ಸಿಎಫ್‌ಐನಿಂದ ವಿದ್ಯಾರ್ಥಿ ಜಾಥಾ, ಸಮಾವೇಶ

Update: 2018-03-19 15:00 GMT

ಮೈಸೂರು, ಮಾ. 19: ರಾಜಕೀಯ ಬೂಟಾಟಿಕೆಯನ್ನು ನಿಲ್ಲಿಸಿ ವಿದ್ಯಾರ್ಥಿಗಳ ರಕ್ಷಣೆಯನ್ನು ಖಾತರಿಪಡಿಸಿ ಎಂಬ ಘೋಷವಾಕ್ಯದೊಂದಿಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ಬೃಹತ್ ವಿದ್ಯಾರ್ಥಿ ಜಾಥಾ ಮತ್ತು ವಿದ್ಯಾರ್ಥಿ ಹಕ್ಕುಗಳ ಸಮಾವೇಶವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಿತು.

ಜಾಥವು ನಗರದ ಉದಯಗಿರಿ ಸಿಗ್ನಲ್ ಬಳಿಯಿಂದ ಆರಂಭಗೊಂಡು ಇವತ್ತಿನ ರಾಜಕೀಯ ವಿದ್ಯಾಮಾನಗನ್ನು ಸ್ಥಬ್ದಚಿತ್ರ ಮತ್ತು ನಾಟಕದ ಮೂಲಕ ಪ್ರದರ್ಶಿಸಲಾಯಿತು.

ಶಾಂತಿನಗರದಲ್ಲಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾಧ್ಯಕ್ಷ ಶುಹೈಬ್, ಜೆ.ಎನ್.ಯು ಸಂಶೋಧನಾ ವಿದ್ಯಾರ್ಥಿ ನಜೀಬ್ ನಾಪತ್ತೆ ಪ್ರಕರಣವನ್ನು ಪ್ರಶ್ನಿಸಿದರೆ ರಾಷ್ಟ್ರದ್ರೋಹಿಗಳು ಎಂಬ ಹಣೆಪಟ್ಟಿಯನ್ನು ಕಟ್ಟುತ್ತಾರೆ. ಯಾವುದೇ ಸರಕಾರದ ನೀತಿಯನ್ನು ವಿರೋಧಿಸಿದರೆ ಅವರನ್ನು ಗುರಿಯಾಗಿಸಲಾಗುತ್ತದೆ, ಆದರೆ ಫ್ಯಾಶಿಸ್ಟರ ಬೆದರಿಕೆಗೆ ಮಣಿಯದೆ ಅನೀತಿ ಅಕ್ರಮಗಳ ವಿರುದ್ಧ ಧ್ವನಿಯೆತ್ತುವ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಎಸ್.ಡಿ.ಪಿ.ಐ ಅಭ್ಯರ್ಥಿ ಅಬ್ದುಲ್ ಮಜೀದ್ ಅವರು, ತಮ್ಮ ಮಕ್ಕಳ ವಿಷಯದಲ್ಲಿ ವಿಧಾನಸಭೆಯಲ್ಲಿ ಗಂಟೆಗಟ್ಟಲೆ ಮಾತನಾಡುವ ಶಾಸಕರು ಇಲ್ಲಿನ ದಮನಿತ ಅಲ್ಪಸಂಖ್ಯಾತ ದಲಿತರ ಅನ್ಯಾಯದ ವಿರುದ್ಧ ಮತ್ತು ಶಿಕ್ಷಣ ಸಚಿವರಾಗಿಯೂ ವಿದ್ಯಾರ್ಥಿಗಳಿಗೆ ಕೊಟ್ಟ ಭರವಸೆಯನ್ನು ಈಡೇರಿಸದೇ ಇರುವುದು ಖೇದಕರ. ವಿದ್ಯಾರ್ಥಿ ವಿರೋಧಿ ನೀತಿ ಹಾಗೂ ವಿದ್ಯಾರ್ಥಿ ಹಕ್ಕುಗಳಿಗಾಗಿ ಹೋರಾಡುತ್ತಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯು ಜನಪರ ಹೋರಾಟಗಾರರನ್ನು ವಿಧಾನಸಭೆಗೆ ಕಳುಹಿಸುವಂತಹ ಪ್ರಬುದ್ಧತೆಯನ್ನು ತೋರಿಸಿ ಜವಾಬ್ದಾರಿಯನ್ನು ನಿರ್ವಹಿಸಿದ್ದಲ್ಲಿ ನಿಮ್ಮ ಹೋರಾಟದ ಧ್ವನಿಯು ವಿಧಾನಸಭೆಯಲ್ಲಿ ಪ್ರತಿಧ್ವನಿಸಲಿದೆ ಎಂದು ಭರವಸೆ ನೀಡಿದರು.

ಪ್ರಗತಿಪರ ಹೋರಾಟಗಾರ ಬಿ.ಆರ್. ಭಾಸ್ಕರ್ ಪ್ರಸಾದ್ ಮಾತನಾಡಿ, ಮೈಸೂರಿನ ಸಂಸದ ಪ್ರತಾಪ್ ಸಿಂಹರ ಅವಿವೇಕತನದಿಂದ ನಗರದ ಘನತೆಗೆ ಧಕ್ಕೆಯಾಗುತ್ತಿದ್ದು, ಇಂತಹವರನ್ನು ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗಿದೆ. ಅರಸರ ನಂತರ ಅಭಿವೃದ್ಧಿ ಹರಿಕಾರ ಎಂದು ತನ್ನನ್ನು ಬಿಂಬಿಸಿಕೊಳ್ಳುತ್ತಿರುವ ಮುಖ್ಯಮಂತ್ರಿಗಳು ಟಿಪ್ಪು ಸುಲ್ತಾನ್ ಮತ್ತು ಕೃಷ್ಣರಾಜ ಒಡೆಯರ್ ಅವರ ಆಡಳಿತದ ಅಧ್ಯಯನವನ್ನು ಸರಿಯಾಗಿ ಅಧ್ಯಯನ ಮಾಡಬೇಕಾಗಿದೆ ಎಂದರು.ಪಿ.ಎಫ್.ಐ ರಾಜ್ಯಾಧ್ಯಕ್ಷ ಮಹಮ್ಮದ್ ಶಾಕಿಬ್ ಸರಕಾರದ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದರು.

ಅಧ್ಯಕ್ಷೀಯ ಭಾಷಣವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಧ್ಯಕ್ಷ ಮಹಮ್ಮದ್ ತಪ್ಸೀರ್ ಮಾತನಾಡಿದರು. ವೇದಿಕೆಯಲ್ಲಿ ನಿವೃತ್ತ ಡಿ.ಡಿ.ಪಿ.ಐ. ಪುಟ್ನಂಜಯ್ಯ, ಮಹಾರಾಜ ಕಾಲೇಜಿನ ಉಪನ್ಯಾಸಕ ಸಂದೀಪ್, ಪಿ.ಎಫ್.ಐ. ಜಿಲ್ಲಾಧ್ಯಕ್ಷ ಅಮೀನ್ ಸೇಠ್, ಬಿ.ವಿ.ಎಸ್ ಜಿಲ್ಲಾ ನಾಯಕರಾದ ಗಣೇಶ್ ಮೈಸೂರು ಯುವ ಫೆಡರೇಶನ್ ಅಧ್ಯಕ್ಷ ಮೊಹಿನುದ್ದೀನ್, ರಾಜ್ಯ ಪದಾಧಿಕಾರಿಗಳಾದ ಮುವ್ವಿರ್, ಸದಖತುಲ್ಲಾ, ಆರಿಫ್ ಅಡ್ವೊಕೇಟ್ ಅಬೂತಾಹಿರ್, ಜಿಲ್ಲಾಧ್ಯಕ್ಷ ನದೀಮ್ ಉಪಸ್ಥಿತರಿದ್ದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಕಿರ್ ಸ್ವಾಗತಿಸಿದರು. ರಿಯಾಝ್ ಕಡಂಬು ಹಾಗೂ ಮುಫೀದಾ ಕಾರ್ಯಕ್ರಮ ನಿರೂಪಿಸಿದರು. ಫಯಾಝ್ ದೊಡ್ಡಮನೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News