ಅಕ್ರಮ ಟೆಲಿಫೋನ್ ಎಕ್ಸ್‌ಚೇಂಜ್ ಹಗರಣ: ಮಾರನ್ ಸೋದರರ ಖುಲಾಸೆ

Update: 2018-03-14 14:15 GMT

ಹೊಸದಿಲ್ಲಿ, ಮಾ.14: ಅಕ್ರಮ ಟೆಲಿಫೋನ್ ಎಕ್ಸ್‌ಚೇಂಜ್ ಹಗರಣದಲ್ಲಿ ಮಾರನ್ ಸೋದರರಾದ ದಯಾನಿಧಿ ಹಾಗೂ ಕಲಾನಿಧಿಯನ್ನು ವಿಶೇಷ ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿದೆ.

ಹಗರಣವನ್ನು ವಜಾಗೊಳಿಸಲು ಕೋರಿ ಮಾರನ್ ಸೋದರರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಅರ್ಜಿಗೆ ಫೆ.27ರಂದು ಸಿಬಿಐ ಬಲವಾದ ಆಕ್ಷೇಪ ಸಲ್ಲಿಸಿತ್ತು.

ಕೇಂದ್ರ ಸರಕಾರದ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ 2004ರಿಂದ 2006ರವರೆಗೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕುಟುಂಬದ ಒಡೆತನದಲ್ಲಿರುವ ಸನ್ ಟಿವಿ ಸಮೂಹ ಸಂಸ್ಥೆಗೆ ನೆರವಾಗಿದ್ದರು. ತನ್ನ ನಿವಾಸದಲ್ಲಿ 764 ಟೆಲಿಫೋನ್ ಲೈನ್‌ಗಳನ್ನು ಹೊಂದಿರುವ ಖಾಸಗಿ ಟೆಲಿಫೋನ್ ಎಕ್ಸ್‌ಚೇಂಜನ್ನು ಸ್ಥಾಪಿಸಿ ಸನ್ ಟಿವಿಗೆ ಅಕ್ರಮವಾಗಿ ಮಾಹಿತಿಗಳನ್ನು ಅಪ್‌ಲೋಡ್ ಮಾಡಲು ನೆರವಾಗಿದ್ದರು. ಇದರಿಂದ ಸರಕಾರಿ ಸಂಸ್ಥೆಯಾಗಿರುವ ಬಿಎಸ್‌ಎನ್‌ಎಲ್‌ಗೆ ಹಾಗೂ ಚೆನ್ನೈಯ ಎಂಟಿಎನ್‌ಎಲ್ ಸಂಸ್ಥೆಗೆ ಒಟ್ಟು 1.78 ಕೋಟಿ ರೂ. ನಷ್ಟವಾಗಿದೆ ಎಂದು ಆರೋಪ ಹೊರಿಸಲಾಗಿತ್ತು. ಮಾರನ್ ಸೋದರರಲ್ಲದೆ ಸನ್‌ಟಿವಿ ನೆಟ್‌ವರ್ಕ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಎಸ್.ಕಣ್ಣನ್, ಇಲೆಕ್ಟ್ರೀಷಿಯನ್ ಕೆ.ಎಸ್.ರವಿ, ದಯಾನಿಧಿ ಮಾರನ್‌ರ ಖಾಸಗಿ ಕಾರ್ಯದರ್ಶಿ ಗೌತಮನ್ ಕೂಡಾ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು. ಆದರೆ ತಮ್ಮ ಕಕ್ಷೀದಾರರು ಅಮಾಯಕರಾಗಿದ್ದು, ಅವರನ್ನು ಈ ಪ್ರಕರಣದಲ್ಲಿ ದುರುದ್ದೇಶಪೂರ್ವಕವಾಗಿ ಸೇರಿಸಲಾಗಿದೆ ಎಂದು ಮಾರನ್ ಸೋದರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ವಾದ ವಿವಾದ ಆಲಿಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ನಟರಾಜನ್ ಮಾರನ್ ಸೋದರರನ್ನು ಖುಲಾಸೆಗೊಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಬಿಐ, ಇನ್ನೂ ತೀರ್ಪಿನ ಪ್ರತಿ ಕೈಸೇರಿಲ್ಲ. ತೀರ್ಪಿನ ಪ್ರತಿ ದೊರೆತ ಬಳಿಕ ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News