ನಿದ್ರಿಸುತ್ತಿದ್ದ ಕಾರ್ಮಿಕರ ಮೇಲೆ ಹರಿದ ಬಸ್: ಇಬ್ಬರು ಮೃತ್ಯು

Update: 2018-03-18 15:03 GMT

ತಿರುವನಂತಪುರ, ಮಾ.18: ಸಾರ್ವಜನಿಕ ಮೈದಾನದಲ್ಲಿ ನಿದ್ರಿಸುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಖಾಸಗಿ ಬಸ್ ಹರಿದು ಇಬ್ಬರು ಮೃತಪಟ್ಟು, ಒಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ಇಲ್ಲಿ ಸಂಭವಿಸಿದೆ.

ಖಾಸಗಿ ಬಸ್ ಚಾಲಕ ಬಸ್ ನಿಲ್ಲಿಸಿದ್ದ ಕುಂತಿಪುರ ಮೈದಾನದಲ್ಲಿ ಕಾರ್ಮಿಕರು ನಿದ್ದೆ ಮಾಡುತ್ತಿದ್ದರು. ಇದನ್ನು ಗಮನಿಸದೇ ಚಾಲಕ ಬಸ್ ಚಲಾಯಿಸಿದಾಗ ಬೆಳ್ಳಿ, ಸುರೇಶ್ ಹಾಗೂ ರಾಗೇಶ್ ಎಂಬುವವರ ಮೇಲೆ ಬಸ್ ಹರಿಯಿತು ಎನ್ನಲಾಗಿದೆ. ಎಲ್ಲ ವಲಸೆ ಕಾರ್ಮಿಕರು ಛತ್ತೀಸ್‍ಗಢ ಮೂಲದವರು. 

ಬಸ್ ಮೊದಲ ಟ್ರಿಪ್ ಆರಂಭಿಸಲು ಬಸ್ ಹೊರಡಿಸಿದಾಗ ಈ ದುರ್ಘಟನೆ ನಡೆದಿದೆ. ಬೆಳ್ಳಿ ಹಾಗೂ ಸುರೇಶ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ತೀವ್ರ ಗಾಯಗೊಂಡ ರಾಗೇಶ್‍ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂವರು ಕೊಳವೆಬಾವಿ ನಿರ್ಮಿಸಲು ಆಗಮಿಸಿದ್ದ ಕಾರ್ಮಿಕರು ಎನ್ನಲಾಗಿದ್ದು, ಮೃತಪಟ್ಟ ಇಬ್ಬರು 18 ಮತ್ತು 16 ವಯಸ್ಸಿನವರು. ರಾಗೇಶ್‍ಗೆ 20 ವರ್ಷ.

ಪಕ್ಕದ ಅಂಗಡಿಯ ಸಿಸಿ ಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿದೆ. ಬಸ್ಸಿನ ಒಳಗಿನ ದೀಪ ಉರಿಸಿದ ಚಾಲಕ ಬಸ್ಸನ್ನು ಹಿಂದಕ್ಕೆ ಚಲಾಯಿಸಿದಾಗ, ಮಲಗಿದ್ದವರ ಮೇಲೆ ಹರಿದದ್ದು ಕಂಡುಬಂದಿದೆ. ಬಸ್ಸಿನ ಚಕ್ರಗಳು ತಲೆಯ ಮೇಲೆಯೇ ಹರಿದಿವೆ ಎಂದು ಮನ್ನಾರ್‍ಕಾಡ್ ಸಂಚಾರಿ ಪೊಲೀಸ್ ವಿಭಾಗದ ಇನ್‍ಸ್ಪೆಕ್ಟರ್ ಹೇಳಿದ್ದಾರೆ. ಆರೋಪಿ ಚಾಲಕನನ್ನು ಪೊಲೀಸರು ಬಂಧಿಸಿದ್ದು, ನಿರ್ಲಕ್ಷ್ಯದ ಚಾಲನೆಗಾಗಿ ಐಪಿಸಿ 304 (ಎ) ಅನ್ವಯ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News