ಅಲೆಮಾರಿ ಸಮುದಾಯದವರನ್ನು ಮುಖ್ಯವಾಹಿನಿಗೆ ತರಬೇಕು: ಎಂ.ಕೆ.ಶ್ರೀರಂಗಯ್ಯ

Update: 2018-03-24 17:36 GMT

ಚಿಕ್ಕಮಗಳೂರು, ಮಾ.24: ಜಿಲ್ಲೆಯಲ್ಲಿ ಅಲೆಮಾರಿ, ಅರೆ ಅಲೆಮಾರಿಗಳು, ಹಳ್ಳಿಗಳ ಹೊರಗೆ ವಾಸ ಮಾಡುವವರನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಜಾತಿಗಳ ಅಭಿವೃದ್ಧಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರ ಅಲೆಮಾರಿ ಜನಾಂಗದವರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಆದರೆ ಈ ಯೋಜನೆಗಳ ಅರಿವು ಅವರಿಗೆ ಇಲ್ಲದಿರುವುದರಿಂದ ಯೋಜನೆಗಳ ಸದ್ಬಳಕೆ ಸರಿಯಾಗಿ ಆಗುತ್ತಿಲ್ಲ. ಅಧಿಕಾರಿಗಳು ಸವಲತ್ತುಗಳ ಕುರಿತು ಅವರಲ್ಲಿ ಅರಿವು ಮೂಡಿಸಬೇಕು ಎಂದರು.

ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ನಿವೇಶನ ಗುರುತಿಸಿ ಮನೆಗಳನ್ನು ನಿರ್ಮಿಸಿ ಕೊಡಲು ಕ್ರಮ ಕೈಗೊಳ್ಳಲಾಗುವುದಲ್ಲದೇ, ಚಿಕ್ಕ ಮಕ್ಕಳು ಶಾಲೆಗೆ ಹೋಗಲು ಶಿಶುವಿಹಾರ, ಸಮುದಾಯ ಭವನ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಸಿಕೊಡಲಾಗುವುದು. ಈ ಜನಾಂಗದವರ ಆರೋಗ್ಯ ತಪಾಸಣೆಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.

ಸೌಲಭ್ಯಗಳಿಗಾಗಿ ಪರಿಶಿಷ್ಟ ಜಾತಿಯ ಸುಡುಗಾಡು ಸಿದ್ದರು 60, ಹಂದಿ ಜೋಗಿ 30, ಗೋಸಂಗಿ ಜನಾಂಗದಿಂದ 11 ಸೇರಿದಂತೆ ಒಟ್ಟು 101 ಅರ್ಜಿಗಳು, ಪರಿಶಿಷ್ಟ ವರ್ಗದ ಅಸಲರು 58, ಗೌಡುಲು 1 ಅರ್ಜಿಗಳನ್ನು ಸ್ವೀಕರಿಸಲಾಗಿದೆಯಲ್ಲದೇ, ಉಚಿತ ನಿವೇಶನ ಕೋರಿ 70, ಉಚಿತ ಮನೆಗಾಗಿ 90, ಮೂಲಭೂತ ಸೌಕರ್ಯಕ್ಕಾಗಿ 5 ಸೇರಿದಂತೆ ಒಟ್ಟು 173 ಅರ್ಜಿಗಳು ಬಂದಿವೆ. ಇವುಗಳಲ್ಲಿ 13 ಜಾತಿ ಪ್ರಮಾಣ ಪ್ರಮಾಣ ಪತ್ರ ಸಲ್ಲಿಸಿರುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.  

ವಿವಿಧ ವೃತ್ತಿ ಕೈಗೊಳ್ಳಲು ಸಾಲಕ್ಕಾಗಿ ಅರ್ಜಿ ಹಾಕಿರುವ ಫಲಾನುಭವಿಗಳ ಅರ್ಜಿಗಳನ್ನು ಪರಿಶೀಲಿಸಿ ಸಂಬಂಧ ಪಟ್ಟ ಇಲಾಖೆಗಳಿಗೆ ಕಳುಹಿಸಿ ಸಾಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರಲ್ಲದೇ ಸವಲತ್ತುಗಳ ಕುರಿತು ಅವರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಸಭೆಯಲ್ಲಿ ಸಮಿತಿಯ ಸದಸ್ಯರಾದ ಮುತ್ತಪ್ಪ, ಲೋಹಿತಾಶ್ವ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ, ಗಿರಿಜನ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News