಸ್ಸಿನಲ್ಲಿ ನೆಲೆಯೂರಿದರು.

1983ರಲ್ಲಿ ಪ್ರಥಮ ಬಾರಿಗೆ ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸರಕಾರ ರಚನೆಯಾಗಿ, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಯಾಗಿ, ರಾಜ್ಯದಲ್ಲಿ ಹೊಸ ಶಕೆ ಆರಂಭವಾದಾಗ, ಕೃಷ್ಣರಿಗೂ ಕಾಲ ಕೂಡಿ ಬಂದಿತ್ತು. ತಮ್ಮದೇ ಸರಕಾರ, ರಾಜಕೀಯ ನಾಯಕರ ಒಡನಾಟ, ರಾಜಧಾನಿಯ ಓಡಾಟ- ಗೆಲ್ಲದಿದ್ದರೂ ಗೆದ್ದ ಹುಮ್ಮಸ್ಸು ತಂದಿತ್ತು. 1985ರ ಚುನಾವಣೆಯಲ್ಲಿ ಗೆದ್ದು ಶಾಸಕರಾಗಲು ಪರೋಕ್ಷವಾಗಿ ಸಹಕರಿಸಿತ್ತು. ಹೀಗೆ ಚುನಾವಣೆಯಿಂದ ಚುನಾವಣೆಗೆ ಬೆಳೆಯುತ್ತ ಹೋದ ಕೃಷ್ಣ, ಸಹಜವಾಗಿಯೇ ಒಕ್ಕಲಿಗರ ನಾಯಕ ಎಚ್.ಡಿ.ದೇವೇಗೌಡರ ಒಡನಾಟಕ್ಕೆ ಬಿದ್ದರು. ಅವರ ಗುಂಪಿನಲ್ಲಿ ಗುರುತಿಸಿಕೊಂಡರು. ಆಗ ರಾಜ್ಯಮಟ್ಟದಲ್ಲಿ ಹೆಗಡೆ-ಗೌಡರ ನಡುವೆ ನಾಯಕತ್ವಕ್ಕಾಗಿ ಕಾದಾಟ ಶುರುವಾಗಿತ್ತು. ಹಾಗೆಯೇ ಗೌಡರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಕೃಷ್ಣರ ದುರದೃಷ್ಟವೂ ಇಲ್ಲಿಂದಲೇ ಆರಂಭವಾಗಿತ್ತು!

ಕೃಷ್ಣರ ನಸೀಬು ಚೆನ್ನಾಗಿರಲಿಲ್ಲವೋ ಅಥವಾ ಶಾಪವೋ ಗೊತ್ತಿಲ್ಲ. ಹೆಗಡೆ-ಗೌಡರ ಜಗಳ ತಾರಕಕ್ಕೇರಿ, 1989ರಲ್ಲಿ ಜನತಾ ಪಕ್ಷ ಇಬ್ಭಾಗವಾದಾಗ ಕೃಷ್ಣರು ರಾಮಕೃಷ್ಣ ಹೆಗಡೆ ನೇತೃತ್ವದ ಜನತಾದಳದಲ್ಲಿ ಗುರುತಿಸಿಕೊಂಡರು. ಅಲ್ಪಾವಧಿಗೆ ಮುಖ್ಯಮಂತ್ರಿಯಾದ ಬೊಮ್ಮಾಯಿಯವರ ಕ್ಯಾಬಿನೆಟ್‌ನಲ್ಲಿ ಕೃಷ್ಣ 9 ತಿಂಗಳ ಮಂತ್ರಿಯೂ ಆದರು. ಆದರೆ 1989ರ ಚುನಾವಣೆಯಲ್ಲಿ ಸೋತರು.

1994ರಲ್ಲಿ ಮತ್ತೆ ಹೆಗಡೆ-ಗೌಡ ಒಂದಾಗಿ, ಜನತಾದಳವಾಗಿ ಚುನಾವಣೆ ಎದುರಿಸಿದಾಗ, ಕೃಷ್ಣ ಕೆ.ಆರ್.ಪೇಟೆಯಿಂದ ಗೆದ್ದುಬಂದರು. ದೇವೇಗೌಡರು ಮುಖ್ಯಮಂತ್ರಿಯಾದರು. ಆದರೆ ಶಾಸಕರಾದ ಒಂದೂವರೆ ವರ್ಷಕ್ಕೆ ಅಂದರೆ 1996ರಲ್ಲಿ ಲೋಕಸಭೆ ಚುನಾವಣೆ ಎದುರಾಯಿತು. ಜನತಾದಳದ ವರಿಷ್ಠರ ಒತ್ತಡಕ್ಕೆ ಮಣಿದು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಿ.ಮಾದೇಗೌಡರ ವಿರುದ್ಧ ಗೆಲುವು ಸಾಧಿಸಿದ ಕೃಷ್ಣ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಲೋಕಸಭಾ ಸ್ಥಾನ, ದಿಲ್ಲಿ ಓಡಾಟ, ದೇವೇಗೌಡರೇ ಪ್ರಧಾನಮಂತ್ರಿಯಾದಾಗ, ‘‘ಕೃಷ್ಣರ ಅದೃಷ್ಟ ಖುಲಾಯಿಸಿತು’’ ಎಂದರು ಜನ. ಆದರೆ 1998ರಲ್ಲಿ ಲೋಕಸಭೆ ವಿಸರ್ಜನೆಗೊಂಡು ಮತ್ತೆ ಚುನಾವಣೆ ಎದುರಾಯಿತು. ಕೃಷ್ಣ ಗೌಡರ ಗುಂಪಿನಲ್ಲಿದ್ದರೂ, ಗೌಡರು ಕೃಷ್ಣರನ್ನು ಕಡೆಗಣಿಸಿ, ಅಂಬರೀಶ್‌ರಿಗೆ ಮಣೆ ಹಾಕಿದರು. ಇತ್ತ ರಾಜ್ಯದಲ್ಲಿ ಜನತಾದಳ ಮತ್ತೆ ಒಡೆದು ಹೋಳಾದ ಪರಿಣಾಮ ಅವಧಿಗೆ ಮುನ್ನ ಚುನಾವಣೆ ಬಂದು, 1999ರ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದರು.

2004ರ ವಿಧಾನಸಭಾ ಚುನಾವಣೆಯಲ್ಲಿ ಜನತಾದಳದಿಂದ ಗೆದ್ದು, ಸಮ್ಮಿಶ್ರ ಸರಕಾರ ರಚನೆಯಾದಾಗ ಹಿರಿಯರಾದ ಕೃಷ್ಣ ವಿಧಾನಸಭೆ ಸ್ಪೀಕರ್ ಆಗಿ ಆಯ್ಕೆಯಾದರು. ‘‘ಮಂತ್ರಿ ಸ್ಥಾನ ಕೊಡಲಿಕ್ಕಾಗದ ಹಿರಿಯ ತಲೆಗಳಿಗೆ ಈ ಸ್ಪೀಕರ್ ಸ್ಥಾನ ಕೊಟ್ಟು ಸುಮ್ಮನಿರಿಸಲಾಗುತ್ತೆ. ನನಗೂ ಕೂಡ ಅದೇ ಮಾನದಂಡದಲ್ಲಿ ಸ್ಪೀಕರ್ ಸ್ಥಾನ ಲಭಿಸಿದ್ದು. ಕಾನೂನು ಪಂಡಿತರು, ಸಂಸದೀಯ ವ್ಯವಹಾರಗಳ ಬಗ್ಗೆ ಅರಿವಿರುವವರು ಅಲಂಕರಿಸುವ ಪ್ರತಿಷ್ಠಿತ ಹುದ್ದೆಯದು. ಸಾಂವಿಧಾನಿಕ ಹುದ್ದೆ. ಆದರೆ ಆಡಳಿತ ಪಕ್ಷದಿಂದ ನೇಮಕವಾಗುವ ಸ್ಪೀಕರ್ ಆದ್ದರಿಂದ, ಒಂದೊಂದು ಸಲ ಪಕ್ಷದ ಪರವಾಗಿ ರೂಲಿಂಗ್ ಕೊಡಬೇಕಾದಂತಹ ಪರಿಸ್ಥಿತಿ ಉದ್ಭವವಾಗುತ್ತದೆ. ನ್ಯಾಯಸಮ್ಮತವಾಗಿ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅದೊಂದು ಆಲಂಕಾರಿಕ ಹುದ್ದೆಯಷ್ಟೆ’ ಎನ್ನುವ ಕೃಷ್ಣರ ಮೇಲೂ ಕುಮಾರಸ್ವಾಮಿಯ ತಲೆ ಕಾದರು ಎಂಬ ಆರೋಪ ಕೇಳಿಬಂದದ್ದಿದೆ.

ಇಷ್ಟಾದರೂ, ನಾಲ್ಕು ದಶಕಗಳ ರಾಜಕಾರಣದಲ್ಲಿ ಸಿಕ್ಕ ಅವಕಾಶದಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅದರಲ್ಲೂ ಐಸಿಎಲ್ ಸಕ್ಕರೆ ಕಾರ್ಖಾನೆ ಮಾಡಿದ್ದು, ಅದು ಈಗಲೂ ರೈತರ ಹಿತಕಾಯುವ ಕಾರ್ಖಾನೆ ಯಾಗಿ ಕಾರ್ಯನಿರ್ವಹಿಸುತ್ತಿರುವುದು ಕೃಷ್ಣರಿಗೆ ತೃಪ್ತಿ ತಂದಿದೆ. ಅಷ್ಟೇ ಅಲ್ಲದೆ, ರಾಜಕಾರಣದಿಂದ ನಿವೃತ್ತರಾದ ಮೇಲೆ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಸಂತೋಷ್ ಹೆಗ್ಡೆ, ಎಸ್.ಆರ್.ಹಿರೇಮಠರ ಜೊತೆ ಗುರುತಿಸಿಕೊಂಡು, ಜನಪರ ಹೋರಾಟಗಳಲ್ಲಿ, ಸಾಮಾಜಿಕ ಚಳವಳಿಗಳಲ್ಲಿ ಪಾಲ್ಗೊಂಡು ಸಮಾಜದ ಋಣ ತೀರಿಸುತ್ತಿದ್ದಾರೆ. ಅನಿಸಿದ್ದನ್ನು ಆಡುತ್ತಿದ್ದಾರೆ. ಸರಳವಾಗಿ, ಆದರ್ಶವಾಗಿ, ಪ್ರಾಮಾಣಿಕರಾಗಿ ಬದುಕುತ್ತಿದ್ದಾರೆ. ಆದರೆ ಇದು ಇವತ್ತಿನ ಜನಕ್ಕೆ ಜಗತ್ತಿಗೆ ಐಬಿನಂತೆ ಕಾಣಿಸುತ್ತದೆ. ಅಕ್ರಮ ಹಾದಿಯಲ್ಲಿ ಹಣ ಗಳಿಸಿ ಅಧಿಕಾರ ಹಿಡಿಯುವವರಿಗೆ ಜೈಕಾರ, ಹೊಗಳಿಕೆ ಸಿಗುತ್ತಿದೆ. ಪ್ರಜಾಪ್ರಭುತ್ವ ಹೊಸ ಭಾಷ್ಯ ಬರೆದುಕೊಳ್ಳುತ್ತಿದೆ. ‘‘ಈಗ ಇವರ ಕಾಲ, ನಡೆಯಲಿ’’ ಎನ್ನುವುದು ಸೌಮ್ಯವಾದಿ ಕೃಷ್ಣರ ಸಮಾಧಾನದ ಮಾತು. ಇದ್ದಾರೆ, ಇಂತಹವರು, ನಮ್ಮ ನಡುವೆ.

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News