ನಮಗಿಷ್ಟ
ಒಂದಷ್ಟು ಸಮಯದ ಬಳಿಕ ದಿನೇಶ್ ಬಾಬು ಮರಳಿದ್ದಾರೆ. ಆದರೆ ಈ ಬಾರಿ ಅವರು ಹೊಸ ಮಾದರಿಯ ಕತೆಯೊಂದಿಗೆ ಆಗಮಿಸಿದ್ದಾರೆ.
ಅವಿವಾಹಿತೆಯಾಗಿ ಮಗುವಿಗೆ ಜನ್ಮ ನೀಡುವ ತಾಯಿ ಮಗುವನ್ನು ಕಸದ ಬುಟ್ಟಿ ಸೇರಿಸುವ ದೃಶ್ಯದೊಂದಿಗೆ ಚಿತ್ರ ಆರಂಭ. ಆ ಮಗು ಭಿಕ್ಷುಕರ ಪಾಲಾಗುವುದು ಮತ್ತು ಅದನ್ನು ಮಗುವಿಲ್ಲದ ತಾಯೊಬ್ಬಳು ಕೊಳ್ಳುವ ತನಕ ಸಾಮಾನ್ಯ ಚಿತ್ರಗಳ ಮಾದರಿಯಲ್ಲೇ ಕತೆ ಸಾಗುತ್ತದೆ. ಆದರೆ ಆನಂತರದ್ದು ಮಾತ್ರ ವಿಭಿನ್ನ ಕತೆ. ಮಗುವನ್ನು ಎರಡು ಸಾವಿರ ಕೊಟ್ಟು ಕೊಳ್ಳುವ ಮೀನಿನ ಜಾನು, ಆ ಮಗುವನ್ನು ‘ಇಷ್ಣು’ ಎಂದು ಕರೆಯುತ್ತಾಳೆ. ಆತ ಬೆಳೆದು ಹೋಟೆಲ್ ಒಂದರಲ್ಲಿ ಸಪ್ಲೆಯರ್ ಕೆಲಸ ಶುರುಮಾಡುತ್ತಾನೆ. ಆತನಿಗೊಬ್ಬಳು ಬಾಲ್ಯದ ಗೆಳತಿ ಇರುತ್ತಾಳೆ ಆಕೆಯ ಹೆಸರು ಮೀನಾ. ಹುಟ್ಟುತ್ತಲೇ ಕಸದ ತೊಟ್ಟಿ ಸೇರಿ, ಮೀನು ಮಾರುಕಟ್ಟೆಯಲ್ಲಿ ಬೆಳೆದ ಇಷ್ಣು ವಾಸನೆಗಳನ್ನು ಗ್ರಹಿಸುವಲ್ಲಿ ಅತೀಂದ್ರಿಯ ವರ್ತನೆ ತೋರುತ್ತಿರುತ್ತಾನೆ. ವಿಚಿತ್ರವೆಂಬಂತೆ ಅದೊಂದು ಶಕ್ತಿಯಿಂದಲೇ ಸುಮಾರು ಇಪ್ಪತ್ತು ವರ್ಷಗಳ ಬಳಿಕ ತನ್ನ ತಾಯಿಯನ್ನು ಪತ್ತೆ ಮಾಡುತ್ತಾನೆ. ಆಕೆಯ ಮನೆಯತ್ತ ಹೋದಾಗ ಅವರು ವಿದೇಶಕ್ಕೆ ತೆರಳುವ ಯೋಜನೆ ನಡೆಸಿರುವುದು ತಿಳಿದು ಬರುತ್ತದೆ.
ಆದರೆ ಆತನ ವಾಸನಾ ಪ್ರಾವೀಣ್ಯತೆ ಅಲ್ಲಿಗೆ ಮುಗಿಯುವುದಿಲ್ಲ. ಕೆಲವೊಂದು ಯುವತಿಯರ ವಾಸನೆಗಳು ಆತನಿಗೆ ಇಷ್ಟವಾಗತೊಡಗುತ್ತವೆ. ಹಾಗೆ ಅವರನ್ನು ಹಿಂಬಾಲಿಸಿ ವಾಸನೆ ನೋಡುವ ಯತ್ನದಲ್ಲಿ ಹುಡುಗಿಯರ ವಿರೋಧ ಅವರ ಕೊಲೆಯಲ್ಲಿ ಅಂತ್ಯವಾಗುತ್ತದೆ.
ತಾಯಿಯಂತೆ ಗುಂಗುರು ಕೂದಲಿರುವ ಎಲ್ಲ ಯುವತಿಯರ ವಾಸನೆಗಳು ಆತನಿಗೆ ಇಷ್ಟವಾಗತೊಡಗುತ್ತವೆ. ಹಾಗಂತ ಹೇಳುವ ಅವನು ಅಂಥವರನ್ನು ಹಿಂಬಾಲಿಸಿ ವಾಸನೆ ನೋಡುವ ಯತ್ನದಲ್ಲಿ ಕೊಲೆ ಮಾಡತೊಡಗುತ್ತಾನೆ. ಪೊಲೀಸರು ತನಿಖೆಗೆ ಮುಂದಾಗುತ್ತಾರೆ. ಕೊಲೆಯಾದ ಹುಡುಗಿಯರ ಬಟ್ಟೆಗಳು ಕಳಚಿದ್ದರೂ ಅತ್ಯಾಚಾರ ನಡೆಯದಿರುವುದು ಮತ್ತು ಅವರ ಒಂದಷ್ಟು ತಲೆಕೂದಲನ್ನು ಕತ್ತರಿಸಿ ಕೊಂಡೊಯ್ದಿರುವುದು ಕಂಡಾಗ ಇದು ಸೈಕೋ ಕೊಲೆಗಾರನ ಕೆಲಸ ಎಂದು ಸಂದೇಹ ಪಡುತ್ತಾರೆ. ವಿಪರ್ಯಾಸವೆಂದರೆ ತನಿಖೆ ನಡೆಸುವ ಪೊಲೀಸ್ ಅಧಿಕಾರಿಯ ಮಗಳೇ ಅಂಥದೊಂದು ಕೊಲೆಗೆ ಎರವಾಗುತ್ತಾಳೆ. ಹಾಗಾದರೆ ಮುಂದೇನಾಗುತ್ತದೆ? ಅಪರಾಧಿ ಸಿಕ್ಕಿ ಬೀಳುವುದೇ ಇಲ್ಲವೇ? ಆತನ ತಾಯಿ ಕೊನೆಗೂ ಮಗನನ್ನು ಭೇಟಿಯಾಗುತ್ತಾಳಾ? ಅಪರಾಧಿಗೆ ಏನು ಶಿಕ್ಷೆಯಾಗುತ್ತದೆ? ಪ್ರೇಯಸಿಯ ಕತೆ ಏನಾಯಿತು? ಮೊದಲಾದ ವಿಚಾರಗಳಿಗೆ ಉತ್ತರ ಪಡೆಯಲು ನೀವು ಚಿತ್ರ ನೋಡಲೇಬೇಕು.
ಬಹುಶಃ ಒಬ್ಬ ಸೈಕೋ ಕಿಲ್ಲರ್ ನ ಕತೆಯನ್ನು ಇಷ್ಟೊಂದು ವಿಭಿನ್ನವಾಗಿ ಹೇಳುವ, ಸೈಕೋ ಮುಖಿಯಾಗಿ ಯೋಚಿಸುವಂತೆ ಮಾಡಬಲ್ಲ ಪ್ರಯತ್ನ ನಿಜಕ್ಕೂ ಮೆಚ್ಚುವಂತಿದೆ. ಈ ಹಿಂದೆ ಸುನೀಲ್ ಕುಮಾರ್ ದೇಸಾಯಿಯವರು ಉತ್ಕರ್ಷ ಚಿತ್ರದಲ್ಲಿ ಇದೇ ಮಾದರಿಯ ಪಾತ್ರವನ್ನು ತೋರಿಸಿದ್ದು ನೆನಪಾಗುತ್ತದೆ. ಇಷ್ಣುವಾಗಿ ನಟಿಸಿರುವ ಅಶ್ವಿನ್ ಪಾತ್ರವಾಗಿಯೇ ಜೀವಿಸಿದ್ದಾರೆ. ಉಳಿದಂತೆ ಇಷ್ಣುವಿನ ಪ್ರೇಯಸಿ ಮೀನಾ ಪಾತ್ರದಲ್ಲಿ ರಚನಾ ನಟಿಸಿದ್ದಾರೆ. ಚಿತ್ರ ತೆರೆಗೆ ಬರುವ ಮೊದಲೇ ಅವರು ದುರಂತ ಸಾವು ಕಂಡಿರುವುದು ಒಳ್ಳೆಯ ಕಲಾವಿದೆಯನ್ನು ಕಳೆದುಕೊಂಡ ಭಾವವನ್ನು ಮೂಡಿಸುತ್ತದೆ. ಹೆತ್ತ ತಾಯಿಯಾಗಿ ನಟಿಸಿದ ಜಯಶ್ರೀರಾಜ್, ಸಾಕುತಾಯಿಯಾಗಿರುವ ತನುಜಾ, ಹೋಟೆಲ್ ಮಾಲಕನಾಗಿ ಕರಿಸುಬ್ಬು ಮೊದಲಾದವರಿಂದ ಹಿಡಿದು ಬ್ಯಾಂಕ್ ಜನಾರ್ದನ್ ತನಕ ಎಲ್ಲರಿಂದಲೂ ಸಹಜ ಅಭಿನಯವನ್ನು ತೆಗೆದಿರುವ ಕ್ರೆಡಿಟ್ ಸಂಪೂರ್ಣವಾಗಿ ದಿನೇಶ್ ಬಾಬು ಅವರಿಗೆ ಸಲ್ಲುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರಾಜೇಶ್ ನಟರಂಗ ತಮ್ಮಿಳಗಿನ ಕಲಾವಿದನನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಕಸದ ತೊಟ್ಟಿಯಲ್ಲಿ ಬೆಳೆದವನ ಬಾಯಿಯಿಂದ ಕಸಕ್ಕೆ ಅಪ್ಪಅಮ್ಮ ಇಲ್ಲ ಎಂಬ ಸಂಭಾಷಣೆಗಳು ಅಸಾಧ್ಯ ಎಂಬಂತೆ ಕಂಡರೂ, ಸಂದರ್ಭಕ್ಕೆ ತಕ್ಕಂತೆ ಅಮೋಘ! ಆದರೆ ಕೆಲವೊಂದು ಸಂಭಾಷಣೆ ಮತ್ತು ದೃಶ್ಯಗಳು ಕುಟುಂಬದೊಂದಿಗೆ ಕುಳಿತು ನೋಡದಂತೆ ಮಾಡಿವೆ. ಒಟ್ಟಿನಲ್ಲಿ ಚಿತ್ರ ಒಂದು ಒಳ್ಳೆಯ ಸಂದೇಶ ನೀಡುವ ಚೌಕಟ್ಟಿನಲ್ಲಿದೆ ಎಂದು ಧಾರಾಳವಾಗಿ ಹೇಳಬಹುದು.
ತಾರಾಗಣ: ಅಶ್ವಿನ್ ದೇವಾಂಗ್, ರಚನಾ
ನಿರ್ದೇಶಕ: ದಿನೇಶ್ ಬಾಬು
ನಿರ್ಮಾಪಕ: ಯುವರಾಜ್ ರಚಕೊಂಡ