ಸಂಘಟನೆಗಳು ‘ಶಕ್ತಿ’ಯಾಗದೆ ‘ಪಂಜರ’ವಾದಾಗ....!

Update: 2018-03-15 18:34 GMT

 ಶೋಷಿತ ಸಮುದಾಯಗಳು ಸಂಘಟಿತರಾಗುವುದು ಅತ್ಯಗತ್ಯ. ತಮ್ಮ ಸಂಘಟನೆಗಳ ಅಸ್ಮಿತೆಯನ್ನು ಕಾಪಾಡಿಕೊಳ್ಳುವುದು ಕೂಡ ಅಗತ್ಯ. ಆದರೆ ಸಮಾನ ಆಶಯಗಳಿಗೆ ಧಕ್ಕೆಯಾಗುತ್ತಿರುವ ಸಂದರ್ಭದಲ್ಲಿ ಸಂಘಟನೆಯ ಕೋಟೆಯನ್ನು ದಾಟಿ ಎಲ್ಲರೂ ಒಂದಾಗುವಂತೆ, ತಮ್ಮ ತಮ್ಮ ಕೋಟೆಯೊಳಗಡೆ ಸಣ್ಣದೊಂದು ಕಿಂಡಿಯನ್ನು ಇಟ್ಟುಕೊಳ್ಳಬೇಕಾದುದು ಕಾಲದ ಅಗತ್ಯವಾಗಿದೆ. ಒಂದು ಸಂಘಟನೆಯ ಕಾರ್ಯಕರ್ತನಾಗಿ ಸಂಘಟನೆಗಾಗಿ ಕೆಲಸ ಮಾಡುತ್ತಲೇ, ಸಮಾನ ಆಶಯಗಳಿಗೆ ಧಕ್ಕೆಯಾದಾಗ ಆ ಆಶಯಗಳಿಗಾಗಿ ಧ್ವನಿಯೆತ್ತಲು ಕೆಲವೊಮ್ಮೆ ತಮ್ಮ ಸ್ವತಂತ್ರ ವ್ಯಕ್ತಿತ್ವವನ್ನು ಪ್ರಕಟಪಡಿಸುವುದಕ್ಕೂ ಹೋರಾಟಗಾರರಿಗೆ ಸಾಧ್ಯವಾಗಬೇಕು.

ಯಾವುದೇ ಶೋಷಿತ, ದಮನಿತ ಸಮುದಾಯ ಸಂಘಟಿತವಾದಾಗಷ್ಟೇ ಅದರ ನೋವು, ಆಕ್ರೋಶಗಳು ಶಕ್ತಿಯಾಗಿ ಮಾರ್ಪಡುತ್ತದೆ. ಆ ಆಕ್ರೋಶ, ನೋವಿನ ತಳಹದಿಯ ಮೇಲೆ ನಿಂತು ಆ ಸಂಘಟನೆಗಳು ಎಲ್ಲಿಯವರೆಗೆ ತನ್ನ ವಿರೋಧಿಯನ್ನು ಪ್ರತಿರೋಧಿಸ ತೊಡಗುತ್ತದೆಯೋ ಅಲ್ಲಿಯವರೆಗೂ ಆ ಸಂಘಟನೆ ದುರ್ಬಲ ಸಮುದಾಯದ ಶಕ್ತಿಯಾಗಿಯೇ ಕೆಲಸ ಮಾಡುತ್ತದೆ. ಯಾವುದೇ ಒಂದು ದುರಂತದ ವಿರುದ್ಧ, ಸರ್ವಾಧಿಕಾರಿಯ ವಿರುದ್ಧ ಮಾತನಾಡ ಬಲ್ಲ ಕೋಟ್ಯಂತರ ಜನರು ಈ ದೇಶದಲ್ಲಿದ್ದಾರೆ. ಇವುಗಳ ವಿರುದ್ಧ ನೂರಾರು ಸಂಘಟನೆಗಳು ಕೆಲಸ ಮಾಡುತ್ತಿವೆ. ಆದರೆ ದುರದೃಷ್ಟವಶಾತ್ ಭಾರತದಲ್ಲಿ ಇಂದು ಈ ಸಂಘಟನೆಗಳೆಲ್ಲ ನಾಯಕ ಕೇಂದ್ರಿತವಾಗಿರುವ ಹಿನ್ನೆಲೆಯಲ್ಲಿ ಶೋಷಿತ ಸಮುದಾಯದಿಂದ ಬಂದ ಹೋರಾಟಗಾರರ ಪಾಲಿಗೆ ಅವುಗಳು ಪಂಜರವಾಗಿ ಮಾರ್ಪಡುತ್ತಿವೆ. ಪರಿಣಾಮವಾಗಿ ಹೋರಾಟಗಾರರೆಲ್ಲ ಬೇರೆ ಬೇರೆ ಗುಂಪುಗಳಾಗಿ ಪ್ರತ್ಯೇಕವಾಗಿ ಬೊಬ್ಬಿಡುತ್ತಿದ್ದಾರೆ. ನೋವು, ಶೋಷಣೆಯನ್ನನುಭವಿಸಿದ ಜನರಾಗಿ ಅವುಗಳು ಜೊತೆಯಾಗಿ, ಒಂದಾಗಿ ಧ್ವನಿಯೆತ್ತಿದರೆ ಆ ಗರ್ಜನೆಗೆ ನಮ್ಮನ್ನಾಳುವವರು ನಡುಗಿ ಬಿಡಬೇಕು. ವಿಪರ್ಯಾಸವೆಂದರೆ ಎಲ್ಲ ಸಂಘಟನೆಗಳು ಯಾವುದೇ ಪ್ರಕರಣಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಧ್ವನಿಯೆತ್ತುತ್ತವೆ. ಆದುದರಿಂದಲೇ ಅವುಗಳ ಧ್ವನಿ ವ್ಯವಸ್ಥೆಗೆ ತಲುಪುವುದೇ ಇಲ್ಲ. ತಲುಪಿದರೂ ಅದು ಎಷ್ಟು ಕ್ಷೀಣವಾಗಿರುತ್ತದೆ, ವ್ಯವಸ್ಥೆಯ ಶೋಷಣೆಗೆ ಆ ಕ್ಷೀಣ ಧ್ವನಿ ಇನ್ನಷ್ಟು ಧೈರ್ಯ ತುಂಬುತ್ತದೆ. ವಿವಿಧ ಸಂಘಟನೆಗಳ ಮೂಲಕ ಎಲ್ಲರೂ ಹೋರಾಟ ಮಾಡುತ್ತಲೇ ಇದ್ದಾರಾದರೂ, ಅದು ತನ್ನ ಪರಿಣಾಮಗಳನ್ನು ನಿರೀಕ್ಷಿತ ಪ್ರಮಾಣದಲ್ಲಿ ಬೀರುತ್ತಾ ಇಲ್ಲ. ರಾಜಕೀಯವಾಗಿ ಹಲವು ಪ್ರಗತಿಪರ ಸಂಘಟನೆಗಳು ಸಮಾನ ಆಶಯಗಳನ್ನು ಹೊಂದಿವೆಯಾದರೂ, ಆ ಆಶಯಗಳಿಗಾಗಿ ತಮ್ಮ ಸಂಘಟನೆಗಳ ಛತ್ರಿಯಡಿಯಲ್ಲಿ ಮಾತ್ರ ಧ್ವನಿಯೆತ್ತಬೇಕು ಎನ್ನುವ ಅಘೋಷಿತ ನಿರ್ಣಯವೊಂದಕ್ಕೆ ಬದ್ಧರಾಗಿರುತ್ತಾರೆ. ಈ ನಿರ್ಣಯ ಎಲ್ಲ ಹೋರಾಟಗಾರರ ಕಾಲಿಗೆ ಕಟ್ಟಿದ ಸಂಕಲೆಗಳಾಗಿ ಕೆಲಸ ಮಾಡುತ್ತಿವೆ. ಈ ಸಂಕಲೆಯ ಉದ್ದ ಎಷ್ಟಿದೆಯೋ ಅಷ್ಟು ದೂರ ಮಾತ್ರ ಹೋಗಬೇಕಾದ ಅನಿರ್ವಾಯತೆಗೆ ಸಿಕ್ಕಿ ಸಂಕಟ ಪಡುವ ಸಾವಿರಾರು ಪ್ರಾಮಾಣಿಕ ಹೋರಾಟಗಾರರನ್ನು ನಾವು ನೋಡುತ್ತಿದ್ದೇವೆ ಮತ್ತು ಆ ಸಂಕಲೆಗಳೇ ಅವರನ್ನು ಹತಾಶೆಯೆಡೆಗೆ ಮುನ್ನಡೆಸುತ್ತಿದೆ.

 ಇತ್ತೀಚೆಗೆ ಮುಂಬೈಯಲ್ಲಿ 50 ಸಾವಿರಕ್ಕೂ ಅಧಿಕ ರೈತರು, ಕಾರ್ಮಿಕರು ಸಾಗರೋಪಾದಿಯಲ್ಲಿ ಪಾದಯಾತ್ರೆ ನಡೆಸಿದರು. ಮಹಾರಾಷ್ಟ್ರ ಸರಕಾರದ ರೈತ ವಿರೋಧಿ ನೀತಿಯ ವಿರುದ್ಧ ಈ ಪಾದಯಾತ್ರೆ ನಡೆಯಿತು. ಇದೊಂದು ಐತಿಹಾಸಿಕ ಪ್ರತಿಭಟನೆಯಾಗಿತ್ತು. ಸರಕಾರ ತಕ್ಷಣ ರೈತರ ಮನವಿಗೆ ತಲೆಬಾಗಬೇಕಾಯಿತು. ಆದರೆ ಈ ಪ್ರತಿಭಟನೆ ಜಾಥಾ ಹಮ್ಮಿಕೊಂಡದ್ದು ಎಡರಂಗ. ಇದನ್ನು ಒಂದು ಯಶಸ್ವೀ ರ್ಯಾಲಿಯೆಂದು ಒಪ್ಪಿಕೊಳ್ಳುವುದು ರೈತರು ಮತ್ತು ಶೋಷಿತರ ಪರವಾಗಿರುವ ಇತರ ಸಂಘಟನೆಗಳಿಗೆ ತೀರಾ ಕಷ್ಟವಾಯಿತು. ಸಮಾನ ಮನಸ್ಕ ಸಂಘಟನೆಗಳೇ ಈ ರ್ಯಾಲಿಯ ಕುರಿತಂತೆ ಅಪಸ್ವರ ಎತ್ತಿದರು. ಬಿಎಸ್ಪಿಯಂತಹ ದಲಿತ ಸಂಘಟನೆಗಳ ನಾಯಕರು ರ್ಯಾಲಿಯ ಕುರಿತಂತೆ ಸಹಮತವನ್ನು ವ್ಯಕ್ತಪಡಿಸುವುದು ಇರಲಿ, ಟೀಕಿಸತೊಡಗಿದವು. ರ್ಯಾಲಿಯ ಉದ್ದೇಶ ಒಳ್ಳೆಯದಿರಬಹುದು. ನಮ್ಮ ಜನಗಳಿಗೇ ಅದರಿಂದ ಒಳಿತಾಗಿರಬಹುದು. ನಮ್ಮ ಶತ್ರುವಿಗೆ ಆ ರ್ಯಾಲಿಯಿಂದ ಮುಖಭಂಗವಾಗಿರಬಹುದು. ಆದರೆ ಅದನ್ನು ಒಪ್ಪಿಕೊಳ್ಳಬೇಕಾದರೆ ಆ ರ್ಯಾಲಿ ನಮ್ಮ ಸಂಘಟನೆಯಿಂದಲೇ ನಡೆಯಬೇಕಾಗುತ್ತದೆ. ಇನ್ನೊಂದು ಸಂಘಟನೆಯಿಂದ ಯಶಸ್ವೀ ರ್ಯಾಲಿ ನಡೆದಾಕ್ಷಣ ಅದನ್ನು ತಮ್ಮ ಸಂಘಟನೆಗಳಿಗಾದ ಹಿನ್ನಡೆ ಎಂಬಂತೆ ಭಾವಿಸುವ ಮನಸ್ಥಿತಿಯ ನಾಯಕರು ಹೆಚ್ಚಾಗುತ್ತಿದ್ದಾರೆ.

  
 ರೋಹಿತ್ ವೇಮುಲಾ ಆತ್ಮಹತ್ಯೆಯ ಪ್ರಕರಣವನ್ನು ತೆಗೆದುಕೊಳ್ಳೋಣ. ದಲಿತ ವಿದ್ಯಾರ್ಥಿಯೊಬ್ಬ ಸಂಘಪರಿವಾರದ ದೌರ್ಜನ್ಯಕ್ಕೆ ಸಿಲುಕಿ ಆತ್ಮಹತ್ಯೆಗೈದ ಘಟನೆ ದೇಶಾದ್ಯಂತ ಚರ್ಚೆಗೊಳಗಾಯಿತು. ಇದರ ವಿರುದ್ಧ ಎಲ್ಲ ಸಂಘಟನೆಗಳೂ ಧ್ವನಿಯೆತ್ತಿದವು. ಆದರೆ ರೋಹಿತ್ ವೇಮುಲಾಗೆ ನ್ಯಾಯ ದೊರಕಿಸಲು ದಲಿತ ಸಂಘಟನೆಗಳು ಪರಿಣಾಕಾರಿಯಾಗಿ ಒಂದಾಗಲಿಲ್ಲ. ರೋಹಿತ್ ಎಡರಂಗದ ಜೊತೆಗೆ ಇಟ್ಟುಕೊಂಡಿದ್ದ ನಂಟು ಅದಕ್ಕೆ ಮುಖ್ಯ ಕಾರಣವಾಗಿತ್ತು. ಇದೇ ಸಂದರ್ಭದಲ್ಲಿ ರೋಹಿತ್ ಎಡಚಿಂತನೆಗಳ ಜೊತೆಗೆ ನಂಟು ಹೊಂದಿದ್ದ ಎನ್ನುವುದೇ ಎಡರಂಗ ಆತನ ಸಾವಿಗೆ ಸ್ಪಂದಿಸುವುದಕ್ಕೆ ಕಾರಣವಾಯಿತು. ರೋಹಿತ್ ವೇಮುಲಾ ಸಾವನ್ನು ಮುಂದಿಟ್ಟುಕೊಂಡು ಎಡರಂಗ ದೇಶಾದ್ಯಂತ ವಿದ್ಯಾರ್ಥಿ ಚಳವಳಿಯೊಂದನ್ನು ರೂಪಿಸಿತು. ಕನ್ಹಯ್ಯಾ, ಜಿಗ್ನೇಶ್‌ರಂತಹ ಯುವ ನಾಯಕರು ಮುನ್ನೆಲೆಗೆ ಬಂದರು. ಒಂದು ವೇಳೆ ರೋಹಿಮತ್ ವೇಮುಲಾ ದಲಿತ ಸಂಘಟನೆಗಳ ವ್ಯಕ್ತಿಯಾಗಿದ್ದರೆ ಇಷ್ಟು ಆಸಕ್ತಿಯಿಂದ ಎಡ ಸಂಘಟನೆಗಳು ಮುಂದುವರಿಯುತ್ತಿತ್ತೆ ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ. ಇದೇ ಸಂದರ್ಭದಲ್ಲಿ ರೋಹಿತ್ ವೇಮುಲಾ ಪರ ಹೋರಾಟಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕು ಎಂಬ ಗೊಂದಲದಲ್ಲಿ ಸಿಲುಕಿಕೊಂಡಿತು ಬಿಎಸ್ಪಿ. ಮಾಯಾವತಿಯಂತೂ ‘ಕನ್ಹಯ್ಯಿ’ನ ವಿರುದ್ಧವೇ ಹೇಳಿಕೆಯನ್ನು ನೀಡಿದರು. ಇದೇ ರೀತಿಯಲ್ಲಿ, ದಲಿತ ಸಂಘಟನೆಗಳು ಯಾವುದೇ ಪ್ರತಿಭಟನೆಗಳನ್ನು, ರ್ಯಾಲಿಗಳನ್ನು ನಡೆಸುವಾಗ, ಎಡರಂಗದ ನಾಯಕರು ಭಾಗವಹಿಸಲು ಹಿಂದೇಟು ಹಾಕುತ್ತಾರೆ. ತಮ್ಮದೇ ಆಶಯವನ್ನು ಸಂಘಟನೆ ಎತ್ತಿ ಹಿಡಿದರೂ, ತಾನು ಆ ಹೋರಾಟದ ಜೊತೆಗೆ ಗುರುತಿಸಿಕೊಳ್ಳುವುದೆಂದರೆ ತನ್ನ ಸಂಘಟನೆಯನ್ನು ದುರ್ಬಲಗೊಳಿಸುವುದು ಎನ್ನುವ ಸಮಸ್ಯೆಯೊಂದರಲ್ಲಿ ಹೋರಾಟಗಾರ ಸಿಲುಕಿಕೊಳ್ಳುತ್ತಾನೆ. ದಲಿತರ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಜನಸಂಖ್ಯೆಯನಲ್ಲಿ ರಾಜ್ಯದಲ್ಲಿ ನಾವು ಅಗ್ರಸ್ಥಾನದಲ್ಲಿದ್ದೇವೆ, ನಮಗೆ ನಮ್ಮ ಅವಕಾಶಗಳು ಸಿಗುತ್ತಿಲ್ಲ ಎಂದು ಎಲ್ಲ ದಲಿತ ಸಂಘಟನೆಗಳು ಹೇಳಿಕೊಳ್ಳುತ್ತವೆ. ಆದರೆ ಒಂದು ನಿರ್ದಿಷ್ಟ ಸಮಸ್ಯೆಗೆ ಸಂಬಂಧಿಸಿ 50 ಸಾವಿರ ದಲಿತರನ್ನು ಒಂದೆಡೆ ಸೇರಿಸಲು ವಿಫಲವಾಗುತ್ತವೆ. ಅವರೆಲ್ಲರೂ ತಮ್ಮ ತಮ್ಮ ಸಂಘಟನೆಗಳ ಅಡಿಯಲ್ಲಿ ವ್ಯವಸ್ಥೆಯನ್ನು ಎದುರಿಸುತ್ತಾರೆಯೇ ಹೊರತು, ತಮ್ಮ ಸಮಸ್ಯೆಯ ಅಡಿಯಲ್ಲಿ ಅಲ್ಲ. ಅನೇಕ ಸಂದರ್ಭದಲ್ಲಿ ಒಂದು ಸದಾಶಯಗಳ ಹೋರಾಟಗಳ ಜೊತೆಗೆ ಪಾಲುದಾರರಾಗುವ ಆಸೆ ಬೇರೆ ಬೇರೆ ಸಂಘಟನೆಗಳಲ್ಲಿರುವ ಕಾರ್ಯಕರ್ತರಲ್ಲಿರುತ್ತದೆ. ತನ್ನ ಪಕ್ಷದಿಂದ, ತನ್ನ ಸಂಘಟನೆಯಿಂದ ಆ ಹೋರಾಟ ನಡೆಯುತ್ತಿಲ್ಲ ಎನ್ನುವ ಒಂದೇ ಕಾರಣಕ್ಕಾಗಿ ಅನಿವಾರ್ಯವಾಗಿ ದೂರವಿರಬೇಕಾಗುತ್ತದೆ. ಅಂದರೆ ಆತನ ಹೋರಾಟದ ತುಡಿತಕ್ಕೆ ಅನೇಕ ಸಂದರ್ಭಗಳಲ್ಲಿ ಕಾಲಿಗೆ ಸುತ್ತಿಕೊಂಡ ಸಂಘಟನೆಯೆನ್ನುವ ಸರಪಳಿಯೇ ಸಮಸ್ಯೆಯಾಗಿ ಬಿಡುತ್ತದೆ. ದಲಿತರ ಪ್ರತಿಭಟನೆಯಲ್ಲಿ, ಎಡರಂಗದ ಒಬ್ಬ ಮುಖಂಡ ಭಾಗವಹಿಸಿದಾಕ್ಷಣ ಅದು ಸಾವಿರ ರೀತಿಯ ಅಭಿಪ್ರಾಯಗಳನ್ನು, ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿ ಬಿಡುತ್ತದೆ. ಎಡರಂಗದೊಳಗೆ ಆತನ ಕುರಿತಂತೆ ಅಸಮಾಧಾನ ಸೃಷ್ಟಿಯಾದರೆ, ದಲಿತರಿಗೆ ಎಲ್ಲಿ ಎಡರಂಗ ತಮ್ಮ ಸಂಘಟನೆಯನ್ನು ಹೈಜಾಕ್ ಮಾಡುತ್ತಿದೆಯೋ ಎಂಬ ಭಯ ಕಾಡುತ್ತದೆ. ಇದೇ ಕಾರಣದಿಂದ ದೇಶಾದ್ಯಂತ ಪ್ರಗತಿಪರರು ದೊಡ್ಡ ಸಂಖ್ಯೆಯಲ್ಲಿ ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತುತ್ತಾ ಬರುತ್ತಿದ್ದಾರೆಯಾದರೂ, ಅವು ವಿವಿಧ ಸಂಘಟನೆಗಳ ಪಂಜರದೊಳಗೆ ಕ್ಷೀಣವಾಗುತ್ತಿವೆ. ಇಂದು ದೇಶದಲ್ಲಿ ಮನುವಾದಿ ಚಿಂತನೆಗಳನ್ನು ಹರಡುವ ಬೇರೆ ಬೇರೆ ಸಂಘಟನೆಗಳಿವೆಯಾದರೂ, ಅವೆಲ್ಲವೂ ಒಂದು ಪರಿವಾರವಾಗಿ ಗುರುತಿಸಿಕೊಳ್ಳುತ್ತಿದೆ. ಯಾವುದೇ ಪ್ರಕರಣಕ್ಕೆ ಸಂಬಂಧಿಸಿದರೂ ಅವರು ಒಂದಾಗಿ ಧ್ವನಿಯೆಬ್ಬಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಪ್ರಗತಿ ಪರರೆಲ್ಲ ತಮ್ಮ ತಮ್ಮ ಪಂಜರದೊಳಗಿಂದಲೇ ಧ್ವನಿಯೆತ್ತಬೇಕಾಗಿದೆ. ಇದರೆಲ್ಲ ಲಾಭಗಳನ್ನು ಪ್ರತಿಗಾಮಿ ಶಕ್ತಿಗಳು ತಮ್ಮದಾಗಿಸಿಕೊಳ್ಳುತ್ತಿವೆ.
  ಶೋಷಿತ ಸಮುದಾಯಗಳು ಸಂಘಟಿತರಾಗುವುದು ಅತ್ಯಗತ್ಯ. ತಮ್ಮ ಸಂಘಟನೆಗಳ ಅಸ್ಮಿತೆಯನ್ನು ಕಾಪಾಡಿಕೊಳ್ಳುವುದು ಕೂಡ ಅಗತ್ಯ. ಆದರೆ ಸಮಾನ ಆಶಯಗಳಿಗೆ ಧಕ್ಕೆಯಾಗುತ್ತಿರುವ ಸಂದರ್ಭದಲ್ಲಿ ಸಂಘಟನೆಯ ಕೋಟೆಯನ್ನು ದಾಟಿ ಎಲ್ಲರೂ ಒಂದಾಗುವಂತೆ, ತಮ್ಮ ತಮ್ಮ ಕೋಟೆಯೊಳಗಡೆ ಸಣ್ಣದೊಂದು ಕಿಂಡಿಯನ್ನು ಇಟ್ಟುಕೊಳ್ಳಬೇಕಾದುದು ಕಾಲದ ಅಗತ್ಯವಾಗಿದೆ. ಒಂದು ಸಂಘಟನೆಯ ಕಾರ್ಯಕರ್ತನಾಗಿ ಸಂಘಟನೆಗಾಗಿ ಕೆಲಸ ಮಾಡುತ್ತಲೇ, ಸಮಾನ ಆಶಯಗಳಿಗೆ ಧಕ್ಕೆಯಾದಾಗ ಆ ಆಶಯಗಳಿಗಾಗಿ ಧ್ವನಿಯೆತ್ತಲು ಕೆಲವೊಮ್ಮೆ ತಮ್ಮ ಸ್ವತಂತ್ರ ವ್ಯಕ್ತಿತ್ವವನ್ನು ಪ್ರಕಟಪಡಿಸುವುದಕ್ಕೂ ಹೋರಾಟಗಾರರಿಗೆ ಸಾಧ್ಯವಾಗಬೇಕು.
   ಇನ್ನೊಂದು ಸಂಘಟನೆಯ ಧೋರಣೆಗಳನ್ನು ನೀತಿಗಳನ್ನು ಟೀಕಿಸೋಣ. ವಿಮರ್ಶೆ ಮಾಡೋಣ. ಇದೇ ಸಂದರ್ಭದಲ್ಲಿ ಆ ಸಂಘಟನೆ ಸಮಾನ ವಿರೋಧಿಯ ಜೊತೆಗೆ ಹೋರಾಡುತ್ತಿದ್ದಾಗ ಅವರ ಸೋಲಿಗಾಗಿ ಹಂಬಲಿಸುವ ಮನಸ್ಥಿತಿಯಿಂದ ನಾವು ಹೊರ ಬರಬೇಕಾಗಿದೆ. ಸಮಾನ ಆಶಯಗಳಿರುವ ಸಂಘಟನೆಯ ಸೋಲು, ತನ್ನನ್ನು ಇನ್ನಷ್ಟು ಬಲವಾಗಿಸುತ್ತದೆ ಎಂಬ ಸಂಘಟನೆಗಳ ಸಣ್ಣ ಮನಸ್ಸಿನ ಲಾಭವನ್ನು ಇಂದು ವ್ಯವಸ್ಥೆ ತನ್ನದಾಗಿಸಿಕೊಳ್ಳುತ್ತಾ ಈ ಮಟ್ಟಕ್ಕೆ ಬೆಳೆದು ನಿಂತಿದೆ. ಸಂಘಟನೆಗಳು ಹೋರಾಟಗಾರರ ಪಾಲಿಗೆ ಪಂಜರವಾಗದಂತೆ ನೋಡಿಕೊಳ್ಳಲು, ಸಣ್ಣದೊಂದು ಬಾಗಿಲನ್ನು ಹೊಂದುವ ಅಗತ್ಯ ಇದೆ. ಆ ಬಾಗಿಲು ಎಲ್ಲ ಮಾನವೀಯ ಹೋರಾಟಗಳ ಜೊತೆಗೆ ಸಂಪರ್ಕವನ್ನು ಹೊಂದುವಂತಾಗಬೇಕು. ಪ್ರಗತಿಪರವಾಗಿ ಹೋರಾಡುವ ಎಲ್ಲ ಹೋರಾಟಗಾರರು ಒಂಟಿಯಲ್ಲ, ಅವರ ಬೆನ್ನಿಗೆ ಕೋಟ್ಯಂತರ ಜನರಿದ್ದಾರೆ ಎನ್ನುವುದನ್ನು ಸಂದರ್ಭ ಬಂದಾಗ ಒಂದೇ ಧ್ವನಿಯಲ್ಲಿ ಘೋಷಿಸಬೇಕು. ಆಗ ಮಾತ್ರ ನಾವು ಮಾಡುವ ಹೋರಾಟ ಫಲಕೊಟ್ಟೀತು. ಪ್ರಜಾಸತ್ತೆಯ ಶತ್ರುಗಳು ಹಿಂದಕ್ಕೆ ಹೆಜ್ಜೆಯಿಟ್ಟಾರು.

Writer - ಬಿ. ಎಂ. ಬಶೀರ್

contributor

Editor - ಬಿ. ಎಂ. ಬಶೀರ್

contributor

Similar News

ಜಗದಗಲ
ಜಗ ದಗಲ