ನನ್ನೆದೆ ಗೂಡೊಳಗೆ ಇಂಚಿಂಚೆ ಇಳಿದ ಪ್ರಿಯ ಆಮಿರ್
ನಿನ್ನ ಸಿನಿಮಾಗಳನ್ನು ಯಾವ ವಯಸ್ಸಿನಲ್ಲಿ ನೋಡಲು ಶುರು ಮಾಡಿದೆ ಅನ್ನುವುದು ನನಗಷ್ಟು ನೆನಪಿಲ್ಲ. ಆದರೆ ನೀನು ನನ್ನೆದೆ ಗೂಡೊಳಗೆ ಇಂಚಿಂಚೆ ಇಳಿದದ್ದು ಮಾತ್ರ ‘ರಂಗೀಲಾ’ದಿಂದ. ಅಲ್ಲಿಂದಿಲ್ಲಿಯ ತನಕ ನನ್ನ ಪಾಲಿಗೆ ನೀನೊಂದು ‘ಅನಿವಾರ್ಯ’.
ಸಿನಿಮಾ ಅನ್ನುವುದು ನಿರ್ದೇಶಕನ ಪ್ರಬಲ ಮಾಧ್ಯಮ ಎಂದು ಬಲವಾಗಿ ಅನ್ನಿಸತೊಡಗಿದ ದಿನಗಳಲ್ಲೇ ನನಗೆ ನಿನ್ನ ಮತ್ತು ಹಾಲಿವುಡ್’ನ ಟಾಮ್ ಹ್ಯಾಂಕ್ಸ್’ನ ಸಿನಿಮಾಗಳು ತೀವ್ರವಾಗಿ ಸೆಳೆಯಲು ಶುರು ಮಾಡಿದವು. ಎಷ್ಟೆಂದರೇ, ನಿಮ್ಮಿಬ್ಬರ ಸಿನಿಮಾಗಳ ನೋಡುತ್ತಾ ಮೈಮರೆತವನಿಗೆ ಅದರ ನಿರ್ದೇಶಕರ ಹೆಸರುಗಳೆ ನೆನಪಿಗೆ ಬರಲೊಲ್ಲವು. ಆ ಪರಿ ಸಿನಿಮಾದುದ್ದಕ್ಕೂ ಆವರಿಸಿಕೊಳ್ಳುವ ನಿಮ್ಮಿಬ್ಬರ ದೈತ್ಯ ಪ್ರತಿಭೆಯನ್ನು ಹತ್ತಾರು ಸಲ ಖುದ್ದು ಕಂಡು ಬೆಚ್ಚಿ ಬೆರಗಾಗಿದ್ದೇನೆ.
ಸುಲಭದ ಲೆಕ್ಕಕ್ಕೆ ಸಿಗದಷ್ಟು ಸಲ ನೋಡಿರುವ ನಿನ್ನ ‘ತ್ರೀ ಈಡಿಯಟ್ಸ್’, ‘ಮನ್’, ಸರ್ಫ್ರ್’ರೋಶ್’, ‘ರಂಗೀಲಾ’ ‘ತಾರೇ ಝಮೀನ್ ಪರ್’, ‘ಲಗಾನ್’, ‘ಪೀಕೆ’, ‘ದಂಗಲ್’ ಮತ್ತು ಈಚಿನ ‘ಸೀಕ್ರೆಟ್ ಸೂಪರಸ್ಟಾರ್’ ನಿನ್ನನ್ನು ಜಗತ್ತಿನ ಯಾವುದೇ ಸಾರ್ವಕಾಲಿಕ ಶ್ರೇಷ್ಠ ನಟರ ಸಾಲಿನಲ್ಲಿ ನಿಲ್ಲಿಸಬಲ್ಲವು. ಅನೇಕ ಸಲ ನಿನ್ನ ‘ತಾರೇ ಝಮೀನ್ ಪರ್’, ‘ಲಗಾನ್’, ‘ತ್ರೀ ಈಡಿಯಟ್ಸ್’, ‘ದಂಗಲ್’ ಸಿನಿಮಾಗಳ ನಿನ್ನ ಪಾತ್ರಗಳು ನನ್ನ ತರಗತಿಯ ಅಧಿಕೃತ ಪಠ್ಯಗಳಾಗಿವೆ. ಗೆಳೆಯರೊಂದಿಗಿನ ಚರ್ಚೆಯಲ್ಲಿ ನೀನು ಮತ್ತು ನಿನ್ನ ಸಿನಿಮಾ ಹತ್ತಾರು ಸಂಪುಟಗಳಿಗಾಗುವಷ್ಟು ವಸ್ತುವಾಗಿದೆ.
‘ಭರವಸೆ’ ಎಂಬ ಪದಕ್ಕೆ ಹೊಸ ಅರ್ಥ ತಂದುಕೊಟ್ಟವನು ನೀನು. ಮನೆಗೊಬ್ಬ ಅಣ್ಣನಿದ್ದಂತೆ ನಿನ್ನ ಸಿನಿಮಾಗಳು ನನ್ನಂತವರನ್ನು ಸದಾ ಪೊರೆಯುತ್ತಲೇ ಇರುತ್ತವೆ. ಧೋ ಸುರಿವ ಮಳೆಯಲ್ಲಿ, ದೊಡ್ಡ ಮೈದಾನದಲ್ಲಿ ನಿಲ್ಲಲು ತಾವಿಲ್ಲದೆ ಇಡೀ ದೇಹ ತೊಯ್ದು ತೊಪ್ಪೆಯಾಗುವ ಮುನ್ನ ದೂರದಲ್ಲಿ ಕಂಡ ಒಂಟಿ ಅರಳಿಮರದಂತವನು ನೀನು. ನಿನ್ನದೊಂದು ದಂಗಲ್, ಲಗಾನ್, ‘ತ್ರೀ ಈಡಿಯಟ್ಸ್’, ತಾರೇ ಝಮೀನ್ ಪರ್… ಕೊಡುವಷ್ಟು ಆತ್ಮವಿಶ್ವಾಸವನ್ನು ಈಗ ದುಡ್ಡಿಗೆ ಆಧ್ಯಾತ್ಮವನ್ನು, ಧ್ಯಾನವನ್ನು ಮಾರಲು ಹೊರಟಿರುವ ಜಗತ್ತಿನ ಯಾವ ಸಂತನು ಕೊಡಲಾರ.
ಈ ಬದುಕು ತೀರಿಹೋಗುವ ಮುನ್ನ ಒಂದೇ ಒಂದು ಸಲ ಖುದ್ದು ಮುಟ್ಟಿ ನೋಡಿ ಮಾತಾಡಿಸಲೇಬೇಕೆಂದು ಪಟ್ಟಿ ಮಾಡಿಕೊಂಡಿರುವ ಈ ಜಗತ್ತಿನ ಕೆಲವೇ ಕೆಲವು ನಟರಲ್ಲಿ ನೀನು ಒಬ್ಬ.
ಬದುಕು ಮುಗಿದುಹೋಗಬಾರದಷ್ಟೇ.
ಇಂತಿ ನಿನ್ನವನು
ಕೆ.ಎಲ್. ಚಂದ್ರಶೇಖರ್ ಐಜೂರ್