ಸಿನೆಮೋತ್ಸವದ ‘ಮಳೆ ಮೋಡಗಳು’
ಹತ್ತನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನೆಮೋತ್ಸವವು ಫೆಬ್ರವರಿ 22 ರಿಂದ ಮಾರ್ಚ್ 1, 2018 ರವರೆಗೆ ನಡೆಯಿತು. ಜಗತ್ತಿನ ವಿವಿಧ ದೇಶಗಳ ಸಿನೆಮಾಗಳು ಅಲ್ಲಿ ಪ್ರದರ್ಶನಗೊಂಡವು. ದೇಶ ವಿದೇಶಗಳ ಕಲೆ, ಸಂಸ್ಕೃತಿ, ಬದುಕು, ಬವಣೆಗಳು ಪರದೆಗಳ ಮೇಲೆ ಚಲಿಸುತ್ತಾ ಹೋದವು. ಜಾಗತಿಕ ಮಟ್ಟದ ನಿರ್ದೇಶಕರು, ನಿರ್ಮಾಪಕರು ಅಲ್ಲಿ ನೆರೆದಿದ್ದರು. ಜಪಾನಿನ ನಿರ್ದೇಶಕರಾದ ರ್ಯಾಟರೋ ನಕಾಗವಾರವರು ಅವರದೇ ಆದ ಸಿನೆಮಾ ‘ಸಮ್ಮರ್ ಬ್ಲೂಮ್ಸ್’ ಪ್ರದರ್ಶನದ ಸಮಯದಲ್ಲಿ ‘‘ಸಿನೆಮಾ ಎಂಬುದು ಇಡೀ ಜಗತ್ತಿನ ಕಿಟಕಿಯಿದ್ದಂತೆ. ಅಂತಹದ್ದೊಂದು ಕಿಟಕಿಯನ್ನು ಈ ದೊಡ್ಡ ಪರದೆಯ ಮೇಲೆ ಈಗ ನೋಡಿ’’ ಎಂದಷ್ಟೇ ಹೇಳಿ ಪ್ರೇಕ್ಷಕರನ್ನು ಸಿನೆಮಾ ಪ್ರದರ್ಶನಕ್ಕೆ ಆಹ್ವಾನಿಸಿದರು.
ನನಗಂತೂ ಬೆಂಗಳೂರಿನ ಸಿನೆಮೋತ್ಸವವೆಂದರೆ ಹಬ್ಬವಿದ್ದಂತೆ. ಅಲ್ಲಿ ದೇಶ ವಿದೇಶಗಳ ಜೀವನ ಸ್ಥಿತಿಯ ದರ್ಶನವಾಗುತ್ತದೆ. ವಸ್ತು ವೈವಿಧ್ಯತೆ, ಕ್ಯಾಮರಾ ಕೆಲಸ, ಪ್ರೇಕ್ಷಕನ ಕಣ್ಣಿಗೆ ಮಣ್ಣೆರಚದ ನಿರ್ದೇಶನದಂತಹ ಅಂಶಗಳು ನನಗೆ ಅಚ್ಚುಮೆಚ್ಚು. ಪರದೆಯ ಮೇಲೆ ಮೂಡುವ ಸಿನೆಮಾಗಳು ಮಳೆ ಮೋಡಗಳಂತೆ ಭಾಸವಾಗುತ್ತವೆ. ಕನ್ನಡದ ನೆಲದಲ್ಲೂ ಅಂತಹ ಭರವಸೆಯ ಮಳೆ ಮೋಡಗಳು ಮೂಡುತ್ತಿವೆ. ಜಾಗತಿಕ ಮಟ್ಟದಲ್ಲಿ ಗಮನ ಸೆಳೆವ ಕನ್ನಡ, ತುಳು, ೊಡವ ಸಿನೆಮಾಗಳು ಅಲ್ಲಿದ್ದವು.
ವೇಳಾಪಟ್ಟಿಯಲ್ಲಿರುವ ಕೆಲವು ಸಿನೆಮಾಗಳನ್ನು ಮಾತ್ರ ನೋಡಲು ನನಗೆ ಸಾಧ್ಯವಾಯಿತು. ಅವುಗಳ ಕುರಿತ ಕಿರು ಟಿಪ್ಪಣಿಗಳು ಇಲ್ಲಿವೆ. ಸಿನೆಮಾದ ಹೆಸರು/ನಿರ್ದೇಶಕ/ದೇಶ/ತಯಾರಾದ ವರ್ಷ/ಭಾಷೆ/ ಕಾಲಾವಧಿ ಕ್ರಮದಲ್ಲಿ ಕೊಡಲಾಗಿದೆ.
ಟು ಲೆಟ್/ಚೆಜಿಯನ್ ರಾ/ಇಂಡಿಯಾ/2017/ತಮಿಳು/99 ನಿಮಿಷಗಳು:
ಟು ಲೆಟ್ ಎಂಬ ತಮಿಳು ಸಿನೆಮಾ ಚೆನ್ನೈ ಮಹಾನಗರದಲ್ಲಿ ಬಾಡಿಗೆ ಮನೆ ಹುಡುಕಲು ಪಡುವ ಪಡಿಪಾಟಲಿನ ಕಥೆ. 2007ರಲ್ಲಿ ಸಾಫ್ಟ್ ವೇರ್ ವಲಯದ ಅಭಿವೃದ್ಧಿಯಿಂದಾಗಿ ಚೆನ್ನೈ ನಗರದಲ್ಲಿ ಬಾಡಿಗೆ ಮನೆಗಳ ಬೆಲೆಗಳು ಗಗನಕ್ಕೇರುತ್ತವೆ. ಸಿನೆಮಾ ಕತೆ ಬರೆಯುವ ಹಾಗೂ ಕಂಠದಾನ ಕಲಾವಿದ, ಆತನ ಹೆಂಡತಿ ಹಾಗೂ ಪುಟ್ಟ ಮಗು ವಾಸಿಸುತ್ತಿದ್ದ ಕುಟುಂಬದವರಿಗೆ, ಬಾಡಿಗೆ ಮನೆಯ ಮಾಲಕ ಮತ್ತೊಬ್ಬರಿಗೆ ಆ ಮನೆಯನ್ನು ಹೆಚ್ಚಿನ ಬಾಡಿಗೆಗೆ ನೀಡಲು 30 ದಿನಗಳ ಗಡುವು ಕೊಟ್ಟು ಹೊಸ ಮನೆ ಹುಡುಕಿಕೊಳ್ಳಲು ಸೂಚಿಸುತ್ತಾನೆ.
ಮೂರುವರೆ ಸಾವಿರದಿಂದ ಏಳು ಸಾವಿರವಾದರೂ ಸರಿ ಬಾಡಿಗೆ ತೆರಲು ಸಿದ್ಧ ಎಂದು ಆ ಕುಟುಂಬ ಬಾಡಿಗೆ ಮನೆ ಹುಡುಕುತ್ತಾ ಹೊರಡುತ್ತದೆ. ನೀವು ಯಾವ ಊರಿನವರು? ನೀವು ಮಾಂಸಾಹಾರಿಗಳಾ? ನೀವು ಯಾವ ಜಾತಿಯವರು? ಎಂಬೆಲ್ಲಾ ಪ್ರಶ್ನೆಗಳನ್ನು ಅವರು ಎದುರಿಸಬೇಕಾಗುತ್ತದೆ. ನಿರ್ಮಾಣ ಹಂತದ ಅಪಾರ್ಟ್‌ಮೆಂಟಿನ ಮನೆಗೆ ಮುಂಗಡ ಹಣ ಕೊಟ್ಟರೂ ಕೂಡ ಅವರಿಗೆ ಮನೆ ಸಿಗುವುದಿಲ್ಲ. ಪುಟ್ಟ ಕುಟುಂಬದ ಆಸೆ ಕಮರಿಹೋಗುತ್ತದೆ. ಬೆಂಗಳೂರು ನಗರದಲ್ಲೂ ಇಂತಹ ಕತೆಗಳಿಗೆ ಕೊರತೆಯಿಲ್ಲ. ಕನ್ನಡದಲ್ಲಿ ಇಂತಹದ್ದೊಂದು ಚಿತ್ರ ಬಂದರೆ ಒಳ್ಳೆಯದೇ.
ಸಮ್ಮರ್ ಬ್ಲೂಮ್ಸ್ / ರ್ಯಾಟರೋ ನಕಾಗವಾ/ಜಪಾನ್/2017/ಜಪಾನೀಸ್/ 93 ನಿಮಿಷಗಳು:
ಸಮ್ಮರ್ ಬ್ಲೂಮ್ಸ್ ಒಂದು ಮಹಿಳಾ ಪ್ರಧಾನ ಚಿತ್ರ. ಹತ್ಸುಮಿ ಜಪಾನಿನ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಮೂರು ವರ್ಷಗಳ ಹಿಂದೆ ಮರಣವಾದ ಆಕೆಯ ಪ್ರಿಯತಮ ಬರೆದ ಪತ್ರವೊಂದು ಅವಳಿಗೆ ಸಿಗುತ್ತದೆ. ಏತನ್ಮಧ್ಯೆ, ಆಕೆ ರೆಸ್ಟೋರೆಂಟ್ ನಲ್ಲಿ ಯುವ ಕಲಾವಿದನೊಂದಿಗೆ ಆತ್ಮೀಯತೆ ಬೆಳೆಸಿಕೊಳ್ಳುತ್ತಾಳೆ. ಕಳೆದು ಹೋದ ಬದುಕನ್ನು ಕಟ್ಟಿಕೊಳ್ಳುವ ಧಾವಂತದಲ್ಲಿರುವಾಗ ಅವಳ ಹಾಲಿ ಪ್ರಿಯತಮನು ಆಕೆಯ ಹಳೆಯ ಪ್ರೇಮದ ಬಗ್ಗೆ ಪ್ರಶ್ನಿಸುತ್ತಾನೆ. ಅದರಿಂದ ಬೇಸರಗೊಂಡ ಹತ್ಸುಮಿ ರೈಲಿನ ಮೂಲಕ ಹಳ್ಳಿಗೆ ಹೊರಡುತ್ತಾಳೆ. ಅಲ್ಲಿ ನಿರ್ದೇಶಕ ನಕಾಗವಾ ಅವರು ಜಪಾನಿನ ಪರಿಸರ ಸೌಂದರ್ಯವನ್ನು ಕ್ಯಾಮರಾ ಕಣ್ಣಿನಲ್ಲಿ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಅಲ್ಲಿನ ನಿಸರ್ಗ, ಮರ, ಗಿಡ, ಗದ್ದೆ ಬಯಲಿನಂತಹ ದೃಶ್ಯಗಳು ಸಿನೆಮಾ ನೋಡುವ ಪ್ರೇಕ್ಷಕನು ಜಪಾನಿನಲ್ಲಿ ಪಯಣಿಸುತ್ತಿದ್ದಾನೇನೋ ಎಂಬಂತೆ ಭಾಸವಾಗುವಷ್ಟರ ಮಟ್ಟಿಗೆ ನೈಜವಾಗಿ ಮೂಡಿಬಂದಿದೆ. ಅಂತಿಮವಾಗಿ, ಹತ್ಸುಮಿ ತನ್ನ ಕಲಾವಿದ ಪ್ರಿಯತಮನೊಂದಿಗೆ ಸೇರಿಕೊಳ್ಳಲು ಹಂಬಲಿಸುವುದರೊಂದಿಗೆ ಸಿನೆಮಾ ಮುಗಿಯುತ್ತದೆ.
ಬ್ರೆತ್/ನರ್ಗೆಸ್ ಅಬ್ಯಾರ್/ಇರಾನ್/2016/ಪರ್ಶಿಯನ್/112 ನಿಮಿಷಗಳು:
ಬ್ರೆತ್ ಇರಾನ್ ದೇಶದ ಸಿನೆಮಾ. ಕುಟುಂಬವೊಂದರ ಮಕ್ಕಳ ಬಾಲ್ಯ, ಶಾಲೆ, ಶಿಕ್ಷಣವನ್ನು ಮುಕ್ಕಾಲು ಭಾಗದ ಸಿನೆಮಾದಲ್ಲಿ ಚಿತ್ರಿಸಲಾಗಿದೆ. ಆ ಕುಟುಂಬದಲ್ಲಿ ಅಸ್ತಮಾ ರೋಗಿಯೊಬ್ಬನಿರುತ್ತಾನೆ. ಉಸಿರಾಟದ ತೊಂದರೆಯಾದಾಗ ಇನ್‌ಹೇಲರ್ ಬಳಸಬೇಕು. ಅದೊಂದು ದಿನ ಧುತ್ತನೆ ಯುದ್ಧ ಎದುರಾಗುತ್ತದೆ. ಇರಾಕಿನ ಸದ್ದಾಂ ಹುಸೈನ್ ಇರಾನಿನ ಮೇಲೆ ಆಕ್ರಮಣ ಮಾಡುತ್ತಾನೆ. ಸಮಾಜದ ಉಸಿರಿಗೆ (ಬ್ರೆತ್) ಯುದ್ಧ ಕಂಟಕವಾಗುತ್ತದೆ. ಇರಾನಿನ ಜನರು ಆಯತುಲ್ಲಾ ಖೊಮೇನಿಯ ಫೋಟೊ ಹಿಡಿದು ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಾರೆ. ಆದರೆ ಯುದ್ದ ನಡೆದೇ ಹೋಗುತ್ತದೆ. ಉಸಿರು ಕಟ್ಟಿಸುವ ಯುದ್ಧದ ವಾತಾವರಣವನ್ನು ನವಿರಾಗಿ ಚಿತ್ರಿಸಲಾಗಿದೆ. 70-80 ರ ದಶಕದ ಯುದ್ದ ಕಾಲದ ಕಥಾಹಂದರ ಅಲ್ಲಿದೆ. ಅಲ್ಲಿನ ನಗರ ನೆಲಸಮವಾಗುತ್ತದೆ. ನೆಲಸಮವಾದ ನಗರದ ಭಗ್ನಾವಶೇಷಗಳ ಮಧ್ಯೆ ಓಯಸಿಸ್‌ನಂತೆ ನೀರಿನ ಚಿಲುಮೆ ಉಕ್ಕುತ್ತದೆ. ಏತನ್ಮಧ್ಯೆ, ಜೋರಾದ ಮಳೆ ಬರುತ್ತದೆ. ಮೋಡದ ಮಧ್ಯೆ ಕ್ಯಾಮರಾ ಇಟ್ಟು ಅಲ್ಲಿಂದ ರಭಸವಾದ ಮಳೆಹನಿಗಳು ಭೂಮಿಗೆ ಬೀಳುವುನ್ನು ಅತ್ಯದ್ಭುತವಾಗಿ ಚಿತ್ರಿಸಲಾಗಿದೆ.
ಜ್ಯಾಮ್/ಟೋನಿ ಗಟ್ಲಿಫ್/ಗ್ರೀಸ್/2017/ಗ್ರೀಕ್/97 ನಿಮಿಷಗಳು:
ಜ್ಯಾಮ್ ಒಂದು ಸಂಗೀತಮಯ ಸಿನೆಮಾ. ಭಾರತೀಯ ಚಿತ್ರಗಳಂತೆ ಹಾಡುಗಳಿವೆ. ಗ್ರೀಕ್ ದೇಶದ ಯುವತಿಯಾದ ಜ್ಯಾಮ್‌ಳನ್ನು ಹಡಗಿನ ರಿಪೇರಿಗಾಗಿ ಬೇಕಾದ ಉಪಕರಣವನ್ನು ತರಲು ಇಸ್ತಾಂಬುಲ್‌ಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿ ಆಕೆಗೆ ಅವ್ರಿಲ್ ಎಂಬ ಫ್ರೆಂಚ್ ಮಹಿಳೆಯ ಪರಿಚಯವಾಗುತ್ತದೆ. ಹಡಗಿಗೆ ಬೇಕಾದ ಉಪಕರಣವನ್ನು ಪಡೆದುಕೊಂಡ ಜ್ಯಾಮ್ ತನ್ನ ಹೊಸ ಗೆಳತಿ ಅವ್ರಿಲ್ ಜತೆಗೆ ಪಯಣ ಬೆಳೆಸುತ್ತಾ ದೇಶ-ದೇಶಗಳ ಗಡಿ ದಾಟುತ್ತಾ ಗ್ರೀಕ್ ದೇಶಕ್ಕೆ ಮರಳುತ್ತಾಳೆ. ಜ್ಯಾಮ್ ಹುಡುಗಾಟದ ಹುಡುಗಿಯಂತೆ ವರ್ತಿಸುತ್ತಾ ಪ್ರೇಕ್ಷಕನಿಗೆ ಕಚಗುಳಿಯಿಡುವ ಸನ್ನಿವೇಶಗಳನ್ನು ಸೃಷ್ಟಿಸುತ್ತಾ ನೆನಪಿನಲ್ಲಿ ಉಳಿಯುತ್ತಾಳೆ. ವಿಭಿನ್ನ ಕಥಾವಸ್ತುವಿನಿಂದಾಗಿ ಸಿನೆಮಾ ಗಮನ ಸೆಳೆಯುತ್ತದೆ.
ಬ್ಯೂಟಿ ಆ್ಯಂಡ್ ದ ಡಾಗ್ಸ್ / ಕೌಥೆರ್ ಬೆನ್ ಹನಿಯಾ /ಟ್ಯುನೇಸಿಯಾ / 2017 / ಅರೆಬಿಕ್/100 ನಿಮಿಷಗಳು:
ಟ್ಯುನೇಸಿಯಾ ಎಂಬ ಪುಟ್ಟ ದೇಶದ ಬದುಕನ್ನು ಈ ಸಿನೆಮಾ ಚಿತ್ರಿಸುತ್ತದೆ. ಕಾಲೇಜು ವಿದ್ಯಾರ್ಥಿನಿ ಮರಿಯಮ್‌ಳ ಮೇಲೆ ಪೊಲೀಸರಿಂದಲೇ ಅತ್ಯಾಚಾರವಾಗುತ್ತದೆ. ಆಕೆಯ ಗೆಳೆಯ ಯೂಸುಫ್ ಮತ್ತು ಆಕೆ ಆ ನೀರವ ರಾತ್ರಿಯಲ್ಲಿ ಪೊಲೀಸರಿಗೆ ದೂರು ಕೊಡಲು ಪ್ರಯತ್ನಿಸುತ್ತಾರೆ. ಅಲ್ಲಿನ ಪೊಲೀಸರು ಅಧಿಕಾರಶಾಹಿಗಳಾಗಿ, ರೌಡಿಗಳಂತೆ ವರ್ತಿಸುತ್ತಾರೆ. ತಪ್ಪುಮಾಡದ ಯೂಸುಫ್‌ನ ಬಂಧನವಾಗುತ್ತದೆ. ಸಂತ್ರಸ್ತ ಹೆಣ್ಣಾದ ಮರಿಯಮ್‌ಳನ್ನೂ ಬಂಧಿಸಲು ಯತ್ನಿಸುತ್ತಾರೆ. ಕೆಟ್ಟ ಪೊಲೀಸ್ ವ್ಯವಸ್ಥೆಯಲ್ಲಿ ಒಬ್ಬ ಪ್ರಾಮಾಣಿಕ ಪೊಲೀಸ್ ವ್ಯಕ್ತಿಯು ಆಕೆಯ ಬಂಧನವನ್ನು ವಿರೋಧಿಸುತ್ತಾನೆ. ಮೇಲಧಿಕಾರಿಯ ಬಂಧನದ ಆಜ್ಞೆಯನ್ನು ತಿರಸ್ಕರಿಸಿ ಆಕೆಯನ್ನು ಬಂಧಿಸಬೇಕೆಂದರೆ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಅನುಮತಿ ಬೇಕಾಗುತ್ತದೆ ಎಂದು ತಿರುಗಿಬೀಳುತ್ತಾನೆ. ಮಾರಿಯಮ್ ಅವರ ಬ್ಯೂಟಿಯ ಎದುರು ಪೊಲೀಸರು ನಾಯಿಗಳಂತೆ ವರ್ತಿಸುವುದನ್ನು ‘ಬ್ಯೂಟಿ ಆ್ಯಂಡ್ ದ ಡಾಗ್ಸ್’ ಸಿನೆಮಾದಲ್ಲಿ ಮಾರ್ಮಿಕವಾಗಿ ಚಿತ್ರಿಸಲಾಗಿದೆ. ಎಲ್ಲ ದೇಶಗಳ ಪೊಲೀಸ್ ವ್ಯವಸ್ಥೆಯ ್ರೌರ್ಯವನ್ನು ಸಿನೆಮಾ ಬಿಂಬಿಸುತ್ತದೆ.
ಎ ಮ್ಯಾನ್ ಆಫ್ ಇಂಟೆಗ್ರಿಟಿ/ಮುಹಮ್ಮದ್ ರಸೋಲಾಫ್/ಇರಾನ್/2017 /ಪರ್ಶಿಯನ್-ಇಂಗ್ಲಿಷ್/117 ನಿಮಿಷಗಳು:
ವಿಶೇಷ ಆರ್ಥಿಕ ವಲಯಗಳಿಗಾಗಿ ರೈತರ ಜಮೀನುಗಳನ್ನು ಕಿತ್ತುಕೊಂಡು ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸುವ ಭ್ರಷ್ಟ ವ್ಯವಸ್ಥೆಯನ್ನು ಎಳೆಎಳೆಯಾಗಿ ನಿರೂಪಿಸುವ ಸಿನೆಮಾ ‘ಎ ಮ್ಯಾನ್ ಆಫ್ ಇಂಟೆಗ್ರಿಟಿ’. ಉತ್ತರ ಇರಾನ್‌ನ ಹಳ್ಳಿಯ ಕಥೆ ಅದು. ತನ್ನ ಜಮೀನನ್ನು ಕಸಿದುಕೊಳ್ಳುವ ಕಾರ್ಖಾನೆಗಳ ಮಾಲಕರ ಹಾಗೂ ಭ್ರಷ್ಟ ಅಧಿಕಾರಿಗಳ ಕುತಂತ್ರಗಳ ವಿರುದ್ಧ ಸೆಟೆದು ನಿಲ್ಲುವಲ್ಲಿ ೇಜಾ ಕೊನೆಗೂ ಯಶಸ್ವಿಯಾಗುತ್ತಾನೆ.
ವಿಶೇಷ ಆರ್ಥಿಕ ವಲಯಗಳಿಗಾಗಿ ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಂಡವರು ನಮ್ಮ ಸುತ್ತ ಮುತ್ತಲೂ ಇದ್ದಾರೆ. ತನ್ನ ನೆಲದಲ್ಲೇ ಅಬ್ಬೇಪಾರಿಯಾಗುವ ರೈತನ ಬದುಕು ಕುರಿತು, ಅಂತಹುದನ್ನು ಎದುರಿಸಲು ಚಾಣಾಕ್ಷ ತಂತ್ರ ಹೆಣೆಯುವ ಕುರಿತಂತೆ ತಯಾರಾದ ಚಿತ್ರವಿದು.
ರೆಕ್ವಿಯಮ್ ಫಾರ್ ಮಿಸೆಸ್ ಜೆ /ಬೋಜನ್ ವುಲೆಟಿಕ್/ಸೆರ್ಬಿಯಾ/2017/ಸೆರ್ಬಿಯನ್/94 ನಿಮಿಷಗಳು:
ಶ್ರೀಮತಿ ಜೆ ಖಿನ್ನತೆಗೆ ಒಳಗಾಗಿ ತನ್ನ ಗಂಡನ ಪುಣ್ಯ ತಿಥಿಯ ದಿನ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯಲ್ಲಿರುತ್ತಾಳೆ. ಅದಕ್ಕಾಗಿ, ಎಲ್ಲಿ ಮತ್ತು ಹೇಗೆ ಗುಂಡಿಕ್ಕಿಕೊಳ್ಳಬೇಕು ಎಂಬ ರಿಹರ್ಸಲ್ ಮಾಡುತ್ತಾಳೆ. ಆ ಸಂದರ್ಭದಲ್ಲಿ ಆಕೆಯ ಮನಸ್ಸು ಕಲ್ಪನಾಲೋಕದಲ್ಲಿ ವಿಹರಿಸಿ, ಸಮುದ್ರ ದಡದಲ್ಲಿ ಮರಳಿನ ಮೇಲೆ ತನ್ನ ಕಾಲವಾದ ಗಂಡ ರಾಜನಂತೆ ನಡೆದುಬರುವುದನ್ನು, ಅಲ್ಲಿ ನೀರಿನ ಫಿಲ್ಟರಿನಲ್ಲಿ ನೀರು ಕುಡಿಯುವುದನ್ನು, ಆತ ಸಂತೋಷದಿಂದಿರುವುದನ್ನು ಗಮನಿಸುತ್ತಾಳೆ. ಅಲ್ಲಿ ಮುದ್ದಾದ ಮೊಲಗಳು ನೆಗೆಯುತ್ತಾ ಆಟವಾಡುತ್ತಿರುತ್ತವೆ. ಆ ಕ್ಷಣದಿಂದ ಶ್ರೀಮತಿ ಜೆ ಖಿನ್ನತೆಯಿಂದ ಹೊರಬರಲು ಪ್ರಯತ್ನಿಸುತ್ತಾಳೆ. ಖಿನ್ನತೆಯಿಂದ ಹೊರಬರಲು ತಮ್ಮ ಯೋಚನಾಲಹರಿ ಬದಲಾಗಬೇಕೆಂಬ ಸಂದೇಶವನ್ನು ಈ ಸಿನೆಮಾ ನೀಡುತ್ತದೆ.
ಉಳಿದಂತೆ, ಕನ್ನಡದ ‘ರಾಜಕುಮಾರ’ ಎಂಬ ಉತ್ತಮ ಸಿನೆಮಾ ಅಲ್ಲದೆ ‘ಟು ಐರೀನ್ಸ್’, ‘ಏಂಜಲ್ಸ್ ವೇರ್ ವೈಟ್’, ‘ಪಾಥಿ’, ‘ಎ ಫೆಂಟಾಸ್ಟಿಕ್ ವುಮೆನ್’ ಮತ್ತು ‘ಇವಾನ್’ ನಾನು ನೋಡಿದ ಇತರ ಚಿತ್ರಗಳು.