15ನೆ ದಿನವೂ ಮುಂದುವರಿದ ಸರಕಾರ-ವಿಪಕ್ಷಗಳ ಬಿಕ್ಕಟ್ಟು

Update: 2018-03-23 15:16 GMT

ಹೊಸದಿಲ್ಲಿ, ಮಾ.23: ಸರಕಾರ ಹಾಗೂ ವಿಪಕ್ಷಗಳ ನಡುವಿನ ಬಿಕ್ಕಟ್ಟು ಸತತ 15ನೆ ದಿನವೂ ಮುಂದುವರಿದ ಕಾರಣ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.

87 ವರ್ಷದ ಹಿಂದೆ (1931ರ ಮಾರ್ಚ್ 23ರಂದು) ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜ್‌ಗುರು ಹಾಗೂ ಸುಖ್‌ದೇವ್‌ರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಲೋಕಸಭೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳಲು ಮುಂದಾಗುತ್ತಿದ್ದಂತೆಯೇ ಎಐಎಡಿಎಂಕೆ ಹಾಗೂ ಟಿಆರ್‌ಎಸ್ ಸದಸ್ಯರು ಸದನದ ಬಾವಿಗೆ ನುಗ್ಗಿ ಫಲಕಗಳನ್ನು ಪ್ರದರ್ಶಿಸುತ್ತಾ ಘೋಷಣೆ ಕೂಗಲು ಆರಂಭಿಸಿದರು.

ಎಸ್‌ಸಿ/ಎಸ್‌ಟಿ ಕಾಯ್ದೆಯ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಅಸಮಾಧಾನ ಸೂಚಿಸಿ ಕಾಂಗ್ರೆಸ್ ಕೂಡಾ ಪ್ರತಿಭಟನೆಗೆ ಆರಂಭಿಸುತ್ತಿದ್ದಂತೆ ಸದನ ಗದ್ದಲದ ಗೂಡಾಯಿತು. ಈ ಹಂತದಲ್ಲಿ ಉಚ್ಛಾಟಿತ ಆರ್‌ಜೆಡಿ ಸಂಸದ ಪಪ್ಪು ಯಾದವ್ ಬಿಹಾರಕ್ಕೆ ವಿಶೇಷ ರಾಜ್ಯದ ಸ್ಥಾನಮಾನ ನೀಡಬೇಕೆಂದು ಆಗ್ರಹಿಸುವ ಎರಡು ಭಿತ್ತಿಫಲಕಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಗದ್ದಲದ ಕಾರಣ ಅವಿಶ್ವಾಸ ಗೊತ್ತುವಳಿಯನ್ನು ಚರ್ಚೆಗೆ ಎತ್ತಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ ಸ್ಪೀಕರ್, ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.

ಮಧ್ಯಾಹ್ನ ಮರು ಸಮಾವೇಶಗೊಳ್ಳುತ್ತಿದ್ದಂತೆಯೇ ಕಾವೇರಿ ನದಿ ನೀರಿನ ವಿಷಯದಲ್ಲಿ ಎಐಎಡಿಎಂಕೆ ಹಾಗೂ ವಿಶೇಷ ಅನುದಾನದ ವಿಷಯಕ್ಕೆ ಸಂಬಂಧಿಸಿ ಟಿಆರ್‌ಎಸ್ ಸಂಸದರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿ ಗದ್ದಲ ಆರಂಭಿಸಿದಾಗ ಅವರನ್ನು ಮೌನವಾಗಿರುವಂತೆ ಸ್ಪೀಕರ್ ಮಾಡಿದ ಮನವಿ ವ್ಯರ್ಥವಾಯಿತು. ಸರಕಾರ ಯಾವುದೇ ಚರ್ಚೆಗೆ ಸಿದ್ಧವಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಕೂಟಕ್ಕೆ ಸಾಕಷ್ಟು ಬಹುಮತ ಇರುವ ಕಾರಣ ಸರಕಾರ ಹಿಂಜರಿಯುವ ಪ್ರಶ್ನೆ ಇಲ್ಲ. ಆದರೆ ಗೊತ್ತುವಳಿ ಚರ್ಚೆಗೆ ಸ್ವೀಕರಿಸಬೇಕಾದರೆ ಸದನದಲ್ಲಿ ಶಾಂತಿ ನೆಲೆಸಬೇಕು ಎಂದು ಸ್ಪೀಕರ್ ಸದಸ್ಯರಿಗೆ ಸ್ಪಷ್ಟಪಡಿಸಿದರೂ ಪ್ರಯೋಜನವಾಗಲಿಲ್ಲ. ಈ ಹಂತದಲ್ಲಿ ಸ್ಪೀಕರ್ ಸದನವನ್ನು ಸೋಮವಾರಕ್ಕೆ ಮುಂದೂಡುವ ಘೋಷಣೆ ಮಾಡಿದರು. ಆದರೆ ರವಿವಾರ ರಾಮನವಮಿ ಪ್ರಯುಕ್ತ ತಮ್ಮ ಸ್ವಕ್ಷೇತ್ರದಲ್ಲಿ ಹಲವು ಕಾರ್ಯಕ್ರಮವಿದ್ದು ಸೋಮವಾರ ಕಲಾಪಕ್ಕೆ ಹಾಜರಾಗಲು ಆಗದು ಎಂದು ಸಂಸದರು ಮನವಿ ಮಾಡಿಕೊಂಡ ಕಾರಣ ಸೋಮವಾರ ಸದನಕ್ಕೆ ರಜೆ ಘೋಷಿಸಿ, ಮಂಗಳವಾರ ಸದನ ಮರುಸಮಾವೇಶಗೊಳ್ಳಲಿದೆ ಎಂದು ಸ್ಪೀಕರ್ ಪ್ರಕಟಿಸಿದರು.

      ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಎಐಎಡಿಎಂಕೆ ಹಾಗೂ ಟಿಡಿಪಿ ಸಂಸದರು ತಮ್ಮ ಪ್ರತಿಭಟನೆಯನ್ನು ಆರಂಭಿಸಿದಾಗ ಗದ್ದಲದ ಮಧ್ಯೆ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಕಲಾಪವನ್ನು 20 ನಿಮಿಷ ಮುಂದೂಡಿದರು. ಮರುಸಮಾವೇಶಗೊಂಡ ಬಳಿಕವೂ ವಿಪಕ್ಷಗಳ ಪ್ರತಿಭಟನೆ ಮುಂದುವರಿದಿದ್ದು ಎಸ್‌ಸಿ/ಎಸ್‌ಟಿ ಕಾಯ್ದೆಯ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರೂ ಪ್ರತಿಭಟನೆಗೆ ಮುಂದಾದರು. ಸದಸ್ಯರ ವರ್ತನೆಯ ಬಗ್ಗೆ ಅಸಮಾಧಾನ ಸೂಚಿಸಿದ ನಾಯ್ಡು , ಒಂದೆರಡು ದಿನ ಪ್ರತಿಭಟನೆ, ಗದ್ದಲ ನಡೆಸುವುದನ್ನು ಒಪ್ಪಿಕೊಳ್ಳಬಹುದು. ಆದರೆ ಸತತ ಮೂರು ವಾರ ಪ್ರತಿಭಟನೆ ಮುಂದುವರಿದಿರುವುದು ಸಮರ್ಥನೀಯವಲ್ಲ ಎಂದು ಹೇಳಿದರು. ಆದರೆ ಸದನದಲ್ಲಿ ಬಿಕ್ಕಟ್ಟು ಮುಂದುವರಿಯಲು ಸರಕಾರದ ಹಠಮಾರಿ ಧೋರಣೆ ಕಾರಣ ಎಂದು ಕಾಂಗ್ರೆಸ್ ಸದಸ್ಯರು ಪ್ರತಿಪಾದಿಸಿದರು.

ಭೂತಕಾಲದ ಕಾರಣವನ್ನು ಮುಂದಿಟ್ಟುಕೊಂಡು ವರ್ತಮಾನ ಕಾಲದಲ್ಲಿ ನೀವು ನಡೆಸುತ್ತಿರುವ ತಪ್ಪಿನ ಕಾರ್ಯವನ್ನು ಎಷ್ಟು ಕಾಲ ಸಮರ್ಥಿಸಿಕೊಳ್ಳಲು ಬಯಸಿದ್ದೀರಿ ಎಂದು ಸದಸ್ಯರನ್ನು ತರಾಟೆಗೆತ್ತಿಕೊಂಡರು. ಈ ರೀತಿ ಗದ್ದಲ ಮಾಡುವ ಬದಲು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಬಹುದಲ್ಲವೇ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ. ಆದರೆ ಇದು ತನ್ನ ಕೈಯಲ್ಲಿಲ್ಲ ಎಂದು ನಾಯ್ಡು ಹೇಳಿದರು.

ಸದಸ್ಯರ ವರ್ತನೆಯಿಂದ ನೋವಾಗಿದೆ. ಬಹಳ ಬೇಸರವಾಗಿದೆ ಎಂದು ಹೇಳಿದ ವೆಂಕಯ್ಯ ನಾಯ್ಡು, ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು. ಅಲ್ಲದೆ ಸರಕಾರ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಲಾಪ ಸುಗಮವಾಗಿ ಸಾಗಲು ಅವಕಾಶ ಮಾಡಿಕೊಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ವಾರ ಏನಾದೀತು ಎಂದು ಊಹಿಸಲೂ ತನ್ನಿಂದ ಸಾಧ್ಯವಿಲ್ಲ. ನಿಮ್ಮ ವರ್ತನೆ ಬದಲಾದರೆ ಒಳ್ಳೆಯದು. ಆದರೆ ಸದನದ ಕಲಾಪ ನಡೆಯುವುದೇ ನಿಮಗಿಷ್ಟ ಇಲ್ಲ ಎಂದಾದರೆ ಅದು ಬೇರೆ ಮಾತು . ಸದಸ್ಯರು ಇಚ್ಛಿಸುವ ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲು ಅವಕಾಶ ಮಾಡಿಕೊಡಲಾಗುವುದು. ಆದರೆ ಫಲಕಗಳನ್ನು ಹಿಡಿದುಕೊಂಡು ಘೋಷಣೆ ಕೂಗುವುದನ್ನು ಸಮರ್ಥಿಸಲಾಗದು ಎಂದು ವೆಂಕಯ್ಯ ನಾಯ್ಡು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News