ಸಾಗರ ವಿಧಾನಸಭಾ ಕ್ಷೇತ್ರದಿಂದ ಪ್ರಬಲ ಸ್ಪರ್ಧಾಕಾಂಕ್ಷಿ: ಸಚಿವ ಕಾಗೋಡು ತಿಮ್ಮಪ್ಪ

Update: 2018-03-12 16:34 GMT

ಶಿವಮೊಗ್ಗ, ಮಾ. 13: 'ಸಾಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಾನು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಈಗಾಗಲೇ ಅರ್ಜಿ ಕೂಡ ಸಲ್ಲಿಸಿದ್ದೇನೆ' ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕಂದಾಯ ಇಲಾಖೆ ಮಂತ್ರಿ ಕಾಗೋಡು ತಿಮ್ಮಪ್ಪ ಸ್ಪಷ್ಟಪಡಿಸಿದ್ದಾರೆ. 

ಜಿಲ್ಲೆಯ ಸಾಗರ ಪಟ್ಟಣದ ಜೋಗ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್‍ಗೆ ಶಿಲಾನ್ಯಾಸ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದೆ. ಸ್ಪರ್ಧಿಸಬೇಕಾದರೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅದರಂತೆ ಅರ್ಜಿ ಸಲ್ಲಿಸಿದ್ದೇನೆ. ಸಾಗರ ವಿಧಾನಸಭಾ ಕ್ಷೇತ್ರದಿಂದ ತಾನು ಕಣಕ್ಕಿಳಿಯುವುದು ಬಹುತೇಕ ಅಂತಿಮವಾಗಿದೆ. ಕಾರ್ಯಕರ್ತರು ಕೂಡ ಸ್ಪರ್ಧಿಸುವಂತೆ ತನಗೆ ಒತ್ತಡ ಹಾಕುತ್ತಿದ್ದಾರೆ' ಎಂದು ತಿಳಿಸಿದ್ದಾರೆ. 

ಪ್ರಸ್ತುತ ಚುನಾವಣೆ ಎದುರಿಸುವುದು ಸುಲಭದ ಕೆಲಸವಲ್ಲ. ಬೇರೆ ಬೇರೆ ರೀತಿಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಪಕ್ಷ ಹಾಗೂ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದರೆ ಸ್ಪರ್ಧಿಸುವುದು ಖಚಿತ ಎಂದು ಪುನರುಚ್ಚರಿಸಿದ ಅವರು, 'ನನಗೆ ಮೊದಲ ಆದ್ಯತೆ ಪಕ್ಷವಾಗಿದೆ. ನಂತರ ಇತರ ವಿಷಯವಾಗಿರುತ್ತದೆ' ಎಂದು ಹೇಳಿದ್ದಾರೆ. 

ಶಿಲಾನ್ಯಾಸ: ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಸಾಗರ ಪಟ್ಟಣದಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ಮಂಗಳವಾರ ಕ್ಯಾಂಟೀನ್‍ವೊಂದನ್ನು ಪ್ರಾರಂಭಿಸಲಾಗುತ್ತಿದೆ. ಇಂದಿರಾ ಕ್ಯಾಂಟೀನ್‍ಗಳಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ. ಕಡಿಮೆ ದರದಲ್ಲಿ ತಿಂಡಿ - ಊಟೋಪಚಾರ ದೊರೆಯುತ್ತದೆ ಎಂದು ತಿಳಿಸಿದರು. 

ಅಗಲೀಕರಣ: ಸಾಗರ ಪಟ್ಟಣದ ಸೊರಬ ರಸ್ತೆ ಅಗಲೀಕರಣಕ್ಕೆ ಮೊದಲ ಕಂತಿನಲ್ಲಿ 20 ಕೋಟಿ ರೂ. ಬಿಡುಗಡೆಯಾಗಿದೆ. ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ನಿವಾಸಿಗಳು, ವರ್ತಕರ ಜೊತೆ ಮಾತುಕತೆ ನಡೆಸಲಾಗುವುದು. ಆಸ್ತಿ ಕಳೆದುಕೊಳ್ಳುವವರಿಗೆ ಸೂಕ್ತ ಪರಿಹಾರ ನೀಡಲಾಗುವುದು. ಯಾವುದೇ ಗೊಂದಲ-ಗಡಿಬಿಡಿಗೆ ಆಸ್ಪದವಾಗದಂತೆ ರಸ್ತೆ ಅಗಲೀಕರಣ ಪ್ರಕ್ರಿಯೆ ನಡೆಸಲಾಗುವುದು ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News