ಪ್ರಧಾನಿ ಮೋದಿ ಸುಳ್ಳಿನ ಸರದಾರ: ರಾಹುಲ್ ಗಾಂಧಿ ಟೀಕೆ

Update: 2018-03-21 14:32 GMT

ಚಿಕ್ಕಮಗಳೂರು, ಮಾ.21: ಧರ್ಮ ಎಂದರೆ ಸತ್ಯ, ದೇಶದ ಸಣ್ಣ ಮಕ್ಕಳಿಗೂ ಧರ್ಮ ಅರ್ಥ ಗೊತ್ತಿದೆ. ಆದರೆ ದೇಶದ ಪ್ರಧಾನಿಗೆ ಧರ್ಮದ ಅರ್ಥವೇ ಗೊತ್ತಿಲ್ಲ. ಅವರು ಹೋದಲ್ಲೆಲ್ಲಾ ಒಂದರ ಮೇಲೊಂದರಂತೆ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಅವರು ಸುಳ್ಳಿನ ಸರದಾರ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನಾಶೀರ್ವಾದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಶೃಂಗೇರಿಯ ವೇದ ಪಾಠಶಾಲೆಯಲ್ಲಿ ಮಕ್ಕಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಧರ್ಮ ಅರ್ಥ ಏನೆಂದು ಕೇಳಿದಾಗ ಸತ್ಯ, ಸತ್ಯ ಹೇಳುವುದು, ಎಲ್ಲರನ್ನೂ ಪ್ರೀತಿಸುವುದೆಂಬ ಉತ್ತರವನ್ನು ಮಕ್ಕಳು ನೀಡಿದರು. ಈ ದೇಶದ ಸಣ್ಣ ಮಕ್ಕಳಿಗೂ ಧರ್ಮದ ಅರ್ಥ ಗೊತ್ತಿದೆ. ಆದರೆ ದೇಶದ ಪ್ರಧಾನಮಂತ್ರಿಗೆ ಇದರ ಅರ್ಥ ಗೊತ್ತಿಲ್ಲ. ಅವರು ಹೋದಲ್ಲೆಲ್ಲಾ ಬರೀ ಸುಳ್ಳುಗಳನ್ನೇ ಹೇಳುತ್ತಿದ್ದು, ಅವರಿಗೆ ಧರ್ಮದ ಬಗ್ಗೆ ತಿಳುವಳಿಕೆಯೇ ಇಲ್ಲ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಜನರನ್ನು ವಂಚಿಸುತ್ತಿದ್ದಾರೆ. ಅವರು ಜನರಿಗೆ ನೀಡಿದ ಯಾವ ಭರವಸೆಗಳನ್ನೂ ಈಡೇರಿಸದೇ ಕೇವಲ ಸುಳ್ಳು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಮೋದಿ ಪ್ರಧಾನಿಯಾಗುವುದಕ್ಕಿಂತಲೂ ಮುನ್ನ ವಿದೇಶದಲ್ಲಿರುವ ಕಪ್ಪುಹಣವನ್ನು ತಂದು ದೇಶದ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಜಮಾ ಮಾಡುವುದಾಗಿ ಹೇಳಿದ್ದರು. ದೇಶದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ,  ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು 4 ವರ್ಷಗಳು ಕಳೆದಿವೆ. ಯಾರ ಖಾತೆಗಾದರೂ 10 ಪೈಸೆಯಾದರೂ ಬಂದಿದೆಯಾ?ಚಿಕ್ಕಮಗಳೂರು ಜಿಲ್ಲೆಯಲ್ಲಾದರೂ ಯಾರಿಗಾದರೂ ಉದ್ಯೋಗ ಸಿಕ್ಕಿದೆಯಾ? ರೈತ ಸಾಲ ಮನ್ನಾ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ ರಾಹುಲ್, ಈ ಬಗ್ಗೆ ಖುದ್ದು ಪ್ರಧಾನಿ ಅವರನ್ನೇ ಕೇಳಿದ್ದೆ. ರೈತರು ಸಂಕಷ್ಟದಲ್ಲಿದ್ದಾರೆ, ಅವರ ಸಾಲವನ್ನಾದರೂ ಮನ್ನಾ ಮಾಡಿ ಎಂದು ವಿನಂತಿಸಿದ್ದೆ. ಆದರೆ ಪ್ರಧಾನಿ ಅವರು ಇದಕ್ಕೆ ಉತ್ತರವನ್ನೇ ನೀಡಲಿಲ್ಲ ಎಂದು ಆರೋಪಿಸಿದ ಅವರು, ಕರ್ನಾಟಕದಲ್ಲಾದರೂ ರೈತರ ಸಾಲ ಮನ್ನಾ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರಲ್ಲಿ ಕೇಳಿದ್ದಕ್ಕೆ ಕೇವಲ 10 ದಿನಗಳಲ್ಲೇ ಸಾಲ ಮನ್ನಾ ಮಾಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಯಕನಾದವನ ಮಾತು ವಚನದಂತಿರಬೇಕು. ಮಾತಿನಲ್ಲಿ ಜನರನ್ನು ಗೌರವಿಸುವ ಗುಣವಿರಬೇಕು. ಪ್ರಧಾನಿ ಮಾತಿನಲ್ಲಿ ಈ ಗುಣಗಳಿಲ್ಲ. ಪ್ರಧಾನಿ ಬಾಯಿ ತೆರೆದರೆ 60 ವರ್ಷಗಳ ಕಾಲ ದೇಶ ಆಳಿದ ಕಾಂಗ್ರೆಸ್ ಪಕ್ಷ ದೇಶವನ್ನು ಅಭಿವೃದ್ಧಿ ಮಾಡಿಲ್ಲ ಎಂಬ ಮಾತನ್ನಾಡುತ್ತಾರೆ. ಆದರೆ ಅಮೇರಿಕ ಅಧ್ಯಕ್ಷ ಭಾರತಕ್ಕೆ ವಿಶ್ವವನ್ನೇ ಗೆಲ್ಲುವ ತಾಕತ್ತಿದೆ, ಅಮೇರಿಕಕ್ಕೆ ಪೈಪೋಟಿ ನೀಡುವ ತಾಕತ್ತಿದೆ ಎನ್ನುತ್ತಾರೆ.  60 ವರ್ಷಗಳಲ್ಲಿ ಕಾಂಗ್ರೆಸ್ ಏನೂ ಮಾಡದಿದ್ದಿದ್ದರೆ ಭಾರತಕ್ಕೆ ವಿಶ್ವ ಗೆಲ್ಲುವ ತಾಕತ್ತು ಎಲ್ಲಿಂದ ಬರುತ್ತಿತ್ತು? 60 ವರ್ಷಗಳಿಂದ ಈ ದೇಶದ ಜನರು ದೇಶಕ್ಕಾಗಿ ಏನೂ ಮಾಡದಿದ್ದರೆ ಭಾರತಕ್ಕೆ ಈ ಶಕ್ತಿ ಎಲ್ಲಿಂದ ಬರುತ್ತಿತ್ತು ? ಈ ದೇಶವನ್ನು 60 ವರ್ಷಗಳಲ್ಲಿ ಕಾಂಗ್ರೆಸ್ ಮಾತ್ರ ಮುನ್ನಡೆಸಲಿಲ್ಲ. ದೇಶದ ರೈತರು, ಕಾಮಿಕರು, ಯೋಧರು, ಉದ್ಯಮಿಗಳು ಮುನ್ನಡೆಸಿದ್ದಾರೆ. ಅವರಿಂದಾಗಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆಯೇ ಹೊರತು ಓರ್ವ ವ್ಯಕ್ತಿಯಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದ ಅವರು, ದೇಶದಲ್ಲಿ ಮೋದಿ ಪ್ರಧಾನಿ ಆಗುವುದಕ್ಕಿಂತ ಮುಂಚೆ ಏನೂ ಅಭಿವೃದ್ಧಿಯಾಗಿಲ್ಲ, ಅವರು ಪ್ರಧಾನಿ ಆದ ಬಳಿಕವೇ ದೇಶದ ಅಭಿವೃದ್ಧಿಯಾಗಿದೆ ಬಿಡಿ ಎಂದು ವ್ಯಂಗ್ಯವಾಡಿದರು.

ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಾಗ ಭಾಷಣ ಮಾಡುವ ವೇದಿಕೆಯಲ್ಲಿ ಅವರೊಂದಿಗೆ ನಾಲ್ವರು ಜೈಲುವಾಸ ಅನುಭವಿಸಿದ ಮಂತ್ರಿಗಳನ್ನು ಪಕ್ಕದಲ್ಲೇ ಕೂರಿಸಿಕೊಳ್ಳುತ್ತಾರೆ. ಸೆರೆಮನೆ ವಾಸ ಅನುಭವಿಸಿದ ಮಾಜಿ ಸಿಎಂ ಅವರನ್ನೇ ಹೊಗಳುತ್ತಾರೆ. ಇಂತಹ ಪ್ರಧಾನಿಗೆ ಕರ್ನಾಟಕ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದರೆ ಎಂದರೆ ಜನ ನಂಬುತ್ತಾರಾ ಎಂದು ಪ್ರಶ್ನಿಸಿದ ರಾಹುಲ್, ಮೋದಿ ರಾಜ್ಯದ ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಆಪ್ತ ಅಮಿತ್ ಶಾರ ಮಗ ಜಯ್ ಶಾ ಅಕ್ರಮವಾಗಿ 80 ಸಾವಿರ ಕೋ. ರೂ. ಆದಾಯಗಳಿಸಿದಾಗ ಭ್ರಷ್ಟಾಚಾರ ಮೋದಿಗೆ ಕಣ್ಣಿಗೆ ಕಾಣಿಸಲಿಲ್ಲ. ಫ್ರಾನ್ಸ್ ನಿಂದ ರಫೆಲ್ ಯುದ್ಧ ನೌಕೆ ಖರೀದಿ ವೇಳೆ ಅದರ ಗುತ್ತಿಗೆಯನ್ನು ತಮ್ಮ ಆಪ್ತರಿಗೆ ನೀಡಿ ಭ್ರಷ್ಟಾಚಾರ ನಡೆಸಿದಾಗಲೂ ಅವರ ಕಣ್ಣು ಕುರುಡಾಗಿತ್ತು. ಮೋದಿ ಆಪ್ತನೇ ಆದ ನೀರವ್ ಮೋದಿ ಸಾವಿರಾರು ಕೋ. ರೂ. ಅನ್ನು ಬ್ಯಾಂಕ್‍ಗಳಿಗೆ ವಂಚಿಸಿದಾಗ ರಹಸ್ಯವಾಗಿ ಆತನಿಗೆ ವಿದೇಶಕ್ಕೆ ಓಡಲು ಅವಕಾಶ ಮಾಡಿಕೊಟ್ಟಿದ್ದು ಇದೇ ಮೋದಿ ಎಂದರು.

ನೆರೆಯ ಚೀನಾ ದೇಶ ಡೊಕ್ಲಾನ್‍ಲ್ಲಿ ರಸ್ತೆ ಅಭಿವೃದ್ಧಿ, ಹೆಲಿಪ್ಯಾಡ್ ನಿರ್ಮಾಣ, ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತ ದೇಶಕ್ಕೆ ಗಂಡಾಂತರವಾಗುತ್ತಿದೆ. ಇಡೀ ದೇಶಕ್ಕೆ ಇದು ಗೊತ್ತಿದೆ. ಆದರೆ ಪ್ರಧಾನಿಗೆ ಗೊತ್ತಿಲ್ಲ. ದೇಶದ ಸಮಸ್ಯೆಗಳು, ರೈತರ, ಅಲ್ಪಸಂಖ್ಯಾತರ, ದಲಿತರ, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅವರು ಬಾಯಿ ಬಿಡುತ್ತಿಲ್ಲ. ಶಿಕ್ಷಣ ವ್ಯವಸ್ಥೆಯ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದ ಅವರು, ನಾನು ವಾಜಪೇಯಿ ಸೇರಿದಂತೆ ಸಾಕಷ್ಟು ಪ್ರಧಾನಿಗಳನ್ನು ನೋಡಿದ್ದೇನೆ. ಯಾರ ಬಳಿ ಜನರ ಬಗ್ಗೆ ಪ್ರೀತಿ, ಗೌರವ ಇರುತ್ತದೋ ಅಂತಹ ನಾಯಕ ಜನರನ್ನು ಗೆಲ್ಲುತ್ತಾನೆ. ದೇಶದ ಅಭಿವೃದ್ಧಿಗೆ ಶ್ರಮಿಸುತ್ತಾನೆ. ವಾಜಪೇಯಿ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಕಾಂಗ್ರೆಸ್ ಅಧಿಕಾರವಧಿಯಲ್ಲಿ ಯಾವ ಅಭಿವೃದ್ಧಿಯೂ ಆಗಿರಲಿಲ್ಲ ಎಂದು ಹೇಳಿರಲಿಲ್ಲ. ವಾಜಪೇಯಿ ಸೇರಿದಂತೆ ಇಂದಿರಾಗಾಂಧಿ, ರಾಜೀವ್‍ಗಾಂಧಿ ಅವರಲ್ಲಿ ಜನರನ್ನು ಪ್ರೀತಿಸುವ, ಗೌರವಿಸುವ ಗುಣ ಇದ್ದುದರಿಂದ ಅವರು ಜನಮಾನಸದಲ್ಲಿ ಉಳಿದಿದ್ದಾರೆ. ನರೇಂದ್ರ ಮೋದಿ ಮುಂದಿನ ಚುನಾವಣೆ ಬಳಿಕ ಜನಮಾನಸದಿಂದ ಅಳಿಯಲಿದ್ದಾರೆಂದು ರಾಹುಲ್ ಹೇಳಿದರು.

ಕನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಉತ್ತಮ ಆಡಳಿತ ನೀಡುತ್ತಿದೆ. ಅನ್ನಬಾಗ್ಯದ ಮೂಲಕ ಇಲ್ಲಿಯ ಜನರ ಹಸಿವು ನೀಗಿಸಿದೆ. ಹೆಣ್ಣು ಮಕ್ಕಳ ಉಚಿತ ಶಿಕ್ಷಣ ನೀಡಲು ಮುಂದಾಗಿದೆ. ಬಡವರು, ದಲಿತರು, ಅಲ್ಪಸಂಖ್ಯಾತರಿಗೆ ಹತ್ತಾರು ಯೋಜನೆಗಳ ಜಾರಿ ಮಾಡುವ ಮೂಲಕ ಅಭಿವೃದ್ಧಿಯತ್ತ ರಾಜ್ಯವನ್ನು ಕೊಂಡೊಯ್ಯುತ್ತಿದ್ದಾರೆ. ಇಂತಹ ರಾಜ್ಯ ಭ್ರಷ್ಟಾಚಾರಲ್ಲಿ ಮುಳುಗಿದೆ ಎಂದು ಆರೋಪಿಸುವ ಮೋದಿ ಗುಜರಾತ್‍ನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಶ್ರೀಮಂತರಿಗೆ ಮಾರಿದ್ದಾರೆ. 15 ಲಕ್ಷಕ್ಕಿಂತ ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ ಗುಜಾರತ್‍ನಲ್ಲಿ ಸಿಗಲು ಸಾಧ್ಯವೇ ಇಲ್ಲ. ಕೇಂದ್ರ ಸರಕಾರ ಶಿಕ್ಷಣಕ್ಕೆ ನೀಡುವ ಅನುದಾನಕ್ಕಿಂತ ಮೂರು ಪಟ್ಟು ಸಿದ್ದರಾಮಯ್ಯ ಸರಕಾರ ನೀಡಿದೆ. ಪರಿಶಿಷ್ಟರ ಕಲ್ಯಾಣಕ್ಕಾಗಿ ಕೇಂದ್ರ ನೀಡುವ ಅನುದಾನದ ಅರ್ಧದಷ್ಟು ರಾಜ್ಯ ಸರಕಾರ ನೀಡುತ್ತಿದೆ. ಇಂತಹ ಸರಕಾರದ ಬಗ್ಗೆ ಭ್ರಷ್ಟಾಚಾರದ ಆರೋಪ ಹೊರಿಸಲು ಮೋದಿಗೆ ನೈತಿಕತೆ ಇಲ್ಲ ಎಂದ ರಾಹುಲ್, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಇಂದಿರಾಗಾಂಧಿ, ರಾಜೀವ್‍ಗಾಂಧಿ ಆಡಳಿತ ತನಗೆ ಆದರ್ಶ. ತಾನು ದೇಶಕ್ಕಾಗಿ ಕೆಲ ಚಿಂತನಗಳನ್ನು ಹೊಂದಿದ್ದೇನೆ. ಮೋದಿ ಅವರದ್ದು ದೇಶ ಒಡೆಯುವ ರಾಜ ನೀತಿಯಾದರೆ ನನ್ನದು ದೇಶವನ್ನು ಒಂದುಗೂಡಿಸುವ ರಾಜನೀತಿ. ತನಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ನೀಡಿದಲ್ಲಿ ದೇಶದ ಜನರನ್ನು ನೆಮ್ಮದಿಯಿಂದ ಬದುಕುವಂತಹ ಆಡಳಿತ ನೀಡುತ್ತೇನೆ ಎಂದರು.

ಸಮಾವೇಶಕ್ಕೂ ಮುನ್ನ ಶೃಂಗೇರಿ ದೇವಾಲಯಕ್ಕೆ ಭೇಟಿ ನೀಡಿದ ರಾಹುಲ್‍ಗಾಂಧಿ ಶಾರದಾಂಬೆಯ ದರ್ಶನ ಪಡೆದು ಜಗದ್ಗುರುಗಳನ್ನು ಭೇಟಿ ಮಾಡಿದರು. ಮಧ್ಯಾಹ್ನ ಚಿಕ್ಕಮಗಳೂರಿಗೆ ಆಗಮಿಸಿದ ರಾಹುಲ್, ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ವೇಣುಗೋಪಾಲ್, ಪರಮೇಶ್ವರ್ ರೊಂದಿಗೆ ನಗರದ ಐಬಿಯಲ್ಲಿ ಉಪಹಾರ ಸೇವಿಸಿದರು. ನಂತರ ಕಾಫಿ, ಅಡಿಕೆ ಬೆಳೆಗಾರರ ನಿಯೋಗಗಳನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದರು. 

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಎಐಸಿಸಿ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಸಂಸದ ಮಲ್ಲಿಕಾಜುನ ಖರ್ಗೆ, ವೀರಪ್ಪಮೊಯ್ಲಿ, ಸಚಿವ ರೋಶನ್‍ಬೇಗ್, ಮಾಜಿ ಸಚಿವರಾದ ಮೋಟಮ್, ಸಗೀರ್ ಅಹ್ಮದ್, ಡಿ.ಕೆ.ತರಾದೇವಿ, ಬಿ.ಎಲ್.ಶಂಕರ್, ಮೊಹಿಯುದ್ದೀನ್, ಎ.ಎನ್.ಮಹೇಶ್, ಎಂ.ಎಲ್.ಮೂರ್ತಿ, ಶಾಸಕ ಶ್ರೀನಿವಾಸ್, ಟಿ.ಡಿ.ರಾಜೇಗೌಡ, ಸಚಿನ್‍ಮೀಗಾ, ವಿಷೂನಾಥನ್ ಮತ್ತಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಚಿಕ್ಕಮಗಳೂರಿನ ಜನತೆ ಕರೆದಾಗ ಓಡಿಬರುವೆ:

ನನ್ನ ಅಜ್ಜಿಯ ಸಂಕಷ್ಟದ ದಿನಗಳಲ್ಲಿ ಅವರನ್ನು ರಾಜಕೀಯವಾಗಿ ಇಲ್ಲವಾಗಿಸಲು ಸಾಕಷ್ಟು ಮಂದಿ ವಿರೋಧಿಗಳು ಹುನ್ನಾರ ನಡೆಸಿದ್ದರು. ಆಗ ಚಿಕ್ಕಮಗಳೂರಿನ ಜನತೆ ಅವರ ಸಹಾಯಕ್ಕೆ ಬಂದಿದ್ದರೆಂದು ಸಮಾವೇಶದ ಆರಂಭದಲ್ಲಿ ಇಂದಿರಾಗಾಂಧಿ ಅವರನ್ನು ನೆನೆದು ಭಾವುಕರಾಗಿ ಮಾತನಾಡಿದ ರಾಹುಲ್ ಗಾಂಧಿ, ಉಪಚುನಾವಣೆಯಲ್ಲಿ ಅಜ್ಜಿಯ ಐತಿಹಾಸಿಕ ಗೆಲುವಿಗೆ ಕಾರಣರಾಗಿ ರಾಜಕೀಯವಾಗಿ ಪುನರ್ಜನ್ಮ ನೀಡಿದ್ದಾರೆ. ಚಿಕ್ಕಮಗಳೂರಿಗೂ ನನ್ನ ಕುಟುಂಬಕ್ಕೂ ಹತ್ತಿರದ ಸಂಬಂಧವಿದೆ. ಪ್ರಧಾನಿಯಾಗಿ ಇಂದಿರಾಗಾಂಧಿ ಮಾಡಿದ ಕೆಲಸಗಳ ಹಿಂದಿನ ಶಕ್ತಿ ಇಲ್ಲಿನ ಜನರಾಗಿದ್ದಾರೆ. ಚಿಕ್ಕಮಗಳೂರಿನ ಜನತೆ ಕರೆದಾಗ ಓಡಿ ಬರುತ್ತೇನೆ. ತನ್ನ ಆಲೋಚನೆಗಳೂ ಅಜ್ಜಿಯಂತೆಯೇ ಇವೆ. ತನಗೆ ರಾಜಕೀಯ ಅಧಿಕಾರದ ಶಕ್ತಿ ನೀಡಿದಲ್ಲಿ ದೇಶದ ಜನರ ಜೀವನವನ್ನೇ ಬದಲಾಯಿಸುತ್ತೇನೆಂದು ಹೇಳಿದರು.

ಹರಿದು ಬಂದ ಜನಸಾಗರ:
ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಜನಾಶೀರ್ವಾದ ಸಮಾವೇಶಕ್ಕೆ ಬುಧವಾರ ಜನಸಾಗರವೇ ಹರಿದು ಬಂದಿತ್ತು. ಬೆಳಗ್ಗೆಯಿಂದಲೇ ಬಿಸಿಲಿಗೆ ನೆತ್ತಿ ಸುಡುತ್ತಿದ್ದರೂ ಜನರು ಬೆಳಗ್ಗೆಯೇ ಸಮಾವೇಶ ಸ್ಥಳದಲ್ಲಿ ರಾಹುಲ್‍ಗಾಗಿ ಕಾದು ಕುಳಿತಿದ್ದರು. ರಾಹುಲ್ ಗಾಂಧಿ ಬರುವಷ್ಟರಲ್ಲಿ ಸಮಾವೇಶಕ್ಕೆ ಹಾಕಲಾಗಿದ್ದ ಅಷ್ಟೂ ಆಸನಗಳು ಭರ್ತಿಯಾಗಿ, ಜಿಲ್ಲಾ ಆಟದ ಮೈದಾನ ತುಂಬಿ ತುಳುಕುತ್ತಿತ್ತು. ರಾಹುಲ್‍ಗಾಂಧಿ ಹಾಗೂ ಸಿಎಂ ವೇದಿಕೆ ಏರುತ್ತಿದ್ದಂತೆ ಕಾರ್ಯಕರ್ತರ, ಅಭಿಮಾನಿಗಳ ಜಯಘೋಷ ಮುಗಿಲುಮುಟ್ಟಿತು. ಸ್ಥಳಾವಕಾಶವಿಲ್ಲದೇ ಕೆಲವರು ನೆಲದ ಮೇಲೆ ಕುಳಿತೇ ರಾಹುಲ್ ಮಾತು ಆಲಿಸಿದರು.

ಐ ವಾಂಟ್ ಕಾಫಿ

ಸಮಾವೇಶದಲ್ಲಿ ಮಾತನಾಡುವ ವೇಳೆ ರಾಹುಲ್ ಗಾಂಧಿ ತನ್ನ ಅಜ್ಜಿ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಶಕ್ತಿ ಕೊಟ್ಟದ್ದನ್ನು ನೆನಪಿಸಿಕೊಂಡರಲ್ಲದೇ ಚಹಾ ನಿರಾಕರಿಸಿ ಕಾಫಿ ಸವಿಯುವುದರ ಮೂಲಕ ವೇದಿಕೆಯಲ್ಲಿದ್ದ ನಾಯಕರುಗಳಿ ಆಶ್ಚರ್ಯ ಮೂಡಿಸಿದರು. ಎಐಸಿಸಿ ಸದಸ್ಯ ಬಿ.ಎಂ ಸಂದೀಪ್ ರವರು ರಾಹುಲ್ ಗಾಂಧಿಯವರು ಭಾಷಣ ಮುಗಿಯುತ್ತಿದ್ದಂತೆ ಬಿಸಿ ಬಿಸಿ ಚಹಾ ತಂದು ರಾಹುಲ್ ಗಾಂಧಿಯವರಿಗೆ ನೀಡಿದರು. ಕೂಡಲೇ ಇಸ್ ದಿಸ್ ಕಾಫಿ ಎಂದು ಪ್ರಶ್ನಿಸಿದ ಅವರಿಗೆ ಚಹಾ ಎಂಬ ಉತ್ತರ ಸಿಕ್ಕಿದೊಡನೆ, ನೋ, ಐ ವಾಂಟ್ ಕಾಫಿ. ದಿಸ್ ಈಸ್ ಕಾಫಿ ನಾಡು ಯು ನೋ. ಐ ವಾಂಟ್ ಕಾಫಿ ಎಂದು ಹೇಳಿ ಅಚ್ಚರಿ ಮೂಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News