ತುಮಕೂರು: ಮಾಜಿ ಶಾಸಕ ಎಸ್ ಶಪಿ ಅಹಮದ್‍ಗೆ ಗೌರವ ಡಾಕ್ಟರೇಟ್ ಪ್ರಧಾನ

Update: 2018-03-17 11:21 GMT

ತುಮಕೂರು.ಮಾ.17: ಅಮೇರಿಕಾದ ಕ್ಯಾಲಿಪೋರ್ನಿಯದ ಅಸ್ಟಿನ್ ವಿವಿ ನನಗೆ ನೀಡಿರುವ ಗೌರವ ಡಾಕ್ಟರೆಟ್ ಪದವಿ ಇಡೀ ಹೆಚ್.ಎಂ.ಎಸ್. ವಿದ್ಯಾಸಂಸ್ಥೆಗೆ ಸಂದ ಗೌರವವಾಗಿದೆ ಎಂದು ಎಚ್.ಎಂ.ಎಸ್. ವಿದ್ಯಾಸಂಸ್ಥೆಯ ಮುಖ್ಯಸ್ಥ ಎಸ್.ಶಪಿ ಅಹಮದ್ ತಿಳಿಸಿದ್ದಾರೆ.

ನಗರದ ಹೆಚ್.ಎಂ.ಎಸ್.ಐ.ಟಿಯಲ್ಲಿ ನಡೆದ ಸಮಾರಂಭದಲ್ಲಿ ಅಸ್ಟಿನ್ ವಿವಿಯ ಪರವಾಗಿ ಪೀಟರ್ ಅಲೆಗ್ಜಾಂಡರ್ ಅವರಿಂದ ಗೌರವ ಡಾಕ್ಟರೇಟ್ ಪದವಿ ಸ್ವಿಕರಿಸಿದ ನಂತರ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿದ್ದು, 15ಕ್ಕೂ ಹೆಚ್ಚು ವಿವಿಧ ಹಂತದ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೆಚ್.ಎಂ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ. 1000ಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇಂದು ನನಗೆ ದೊರೆತಿರುವ ಈ ಗೌರವ ಡಾಕ್ಟರೇಟ್ ನಿಮ್ಮೆಲ್ಲರಿಗೂ ಸಂದ ಗೌರವವಾಗಿದೆ ಎಂದರು.

ನಾನು ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿ ಸಿದ್ದಗಂಗಾ ಮಠಾಧ್ಯಕ್ಷರಾದ ಡಾ.ಶ್ರೀಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆಯಲು ಹೋಗಿದ್ದೆ. ಈ ವೇಳೆ ಸ್ವಾಮೀಜಿಯವರು ನೀವು ಏಕೆ ಒಂದು ಶಿಕ್ಷಣ ಸಂಸ್ಥೆ ತೆರೆದು ಬಡ ಮಕ್ಕಳಿಗೆ ಶಿಕ್ಷಣ ನೀಡಬಾರದು ಎಂದು ಸಲಹೆ ನೀಡಿದ್ದರು. ಅವರ ಸಲಹೆಯಂತೆ ಅಂದು ಶಿಕ್ಷಣ ಸಂಸ್ಥೆ ಆರಂಭಿಸಿದ್ದು, ಇಂದು ಬೃಹತ್ತಾಗಿ ಬೆಳೆದಿದೆ. ಇಡೀ ಪ್ರಪಂಚದ ಯಾವುದೇ ಮೂಲಗೆ ಹೋದರೂ ಹೆಚ್.ಎಂ.ಎಸ್. ಶಿಕ್ಷಣ ಸಮೂಹಕ್ಕೆ ಸೇರಿದವರು ಗುರುತಿಸಿ ಮಾತನಾಡಿಸುತ್ತಾರೆ. ಇದು ನನ್ನ ಭಾಗ್ಯ ಎಂದು ಎಸ್.ಷಪಿ ಅಹಮದ್ ಭಾವುಕರಾಗಿ ನುಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಹಾಗೂ ಹೆಚ್.ಎಂ.ಎಸ್.ಐ.ಟಿಯ ನಿರ್ದೇಶಕ ಡಾ.ರಫೀಕ್ ಅಹಮದ್, ಹೆಚ್.ಎಂ.ಎಸ್ ಶಿಕ್ಷಣ ಸಮೂಹದ ಮುಖ್ಯಸ್ಥರಾದ ಎಸ್.ಷಪಿ ಅಹಮದ್ ರಾಜಕಾರಣಿಯಾಗಿ, ಶಿಕ್ಷಣ ತಜ್ಞರಾಗಿ, ಸಮಾಜಸೇವಕರಾಗಿ ಗುರುತಿಸಿಕೊಂಡವರು. ಇವರ ಕಾಲದಲ್ಲಿ ತುಮಕೂರು ನಗರದ ಬಡವರು, ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಸುಮಾರು 15 ಸಾವಿರ ನಿವೇಶನ ರಹಿತರನ್ನು ಗುರುತಿಸಿ, ಒಂದೇ ಬಾರಿಗೆ ಅಷ್ಟು ಜನರಿಗೆ ವೀರಸಾಗರ, ಮಳೆಕೋಟೆ ಪ್ರದೇಶದಲ್ಲಿ 15 ಸಾವಿರ ನಿವೇಶನಗಳನ್ನು ವಿತರಿಸಿದ್ದರು. ಇದೊಂದು ಮೈಲಿಗಲ್ಲು. ಅಲ್ಲದೆ ಎಲ್‍ಕೆಜಿಯಿಂದ ಸ್ನಾತಕೋತ್ತರ ಪದವಿಯವರಗೆ ಹೆಚ್.ಎಂ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಕಲಿಯಲು ಅವಕಾಶವಿದೆ. ಈ ಎಲ್ಲಾ ಅಂಶಗಳನ್ನು ಗುರುತಿಸಿ ಅಮೆರಿಕಾದ ಕ್ಯಾಲಿರ್ಪೋನಿಯಾದಲ್ಲಿರುವ ಅಸ್ಟಿನ್ ವಿವಿ ಎಸ್.ಷಪಿ ಅಹಮದ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸುತ್ತಿದೆ. ಇದು ನಮ್ಮೆಲ್ಲರ ಭಾಗ್ಯ ಎಂದರು.

ಅಮೆರಿಕಾದ ಅಸ್ಟಿನ್ ವಿವಿಯ ಪೀಟರ್ ಅಲೆಗ್ಜಾಂಡರ್ ಮಾತನಾಡಿ, ನಮ್ಮ ವಿವಿಯ ನಿರ್ದೇಶನಕರಲ್ಲಿ ಒಬ್ಬರಾದ ನಜೀರ್ ಅಹಮದ್ ಅವರು ಸಲಹೆಯಂತೆ ಎಸ್.ಷಪಿ ಅಹಮದ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಯಿತು. ಇದರ ಭಾಗವಾಗಿ ಇಂದು ಹೆಚ್.ಎಂ.ಎಸ್.ಐ.ಟಿಗೆ ಆಗಮಿಸಿ ಗೌರವಿಸುತ್ತಿರುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ಎಸ್.ಐ.ಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ಅಬ್ದುಲ್ಲಾ ಕುಂಞಿ, ಡಾ.ಪ್ರತಾಪ್ ಕುಮಾರ್, ಕೇಶವಮೂರ್ತಿ, ಪ್ರಾಂಶುಪಾಲ ಡಾ.ಜೋಯಲ್ ಹೇಮಂತ್, ಅಫ್ತಾಬ್ ಅಹಮದ್, ಡೆಲಿಸಸ್ ಸಾಫ್ಟವೇರ್ ಕಂಪನಿ ಸಿಇಓ ಡಾ.ಅಬ್ದುಲ್ ಹಫೀಝ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News