ಮಾಧ್ಯಮದವರು ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಸಹಕರಿಸಬೇಕು: ಕೃಪಾ ಅಮರ್ ಆಳ್ವಾ

Update: 2018-03-13 17:38 GMT

ಮಂಡ್ಯ, ಮಾ.13: ಮಕ್ಕಳ ಬಗೆಗಿನ ವರದಿ ಮಾಡುವಾಗ ಮಾಧ್ಯಮ ಪ್ರತಿನಿಧಿಗಳು ಸೂಕ್ಷ್ಮತೆಯನ್ನು ಕಾಯ್ದುಕೊಂಡು ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಸಹಕರಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವ ಸಲಹೆ ನೀಡಿದ್ದಾರೆ.

ಮಕ್ಕಳ ಹಕ್ಕುಗಳಿಗಾಗಿ ಇರುವ ಕಾಯ್ದೆಗಳ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಮಾಧ್ಯಮದವರಿಗೆ ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತ್ಯುತ್ತಮ ಸಮಾಜ ನಿರ್ಮಿಸುವಲ್ಲಿ ಪತ್ರಿಕಾಂಗದ ಪಾತ್ರ ಅತಿ ಮುಖ್ಯವಾಗಿದ್ದು, ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗದಂತೆ ವರದಿ ಮಾಡಬೇಕು. ಆತುರಪಟ್ಟರೆ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದು ಅವರು ಹೇಳಿದರು.

ಈಚಿನ ದಿನಗಳಲ್ಲಿ ತಪ್ಪು ಸುದ್ದಿ ಪ್ರಕಟಿಸಿ ನಂತರ, ವಿಷಾದಿಸುವುದು ಸಾಮಾನ್ಯವಾಗಿದೆ. ದೃಶ್ಯ ಮಾಧ್ಯಮಗಳಲ್ಲಿ ತಪ್ಪು ಸುದ್ದಿ ಪ್ರಸಾರವಾದರೆ ಇಡೀ ಸಮಾಜದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಮಕ್ಕಳ ಹಕ್ಕುಗಳ ಕುರಿತು ಮಾತನಾಡಿದ ಪೀಪಲ್ಸ್ ಲೀಗಲ್ ಫೋರಂನ ಪಿ.ಬಾಬುರಾಜು, ಬಾಲಕಾರ್ಮಿಕ ಸಮಸ್ಯೆ, ಬಾಲನ್ಯಾಯ, ಪೋಕ್ಸೋ ಹಾಗೂ ಬಾಲ್ಯ ವಿವಾಹ ಕಾಯ್ದೆಗಳಲ್ಲಿ ಕಾಲಕ್ಕನುಗುಣವಾಗಿ ತಿದ್ದುಪಡಿಗಳಾಗುತ್ತಿದ್ದು, ಸದರಿ ತಿದ್ದುಪಡಿಗಳ ಬಗ್ಗೆ ಮಾಹಿತಿ ಹೊಂದುವುದು ಮಾಧ್ಯಮಗಳ ಕರ್ತವ್ಯವಾಗಿದೆ ಎಂದರು.

ಬಾಲನ್ಯಾಯ, ಬಾಲಕಾರ್ಮಿಕ ಕಾಯ್ದೆಗಳು 2000ನೆ ಇಸವಿಯಲ್ಲಿ ಜಾರಿಯಾಗಿದ್ದು, ಸದರಿ ಕಾಯ್ದೆಗಳಲ್ಲಿ ಮಕ್ಕಳ ಸಂಬಂಧ ಮಾಧ್ಯಮಗಳು ಬಿತ್ತರಿಸುವ ವರದಿಯ ಸೂಕ್ಷ್ಮವಾಗಿರಬೇಕೆಂಬುದನ್ನು ತಿಳಿಸಲಾಗಿದೆ. ಈ ಬಗ್ಗೆ ತಿಳಿದುಕೊಂಡು ವರದಿ ಮಾಡಬೇಕು ಎಂದು ಅವರು ಹೇಳಿದರು.

ಬಾಲಾರೋಪಿಗಳ ಭಾವಚಿತ್ರ ಅಥವಾ ಅವರನ್ನು ಗುರುತಿಸುವಂತಹ ಯಾವುದೇ ಅಂಶವನ್ನು ವರದಿಯಲ್ಲಿ ಬಿತ್ತರಿಸಬಾರದು ಎಂದು ಕಾಯ್ದೆ ಹೇಳುತ್ತದೆ. ಯಾವುದೇ ರೀತಿಯ ಪ್ರಕರಣದಲ್ಲಿ ಆರೋಪಿ ಅಪರಾಧಿ ಎಂಬುದು ಸಾಬೀತು ಆಗುವವರೆಗೆ  ಭಾವಚಿತ್ರ ಪ್ರಕಟಿಸಬಾರದು ಎಂದು ಅವರು ತಿಳಿಸಿದರು.

ಪೊಲೀಸರು ಮಕ್ಕಳನ್ನು ಬಂಧಿಸಿದ ವೇಳೆ ಮಕ್ಕಳಿಗೆ ಬೇಡಿ ಹಾಕಬಾರದು, ಲಾಕಪ್‍ನಲ್ಲಿ ಇರಿಸಬಾರದು, ಬಂಧಿತ ಮಕ್ಕಳೊಂದಿಗೆ ಓಡಾಡುವಾಗ ಸಮವಸ್ತ್ರ ಧರಿಸುವಂತಿಲ್ಲ, 24 ಗಂಟೆಗಳು ಮಕ್ಕಳನ್ನು ಪೊಲೀಸ್ ಸುಪರ್ಧಿಯಲ್ಲಿ ಇರಿಸಿಕೊಳ್ಳಬಾರದು ಎಂದು ಅವರು ವಿವರಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸೋಮಶೇಖರ್ ಕೆರಗೋಡು ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ಮಂಜುನಾಥ, ಆಯೋಗದ ಸದಸ್ಯ ಚಂದ್ರಶೇಖರ ಅಲ್ಲಿಪುರ, ನ್ಯಾಯ ಮಂಡಳಿಯ ಸದಸ್ಯ ತಿರುಮಲಾಪುರ ಗೋಪಾಲ್, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News