ಶಿವಮೊಗ್ಗ; ಮತದಾರರಿಗೆ ಆಮಿಷವೊಡ್ಡುವವರ ವಿವರ ಕಲೆ ಹಾಕಲಿದೆ ಸೆಕ್ಟರ್ ತಂಡಗಳು

Update: 2018-03-17 16:54 GMT

ಶಿವಮೊಗ್ಗ, ಮಾ. 17: ವಿಧಾನಸಭೆ ಚುನಾವಣೆ - 2018 ರ ಮಾದರಿ ನೀತಿ-ಸಂಹಿತೆ ಘೋಷಣೆಗೆ ದಿನಗಣನೆ ಆರಂಭವಾಗಿರುವುದರ ಬೆನ್ನಲ್ಲೆ, ಚುನಾವಣಾ ಆಯೋಗವು ಚುನಾವಣೆಗೆ ಸಮರೋಪಾದಿ ಪೂರ್ವಭಾವಿ ಸಿದ್ದತೆ ಮಾಡಿಕೊಳ್ಳಲಾರಂಭಿಸಿದೆ. ಸುಗಮ, ಶಾಂತಿಯುತ ಚುನಾವಣಾ ಪ್ರಕ್ರಿಯೆ ನಡೆಸಲು ಸಕಲ ತಯಾರಿ ನಡೆಸುತ್ತಿದೆ.

ಈಗಾಗಲೇ ವಿಧಾನಸಭಾ ಕ್ಷೇತ್ರಗಳಲ್ಲಿ ಇಂತಿಷ್ಟು ಮತಗಟ್ಟೆ ಆಧಾರದ ಮೇಲೆ ಸೆಕ್ಟರ್ ತಂಡಗಳ ರಚನೆ ಮಾಡಲಾಗಿದೆ. ಶುಕ್ರವಾರದಿಂದಲೇ ಈ ತಂಡಗಳು ವಿಧ್ಯುಕ್ತವಾಗಿ ತಮ್ಮ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿವೆ. ತಮ್ಮ ವ್ಯಾಪ್ತಿಗೆ ಒಳಪಡುವ ಬೂತ್‍ಗಳಲ್ಲಿ ಸಂಚರಿಸಿ, ಚುನಾವಣೆಗೆ ಸಂಬಂಧಿಸಿದ ವಿವರ ಸಂಗ್ರಹಿಸುವಲ್ಲಿ ತಲ್ಲೀನವಾಗಿವೆ. 

ಸಭೆ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಯೋಜಿತವಾಗಿರುವ ಸೆಕ್ಟರ್ ತಂಡದ ಅಧಿಕಾರಿ - ಸಿಬ್ಬಂದಿಗಳ ಸಭೆಯು ನಗರದ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ನಡೆಯಿತು. ಪಾಲಿಕೆ ಆಯುಕ್ತ ಮುಲ್ಲೈಮುಹಿಲನ್ ಸೇರಿದಂತೆ ಹಿರಿಯ ಅಧಿಕಾರಿಗಳು ಸೆಕ್ಟರ್ ತಂಡದ ಕಾರ್ಯನಿರ್ವಹಣೆಯ ಕುರಿತಂತೆ ಸಮಗ್ರ ವಿವರ ನೀಡಿದರು. ಯಾವುದೇ ಗೊಂದಲ, ಗಡಿಬಿಡಿಗೆ ಆಸ್ಪದವಾಗದಂತೆ ಕರ್ತವ್ಯ ನಿರ್ವಹಣೆ ಮಾಡುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು. 

ಜವಾಬ್ದಾರಿ: 'ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆ 269 ಮತಗಟ್ಟೆಗಳಿದ್ದು, 17 ಸೆಕ್ಟರ್ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಪ್ರತಿ ತಂಡಕ್ಕೆ 15 ರಿಂದ 20 ಬೂತ್‍ಗಳ ಉಸ್ತುವಾರಿ ವಹಿಸಲಾಗಿದೆ. ಈ ತಂಡಗಳು ತಮ್ಮ ಬೂತ್‍ಗಳ ವ್ಯಾಪ್ತಿಯಲ್ಲಿ ನಿರಂತರವಾಗಿ ಸಂಚರಿಸಿ ಚುನಾವಣೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ಸಂಗ್ರಹಿಸಲಿವೆ. 

ಮತಗಟ್ಟೆಗಳಲ್ಲಿ ಎಲ್ಲ ರೀತಿಯ ಸೌಲಭ್ಯವಿದೆಯೇ? ಎಲ್ಲಿ ಮತದಾರರಿಗೆ ಆಮಿಷವೊಡ್ಡುವ ಸಾಧ್ಯತೆಯಿದೆ? ಮತದಾರರಿಗೆ ಯಾರು ಆಮಿಷವೊಡ್ಡಲು ತಯಾರಿ ನಡೆಸುತ್ತಿದ್ದಾರೆ? ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳ್ಯಾವುದು? ಈ ಹಿಂದಿನ ಚುನಾವಣೆಗಳಲ್ಲಿ ಮತಗಟ್ಟೆಗಳಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದೆಯೇ ? ಈ ಚುನಾವಣೆಯಲ್ಲಿ ಆ ರೀತಿಯ ವಾತಾವರಣಗಳೇನಾದರೂ ಇದೆಯೇ? ಚುನಾವಣಾ ಗಲಾಟೆಯಲ್ಲಿ ಭಾಗಿಯಾಗಿದ್ದವರು ಯಾರು? ಎಂಬಿತ್ಯಾದಿ ವಿವರಗಳನ್ನು ಸೆಕ್ಟರ್ ಅಧಿಕಾರಿಗಳ ತಂಡ ಕಲೆ ಹಾಕಲಿದೆ' ಎಂದು ಆಯುಕ್ತ ಮುಲ್ಲೈಮುಹಿಲನ್‍ರವರು ತಿಳಿಸಿದ್ದಾರೆ. 

ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದ್ದಾರೆ. 'ಹಾಗೆಯೇ ಸೆಕ್ಟರ್ ತಂಡಗಳು ತಮ್ಮ ಮೇಲುಸ್ತುವಾರಿ ಪ್ರದೇಶದ ಏರಿಯಾಗಳ ಮ್ಯಾಪಿಂಗ್ ಕೂಡ ಮಾಡಲಿದ್ದಾರೆ. ಮುಕ್ತ, ನ್ಯಾಯ ಸಮ್ಮತವಾಗಿ ಮತದಾರರು ಮತದಾನ ಮಾಡಲು ಅಗತ್ಯವಾದ ಕ್ರಮಗಳನ್ನು ಈ ತಂಡಗಳು ಕೈಗೊಳ್ಳಲಿವೆ' ಎಂದು ವಿವರ ನೀಡಿದ್ದಾರೆ. 

ಸಭೆ ನಡೆಸಬೇಕು: ಸೆಕ್ಟರ್ ತಂಡಗಳ ಮುಖ್ಯಸ್ಥರನ್ನಾಗಿ ಕ್ಲಾಸ್ - 2 ದರ್ಜೆ (ಗೆಜೆಟೆಡ್) ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ಈ ತಂಡದಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ (ಎ.ಎಸ್.ಐ.), ಸೂಪರ್‍ವೈಸರ್, ಬೂತ್ ಲೆವಲ್ ಆಫೀಸರ್ (ಬಿ.ಎಲ್.ಓ.) ಗಳಿರಲಿದ್ದಾರೆ. ಒಟ್ಟಾರೆ ಒಂದು ತಂಡದಲ್ಲಿ ಐದಾರು ಜನರಿರುತ್ತಾರೆ. ಈ ತಂಡಗಳು ತಮ್ಮ ವ್ಯಾಪ್ತಿಯ ಪ್ರದೇಶಗಳ ಮತದಾರರ ಜೊತೆ ನಿರಂತರ ಸಮಾಲೋಚನೆ ಹಾಗೂ ಸಭೆ ನಡೆಸಬೇಕು. ಮತದಾರರಿಗೆ ಜಾಗೃತಿ ಮೂಡಿಸಬೇಕು. ಚುನಾವಣಾ ಅಕ್ರಮದಲ್ಲಿ ಭಾಗಿಯಾಗುವವರ ವಿರುದ್ದ ಕಾನೂನು ರೀತಿಯಲ್ಲಿ ಕೈಗೊಳ್ಳುವ ಕ್ರಮಗಳ ಕುರಿತಂತೆಯೂ ತಿಳಿ ಹೇಳಲಿದೆ. ಕಾನೂನು-ಸುವ್ಯವಸ್ಥೆಯ ವಿವರಗಳನ್ನು ಸಂಗ್ರಹಿಸಲಿವೆ. 

ಹೆಚ್ಚಿನ ಜವಾಬ್ದಾರಿ: 'ಈ ಹಿಂದಿನ ಚುನಾವಣೆಗಳಿಗೆ ಹೋಲಿಕೆ ಮಾಡಿದರೆ ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಸೆಕ್ಟರ್ ತಂಡಗಳ ಕಾರ್ಯನಿರ್ವಹಣೆಯಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದೆ. ಹೆಚ್ಚಿನ ಕಾರ್ಯಭಾರದ ಒತ್ತಡವಿದೆ. ಹಲವು ಜವಾಬ್ದಾರಿಗಳನ್ನು ವಹಿಸಲಾಗಿದೆ. ಹಾಗೆಯೇ ಸೆಕ್ಟರ್ ಮುಖ್ಯಸ್ಥರಿಗೆ ಮ್ಯಾಜಿಸ್ಟ್ರೇಟ್ ಅಧಿಕಾರ ಕೂಡ ನೀಡಲಾಗುತ್ತಿದೆ. ಕಾನೂನು - ಸುವ್ಯವಸ್ಥೆಗೆ ಭಂಗ ಉಂಟಾದ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹೊರಡಿಸಬಹುದಾಗಿದ್ದ ಆದೇಶಗಳನ್ನು, ಸೆಕ್ಟರ್ ಮುಖ್ಯಸ್ಥರೇ ಹೊರಡಿಸಬಹುದಾಗಿದೆ' ಎಂದು ಹೆಸರೇಳಿಲಿಚ್ಚಿಸದ ಸೆಕ್ಟರ್ ತಂಡಕ್ಕೆ ನಿಯೋಜಿತರಾದ ಸಿಬ್ಬಂದಿಯೋರ್ವರು ಮಾಹಿತಿ ನೀಡುತ್ತಾರೆ. 

'ಮತದಾರರು ಗಮನಹರಿಸಲಿ' : ಆಯುಕ್ತ ಮುಲ್ಲೈಮುಹಿಲನ್
'ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ? ವಿವರಗಳು ಸರಿಯಾಗಿದೆಯೇ? ಎಂಬುವುದನ್ನು ಮತದಾರರು ಪರಿಶೀಲಿಸಿಕೊಳ್ಳಬೇಕು. ಈಗಾಗಲೇ ಮತದಾರರ ಪಟ್ಟಿಯನ್ನು ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಲಾಗಿದೆ. ಚುನಾವಣಾ ಆಯೋಗದ ವೆಬ್‍ಸೈಟ್‍ನಲ್ಲಿಯೂ ಈ ಕುರಿತಾದ ವಿವರಗಳನ್ನು ಕಲೆ ಹಾಕಬಹುದಾಗಿದೆ. ಈಗಲೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶವಿದೆ. ಇದರ ಸದುಪಯೋಗವನ್ನು ನಾಗರೀಕರು ಪಡೆದುಕೊಳ್ಳಬೇಕು. ತಮ್ಮ ವ್ಯಾಪ್ತಿಯ ಬಿಎಲ್‍ಓಗಳನ್ನು ಭೇಟಿಯಾಗಿ ಅರ್ಜಿ ಸಲ್ಲಿಸಬಹುದಾಗಿದೆ' ಎಂದು ಮಹಾನಗರ ಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್‍ರವರು ಮಾಹಿತಿ ನೀಡಿದ್ದಾರೆ. 

17 ತಂಡ ರಚನೆ; ಮ್ಯಾಜಿಸ್ಟ್ರೇಟ್ ಅಧಿಕಾರ 
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟಾರೆ 269 ಮತಗಟ್ಟೆಗಳಿವೆ. ಇವುಗಳ ಮೇಲುಸ್ತುವಾರಿಗೆ 17 ಸೆಕ್ಟರ್ ತಂಡಗಳ ರಚನೆ ಮಾಡಲಾಗಿದೆ. ಪ್ರತಿ ತಂಡವು 15 ರಿಂದ 25 ಮತಗಟ್ಟೆಗಳ ಮೇಲುಸ್ತುವರಿ ನೋಡಿಕೊಳ್ಳಲಿವೆ. ಮುಂದಿನ ದಿನಗಳಲ್ಲಿ ಸೆಕ್ಟರ್ ತಂಡಗಳ ಮುಖ್ಯಸ್ಥರಿಗೆ ಮ್ಯಾಜಿಸ್ಟ್ರೇಟ್ ಅಧಿಕಾರ ಕೂಡ ನೀಡಲಾಗುತ್ತಿದೆ. ಅನಿವಾರ್ಯ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್ ಅಧಿಕಾರ ಚಲಾಯಿಸಬಹುದಾಗಿದೆ. 

ಆಯೋಗದ ಹದ್ದಿನ ಕಣ್ಗಾವಲು
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗವು ಚುನಾವಣಾ ಅಕ್ರಮಗಳಿಗೆ ಆಸ್ಪದವಾಗದಂತೆ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ. ಹದ್ದಿನ ಕಣ್ಗಾವಲಿಟ್ಟಿದೆ. ಮತದಾರರಿಗೆ ಆಮಿಷವೊಡ್ಡುವವರ ವಿವರಗಳನ್ನು ಮೊದಲೇ ಸಂಗ್ರಹಿಸಿ, ಅವರ ಚಲನವಲನಗಳ ಮೇಲೆ ನಿಗಾವಹಿಸಲಿದೆ. ಹಾಗೆಯೇ ಈ ಹಿಂದಿನ ಚುನಾವಣೆಗಳಲ್ಲಿ ಮತದಾರರಿಗೆ ಆಮಿಷವೊಡ್ಡಿ ಸಿಕ್ಕಿಬಿದ್ದವರ ಮೇಲೆಯೂ ಗಮನಹರಿಸುತ್ತಿದೆ. ಇದರಿಂದ ಮತದಾರರಿಗೆ ನಾನಾ ಆಮಿಷವೊಡ್ಡಿ ಮತ ಸೆಳೆಯಲು ಮುಂದಾಗುವುದು ಈ ಬಾರಿ ಕಷ್ಟಕರವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News