ಒಂದು ಕುಣಿತದ ಸುತ್ತ

Update: 2018-03-19 18:42 GMT

ಇಲ್ಲಿ ಕುಣಿತ ಒಂದು ನೆಪವಷ್ಟೇ. ನಮ್ಮ ವ್ಯವಸ್ಥೆಯ ಅಧಿಕಾರದ ಚುಕ್ಕಾಣಿ ಹಿಡಿಯುವ ನಾಯಕರು ನಮ್ಮ ನಡುವೆಯೇ ಬಂದವರು ಎಂಬ ಭಾವನೆ ಜನರಲ್ಲಿ ಮೂಡಬೇಕು. ಜನರನ್ನು ಉದ್ಧಾರ ಮಾಡಲು ಬೇರಾವುದೋ ಗ್ರಹದಿಂದ ಇಳಿದುಬಂದವರಂತೆ ವರ್ತಿಸಿದರೆ, ಅಂತಹವರ ನಾಯಕತ್ವವೇ ಬೂಟಾಟಿಕೆ ಎನಿಸಿ ಬಿಡುತ್ತದೆ. ಅದಕ್ಕಾಗಿ ರಾಜಕಾರಣಿಗಳಲ್ಲಿ ತಂತ್ರಗಾರಿಕೆಯ ಜತೆಜತೆಗೆ ಕಲೆ, ಕ್ರೀಡೆ, ಸಂಗೀತ, ಸಾಹಿತ್ಯದಂತಹ ಜೀವಂತಿಕೆಗಳೂ ಇರಬೇಕು. ಇಂಥದ್ದೊಂದು ಸದಭಿರುಚಿ ಪರಂಪರೆ ಯಡಿಯೂರಪ್ಪನವರು, ಕುಮಾರಣ್ಣ ಆದಿಯಾಗಿ ಎಲ್ಲಾ ರಾಜಕಾರಣಿಗಳಲ್ಲೂ ಆವಿರ್ಭವಿಸಿದರೆ ನಾಳೆಗಳು ಎಷ್ಟು ಸೊಗಸಾಗಿರುತ್ತವೆ ಅಲ್ಲವೇ...


ಇತ್ತೀಚೆಗೆ ವೀಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡಿತ್ತು. ಸಿದ್ದರಾಮಯ್ಯನವರನ್ನು ಹೋಲುವ ರೈತರೊಬ್ಬರು ಕನ್ನಡದ ಲೇಟೆಸ್ಟ್ ಹಾಡಿಗೆ ಹೆಜ್ಜೆ ಹಾಕಿದ್ದ ವೀಡಿಯೊ ಅದು. ನೋಡಲು ಮಾತ್ರವಲ್ಲ, ಒಂದೊಮ್ಮೆ ಸಿದ್ದರಾಮಯ್ಯನವರು ಕುಣಿದಿದ್ದರೆ ಹೇಗಿರುತ್ತಿತ್ತೋ ಯಥಾವತ್ ಅದೇ ಧಾಟಿಯಲ್ಲೇ, ಆ ಜೀವನ್ಮುಖಿ ರೈತ ತನ್ನೆಲ್ಲಾ ಕಷ್ಟಗಳನ್ನು ಮರೆತು ಕ್ಷಣಕಾಲ ಕುಣಿದು ಮಗುವಾಗಿದ್ದರು. ಕೇಂದ್ರ ಸಚಿವರೊಬ್ಬರ ಅಭಿಮಾನಿಗಳು ಎಂದು ಹೇಳಿಕೊಳ್ಳುವ ಫೇಸ್‌ಬುಕ್ಕಿಗರು ‘‘ನಮ್ಮ ಸಿಎಂಗೆ ಇದೊಂದು ಕಮ್ಮಿ ಇತ್ತು’’ ಎನ್ನುವ ಟ್ಯಾಗ್ ಲೈನ್ ಜೋಡಿಸಿ ವೈರಲ್ ಮಾಡಿದ್ದು, ಸಿದ್ದು ಬಳಗದ ವತಿಯಿಂದ ‘‘ಅದರಲ್ಲಿ ಕುಣಿದಿರೋದು ಸಿದ್ದರಾಮಯ್ಯ ಅಲ್ಲ, ಅವರನ್ನೇ ಹೋಲುವ ವ್ಯಕ್ತಿ’’ ಅಂತ ಸಾಬೀತು ಮಾಡಲು ಹರಸಾಹಸ ಪಟ್ಟಿದ್ದು ಇವೆಲ್ಲಾ ನಡೆದು ಹೋದವು. ಆದರೆ ಒಂದು ಸೂಕ್ಷ್ಮ ಸಂಗತಿ ಮಾತ್ರ ಚರ್ಚೆಗೆ ಬರಲೇ ಇಲ್ಲ.

ಒಬ್ಬ ರಾಜಕಾರಣಿ, ಅದು ಸಿಎಂ ಆಗಿರಬಹುದು ಅಥವಾ ಪ್ರಧಾನಿಯೇ ಇರಬಹುದು, ಕುಣಿಯುವುದರಲ್ಲಿ ತಪ್ಪೇನಿದೆ? ನಿಜ ಹೇಳಬೇಕೆಂದರೆ ಬಹುಮುಖ ಆಯಾಮದ ನಮ್ಮ ಸಮಾಜಕ್ಕೆ ನೀತಿ, ನಿಯಮಗಳನ್ನು ರೂಪಿಸುವ ರಾಜಕಾರಣಿಗಳು ಸಾಹಿತ್ಯ, ಸಂಗೀತ, ಜನಪದ, ದೇಸೀ ಕ್ರೀಡೆ, ರಂಗಭೂಮಿಯಂತಹ ಸದಭಿರುಚಿಗಳಿಂದ ದೂರಾಗಿ ಅಧಿಕಾರ ಕೇಂದ್ರಿತ ರಾಜಕಾರಣದ ಏಕತಾನತೆಗೆ ಸಿಲುಕುವುದು ಬಹುದೊಡ್ಡ ಅಪಾಯ ಎಂಬುದನ್ನು ನಾವ್ಯಾರೂ ಮರೆಯಬಾರದು. ಅದು ಯಾವ ಮಟ್ಟದ ಅಪಾಯವೆಂದರೆ ಅಂಥ ಏಕತಾನತೆಯ ವಾತಾವರಣದಿಂದ ನಮ್ಮ ರಾಜಕಾರಣಿಗಳಲ್ಲಿ ಸರ್ವಾಧಿಕಾರಿ ಆತ್ಮಗಳು ಆವಾಹಿಸಿಕೊಳ್ಳುತ್ತಾ ಸಾಗುತ್ತವೆ! ಮುಖದ ಮೇಲೆ ಸಣ್ಣದೊಂದು ನಗುವೂ ಇಲ್ಲದ, ಬಾಯ್ತೆರೆದರೆ ಎದುರಾಳಿಗಳ ಮೇಲೆ ಹೊಲಸು ಹೇಳಿಕೆಗಳನ್ನೇ ಬಿಸಾಕುವ ಬೋರ್‌ಡಂ ರಾಜಕಾರಣಿಗಳೇ ಇವತ್ತು ತುಂಬಿ ತುಳುಕುತ್ತಿದ್ದಾರೆ. ಹಾಡು, ಕುಣಿತದಂತಹ ರಂಜನೆಗಳು ಒತ್ತಟ್ಟಿಗಿರಲಿ ಸಾಹಿತ್ಯದ ಪುಸ್ತಕವನ್ನೂ ತಿರುವಿಹಾಕದ, ಬರವಣಿಗೆಯ ಗಂಧಗಾಳಿ ಗೊತ್ತಿಲ್ಲದ ರಾಜಕಾರಣಿಗಳೇ ಹೆಚ್ಚು.

ಸಾಹಿತ್ಯದ ಓದು ಜೀವನಾನುಭವವನ್ನು ಸ್ಪಷ್ಟವಾಗಿಸುತ್ತದೆ, ಎದೆಯೊಳಗೆ ಮನುಷ್ಯತ್ವದ ಸೆಲೆಗಳನ್ನು ಸ್ಫುರಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸರಿ, ತಪ್ಪುಗಳನ್ನು ತೂಗಿ ನೋಡುವ ಒಳಗಣ್ಣನ್ನು ಪ್ರಚೋದಿಸುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಒಬ್ಬ ಸಂವೇದನಾಶೀಲ ಮನುಷ್ಯನನ್ನಾಗಿ ರೂಪಿಸುತ್ತದೆ. ಆದರೆ ತಮ್ಮ ಭಾಷಣವನ್ನೂ ಬೇರೊಬ್ಬರಿಂದ ಬರೆಸಿ ಮಾತಾಡುವಂತಹ ರಾಜಕಾರಣಿಗಳಿಂದ ಸಂಪೂರ್ಣ ಸಂವೇದನೆಯನ್ನು ನಿರೀಕ್ಷಿಸುವುದಾದರೂ ಹೇಗೆ? ಹಿಂದೆ ರಾಜಕಾರಣಿಗಳೆಂದರೆ ಅವರು ರಾಜಕಾರಣಿಗಳಷ್ಟೇ ಆಗಿರಲಿಲ್ಲ. ಅವರೊಳಗೆ ಒಬ್ಬ ಕಲಾವಿದನಿರುತ್ತಿದ್ದ, ಸಾಹಿತಿ ಇರುತ್ತಿದ್ದ, ಹಾಡುಗಾರ, ಕುಸ್ತಿಪಟು, ಒಕ್ಕಲುಗಾರ ಎಲ್ಲಾ ಇರುತ್ತಿದ್ದ. ಅರ್ಥಾತ್ ಅಂತಹ ರಾಜಕಾರಣಿಗಳಲ್ಲಿ ಸ್ಪಂದನೆ ಮನೆ ಮಾಡಿರುತ್ತಿತ್ತು. ಅವರಿಂದಾಗಿ ಸದನ ನಗೆಗಡಲಲ್ಲಿ ತೇಲಾಡಿದ್ದ ರಸವತ್ತಾದ ನೆನಪುಗಳಿನ್ನೂ ಹಸಿಯಾಗಿವೆ. ಆ ಬಗೆಯ ಸದನಗಳು ಮನುಷ್ಯ ಸಂವೇದನೆಗೆ ಜಾಗ ಮಾಡಿಕೊಡುತ್ತಿದ್ದವು. ಆದರೆ ಇವತ್ತಿನ ಸದನಗಳು ಎಂಥಾ ವರ್ತನೆಗಳಿಗೆ ಸಾಕ್ಷಿಯಾಗುತ್ತಿವೆ ಎಂಬುದನ್ನು ಬಿಡಿಸಿಹೇಳುವ ಅಗತ್ಯವಿಲ್ಲ.

ಈ ವಿಚಾರದಲ್ಲಿ ಎಂಬತ್ತರ ದಶಕದಲ್ಲಿ ಪಿ.ಲಂಕೇಶರು ಹುಟ್ಟುಹಾಕಿದ ಪರ್ಯಾಯದ ಪ್ರಜ್ಞೆ ಕರ್ನಾಟಕದ ರಾಜಕಾರಣವನ್ನು ಬೌದ್ಧಿಕವಾಗಿ ಎತ್ತರಿಸುವ ಕೆಲಸ ಮಾಡಿತ್ತೆನ್ನಬಹುದು. ಕೇವಲ ತಮ್ಮ ಪತ್ರಿಕೆಯ ಮೂಲಕ ರಾಜಕೀಯ ಪಟುಗಳನ್ನು ಸಂವೇದನಾ ಜೀವಿಗಳನ್ನಾಗಿ ತಿದ್ದುವ ಪ್ರಯತ್ನ ಮಾಡಿದ್ದಲ್ಲದೇ, ಬೌದ್ಧಿಕ ವಲಯವನ್ನೇ ರಾಜಕೀಯವಾಗಿ ಕ್ರೋಡೀಕರಿಸಿ ಪ್ರಗತಿರಂಗವನ್ನು ಕಟ್ಟಲು ಅವರು ಯತ್ನಿಸಿದ್ದು ಕೂಡಾ ಅವರ ಕಾಳಜಿಗೆ ಸಾಕ್ಷಿಯಾಗಿತ್ತು. ಅದು ನಿರೀಕ್ಷಿತ ಮಟ್ಟದಲ್ಲಿ ಯಶ ಕಾಣಲಿಲ್ಲ ಎನ್ನುವುದು ಬೇರೆ ಮಾತು. ಒಂದೊಮ್ಮೆ ಲಂಕೇಶರು ಮತ್ತು ಅವರ ಒಡನಾಡಿಗಳ ಪ್ರಯತ್ನ ಫಲಪ್ರದವಾಗಿ ರಾಜಕಾರಣವು ಬೌದ್ಧಿಕ ಸ್ಥಿತ್ಯಂತರಕ್ಕೆ ಸಿಲುಕಿದ್ದಿದ್ದರೆ, ಇವತ್ತು ಕೇವಲ ತನ್ನನ್ನು ಹೋಲುವ ವ್ಯಕ್ತಿ ಕುಣಿದ ಕಾರಣಕ್ಕೆ ಸಿದ್ದರಾಮಯ್ಯ ಹೀಯಾಳಿಕೆಗೆ ತುತ್ತಾಗುವಂತಹ ವ್ಯವಸ್ಥೆ ರೂಪುಗೊಳ್ಳುತ್ತಿರಲಿಲ್ಲ ಅನ್ನಿಸುತ್ತೆ.

ಶಕ್ತಿಸೌಧಗಳ ತಂತ್ರಗಾರಿಕೆಯ ಹೊರತಾಗಿ ದೇಸಿ ಸೊಗಡಿನ ಸದಭಿರುಚಿಗಳು ಇದ್ದಾಗ ಮಾತ್ರ ರಾಜಕಾರಣಿ ಈ ನೆಲಕ್ಕೆ, ಈ ನೆಲದ ಬದುಕುಗಳಿಗೆ ನಾಯಕತ್ವ ದೊರಕಿಸಿಕೊಡಬಲ್ಲ. ಆದರೆ ಕುಣಿಯುವುದೇ ಒಂದು ಮಹಾಪರಾಧ ಎನ್ನುವಷ್ಟರ ಮಟ್ಟಿಗೆ ಶುಷ್ಕ ರಾಜಕೀಯ ರೂಢಿ ಇವತ್ತು ರೂಪುಗೊಳ್ಳುತ್ತಿದೆ. ಆ ರೈತನ ಕುಣಿತವನ್ನು ಲೇವಡಿ ಮಾಡಿದವರಿಂದ ಇದು ಸಾಬೀತಾಗಿದೆ. ಇಂತಹ ವಾತಾವರಣದಲ್ಲಿ ಉದ್ಭವಿಸುವ ರಾಜಕೀಯ ಲೀಡರುಗಳಿಂದ ಅದೇ ಗಂಟುಮೋರೆ, ಕ್ರೋಧ ನುಡಿಗಳು, ಕೀಳುಮಟ್ಟದ ಲೇವಡಿಯನ್ನಷ್ಟೇ ನಿರೀಕ್ಷಿಸಲು ಸಾಧ್ಯ. ಹೀಗೆ ರೂಪುಗೊಂಡ ರಾಜಕೀಯ ಪೀಳಿಗೆ ಅಧಿಕಾರಕ್ಕೆ ಬಂದಮೇಲೂ ಶುಷ್ಕ ಧಾಟಿಯಲ್ಲಿ ಆಡಳಿತ ನಿಭಾಯಿಸುತ್ತಾರೆ ವಿನಃ ನಮ್ಮ ವೈವಿಧ್ಯಮಯ ಬದುಕುಗಳಿಗೆ ನ್ಯಾಯ ದೊರಕಿಸಿಕೊಡಲಾರರು. ದೂರದೃಷ್ಟಿಯ ಜಾಗದಲ್ಲಿ ಆವೇಶ ಅವರನ್ನು ಆಳುತ್ತಿರುತ್ತದೆ. ಸಂಯಮದ ಜಾಗದಲ್ಲಿ ಉದ್ವೇಗ ಅವರನ್ನು ಉತ್ತೇಜಿಸುತ್ತಿರುತ್ತದೆ. ಅದಕ್ಕೆ ನಾವು, ಜನ ಬೆಲೆ ತೆರಬೇಕಾಗುತ್ತದೆ.

ನಮ್ಮ ಜನಪದರ ಬದುಕು ಹಾಡು, ಕುಣಿತ, ಹಾಸ್ಯಗಳಿಂದ ಸಮೃದ್ಧವಾದುದು. ಇವತ್ತು ನಗರಗಳು ಅಡ್ಡಾದಿಡ್ಡಿಯಾಗಿ ಬೆಳೆದು ಮನುಷ್ಯ ಸಂಬಂಧಗಳ ನಡುವೆಯೇ ಗೋಡೆ ಎಬ್ಬಿಸಿದ್ದರೂ ಹಳ್ಳಿಗಳ ಜನ ಇಂದಿಗೂ ತಮ್ಮ ಸದಭಿರುಚಿ ಸಂಭ್ರಮಗಳನ್ನು ಜತನ ಮಾಡಿಕೊಂಡು ಬಂದಿದ್ದಾರೆ. ಹಬ್ಬ, ಜಾತ್ರೆ, ಉತ್ಸವ, ಉರೂಸ್ ನೆಪದಲ್ಲಿ ಹಾಡಿ, ಕುಣಿದು ಹಗುರಾಗುತ್ತಾರೆ. ಒಬ್ಬ ಜನನಾಯಕ ನಿಜಕ್ಕೂ ರೂಪುಗೊಳ್ಳಬೇಕಾದ್ದು ಜನಸಮುದಾಯದ ನಡುವಿನಿಂದ. ಅಂದರೆ ಅವರ ಸುಖ, ದುಃಖ, ದಣಿವುಗಳನ್ನು ಅರ್ಥ ಮಾಡಿಕೊಂಡಷ್ಟೇ ಆಳವಾಗಿ ಅವರ ಸದಭಿರುಚಿಗಳನ್ನು ಮನನ ಮಾಡಿಕೊಂಡಿರಬೇಕು. ಆಗ ಮಾತ್ರ ಅವನು ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ. ಪರಿಪೂರ್ಣ ವ್ಯಕ್ತಿ ಮಾತ್ರ ಸಮರ್ಥ ಹಾಗೂ ನೈಜ ಜನನಾಯಕ ಎನಿಸಿಕೊಳ್ಳಬಲ್ಲ. ಆದರೆ ಇವತ್ತು ರಾಜಕಾರಣಿಗಳು ಇಂಥಾ ಪ್ರಕ್ರಿಯೆಯಿಂದ ಅವತರಿಸುತ್ತಿಲ್ಲ, ರಿಯಲ್ ಎಸ್ಟೇಟ್‌ನಂತಹ ಮಾಯಾ ಬಜಾರಿನ ಶೂನ್ಯದಿಂದ ಉದ್ಭವಿಸುತ್ತಿದ್ದಾರೆ. ಅವರಿಗೆ ಜನರೂ ಗೊತ್ತಿಲ್ಲ, ಜನಪದರ ಬದುಕೂ ಗೊತ್ತಿಲ್ಲ.

ಸಿದ್ದರಾಮಯ್ಯನವರನ್ನು ಹೊಗಳುವುದು ಈ ಬರಹದ ಉದ್ದೇಶ ಅಲ್ಲ. ಆದರೂ ಇಂದಿನ ರಾಜಕಾರಣಿಗಳ ನಡುವೆ ನಮ್ಮ ದೇಸಿತನವನ್ನು ಕಾಪಿಟ್ಟುಕೊಂಡ ರಾಜಕಾರಣಿಗಳ ಸಾಲಿನಲ್ಲಿ ಅವರು ಮೆಚ್ಚುಗೆಯಾಗುತ್ತಾರೆ. ನನಗೆ ಜನರ ನಾಡಿಮಿಡಿತ ಗೊತ್ತು ಅಂತ ಸಿದ್ದರಾಮಯ್ಯನವರು ಆಗಾಗ್ಗೆ ಒಂದು ಮಾತು ಹೇಳುತ್ತಿರುತ್ತಾರೆ. ಜನರ ಸಾಮಾಜಿಕ ನಾಡಿಮಿಡಿತ ಅರ್ಥವಾಗೋದು ಜನನಾಯಕ ಎನಿಸಿಕೊಂಡವನು ವೇದಿಕೆಗಳ ಮಿತಿ ಮುರಿದು ಅವರೊಟ್ಟಿಗೆ ಬೆರೆತಾಗ ಮತ್ತು ಆ ಬೆರೆಯುವಿಕೆಯಲ್ಲಿ ನಿಷ್ಕಲ್ಮಶತೆ ಇದ್ದಾಗ. ತೆರೆದ ವಾಹನಗಳಿಂದ ಜನರತ್ತ ಕೈ ಬೀಸುವುದೇ ಒಂದು ಮಹಾಪ್ರಸಾದ ಎಂದುಕೊಂಡಿರುವ ರಾಜಕಾರಣಿಗಳ ನಡುವೆ ಪಂಚೆ ಎತ್ತಿಕಟ್ಟಿ, ತಲೆಗೆ ಪೇಟ ಸಿಕ್ಕಿಸಿಕೊಂಡು ನಾಲ್ಕು ಹೆಜ್ಜೆ ಕುಣಿದೇ ಬಿಡುವ ಸಿದ್ದರಾಮಯ್ಯನಂತಹವರನ್ನು ಕಂಡರೆ ಯಾರಿಗೆ ತಾನೆ ಇಷ್ಟವಾಗಲ್ಲ. ಜನಸಮುದಾಯಕ್ಕೆ ಸನಿಹವಾಗಲು ಮತ್ತು ಅವರ ಆಶೋತ್ತರಗಳಿಗೆ ಸ್ಪಂದಿಸಲು ಈ ಥರದ ನಡೆಗಳು ನೆರವಾಗುತ್ತವೆ. ಇತ್ತೀಚೆಗಷ್ಟೆ ನಮ್ಮನ್ನಗಲಿದ ರೈತಸಂಘದ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಕೂಡಾ ಇದೇ ಕಾರಣಕ್ಕೆ ಜನರಿಗೆ ಆಪ್ತವಾದವರು. ಇದೇ ಸರಣಿಯಲ್ಲಿ ಜೆಡಿಎಸ್‌ನ ವೈಎಸ್‌ವಿ ದತ್ತಣ್ಣ ಕೂಡಾ ಜನರ ನಡುವೆ ನಮ್ಮ ಮನುಷ್ಯ ಎನಿಸಿಕೊಳ್ಳುತ್ತಾರೆ. ಆದರೆ ಇಂತಹವರ ಸಂಖ್ಯೆ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಲೇ ಬರುತ್ತಿದೆ.

ಹಾಗಂತ ಇವತ್ತಿನ ರಾಜಕಾರಣಿಗಳನ್ನು ಸಾರಾಸಗಟಾಗಿ ಅಭಿರುಚಿಹೀನರು ಅಂತ ತಿರಸ್ಕರಿಸಲಾಗದು. ಅವರಿಗೂ ಕಲೆ, ಕ್ರೀಡೆಯ ಅಭಿರುಚಿಗಳಿವೆ. ಆದರೆ ಅವು ಜನಸ್ನೇಹಿ ಚಿಂತನೆಗಳನ್ನು ಬೆಳೆಸುವುದಕ್ಕಿಂತ ಜನರಿಂದ ಪ್ರತ್ಯೇಕಗೊಳಿಸುವ ಉದ್ಯಮಲೋಲುಪ್ತ ಅಭಿರುಚಿಗಳು. ಕಲೆ ಎಂದಾಕ್ಷಣ ಸಿನೆಮಾ ನಿರ್ಮಾಪಕನಂತಹ ವ್ಯಾವಹಾರಿಕ ಆಯಾಮವನ್ನೋ, ಕ್ರೀಡೆ ಎಂದಾಕ್ಷಣ ಐಪಿಎಲ್ ಬೆಟ್ಟಿಂಗ್ ಇಲ್ಲವೇ ಕುದುರೆ ಬಾಲದ ರೇಸ್‌ನಂತಹ ದುಬಾರಿ ಆಲೋಚನೆಗಳನ್ನೋ ಅವರಲ್ಲಿ ಭುಗಿಲೇಳಿಸುವಂತ ಅಭಿರುಚಿಗಳು. ರಾಜಕಾರಣ ಅದೆಷ್ಟು ಶುಷ್ಕ ಹವೆಯಿಂದ ಕೂಡಿದೆಯೆಂದರೆ ಕಲಾವಿದನೊಬ್ಬ ಈ ವ್ಯವಸ್ಥೆಯೊಳಕ್ಕೆ ಬಂದರೆ ಆತನೂ ತನ್ನ ಕಲಾ ಸಂವೇದನೆ ಕಳೆದುಕೊಂಡು ರೆಗ್ಯುಲರ್ ರಾಜಕಾರಣಿಗಿಂತ ಹೀನವಾಗಿ ವ್ಯವಹರಿಸಲು ಶುರು ಮಾಡುತ್ತಾನೆ. ಸಾಕಷ್ಟು ನಿದರ್ಶನಗಳು ಈ ಮಾತನ್ನು ಸಾಬೀತು ಮಾಡುತ್ತವೆ ಅಥವಾ ರಾಜಕಾರಣದ ಪ್ರಭಾ ವಲಯಕ್ಕೆ ಸಿಲುಕಿ ಕಲಾಲೋಕದ ಜೀವ ಸಂವೇದನೆ, ಪ್ರಜ್ಞಾವಂತಿಕೆಗಳೇ ಇಡಿಯಾಗಿ ಆವಿಯಾಗುತ್ತಿರಲೂಬಹುದು. ಅದು ಮತ್ತೊಂದು ಬಗೆಯ ದುರಂತ.

ಇಲ್ಲಿ ಕುಣಿತ ಒಂದು ನೆಪವಷ್ಟೇ. ನಮ್ಮ ವ್ಯವಸ್ಥೆಯ ಅಧಿಕಾರದ ಚುಕ್ಕಾಣಿ ಹಿಡಿಯುವ ನಾಯಕರು ನಮ್ಮ ನಡುವೆಯೇ ಬಂದವರು ಎಂಬ ಭಾವನೆ ಜನರಲ್ಲಿ ಮೂಡಬೇಕು. ಜನರನ್ನು ಉದ್ಧಾರ ಮಾಡಲು ಬೇರಾವುದೋ ಗ್ರಹದಿಂದ ಇಳಿದುಬಂದವರಂತೆ ವರ್ತಿಸಿದರೆ, ಅಂತಹವರ ನಾಯಕತ್ವವೇ ಬೂಟಾಟಿಕೆ ಎನಿಸಿ ಬಿಡುತ್ತದೆ. ಅದಕ್ಕಾಗಿ ರಾಜಕಾರಣಿಗಳಲ್ಲಿ ತಂತ್ರಗಾರಿಕೆಯ ಜತೆಜತೆಗೆ ಕಲೆ, ಕ್ರೀಡೆ, ಸಂಗೀತ, ಸಾಹಿತ್ಯದಂತಹ ಜೀವಂತಿಕೆಗಳೂ ಇರಬೇಕು. ಇಂಥದ್ದೊಂದು ಸದಭಿರುಚಿ ಪರಂಪರೆ ಯಡಿಯೂರಪ್ಪನವರು, ಕುಮಾರಣ್ಣ ಆದಿಯಾಗಿ ಎಲ್ಲಾ ರಾಜಕಾರಣಿಗಳಲ್ಲ್ಲೂ ಆವಿರ್ಭವಿಸಿದರೆ ನಾಳೆಗಳು ಎಷ್ಟು ಸೊಗಸಾಗಿರುತ್ತವೆ ಅಲ್ಲವೇ...

Writer - ಗಿರೀಶ್ ತಾಳಿಕಟ್ಟೆ

contributor

Editor - ಗಿರೀಶ್ ತಾಳಿಕಟ್ಟೆ

contributor

Similar News