ಗೋರಖ್ ಪುರ ಬಿಜೆಪಿ ಕೈಬಿಡಲು ಕಾರಣವೇನು ?

Update: 2018-03-19 06:04 GMT

ಗೋರಖ್ ಪುರ್,ಮಾ.19 : ಗೋರಖ್ ಪುರ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಸೋಲುಂಡ ನಂತರ ಅಲ್ಲಿನ ಗೋರಖ್ ನಾಥ ಮಠದಲ್ಲಿ ಒಂದು ಅವ್ಯಕ್ತ ಮೌನ ತಲೆದೋರಿದೆ. 1989ರಿಂದ ಈ ಕ್ಷೇತ್ರ ಆದಿತ್ಯನಾಥ್ ಮತ್ತವರ ಗುರು ಅವೈದ್ಯನಾಥ್ ಅವರ ಹಿಡಿತದಲ್ಲಿತ್ತು. ಇದೀಗ ಇಲ್ಲಿ ಬಿಜೆಪಿ ಸೋತ ನಂತರ ಈ ಸೋಲಿನಿಂದ ಗೋರಖನಾಥ ಮಠ ದೂರ ಸರಿದು ನಿಂತಿದೆ. ಈ ಬಾರಿ ಪೀಠಕ್ಕೆ ಸಂಬಂಧಿಸಿದ ಯಾರೂ ಸ್ಪರ್ಧಿಸದೇ ಇದ್ದುದರಿಂದ  ನಮಗೂ ಚುನಾವಣೆಗೂ ಸಂಬಂಧವಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ.

ಗೋರಖನಾಥ ದೇವಳದ ಉದ್ಯೋಗಿ ದ್ವಾರಿಕಾ ತಿವಾರಿ ಹೀಗೆ ಹೇಳುತ್ತಾರೆ- "ಬಾಬಾ (ಆದಿತ್ಯನಾಥ್) ತಮ್ಮಿಂದಾದಷ್ಟು ಪ್ರಯತ್ನ ಪಟ್ಟಿದ್ದಾರೆ. ಬಾಬಾ ಅವರು ಈ ಬಾರಿ ಸ್ಪರ್ಧಿಸುತ್ತಿಲ್ಲವಾದುದರಿಂದ ಜನರು ಧರ್ಮಕ್ಕೆ ಮತ ನೀಡಲಿಲ್ಲ.''

ಬಿಜೆಪಿಯನ್ನು ದೂರುತ್ತಾ "ಇದು ಸಂಘಟನಾತ್ಮಕ ದೋಷ. ಪಕ್ಷ ಕಾರ್ಯಕರ್ತರು ತಳಮಟ್ಟದಲ್ಲಿ ಕಾರ್ಯನಿರ್ವಹಿಸಬೇಕಿತ್ತು,'' ಎಂದು ಅವರು ಹೇಳುತ್ತಾರೆ. ಜನರು ಅಧಿಕಾರಿಗಳ ಉದ್ದಟತನದಿಂದ  ಆಕ್ರೋಶಗೊಂಡಿದ್ದಾರೆ. ಬಾಬಾ ಒಬ್ಬರೇ ಏನು ಮಾಡಬಹುದು?'' ಎಂದು ಅಲ್ಲಿನ ಇನ್ನೊಬ್ಬ ಸಿಬ್ಬಂದಿ ಪ್ರಶ್ನಿಸುತ್ತಾರೆ.

ಪೂಜನೀಯ ಹೀರಾ (ವಜ್ರದಂತಹ) ಆದಿತ್ಯನಾಥ್ ಹಾಗೂ ಅವರ ಸಮಸ್ಯೆ ತುಂಬಿದ ಸರಕಾರ, ಈ ಸಮಸ್ಯೆಗಳು ಜಿಎಸ್‍ಟಿಯಿಂದ ಹಿಡಿದು ಸಾಲ ಮನ್ನಾ, ದಲಿತರನ್ನು ಕಾಡುತ್ತಿರುವ ಅಭದ್ರತೆ ಹಾಗೂ ಈಡೇರಿಸದ ಭರವಸೆಗಳು ಸೇರಿವೆ-ಇದು ಗೋರಖಪುರ ಲೋಕಸಭಾ ಕ್ಷೇತ್ರದ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳಲ್ಲಿನ ಜನರ ಸಾಮಾನ್ಯ ಭಾವನೆ.

ಗೋರಖ್ ಪುರದ ಬಲಪೋರ್ ಎಂಬಲ್ಲಿನ ಟೀ ಅಂಗಡಿಯಲ್ಲಿ ಕುಳಿತುಕೊಂಡಿದ್ದ ವರ್ತಕ ತೌಫೀಖ್ ಅಲ್ಲಿನ ರಸ್ತೆಯತ್ತ ಬೊಟ್ಟು ಮಾಡುತ್ತಾ ದೇವಸ್ಥಾನದ ಕಡೆ ಸಾಗುವ ರಸ್ತೆಯನ್ನು ಕಳೆದೊಂದು ವರ್ಷದಿಂದ ದುರಸ್ತಿಗೊಳಿಸಲಾಗಿಲ್ಲ ಎನ್ನುತ್ತಾರೆ.

"ಅಭಿವೃದ್ಧಿ ಕಾಮಗಾರಿ ನಡೆದಿಲ್ಲವೆಂದೇನಿಲ್ಲ, ಆದರೆ ಅಧಿಕಾರ ಬದಲಾವಣೆಯಿಂದುಂಟಾದ ಬದಲಾವಣೆಗಳು ಜನರ ಗಮನಕ್ಕೆ ಬರುತ್ತಿಲ್ಲ,'' ಎಂದು ದಿಲೀಪ್ ಗಿರಿ ಎಂಬವರು ಹೇಳುತ್ತಾರೆ.

ಗ್ರಾಮೀಣ ಭಾಗಗಳಲ್ಲಂತೂ ಜನರ ಆಕ್ರೋಶ ಸ್ಪಷ್ಟವಾಗಿ ಗೋಚರಿಸುತ್ತಿದೆ. ದಲಿತರಂತೂ ರಾಜ್ಯದ ಹಲವೆಡೆ ಹಾನಿಗೈಯ್ಯಲ್ಪಟ್ಟ ಅಂಬೇಡ್ಕರ್ ಪ್ರತಿಮೆಗಳ ಬಗ್ಗೆ ಮಾತನಾಡುತ್ತಾರೆ. ಠಾಕುರ್ ಸಮುದಾಯಕ್ಕೆ ಸೇರಿದ ಆದಿತ್ಯನಾಥ್ ಮುಖ್ಯಮಂತ್ರಿಯಾದಾಗಿನಿಂದ ಮೇಲ್ವರ್ಗದವರು ತಮ್ಮ ಪ್ರಾಬಲ್ಯ ಮೆರೆಯುತ್ತಿರುವ ಬಗ್ಗೆಯೂ ದಲಿತರು ಸಿಟ್ಟಾಗಿದ್ದಾರೆ. "ನಮಗೆ ಗೌರವ ಸಿಗುತ್ತಿಲ್ಲ. ಪೊಲೀಸ್ ಠಾಣೆಗಳಲ್ಲಿ ನಮ್ಮನ್ನು ಕೆಟ್ಟದಾಗಿ ನೋಡಲಾಗುತ್ತದೆ,'' ಎಂದು ಸುಧೀರ್ ಕುಮಾರ್ ಎಂಬ ಕಾರ್ಮಿಕ ಹೇಳುತ್ತಾನೆ.

ನೋಟು ಅಮಾನ್ಯೀಕರಣದ ವಿರುದ್ಧವೂ ಜನರ ಅಸಹನೆ ಸ್ಪಷ್ಟವಾಗಿ ಗೋಚರಿಸುತ್ತದೆ. ಜಿಎಸ್‍ಟಿ ಕೂಡ ಒಂದು ಕಾರಣವಾಗಿದೆ. "ಹಲವಾರು ಯುವಕರು ಕೆಲಸ ಕಳೆದುಕೊಂಡು ಮನೆಗೆ ಮರಳಿದ್ದಾರೆ. ನಾವೇನು ಮಾಡುವುದು ?,'' ಎಂದು ಕೆಲವರು ಪ್ರಶ್ನಿಸುತ್ತಾರೆ.

ಆದರೆ ವಿದ್ಯುಚ್ಛಕ್ತಿ ಸರಬರಾಜು ಮಾತ್ರ ಉತ್ತಮವಾಗಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಗ್ರಾಮೀಣ ಭಾಗಗಳಿಗೆ 18 ಗಂಟೆ ವಿದ್ಯುತ್ ಒದಗಿಸುತ್ತಿರುವುದಾಗಿ ಸರಕಾರವೂ ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News