ಅಪೇಕ್ಷೆ-ನಿರೀಕ್ಷೆಗಳ ನಡುವಿನ ಸಂಘರ್ಷ
ಭಾಗ 7
ಶಾಲೆ ಮತ್ತು ಮನೆ; ಈ ಎರಡೂ ಕಡೆಗಳಿಂದ ನಿರೀಕ್ಷಿತ ವರ್ತನೆಗಳು, ನಿರೀಕ್ಷಿತ ಫಲಿತಾಂಶಗಳು ಎಲ್ಲವನ್ನೂ ಎದುರು ನೋಡುವ ಕಾರಣದಿಂದ ಮಕ್ಕಳು ಅವರಿಗೆ ಅನಿರೀಕ್ಷಿತವಾಗುವಂತಹ ಸಮಸ್ಯೆಗಳನ್ನು ಹೇಳಿಕೊಳ್ಳುವುದೇ ಇಲ್ಲ. ಏಕೆಂದರೆ, ಅವರ ಸಮಸ್ಯೆಗಳು ಪೋಷಕರ ಮತ್ತು ಶಿಕ್ಷಕರ ನಿರೀಕ್ಷಿತ ವಿಷಯಗಳದ್ದಾಗಿರುವುದಿಲ್ಲ. ಓದೋದು ಬರೆಯೋದು ಇತ್ಯಾದಿಗಳ ಸಮಸ್ಯೆಗಳನ್ನು ಪ್ರಶ್ನೆಗಳನ್ನು ಎತ್ತಿಕೊಂಡು ಹೋದರೆ ಮಾತ್ರವೇ ಮಾನ್ಯರು ಆ ಮಕ್ಕಳು. ಇಲ್ಲವಾದರೆ ಅವರು ಕೇಳಬೇಕಾದ ಮಾತೆಂದರೆ, ‘‘ಓದೋದು ಬರೆಯೋದು ಏನೂ ಇಲ್ಲವಾ? ಓದೋದು ನೋಡು, ಅದಕ್ಕೆಲ್ಲಾ ಗಮನ ಕೊಡಬೇಡ’’ ಇತ್ಯಾದಿ.
ಪ್ರಶ್ನೆ ವರ್ಸಸ್ ಪ್ರಶ್ನೆ
ಪೋಷಕರು ಪ್ರಶ್ನೆಗಳನ್ನು ಕೇಳುವ ಬಗೆಗಳು, ಅವುಗಳನ್ನು ಕೇಳುವ ಉದ್ದೇಶಗಳು ಉತ್ತರ ವನ್ನು ಪಡೆಯುವುದಾಗಿರದ ಕಾರಣದಿಂದ ಮಕ್ಕಳೂ ಉತ್ತರಿಸುವ ಗೋಜಿಗೆ ಹೋಗದೇ ಆಕ್ರಮಣಕ್ಕೆ ಪ್ರತ್ಯಾಕ್ರಮಣದಂತೆ ಪೋಷಕರಿಗೆ ಮತ್ತೊಂದು ಪ್ರಶ್ನೆಯನ್ನು ಕೇಳುತ್ತಾರೆ. ಆಗ ಅಲ್ಲಿಗೆ ಅವನು ಹೇಳಿದ ಮಾತು ಕೇಳದೇ ಇರುವ ಮಗು ಎಂಬ ಲಾಂಛನವನ್ನು ಹೊರಬೇಕಾಗುತ್ತದೆ. ಸರಿ, ಈಗ ಬಹಳ ಮುಖ್ಯವಾಗಿ ಒಂದು ಅಂಶವನ್ನು ಗಮ ನಿಸೋಣ. ಮಕ್ಕಳು ಪ್ರಶ್ನೆಗೆ ಉತ್ತರಿಸದೇ ಇರುವಂತಹ ಮಾದರಿಯನ್ನು ಪೋಷಕರಿಂದಲೇ ಪಡೆದಿರುತ್ತಾರೆ ಎಂಬುದು ಸರಳ ಸತ್ಯ. ಹೇಗೆಂದರೆ, ಮಕ್ಕಳು ಪೋಷಕರ ಯಾವುದೋ ಕೆಲಸವನ್ನು ಅಥವಾ ವರ್ತನೆಯನ್ನು ಪ್ರಶ್ನಿಸಿದಾಗ ನೀನು ಚಿಕ್ಕವನು ನೀನೇ ನನ್ನ ಕೇಳ್ತೀಯಾ? ಎಂಬಂತಹ ಅಧಿಕಾರವನ್ನು ಹಲವಾರು ಪೋಷಕರು ಪ್ರದರ್ಶಿಸುತ್ತಾರೆ. ಈ ಪ್ರದರ್ಶನ ರೌದ್ರವಾಗಿರುತ್ತದೋ, ಸಾತ್ವಿಕವಾಗಿರುತ್ತದೋ, ಪಲಾಯನವಾಗಿರುತ್ತದೋ ಒಟ್ಟಾರೆ ಮಕ್ಕಳು ಹಿರಿಯರ ವರ್ತನೆಗಳನ್ನು ಪ್ರಶ್ನಿಸುವಂತಿಲ್ಲ ಎನ್ನುವಂತಹ ಅಲಿಖಿತ ಶಾಸನ ಯಾವಾಗಲೂ ಜಾರಿಯಲ್ಲಿಯೇ ಇರುತ್ತದೆ. ಹಾಗೆಯೇ ಮನೆಯವರು ಒಲವು ಮತ್ತು ಶ್ರದ್ಧೆ ತೋರುವ ಯಾವುದೇ ಧಾರ್ಮಿಕ ವಿಧಿಯನ್ನು, ಕುಟುಂಬದ ಆಚರಣೆಯನ್ನು, ರೂಢಿಯ ಪದ್ಧತಿಗಳನ್ನು ಪ್ರಶ್ನಿಸಲು ಅದನ್ನೆಲ್ಲಾ ಕೇಳಬಾರದು, ಹಿರಿಯರಿಂದ ನಡೆದುಕೊಂಡು ಬಂದಿರುವುದು, ಅದನ್ನೇ ನೀನೂ ಮಾಡಬೇಕು ಎಂಬ ನಿರೀಕ್ಷೆಯನ್ನು ಪ್ರದರ್ಶಿಸುತ್ತಾರೆ. ಮಗುವಿನ ಉತ್ತರ ಪಡೆಯುವ ಅಪೇಕ್ಷೆ ಅಲ್ಲಿಗೆ ಒತ್ತರಿಸಲಾಗುತ್ತದೆ. ಉತ್ತರ ದೊರಕದ ಅತೃಪ್ತ ಮನಸ್ಸು ಸುಮ್ಮನೇನೂ ಇರುವುದಿಲ್ಲ. ಯಾವಾಗ ಸೇಡು ತೀರಿಸಿಕೊಳ್ಳುವುದೋ ಎಂದು ಕಾಯುತ್ತಿರುತ್ತದೆ. ಪೋಷಕರು ಕಿಶೋರಾವಸ್ಥೆಯಿಂದ ಹದಿಹರೆಯದ ವಯೋಮಾನವನ್ನು ಹಾದುಹೋಗುವಾಗ ದೇಹದಲ್ಲಿ ಬೇರೆ ವ್ಯತ್ಯಾಸಗಳಾಗುತ್ತಿರುತ್ತದೆ. ಹೆಜ್ಜೆ ಹೆಜ್ಜೆಗೂ ನೀನು ದೊಡ್ಡವನಾಗುತ್ತಿದ್ದೀಯಾ ದೊಡ್ಡವನಾಗುತ್ತಿದ್ದೀಯಾ ಎಂದು ಬೇರೆ ಜ್ಞಾಪಿಸುತ್ತಿರುತ್ತಾರೆ. ಆದರೆ, ಸಣ್ಣ ಮಗುವಿನಂತೆ ಹೇಳಿದ ಮಾತುಕೇಳಿಕೊಂಡು ಇರಬೇಕೆಂದೇ ಬಯಸುತ್ತಿರುತ್ತಾರೆ. ಆಗ ಅವನ ಬಂಡಾಯದ ಸಂಕೇತಗಳೇ ಪ್ರಶ್ನೆಗೆ ಉತ್ತರಿಸದೇ ಇರುವುದು. ಪ್ರಶ್ನೆಗೆ ಮರುಪ್ರಶ್ನೆ ಮಾಡುವುದು. ಪ್ರಶ್ನೆಗಳನ್ನು ಕೇಳಿಸಿಕೊಳ್ಳಲೇ ಸಿದ್ಧವಾಗಿಲ್ಲದಿರುವುದು ಇತ್ಯಾದಿ.
ಮಾದರಿ ವರ್ಸಸ್ ನಿರೀಕ್ಷೆ
ನಮ್ಮ ವರ್ತನೆಗಳ ಮಾದರಿಯನ್ನು ಮಕ್ಕಳು ಅನುಸರಿಸುತ್ತಾರೆ ಎಂಬುದನ್ನು ಈಗಾಗಲೇ ತಿಳಿದಿದ್ದೇವೆ. ಆದರೆ ಮಕ್ಕಳ ಕುರಿತಾಗಿ ಕೆಲವು ಬಗೆಯ ವರ್ತನೆಗಳನ್ನು ನಿರೀಕ್ಷಿಸುತ್ತಾ ನಾವೇ ಅದಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತಿದ್ದೇವೆಂದರೆ ಆಗ ಮಗುವಿನ ಮನಸ್ಥಿತಿಯನ್ನು ಹೇಗೆ ಊಹಿಸುವುದು?
ಒಂದು ಪ್ರಕರಣ. ‘‘ತನ್ನ ಮಗಳು ಹೇಳಿದ ಮಾತು ಕೇಳುವುದೇ ಇಲ್ಲ. ಬೇಕೆಂದೇ ಎಲ್ಲರ ಎದುರು ಸೆಟೆಯುತ್ತಾಳೆ. ನನ್ನ ಬಗ್ಗೆ ಕೆಟ್ಟದಾಗಿ ಇತರರ ಜೊತೆ ಮಾತಾಡಿಕೊಳ್ಳುತ್ತಾಳೆ. ಇದರ ಜೊತೆ ಯಾವ ಹಿರಿಯರಿಗೂ ಗೌರವ ಕೊಡುವುದಿಲ್ಲ. ಯಾರಾದರೂ ಅವಳಿಗೆ ಬುದ್ಧಿ ಹೇಳಲು ಹೋದರೆ ಅವರ ಜೊತೆಯೂ ಒಂದೋ ಒರಟಾಗಿ ಮಾತಾಡಿ ಮರ್ಯಾದೆ ಕೊಡದೇ ಹೊರಟು ಹೋಗುತ್ತಾಳೆ. ಇಲ್ಲವೇ ಮುಖ ಕೊಡದೇ ಹೊರಟು ಹೋಗುತ್ತಾಳೆ’’. ಇತ್ಯಾದಿ ಆ ತಾಯಿಯ ದೂರುಗಳು. ಇಷ್ಟಾದರೂ ಮತ್ತೊಬ್ಬರು ಹಿರಿಯರು ತಾವು ಅವಮರ್ಯಾದೆಗೆ ಒಳಗಾದರೂ ಪರವಾಗಿಲ್ಲ ಎಂದು ಮಗಳನ್ನು ಕೂರಿಸಿಕೊಂಡು ಕೇಳಿದರು. ‘‘ಯಾಕಮ್ಮಾ ಹೀಗೆ ಮಾಡ್ತೀಯಾ?’’
‘‘ಹೇಗೆ ಮಾಡ್ತೀನಿ?’’
‘‘ದೊಡ್ಡವರಿಗೆ ಗೌರವ ಕೊಡುವುದಿಲ್ಲವಂತೆ. ಎಲ್ಲದಕ್ಕೂ ಎದುರು ವಾದಿಸುತ್ತೀಯಂತೆ. ಅವರು ನಿನ್ನ ಒಳ್ಳೆಯದನ್ನೇ ತಾನೇ ಬಯಸೋದು? ಬೇರೆಯವರ ಹತ್ತಿರ ಕೆಟ್ಟದಾಗಿ ಮಾತಾಡ್ತೀಯಂತೆ?’’
‘‘ನಮ್ಮಮ್ಮ ನಮ್ಮಜ್ಜಿ (ಅವಳ ತಾಯಿಯ ಅತ್ತೆ) ಏನಾದರೂ ಹೇಳಿದರೆ ಕೇಳಿಬಿಡ್ತಾರಾ? ಅವರು ಅಜ್ಜಿಗೆ ಬಾಯಿಗೆ ಬಂದಂತೆ ಬೈಯಲ್ವಾ? ನಮ್ಮ ಚಿಕ್ಕಮ್ಮ ದೊಡ್ಡಮ್ಮ ಬಂದಾಗ ನಮ್ಮಜ್ಜಿಯನ್ನ, ಅತ್ತೆಯನ್ನ (ಅವಳ ತಾಯಿಯ ನಾದಿನಿ) ಎಲ್ಲರನ್ನೂ ಕೆಟ್ಟದಾಗಿ ಬೈದುಕೊಳ್ಳಲ್ವಾ? ನಾನೊಬ್ಬಳೇನಾ ಜಗಳ ಆಡೋದು? ಅವರೆಲ್ಲಾ ಆಡಲ್ವಾ?’’
ವಾಸ್ತವವಾಗಿ ಇಲ್ಲಿಗೇ ಈ ಪ್ರಕರಣ ಮುಗಿಯಿತು. ಆ ಮಗಳಿಗೆ ತನ್ನ ತಾಯಿಯೇ ಮಾದರಿ ಎಂದಾಯಿತು. ಇದು ಅರ್ಥವಾದರೂ ಆ ಹಿರಿಯರು ಕೊಂಚ ಹಿಂಜಿದರು. ‘‘ಅಲ್ಲಮ್ಮಾ, ಅವರು ಜಗಳ ಆಡ್ತಾರೆ ಅಂದ್ರೆ ನೀನೂ ಜಗಳ ಆಡೋದಮ್ಮಾ? ಅವರದೇನೋ ಅವರದು ಕಾರಣಗಳು ಇರತ್ವೆ.’’
ಮಗಳು ಹೇಳಿದಳು, ‘‘ನನಗೂ ಕಾರಣಗಳಿವೆ ಅಂಕಲ್. ನಾನೇನು ಹುಚ್ಚಿ ಅಲ್ಲ ಸುಮ್ಮಸುಮ್ಮನೆ ಜಗಳ ಆಡಕ್ಕೆ’’.
ಆ ಹುಡುಗಿ ಸಮಾಲೋಚನೆಯ ಸಮಯದಲ್ಲಿ ಮತ್ತೂ ಹಲವು ವಿಷಯಗಳನ್ನು ಹೇಳಿದಳು. ‘‘ನಾನು ಗೌರವ ಕೊಡಲ್ಲ ಗೌರವ ಕೊಡಲ್ಲ ಅಂತಾರಲ್ಲ ಅಂಕಲ್? ಅವರು ಯಾವತ್ತಾದ್ರೂ ನನ್ನ ಗೌರವದಿಂದ ಮಾತಾಡಿಸಿದ್ದಾರಾ? ನಾನೇನಾದರೂ ನನಗೂ ಗೌರವ ಕೊಡಿ ಅಂದ್ರೆ, ನೀನು ನಮ್ಮನೇಲೇ ಚಿಕ್ಕವಳು. ಈಗ ಹುಟ್ಟಿರೋಳು, ಈಗ ಕಣ್ಬಿಡ್ತಿದ್ದೀಯ, ನಾವು ನಿನಗೆ ಗೌರವ ಕೊಡಬೇಕಾ? ನೀನು ಏನು ಲೋಕ ನೋಡಿದ್ದೀಯಾ ಅಂತಾರೆ. ಇವರೇನು ಲೋಕ ನೋಡೋದು, ನನ್ನೇ ಸರಿಯಾಗಿ ನೋಡಿಲ್ಲ’’.
ಹೌದು, ಗೌರವ ಏಕಮುಖವಾಗಿರಬೇಕೆಂದು ನಿರೀಕ್ಷಿಸಿದರೆ ಅದು ಸರ್ವಾಧಿಕಾರವಾಗುತ್ತದೆ. ನೀನು ನನ್ನನ್ನು ಗೌರವಿಸಬೇಕು, ನಾನು ನಿನ್ನ ಗೌರವಿಸುವುದಿಲ್ಲ ಎಂದರೆ ಅದು ಎಂತಾ ಮಾದರಿ ಎಂದು ವಿವರಿಸಬೇಕಾಗಿಲ್ಲ. ಮಗುವು ಪೋಷಕರ ಅಥವಾ ಶಿಕ್ಷಕರ ದಾಸ್ಯದಲ್ಲೋ, ಗುಲಾಮಗಿರಿಯಲ್ಲೋ ಇರುವುದಿಲ್ಲ. ಮಗುವನ್ನು ಗೌರವಿಸಬೇಕು. ಇದು ಖಂಡಿತ. ಯಾವ ಮಕ್ಕಳು ತಮ್ಮ ಶಾಲೆಯ ಕಾರಿಡಾರಲ್ಲಿ ಎದುರಾದ ಶಿಕ್ಷಕರಿಗೆ ವಂದಿಸಿದಾಗ ಆ ಶಿಕ್ಷಕರು ಪ್ರತಿವಂದಿಸುವುದಿಲ್ಲವೋ, ಆ ಮಗುವೂ ತಾನೊಂದು ಅಧಿಕಾರಿಯೋ ಮತ್ತೊಂದು ಉನ್ನತ ಸ್ಥಾನಕ್ಕೆ ಹೋದಾಗ ತನಗೆ ವಂದಿಸಿದ ಕೆಳಗಿನವರಿಗೆ ಪ್ರತಿವಂದಿಸುವುದನ್ನು ರೂಢಿ ಮಾಡಿಕೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ. ಎಷ್ಟು ಜನ ದೊಡ್ಡವರು ತಾವೇ ತಾವಾಗಿ ಮಗುವೊಂದಕ್ಕೆ ವಂದಿಸುತ್ತಾರೆ? ಮೇಲೆ ಹೇಳಿದ ಹುಡುಗಿಯ ಪ್ರಕರಣದಲ್ಲಿ ಆ ಹುಡುಗಿಗೆ ಜಗಳವಾಡಲು ಕಾರಣಗಳು ನಿಜವಾಗಿಯೂ ಕಾರಣವಲ್ಲ. ವರ್ತನೆಗಳ ಮಾದರಿಗಳು ಅವಳ ವರ್ತನೆಗಳನ್ನು ರೂಪಿಸಿರುತ್ತವೆ. ಕಾರಣಗಳೇನೇ ಒದಗಿದ್ದರೂ ತಮ್ಮ ವರ್ತನೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಪ್ರಜ್ಞಾವಂತಿಕೆಯಿಂದ ಪೋಷಕರು ವರ್ತಿಸುವುದೇ ಆದರೆ ಬಹಳಷ್ಟು ಸಂಘರ್ಷದ ಪ್ರಕರಣಗಳು ಹುಟ್ಟುವುದೇ ಇಲ್ಲ.
ನಿರೀಕ್ಷಿತ ಬೋಧನೆಗಳು
ಇಲ್ಲಿ ಇನ್ನೊಂದು ಸಮಸ್ಯೆ ಎಂದರೆ, ಪೋಷಕರು ಮಾತ್ರ ತಮ್ಮ ನಿರೀಕ್ಷೆಯನ್ನು ಮಕ್ಕಳು ಮುಟ್ಟುತ್ತಿಲ್ಲವೆಂದೋ, ತಮ್ಮ ಅಪೇಕ್ಷೆಯನ್ನು ಈಡೇರಿಸುತ್ತಿಲ್ಲವೆಂದೋ ಇತರ ಪೋಷಕರ ಮುಂದೆ ಹೇಳುವವರು, ಅದೇ ತಮ್ಮ ಮಕ್ಕಳು ತಮ್ಮ ತಂದೆ ಅಥವಾ ತಾಯಿಯರಿಂದ ಉಂಟಾಗುವ ನಿರಾಸೆಯನ್ನು ಇತರರ ಮುಂದೆ ಅಥವಾ ಇತರ ಮಕ್ಕಳ ಮುಂದೆ ಹೇಳಿಕೊಳ್ಳಲು ಬಿಡುವುದೇ ಇಲ್ಲ. ಅದು ಒಂದು ರೀತಿಯಲ್ಲಿ ಅಲಿಖಿತ ಕಾನೂನನ್ನು ಉಲ್ಲಂಘಿಸಿದ ರೀತಿಯಲ್ಲಿ ಎಂಬಂತೆ ಆಡುತ್ತಾರೆ. ನೈತಿಕತೆಯನ್ನು ಧಿಕ್ಕರಿಸಿದಂತೆ ಎಂದು ಭಾವಿಸುತ್ತಾರೆ. ತಮ್ಮ ವಿಷಯದಲ್ಲಿ ಯಾವುದು ನೈತಿಕವೋ ಅಥವಾ ಹಾಗೆ ಮಾಡಕೂಡದೆಂದು ಭಾವಿಸುತ್ತಾರೋ ಅದನ್ನು ಅವರ ಮಕ್ಕಳ ವಿಷಯದಲ್ಲಿ ಮಾಡುವುದೇ ಮಕ್ಕಳ ಆಂತರಿಕ ಕ್ರೋಧಕ್ಕೆ ಕಾರಣವಾಗಿರುತ್ತದೆ. ಮಗುವಿನ ಪ್ರಶ್ನಿಸುವ ಹಕ್ಕನ್ನು ಕಿತ್ತುಕೊಳ್ಳುವುದು ಮಗುವಿನ ವಿಷಯದಲ್ಲಿ ಅಗೌರವವೇ ಸರಿ. ಅಂತೆಯೇ ಪೋಷಕರು ತಮ್ಮ ಮಕ್ಕಳ ಮುಂದೆ ಇನ್ನೊಂದು ಪೋಷಕರಿಗೆ ದೂರು ಸಲ್ಲಿಸಿದಾಗ ಅವರೂ ಅದೇ ಮಕ್ಕಳಿಗೆ ಸರಿಯಾಗಿರಬೇಕೆಂದು ಬುದ್ಧಿ ಹೇಳುತ್ತಾರೆ. ಇದೆಲ್ಲವೂ ಕೂಡ ಮಕ್ಕಳ ಕ್ರೋಧವನ್ನು ಹೆಚ್ಚಿಸುವಂತದ್ದೇ ಮತ್ತು ಅವಮಾನಿಸುವಂತದ್ದೇ. ನಮ್ಮ ದೇಶದಲ್ಲಂತೂ ಮತ್ತೊಂದು ಮಗುವಿಗೆ ಪೋಷಕರಿಗೆ ವಿಧೇಯವಾಗಿರಬೇಕು, ಹೇಳಿದ ಮಾತು ಕೇಳಬೇಕು, ಅವರಿಷ್ಟದಂತೆ ನಡೆದುಕೊಳ್ಳಬೇಕು ಎಂದು ಬೋದಿಸುವುದು ಸಾಂಪ್ರದಾಯಕ ನಡಾವಳಿಯೇ ಆಗಿದೆ. ಬಹಳ ಯಾಂತ್ರಿಕವಾಗಿ ಬೋಧಿಸುತ್ತಾರೆ. ಕನಿಷ್ಠ ಪಕ್ಷ ಆ ಮಗುವು ಹೇಳುವುದೇನಿದೆ ಎಂದು ಚೂರೂ ಕೇಳಿಸಿಕೊಳ್ಳಲು ಸಿದ್ಧವಿರುವುದಿಲ್ಲ. ಪೋಷಕರು ಪೋಷಕರ ಪರವೇ ಎಂದಾದಾಗ ಮಕ್ಕಳು ಯಾವ ಪೋಷಕರ ಮಾತು ಕೇಳುವುದು? ವಾಸ್ತವವಾಗಿ ಪೋಷಕರು ಪೋಷಕರು ಅಲ್ಲ ಸಂಘ ಕಟ್ಟಬೇಕಾಗಿರುವುದು. ಪೋಷಕರು ಮತ್ತು ಮಕ್ಕಳು ಸಂಘಟಿತರಾಗಬೇಕು. ಶಾಲೆ ಅಥವಾ ಕಾಲೇಜುಗಳಲ್ಲಿ ಶಿಕ್ಷಕರ ಬಗ್ಗೆ ದೂರು ತಂದರೆ ನೀನೇ ಸರಿ ಇಲ್ಲ ಎಂದೇ ಹೇಳುವ ಪೋಷಕರೇ ಅತ್ಯಧಿಕ ಸಂಖ್ಯೆಯಲ್ಲಿರುವುದು. ನೀನು ಮನೆಯಲ್ಲೂ ಹೇಳಿದ ಮಾತುಕೇಳಲ್ಲ, ಅಲ್ಲೂ ಹಾಗೇ ಆಡ್ತೀಯಾ. ಅದಕ್ಕೇ ಅವರೂ ಹಾಗೇ ಇರುವುದು ಎಂದು ಹೇಳುವರು. ಮಕ್ಕಳಿಗೋ ಆಡಲಾರದೇ ಅನುಭವಿಸಬೇಕಾಗಿರುವ ಹಲವಾರು ಸಂಗತಿಗಳಿರುವವು. ಅಪ್ಪ, ಅಮ್ಮ, ಮನೆಯ ಇತರ ಸದಸ್ಯರು, ಶಾಲೆಯ ಶಿಕ್ಷಕರು, ಸಹಪಾಠಿಗಳು ಅವರೆಲ್ಲರ ಜೊತೆಗೆ ಎಲ್ಲಾ ಸಮಸ್ಯೆಗಳನ್ನು ಸಹಿಸಿಕೊಂಡು ಅನುಸರಿಸಿಕೊಂಡು ಹೋಗಬೇಕು. ಜೊತೆಗೆ ಅವರದೇ ಆದಂತಹ ಅಪೇಕ್ಷೆಗಳು ಉಪೇಕ್ಷಿತವಾಗುತ್ತಿರುತ್ತವೆ. ಇನ್ನೂ ಜೊತೆಗೆ ಶಾಲೆಯ, ಮನೆಯ ಅಥವಾ ಸಮಾಜದ ನಿರೀಕ್ಷೆಗಳನ್ನು ಕೂಡ ಮುಟ್ಟಬೇಕು. ಶಾಲೆ ಮತ್ತು ಮನೆ; ಈ ಎರಡೂ ಕಡೆಗಳಿಂದ ನಿರೀಕ್ಷಿತ ವರ್ತನೆಗಳು, ನಿರೀಕ್ಷಿತ ಫಲಿತಾಂಶಗಳು ಎಲ್ಲವನ್ನೂ ಎದುರು ನೋಡುವ ಕಾರಣದಿಂದ ಮಕ್ಕಳು ಅವರಿಗೆ ಅನಿರೀಕ್ಷಿತವಾಗುವಂತಹ ಸಮಸ್ಯೆಗಳನ್ನು ಹೇಳಿಕೊಳ್ಳುವುದೇ ಇಲ್ಲ. ಏಕೆಂದರೆ, ಅವರ ಸಮಸ್ಯೆಗಳು ಪೋಷಕರ ಮತ್ತು ಶಿಕ್ಷಕರ ನಿರೀಕ್ಷಿತ ವಿಷಯಗಳದ್ದಾಗಿರುವುದಿಲ್ಲ. ಓದೋದು ಬರೆಯೋದು ಇತ್ಯಾದಿಗಳ ಸಮಸ್ಯೆಗಳನ್ನು ಪ್ರಶ್ನೆಗಳನ್ನು ಎತ್ತಿಕೊಂಡು ಹೋದರೆ ಮಾತ್ರವೇ ಮಾನ್ಯರು ಆ ಮಕ್ಕಳು. ಇಲ್ಲವಾದರೆ ಅವರು ಕೇಳಬೇಕಾದ ಮಾತೆಂದರೆ, ‘‘ಓದೋದು ಬರೆಯೋದು ಏನೂ ಇಲ್ಲವಾ? ಓದೋದು ನೋಡು, ಅದಕ್ಕೆಲ್ಲಾ ಗಮನ ಕೊಡಬೇಡ’’ ಇತ್ಯಾದಿ.
ತಮ್ಮ ಗಮನ ಸೆಳೆದಿರುವುದು ಅವರ ವಿಷಯವೇ ಆಗಿಲ್ಲದಿರುವುದಿಲ್ಲವಾದ್ದರಿಂದ ಮತ್ತು ಅವರ ನಿರೀಕ್ಷಿತ ವಿಷಯಕ್ಕೆ ಅದು ಹೊಂದದ ಕಾರಣ ಇವರು ತಮ್ಮ ಅಪೇಕ್ಷಿತ ವಿಷಯಗಳನ್ನು ಮತ್ತು ಕೌತುಕಗಳನ್ನು ಅಡಗಿಸಿಕೊಳ್ಳುತ್ತಲೇ ಹೋಗುತ್ತಾರೆ. ಅದು ಮುಂದೆ ಎಲ್ಲೆಲ್ಲೋ ಹೋಗುತ್ತದೆ. ಏನೇನೋ ಆಗುತ್ತದೆ.
ನಿರೀಕ್ಷಿತ ಚೌಕಟ್ಟಿನಲ್ಲಿ ನಿಯಂತ್ರಣ
ಮಕ್ಕಳನ್ನು ಸರಿಯಾಗಿ ಕಂಟ್ರೋಲ್‌ನಲ್ಲಿಡಬೇಕು ಎಂದು ಹೇಳುವುದನ್ನು ಕೇಳಿದ್ದೇನೆ. ನಿಯಂತ್ರಿಸುವುದರಿಂದ ಅಥವಾ ಅದರ ಪ್ರಯತ್ನ ಮಾಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ಬದಲಾಗಿ ಎದುರಿಗೆ ಅವರು ನಿಯಂತ್ರಣಕ್ಕೊಳಪಟ್ಟಂತೆ ನಟಿಸಬಹುದು. ಆದರೆ ಅವರು ಖಂಡಿತವಾಗಿಯೂ ಕೂಡ ನಿಯಂತ್ರಣದಲ್ಲಿರುವುದಿಲ್ಲ. ಏಕೆಂದರೆ ಯಾವ ಜೀವಿಯೂ ಯಾವ ಜೀವಿಯ ಅಧೀನದಲ್ಲಿರಲು ಇಷ್ಟಪಡುವುದಿಲ್ಲ. ಪರರ ನಿರೀಕ್ಷೆಗಳಿಗಿಂತ ತಮ್ಮ ಅಪೇಕ್ಷೆಗಳು ಮುಖ್ಯವಾಗುತ್ತವೆೆ. ಅದು ಅವರ ಒಳಗೆಯೇ ಕುಳಿತುಕೊಂಡು ನಿತ್ಯವೂ ಬಾಧಿಸುತ್ತಿರುತ್ತದೆ. ಪೋಷಕರು ತಮ್ಮ ನಿರೀಕ್ಷೆಗಳನ್ನು ಮುಂದಿಟ್ಟುಕೊಂಡು ಮಕ್ಕಳನ್ನು ನಿಯಂತ್ರಿಸುವ ಬದಲು ಮೊದಲ ಕೆಲಸವಾಗಿ ಮಕ್ಕಳ ಅಪೇಕ್ಷೆಗಳನ್ನು ಅರ್ಥೈಸಿಕೊಳ್ಳಲು ಯತ್ನಿಸಬೇಕು. ಮಕ್ಕಳು ಯಾವುದೇ ವಿಷಯವನ್ನು ತಮ್ಮಿಂದ ಮುಚ್ಚಿಟ್ಟಿದ್ದಾರೆ ಅಥವಾ ಹೇಳುತ್ತಿಲ್ಲ. ತಮ್ಮ ಪಾಡಿಗೆ ತಾವು ಮಾಡಿಕೊಂಡು ಹೋಗುತ್ತಿದ್ದಾರೆ; ಇನ್ನಾರಿಗೋ ಹೇಳಿದ್ದಾರೆ; ತಮಗೆ ಹೇಳಿಲ್ಲ; ಎಂದೆಲ್ಲಾ ಪೋಷಕರ ಗಮನಕ್ಕೆ ಬಂದರೆ ಬಹಳಷ್ಟು ತಾವು ಮಕ್ಕಳಿಂದ ನಿರಾಕರಿಸಲ್ಪಟ್ಟ ಭಾವಕ್ಕೆ ಜಾರುತ್ತಾರೆ. ತಾವು ಹೆತ್ತವರು, ಹೊತ್ತವರು, ಪಾಲನೆ -ಪೋಷಣೆ ಮಾಡುವವರು ನಮ್ಮ ಬಳಿಯೇ ಮಗುವು ಹೇಳಿಕೊಳ್ಳುತ್ತಿಲ್ಲ ಎಂಬಂತಹ ವಿಷಯವೇ ಬಹಳಷ್ಟು ಪೋಷಕರನ್ನು ಆತಂಕಕ್ಕೀಡು ಮಾಡುತ್ತದೆ. ನಿಜವಾಗಿಯೂ ಇದರಲ್ಲಿ ಅವರ ತಪ್ಪೇ ಇರುವುದೆಂದು ಅವರಿಗೆ ಅನ್ನಿಸಿರುವುದೇ ಇಲ್ಲ. ಅಷ್ಟೇಕೆ? ಮಕ್ಕಳಿಗೆ ಬೇಕಾದ ವ್ಯಕ್ತಿಗತ ಸ್ವಾತಂತ್ರ ಮತ್ತು ಅವರ ಐಚ್ಛಿಕ ಅವಕಾಶವನ್ನು ಪೋಷಕರಾದರೂ ಯಾತಕ್ಕೆ ಕಸಿಯಬೇಕು? ಮಕ್ಕಳು ತಮ್ಮ ಪೋಷಕರ ಬಳಿ ಹಲವಾರು ವಿಷಯಗಳನ್ನು ಹೇಳಿಕೊಳ್ಳುವುದಿಲ್ಲ ಅಂದರೆ, ಅವರು ತಮ್ಮನ್ನು ಆ ವಿಷಯವನ್ನು ಸ್ವೀಕರಿಸುವುದಿಲ್ಲ ಎಂದು ಭಾವಿಸಿರುತ್ತಾರೆ ಎಂದೇ ಅರ್ಥ.
ನಿಜ ವರ್ಸಸ್ ನಿರೀಕ್ಷೆ
ಮಕ್ಕಳು ಪೋಷಕರಿಗೆ ಸುಳ್ಳು ಹೇಳುವುದೂ ಕೂಡ ಅವರು ತಮ್ಮ ನಿಜವನ್ನು ಸ್ವೀಕರಿಸುವುದಿಲ್ಲ ಎಂಬ ಅನುಭವವಾಗಿರುವುದರಿಂದಲೇ. ಯಾವಾಗ ಪೋಷಕರು ಮಕ್ಕಳು ನಿಜವನ್ನು ಸ್ವೀಕರಿಸಲಾರರೋ ಅವರ ಸುಳ್ಳುಗಳನ್ನು ಪಡೆಯುತ್ತಿರಬೇಕು. ಮಕ್ಕಳು ಸುಳ್ಳು ಹೇಳುವುದು ಭಯದಿಂದ ಮತ್ತು ತಮ್ಮ ಪೋಷಕರ ನಿರೀಕ್ಷೆಗಳಿಗೆ ತಮ್ಮ ಈ ವಿಷಯ ಸಂಬಂಧಿಸಿದ್ದಲ್ಲ ಎಂದು ಕೂಡ. ನಿರೀಕ್ಷೆಯ ಚೌಕಟ್ಟಿನಲ್ಲಿಯೇ ಶಾಲೆ ಮತ್ತು ಕುಟುಂಬಗಳು ಮಗುವನ್ನು ಬಂಧಿಸಲು ನೋಡಿದಾಗ ಮಗುವು, ಆ ಚೌಕಟ್ಟಿನ ಹೊರತಾದ ತನ್ನ ಹಲವು ವಿಷಯಗಳ ಬಗ್ಗೆ ಎರಡೂ ಕಡೆ ಸುಳ್ಳುಗಳನ್ನು ಹೇಳುತ್ತಿರುತ್ತದೆ. ಪೋಷಕರು ಮಾತ್ರ ತಾವೇ ಮಗುವಿನ ಸರ್ವಸ್ವ ಎಂಬ ಭ್ರಮೆಯಲ್ಲಿರುತ್ತಾರೆ. ಮಗುವಿನ ನಿಜವನ್ನು ಗೌರವಿಸದೇ ಹೋದಾಗ ಮಗುವಿನಲ್ಲಿ ಸುಳ್ಳು ಹುಟ್ಟುತ್ತದೆ.