ಕುಮಾರಸ್ವಾಮಿ ವಿರುದ್ದ ಬಜರಂಗದಳದ ಕಾರ್ಯಕರ್ತನ ಅವಹೇಳನಕಾರಿ ಹೇಳಿಕೆ: ಆರೋಪ

Update: 2018-03-16 15:35 GMT

ಸಕಲೇಶಪುರ,ಮಾ.16: 'ನಿಮಗೆ ಹಿಂದೂಗಳ ಓಟು ಬೇಡ ಎಂದು ಬಹಿರಂಗವಾಗಿ ಹೇಳಿದರೆ, ನೀವು ನಿಮ್ಮ ಅಪ್ಪನಿಗೆ ಹುಟ್ಟೀದ್ದೀರಿ ಎಂದು ಒಪ್ಪಿಕೊಳ್ಳುತ್ತೇನೆ’ ಎಂದು ಬಜರಂಗದಳದ ಕಾರ್ಯಕರ್ತನೊಬ್ಬ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಶಾಸಕ ಎಚ್.ಕೆ ಕುಮಾರಸ್ವಾಮಿ ವಿರುದ್ದ ಸಾರ್ವಜನಿಕ ಸ್ಥಳದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಗುರುವಾರ ಪ್ರತಿಭಟನೆಯ ನೆಪದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಮತ್ತು ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಶಾಸಕ ಎಚ್.ಕೆ ಕುಮಾರಸ್ವಾಮಿ ಮತ್ತು ಊರಿನ ಸೌಹಾರ್ದತೆಗೆ ಶ್ರಮಿಸಿದ ಗಣ್ಯರ ವಿರುದ್ಧ ಮಾನಹಾನಿಕರವಾಗಿ ಮಾತನಾಡಿರುವುದಾಗಿ ಆರೋಪಿಸಲಾಗಿದೆ. 

ಪಟ್ಟಣದಲ್ಲಿ ಮೆರವಣಿಗೆ ನಡೆಸಿ, ಹಳೆಬಸ್ ನಿಲ್ದಾಣದಲ್ಲಿ ಸಾರ್ವಜಿನಿಕ ಸಭೆ ನಡೆಸಿ ಮಾತನಾಡಿದ ಭಜರಂಗದಳ ಕಾರ್ಯಕರ್ತ ರಘು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಅತ್ಯಂತ ಕೀಳಾಗಿ ಮಾತನಾಡಿದ್ದಲ್ಲದೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕೃತಿಯನ್ನು ಕಾಲಿನಿಂದ ಮೆಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

'ನಿಮಗೆ ಮುಸ್ಲಿಮರ ಓಟು ಮಾತ್ರ ಸಾಕು ಎಂದರೆ ನಾನು ಸ್ವಾಗತಿಸುತ್ತೇನೆ. ನಿಮಗೆ ಹಿಂದೂಗಳ ಓಟು ಬೇಡ ಎಂದು ಬಹಿರಂಗವಾಗಿ ಹೇಳಿದರೆ, ನೀವು ನಿಮ್ಮ ಅಪ್ಪನಿಗೆ ಹುಟ್ಟೀದ್ದೀರಿ ಎಂದು ಒಪ್ಪಿಕೊಳ್ಳುತ್ತೇನೆ' ಎಂದು ಟೀಕಿಸಿದ್ದಾಗಿ ಆರೋಪಿಸಲಾಗಿದೆ.

ದತ್ತ ಪೀಠದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರಿಂದಲೇ ಹೊಳೆನರಸಿಪುರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ರಥೋತ್ಸವದಲ್ಲಿ ಅವಗಡ ನಡೆಯಲು ಕಾರಣ. ಕಮ್ಯುನಿಷ್ಟ್ ಪಕ್ಷ ನಕ್ಸಲ್ ಬೆಂಬಲಿಸುತ್ತಿದೆ ಹಾಗೂ ಪತ್ರಕರ್ತ ಮಲ್ನಾಡ್ ಮೆಹಬೂಬ್ ಭಯೋತ್ಪಾದಕ ಎಂದು ಬಹಿರಂಗವಾಗಿ ಹೇಳಿದ್ದಾರೆ ಎನ್ನಲಾಗಿದೆ.

ಖಂಡನೆ: ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಎಚ್.ಕೆ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬಗ್ಗೆ ಅಸಭ್ಯವಾಗಿ ಮಾತನಾಡಿರುವುದು ಖಂಡನೀಯ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಮಹಮ್ಮದ್ ಶಫಿ, ದ.ಸಂ.ಸ(ಭೀಮವಾಧ) ರಾಜ್ಯ ಸಂಚಾಲಕ ಹೆತ್ತೂರು ನಾಗರಾಜ್, ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಕಾಡಪ್ಪ, ಜೈಭೀಮ್ ಮಂಜುನಾಥ್, ಸಿ.ಐ.ಟಿಯ ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಕರ್ನಾಟಕ  ಮಹಿಳಾ ಸಂಘದ ಅಧ್ಯಕ್ಷೆ ಅನ್ನಪೂರ್ಣ, ಕಾಂಗ್ರೇಸ್ ಎಸ್ ಸಿ ಎಸ್ ಟಿ ತಾಲ್ಲೂಕು ಅಧ್ಯಕ್ಷ ಗರೀಶ್,  ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ನೇಮಾನ್, ಆಟೋ ಚಾಲಕರ ಸಂಘದ ಅಧ್ಯಕ್ಷ ಅಣ್ಣಪ್ಪ, ಸಿ.ಐ.ಟಿ.ಯು ಕಾರ್ಯದರ್ಶಿ ಹರೀಶ್, ಸೌಮ್ಯ, ಆದಿವಾಸಿ ಅಸಲರ ಸಂಘದ ಜಿಲ್ಲಾಧ್ಯಕ್ಷ ನವೀನ್ ಸದಾ, ದ.ಸಂ.ಸ ಮುಖಂಡರಾದ  ಮೀಸೆ ಮಂಜಯ್ಯ ಬೆಳಗೋಡು ಬಸವರಾಜು, ತುಂಗೇಶ್ ,ವೀರೇಶ್ ಬೆಳಗೋಡು, ಮಾನವ ಬಂದುತ್ ವೇದಿಕೆ ಇರ್ಪಾನ್ ಖಾನ್, ರೈತ ಸಂಘದ ಅಧ್ಯಕ್ಷ  ಕ್ಯಾನಹಳ್ಳಿ ರವಿಕುಮಾರ್, ಮಹಿಳಾ ವಿಮೋಚನ ಸಂಘದ ಶಾನು ರಹೀಂ, ಕಾಂಗ್ರೆಸ್ ಯುವ ಮುಖಂಡ ಭುವನಾಕ್ಷ, ಸಂದೀಪ್ ಶಿಲಗಳಲೆ ಮುಂತಾದವರು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News