ಕ್ರೆಡಿಟ್ ಕಾರ್ಡ್ ಬಳಸುತ್ತೀರಾ? ಸಾಲದ ಬಲೆಗೆ ಸಿಲುಕದಿರಿ!

Update: 2018-03-21 18:54 GMT

ಇಂದು ಕ್ರೆಡಿಟ್ ಕಾರ್ಡ್‌ಗಳ ಬಳಕೆ ಸಾಮಾನ್ಯವಾಗಿದೆ. ಕೈಯಲ್ಲಿ ನಗದು ಹಣವಿಲ್ಲದಿದ್ದರೂ ಸಾವಿರಾರು ರೂ.ಗಳ ಸಾಮಗ್ರಿಗಳನ್ನು ಖರೀದಿಸಬಹುದಾಗಿದೆ. ತುರ್ತು ಖರ್ಚಿಗೆ ನಗದನ್ನೂ ಪಡೆದುಕೊಳ್ಳಬಹುದಾಗಿದೆ. ಆದರೆ ಕ್ರೆಡಿಟ್ ಕಾರ್ಡ್ ಬಳಸುವಾಗ ವಿವೇಚನೆ ಅಗತ್ಯವಾಗುತ್ತದೆ, ಇಲ್ಲದಿದ್ದರೆ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡು ನರಳಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್‌ನ ಬಾಕಿಗಳನ್ನು ಸಕಾಲದಲ್ಲಿ ತೀರಿಸುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮಗೊಳಿಸಬಹುದು.
ನೀವು ಇದೇ ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್ ಪಡೆದುಕೊಂಡ ಸಂಭ್ರಮದಲ್ಲಿದ್ದರೆ, ನೀವು ಕಾರ್ಡ್ ನ್ನು ಸ್ವೈಪ್ ಮಾಡುವ ಮುನ್ನ ತಿಳಿದುಕೊಳ್ಳಲೇಬೇಕಾದ ಐದು ಅಗತ್ಯ ಮಾಹಿತಿಗಳಿಲ್ಲಿವೆ. ಇವುಗಳನ್ನು ತಿಳಿದುಕೊಂಡರೆ ಅನಗತ್ಯವಾಗಿ ಸಾಲದ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುವುದರಿಂದ ಪಾರಾಗಬಹುದಾಗಿದೆ.

♦ ಪಿನ್ ಸುರಕ್ಷತೆ
ಪ್ರತಿಯೊಂದು ಕ್ರೆಡಿಟ್ ಕಾರ್ಡ್ ವ್ಯಕ್ತಿಗತ ಗುರುತಿನ ಸಂಖ್ಯೆ ಅಥವಾ ಪಿನ್ ಹೊಂದಿರುತ್ತದೆ. ಈ ಸಂಖ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾರಿಗೂ...ನಿಮ್ಮ ಬ್ಯಾಂಕಿಗೂ 16 ಅಂಕೆಗಳ ಕ್ರೆಡಿಟ್ ಕಾರ್ಡ್ ಸಂಖ್ಯೆ, ಕಾರ್ಡ್‌ನ ಮುಕ್ತಾಯದ ದಿನಾಂಕ ಮತ್ತು ಕಾರ್ಡ್ ವೆರಿಫಿಕೇಷನ್ ವ್ಯಾಲ್ಯೂ(ಸಿವಿವಿ) ಸಂಖ್ಯೆಯನ್ನು ತಿಳಿಸಬೇಡಿ.
ಆನ್‌ಲೈನ್ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ನಿಮ್ಮ ಪಿನ್ ಅನ್ನು ಬದಲಿಸಿಕೊಳ್ಳಿ ಮತ್ತು ಎರಡು ಅಂಶಗಳ ದೃಢೀಕರಣಕ್ಕಾಗಿ ನೋಂದಾಯಿಸಿಕೊಳ್ಳಿ. ಪಿನ್ ಅನ್ನು ನಿಮ್ಮ ಮೊಬೈಲ್ ಸೇರಿದಂತೆ ಎಲ್ಲಿಯೂ ಬರೆದಿಡಬೇಡಿ, ಅದನ್ನು ಚೆನ್ನಾಗಿ ಜ್ಞಾಪಕದಲ್ಲಿಇಟ್ಟುಕೊಂಡು ವಹಿವಾಟಿನಲ್ಲಿ ಬಳಸಿ. ನೀವು ಆನ್‌ಲೈನ್‌ನಲ್ಲಿ ವಹಿವಾಟು ನಡೆಸುವಾಗ ಎರಡು ಅಂಶಗಳ ದೃಢೀಕರಣವು ಬಳಕೆಯಾಗುತ್ತದೆ.

♦ ಮಿತಿ

ಪ್ರತಿಯೊಂದು ಕ್ರೆಡಿಟ್ ಕಾರ್ಡ್ ಪೂರ್ವ ನಿರ್ಧರಿತ ಸಾಲದ ಮಿತಿಯನ್ನು ಹೊಂದಿರುತ್ತದೆ. ಈ ಮಿತಿಯನ್ನು ಮೀರಿ ನೀವು ವೆಚ್ಚ ಮಾಡಲು ಸಾಧ್ಯವಿಲ್ಲ. ನಿಮ್ಮ ಕಾರ್ಡ್‌ನ ಕ್ರೆಡಿಟ್ ಲಿಮಿಟ್ ಎರಡು ಲಕ್ಷ ರೂ.ಗಳಿದ್ದು, ನೀವು ಈಗಾಗಲೇ ಒಂದು ಲ.ರೂ.ಗಳ ಬಾಕಿಯನ್ನು ಹೊಂದಿದ್ದರೆ ಇನ್ನು ಒಂದು ಲ.ರೂ.ಗಳನ್ನು ಮಾತ್ರ ನೀವು ಬಳಸಬಹುದು. ಕೆಲವು ಬ್ಯಾಂಕುಗಳು ಪ್ರತ್ಯೇಕ ನಗದು ಹಿಂದೆಗೆತ ಮಿತಿಯನ್ನು ನಿಗದಿಪಡಿಸುತ್ತವೆ ಮತ್ತು ಇದು ಕ್ರೆಡಿಟ್ ಲಿಮಿಟ್‌ಗಿಂತ ಕಡಿಮೆಯಿರುತ್ತದೆ. ನಗದು ಹಿಂದೆಗೆತಕ್ಕೆ ಅಧಿಕ ಶುಲ್ಕವನ್ನು ವಿಧಿಸಲಾಗುತ್ತದೆ ಎನ್ನುವುದು ನೆನಪಿರಲಿ. ಸಾಧ್ಯವಾದಷ್ಟು ಮಟ್ಟಿಗೆ ಕ್ರೆಡಿಟ್ ಕಾರ್ಡ್ ಮೂಲಕ ನಗದು ಹಣವನ್ನು ಪಡೆಯುವುದನ್ನು ನಿವಾರಿಸಿ.
ಉತ್ತಮ ಕ್ರೆಡಿಟ್ ಸ್ಕೋರ್ ಪಡೆಯಬೇಕೆಂದಿದ್ದರೆ ನಿಮ್ಮ ವೆಚ್ಚ ಕಾರ್ಡ್‌ನ ಮಿತಿಯ ಶೇ.30ರೊಳಗೇ ಇರಲಿ. ಅಂದರೆ ನಿಮ್ಮ ಕಾರ್ಡ್‌ನ ಮಿತಿ ಎರಡು ಲ.ರೂ.ಗಳಿದ್ದರೆ ತಿಂಗಳಿಗೆ ನಿಮ್ಮ ಖರ್ಚು 60,000 ರೂ.ಗಳನ್ನು ದಾಟದಂತೆ ನೋಡಿಕೊಳ್ಳಿ.

 ♦ ದಿನಾಂಕಗಳು

ಬಿಲ್‌ನ ದಿನಾಂಕ ಮತ್ತು ಪಾವತಿಗೆ ಕಡೆಯ ದಿನಾಂಕ ಇವು ನಿಮಗೆ ಅಗತ್ಯವಾಗಿ ಗೊತ್ತಿರಬೇಕಾದ ದಿನಾಂಕಗಳಾಗಿವೆ. ಕ್ರೆಡಿಟ್ ಕಾರ್ಡ್ ನೀಡುವ ಬ್ಯಾಂಕ್ 40-45 ದಿನಗಳ ಮರುಪಾವತಿ ಅವಧಿಯ ಬಗ್ಗೆ ಹೇಳಬಹುದು, ಆದರೆ ಅದನ್ನು ಕಣ್ಣು ಮುಚ್ಚಿಕೊಂಡು ನಂಬಬೇಡಿ. ನಿಮ್ಮ ಬಿಲ್ ದಿನಾಂಕ ತಿಂಗಳ 20ನೇ ದಿನಾಂಕವಾಗಿದ್ದು, ಬಿಲ್ ಪಾವತಿಯ ದಿನಾಂಕ ಮುಂದಿನ ತಿಂಗಳ 5 ಆಗಿದ್ದರೆ ಮತ್ತು ನೀವು ತಿಂಗಳ 19ನೇ ತಾರೀಕಿನಂದು ಕಾರ್ಡ್ ಸ್ವೈಪ್ ಮಾಡಿದ್ದರೆ ನೀವು ಕೇವಲ 18 ದಿನಗಳಲ್ಲಿ ಬಾಕಿಯನ್ನು ಪಾವತಿಸಬೇಕಾಗುತ್ತದೆ.
ನೀವು ಬಿಲ್‌ನ ಸಂಪೂರ್ಣ ಮೊತ್ತ ಪಾವತಿಸುವಂತೆ ನೋಡಿಕೊಳ್ಳಿ. ನಿಮ್ಮ ಬ್ಯಾಂಕ್‌ಖಾತೆಯಿಂದ ಬಿಲ್‌ನ ಹಣವನ್ನು ಪೂರ್ಣವಾಗಿ ಕಡಿತಗೊಳಿಸುವಂತೆ ಬ್ಯಾಂಕಿಗೆ ಸ್ಥಾಯಿ ಸೂಚನೆಯನ್ನು ನೀಡಿಟ್ಟರೆ ಒಳ್ಳ್ಳೆಯದು. ಅಂದ ಹಾಗೆ ನಿಮ್ಮ ಖಾತೆಯಲ್ಲಿ ಸಾಕಷ್ಟು ಹಣವಿರುವಂತೆ ನೋಡಿಕೊಳ್ಳಿ.

 ♦ ಶುಲ್ಕಗಳು ಮತ್ತು ರಿವಾರ್ಡ್‌ಗಳು
 ಪ್ರತಿ ಕ್ರೆಡಿಟ್ ಕಾರ್ಡ್‌ಗೂ ಶುಲ್ಕಗಳಿದ್ದು, ಅವುಗಳನ್ನು ಚೆನ್ನಾಗಿ ತಿಳಿದುಕೊಳ್ಳಿ. ಕ್ಯಾಷ್ ಬ್ಯಾಕ್ ನಿಯಮಗಳು ಮತ್ತು ರಿವಾರ್ಡ್‌ಗಳ ಬಗ್ಗೆ ಓದಿಕೊಳ್ಳಿ. ರಿವಾರ್ಡ್‌ಗಳ ನಗದೀಕರಣದ ಸಂದರ್ಭ ಕೆಲವು ಬ್ಯಾಂಕುಗಳು ಹ್ಯಾಂಡ್ಲಿಂಗ್ ಶುಲ್ಕಗಳನ್ನು ವಿಧಿಸುತ್ತವೆ.

♦ ಪ್ರಮುಖ ದೂರವಾಣಿ ಸಂಖ್ಯೆಗಳು
ನೀವು ಹೊಸದಾಗಿ ಪಡೆದುಕೊಂಡ ಕ್ರೆಡಿಟ್ ಕಾರ್ಡ್ ನ್ನು ಎಲ್ಲಿಯೋ ಇಟ್ಟು ಮರೆತುಬಿಟ್ಟಿದ್ದರೆ ಅಥವಾ ಕಳ್ಳತನವಾದರೆ ಏನು ಮಾಡುವುದು? ಬೇರೆಯವರಿಂದ ಕಾರ್ಡ್‌ನ ದುರ್ಬಳಕೆಯನ್ನು ತಡೆಗಟ್ಟಲು ಕಾಲ್ ಸೆಂಟರ್‌ನ ಮತ್ತು ತುರ್ತು ನೆರವಿನ ದೂರವಾಣಿ ಸಂಖ್ಯೆಗಳನ್ನು ಬರೆದಿಟ್ಟುಕೊಳ್ಳಿ. ಇಂತಹ ಸಂದರ್ಭಗಳು ಎದುರಾದಾಗ ಇದು ನಿಮಗೆ ನೆರವಾಗುತ್ತದೆ.

 

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News

ಜಗದಗಲ
ಜಗ ದಗಲ