ಲಿಂಗಾಯಿತ ಪ್ರತ್ಯೇಕ ಧರ್ಮ: ಸಿದ್ದಗಂಗಾ ಮಠ ಸ್ವಾಗತ
ತುಮಕೂರು, ಮಾ.20: ಲಿಂಗಾಯತ ಮತ್ತು ವೀರಶೈವ ಲಿಂಗಾಯತರಿಗೆ (ಬಸವ ತತ್ವವನ್ನು ನಂಬುವ) ಅಲ್ಪ ಸಂಖ್ಯಾತ ಧರ್ಮದ ಮಾನ್ಯತೆ ನೀಡುವ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರಕಾರ ಸಚಿವ ಸಂಪುಟದಲ್ಲಿ ಕೈಗೊಂಡಿರುವ ನಿರ್ಣಯ ಸ್ವಾಗತಾರ್ಹ ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗಸ್ವಾಮೀಜಿ ತಿಳಿಸಿದ್ದಾರೆ.
ನಗರದ ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಸಚಿವ ಸಂಪುಟದಲ್ಲಿ ಕೈಗೊಂಡಿರುವ ನಿರ್ಣಯ ಎಲ್ಲರೂ ಒಟ್ಟಾಗಿರಬೇಕು, ಭೇದವಿಲ್ಲ ಎಂಬುದಾಗಿದೆ. ವೀರಶೈವ ಮತ್ತು ಲಿಂಗಾಯತ ಎರಡನ್ನೂ ಸೇರಿಸಿ ಶಿಫಾರಸು ಮಾಡಿರುವುದು ಖುಷಿ ತಂದಿದೆ. ಎಲ್ಲರೂ ಜತೆಯಲ್ಲಿ ಹೋಗಬೇಕು ಎನ್ನುವುದು ನಮ್ಮ ಆಶಯ. ಲಿಂಗಾಯತ ವೀರಶೈವ ಬಹಳ ವರ್ಷದಿಂದ ಹಿಂದು ಧರ್ಮದ ಒಂದು ಭಾಗವಾಗಿ ಬಂದಿದೆ ಎಂದು ಹೇಳಿದರು.
ಸರಕಾರದ ನಿರ್ಣಯವನ್ನು ನಾವು ಸ್ವಾಗತ ಮಾಡಬೇಕಾಗಿದೆ. ಸಂಪುಟ ಕೈಗೊಂಡಿರುವ ನಿರ್ಣಯ ಸಮಾಜಕ್ಕೆ ಅನುಕೂಲ ವಾಗುವಂತಿದೆ. ಇದನ್ನು ಕೆಲವರು ವಿರೋಧಪಡಿಸುತ್ತಿರುವುದು ಅವರವರ ವೈಯಕ್ತಿಕ ವಿಚಾರ.ಜೈನ ಧರ್ಮ ಹಾಗೂ ಬೌದ್ಧ ಧರ್ಮ ಪ್ರತ್ಯೇಕವಾದರೂ ಹಿಂದು ಧರ್ಮದ ಆಚರಣೆ ಒಳಗೊಂಡಿದೆ. ಜೈನರು ಹಿಂದೂ ಧರ್ಮದ ಆಚರಣೆ ಮಾಡುತ್ತಾರೆ. ಬುದ್ಧ ಕೂಡ ಹಿಂದೂ ಧರ್ಮದಿಂದ ಬಂದಿದ್ದು.ಲಿಂಗಾಯತ ಪ್ರತ್ಯೇಕ ಧರ್ಮ ದಿಂದ ಹಿಂದು ಧರ್ಮಕ್ಕೆ ಧಕ್ಕೆ ಬರುವುದಿಲ್ಲ. ಪ್ರತ್ಯೇಕತೆ ಸಿಕ್ಕಿದರೂ ಹಿಂದು ಧರ್ಮದ ಆಚರಣೆಗಳು ಜತೆಯಲ್ಲಿ ನಡೆದುಕೊಂಡು ಹೋಗುತ್ತದೆ ಎಂದ ಅವರು ಬಸವಣ್ಣನವರ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂದರು.