ಮಸೀದಿಗಳು ಜನಾಂಗದ ಅಭಿವೃದ್ಧಿಯ ಕೇಂದ್ರವಾಗಬೇಕು: ಸಚಿವ ತನ್ವೀರ್ ಸೇಠ್

Update: 2018-03-18 13:55 GMT

ಬೇಲೂರು,ಮಾ.18: ಮಸೀದಿಗಳು ಮುಸ್ಲಿಂ ಜನಾಂಗದ ಅಭಿವೃದ್ಧಿಯ ಕೇಂದ್ರವಾಗಬೇಕು. ಸರ್ವ ಸಮಸ್ಯೆಗಳ ಪರಿಹಾರ ಹಾಗೂ ಮಾಹಿತಿಯನ್ನು ನೀಡಬೇಕು ಎಂದು ಪ್ರಾಥಮಿಕ ಶಿಕ್ಷಣ  ಸಚಿವ ತನ್ವೀರ್ ಸೇಠ್ ಹೇಳಿದರು.

ಪಟ್ಟಣದ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಔಖಾಫ್ ಮಂಡಳಿ ಹಮ್ಮಿಕೊಂಡಿದ್ದ ಹಾಸನ, ಚಿಕ್ಕಮಗಳೂರು, ಮಡಿಕೇರಿ ಜಿಲ್ಲೆಗಳ ಮಸೀದಿ ಮುತವಲ್ಲಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಮಸೀದಿಗಳ ಪದಾಧಿಕಾರಿಯಾಗಿ ಕೆಲಸಮಾಡುವುದು ಪವಿತ್ರವಾದ ಕರ್ತವ್ಯವಾಗಿದ್ದು, ಇಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಶುಕ್ರವಾರ ನಮಾಝ್ ಸಂದರ್ಭದಲ್ಲಿ ಪ್ರವಚನ ನೀಡುವಾಗ ಐದು ನಿಮಿಷ ಸರಕಾರದ ಸೌಲಭ್ಯ ಹಾಗೂ ಉದ್ಯೋಗ ಮಾಹಿತಿಯನ್ನು ನೀಡಬೇಕು. ಇದರಿಂದ ಮುಸ್ಲಿಂ ಜನಾಂಗಕ್ಕೆ ಬಹಳ ಉಪಯೋಗವಾಗುತ್ತದೆ ಎಂದರು. ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಜೊತೆಗೆ ವಿದ್ಯಾರ್ಥಿಯ ಜೀವನ ನೈತಿಕತೆಯ ವಿರುದ್ಧವಾಗಿ ನಡೆಯದಂತೆ ಜಾಗೃತವಾಗಿ ನೋಡಿಕೊಳ್ಳುವ ಜವಾಬ್ದಾರಿ ಕುಟುಂಬಕ್ಕೆ ಮಾತ್ರ ಸೀಮಿತವಾಗಿಲ್ಲ. ಅದರಲ್ಲಿ ಮಸೀದಿಯ ಪಾಲು ಕೂಡಾ ಇದೆ ಎಂದರು.

ಮಸೀದಿಯ ಅಂಗಡಿ ಮುಂಗಟ್ಟುಗಳಲ್ಲಿ ಬಾಡಿಗೆ ಪಡೆಯುವರು ಔಖಾಫ್ ಸಂಸ್ಥೆಯಲ್ಲಿ ಸಹ ವರ್ತಿಯಾಗಿರಬಾರದು. ಮುಸ್ಲಿಂ ಕಾಲೊನಿಗಳ ಅಭಿವೃದ್ಧಿಗಾಗಿ 800 ಕೋಟಿ ರೂಪಾಯಿ ಮೀಲಿರಿಸಿದೆ. ಹಾಸನ ಜಿಲ್ಲೆಗೆ  27 ಕೋಟಿ ರೂ, ಚಿಕ್ಕಮಗಳೂರು ಜಿಲ್ಲೆಗೆ 18 ಕೋಟಿ, ಕೊಡಗು ಜಿಲ್ಲೆಗೆ 6 ಕೋಟಿ ರೂ. ನೀಡಿದೆ. ಇದರ ಮೂಲಕ ಮುಸ್ಲಿಮರು ವಾಸಿಸುವ ಪ್ರದೇಶಗಳು ಪ್ರಗತಿಯಾಗಬೇಕು ಎಂದು ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಔಖಾಫ್ ಆಸ್ತಿ ಕಬಳಿಸುವರು ಹಾಗೂ ಬಾಡಿಗೆ ನೀಡದವರವ ವಿರುದ್ದ  ಕ್ರಿಮಿನಲ್ ಮೊಕದ್ದಮೆ ಹೂಡುವ ಕಾನೂನು ಜಾರಿಮಾಡಲಾಗಿದೆ ಎಂದರು.

ಮಸೀದಿಯ ಬಡಾವಣೆಯಲ್ಲಿ ಚೈತನ್ಯ ಯೋಜನೆ, ಅಂಗವಿಕಲ ಉದ್ಯೋಗ, ವಿದ್ಯಾಭ್ಯಾಸ ಸೇರಿದಂತೆ ಅನೇಕ ಮಾಹಿತಿಯನ್ನು ಮಸೀದಿ ಸಮೀತಿ ಸರ್ವೆಮಾಡಿಸಿ ಮಾಹಿತಿಯನ್ನು ಸಂಗ್ರಹಿಸಿದರೆ ಮುಸ್ಲಿಮರ ಪ್ರಗತಿ ಸಾಧ್ಯ ಎಂದರು.

ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಮಸೀದಿ ಮೂಲಕ ನೀಡುವ ವ್ಯವಸ್ಥೆಯನ್ನು ಮಾಡಲು ಸರಕಾರ ಮಸೀದಿಗಳಿಗೆ ಕಂಪ್ಯೂಟರ್ ನೀಡುತ್ತಿದೆ. ಔಖಾಫ್ ಆಸ್ತಿ ಸಂರಕ್ಷಣೆಗಾಗಿ ಹಾಸನ ಜಿಲ್ಲೆಗೆ 7 ಲಕ್ಷ ರೂ., ಕೊಡಗು ಜಿಲ್ಲೆಗೆ 5 ಕೋಟಿ, ಚಿಕ್ಕಮಗಳೂರು ಜಿಲ್ಲೆಗೆ 6 ಕೋಟಿ ನೀಡಲಾಗಿದೆ. ಕಳೆದ ಒಂದು ವರ್ಷದಿಂದ ಸಂಸ್ಥೆಯಲ್ಲಿ ಬಾರಿ ಬದಲಾವಣೆಯಾಗಿದೆ. ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿದರೆ ಮಸೀದಿಯ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗುತ್ತದೆ ಎಂದರು.

ದೇಶದಲ್ಲಿ ಪ್ರಥಮವಾಗಿ ಕರ್ನಾಟಕ ರಾಜ್ಯ ಔಕಾಫ್ ಆಡಳಿತ ಸುಧಾರಣೆಯನ್ನು ತಂದಿದೆ. ಇದರ ಅಂಗವಾಗಿ ಮುತವಲ್ಲಿ ಸಮಾವೇಶ ನಡೆಯುತ್ತಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯನ್ನು ಸಮಾಜಕ್ಕೆ ತಿಳಿಸುವ, ಬೆಂಬಲಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ಮುಸ್ಲಿಮರ ವಿರುದ್ಧವಾಗಿ ಟೀಕೆ ಮಾಡುವವರು ನಮ್ಮನ್ನು ಪ್ರಾಣಿಗಳನ್ನು ಹತ್ಯೆ ಮಾಡುವವರು ಎಂದು ಕರೆಯುತ್ತಿದ್ದರು. ಆದರೆ ಸರಕಾರ ಪಶುಪಾಲನೆ ಗಾಗಿ ಸಹಾಯಧನ ನೀಡಿದೆ. 2500 ಜನ ಫಲಾನುಭವಿಗಳು ಪ್ರಯೋಜನ ಪಡೆಯುತ್ತಾರೆ. ಸರಕಾರ ಮಸೀದಿಯ ಮೌಲಾನರಿಗೆ ಸಹಾಯಧನ ಪ್ರತ್ಯೇಕವಾಗಿ ನೀಡುತ್ತದೆ. ಸಂಸ್ಥೆಯಿಂದ ನೀಡುವ ಸಂಬಳದ ಹಣದ ಲೆಕ್ಕಕ್ಕೆ ಸೇರಿಸಬೇಡಿ ಎಂದರು.

ಲೌಕಿಕ ವಿಧ್ಯಾಭ್ಯಾಸ ದ ಜೋತೆಗೆ ಧಾರ್ಮಿಕ ವಿಧ್ಯಾಭ್ಯಾಸಕ್ಕೂ ಒತ್ತು ನೀಡಲಾಗಿದೆ. ಮಸೀದಿಯ ಸಮಿತಿಯಲ್ಲಿ ಯುವಕರಿಗೆ ಆದ್ಯತೆಯನ್ನು ನೀಡಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಸೀದಿಗಳಿಗಳಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಲು ಚೆಕ್ ವಿತರಿಸಲಾಯಿತು. ಉತ್ತಮವಾಗಿ ಸಾಧನೆಮಾಡಿದ ಮಸೀದಿಗಳ ಅಧ್ಯಕ್ಷ ರಿಗೆ ಅಭಿನಂದನೆ ಸಲ್ಲಿಸಿ, ಔಖಾಫ್ ಸಂಸ್ಥೆಯ ವತಿಯಿಂದ ಆರೋಗ್ಯದ ಸಹಾಯಧನದ ಚೆಕ್ ನೀಡಲಾಯಿತು. 

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಇಬ್ರಾಹಿಂ, ಜಿಲ್ಲಾ ವಕ್ಫ್ ಅಧ್ಯಕ್ಷ ಪರ್ವೀಜ್ ಪಾಶ, ಉಪಾಧ್ಯಕ್ಷ  ಹಸೆನಾರ್ ಆನೆಮಹಲ್, ಜಿಲ್ಲಾ ಪಂಚಾಯತ್ ಸದಸ್ಯ ತೌಫೀಕ್ ಪಾಶ, ಹುಡಾ ಬೇಲೂರು ಅಧ್ಯಕ್ಷ ಜಮಾಲೂದ್ದೀನ್, ಚಿಕ್ಕಮಗಳೂರು ಜಿಲ್ಲಾ ಔಖಾಫ್ ಅಧ್ಯಕ್ಷ ಶೇಕ್ ಫರೀದ್ ಉದ್ದೀನ್, ಕೋಡಗು ಜಿಲ್ಲಾ ಔಖಾಫ್ ಅಧ್ಯಕ್ಷ ಅಬ್ದುಲ್ ರೆಹಮಾನ್, ಹಾಸನ ಜಿಲ್ಲಾ ಔಖಾಫ್ ಅಧಿಕಾರಿ ಸತ್ತಾರ್, ಚಿಕ್ಕಮಗಳೂರು ಜಿಲ್ಲೆಯ ಸೈದೂರ್ ರೆಹಾಮಾನ್ ಖಾನ್, ಕೊಡಗು ಜಿಲ್ಲೆಯ ಸಾದತ್ ಹಸನ್ ಮುಂತಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News