ಸಾಗುವಳಿ ಭೂಮಿ ಹಕ್ಕು ಪತ್ರ ವಿಳಂಬಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ: ಸಿ.ಟಿ.ರವಿ

Update: 2018-03-24 18:05 GMT

ಚಿಕ್ಕಮಗಳೂರು, ಮಾ.24:  ತಾಲೂಕು ವ್ಯಾಪ್ತಿಯಲ್ಲಿ ಸಾಗುವಳಿ ಮಾಡಿದ ಕೃಷಿ ಭೂಮಿಗೆ ಹಕ್ಕುಪತ್ರಗಳ ವಿತರಣೆ ವಿಳಂಬವಾಗಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಅಕ್ರಮ ಸಕ್ರಮ ಸಮಿತಿಗೆ ಬಂದಿದ್ದ ಅರ್ಜಿಗಳ ಪೈಕಿ ಸದ್ಯ ವಿತರಿಸಲಾಗುವ ಹಕ್ಕುಪತ್ರಗಳನ್ನು ಕಾನೂನು ಬದ್ಧವಾಗಿ ವಿತರಿಸಲಾಗುತ್ತಿದೆ. ಈ ಸಂಬಂಧ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡಿಲ್ಲ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಅಕ್ರಮ ಸಕ್ರಮ ಸಮಿತಿಗೆ ಸಲ್ಲಿಸಿದ ಅರ್ಜಿಗಳ ಫಲಾನುಭವಿಗಳಿಗೆ ಸಾಗುವಳಿ ಚೀಟಿ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವ ಶ್ರೀಮಂತ ಎನ್ನುವ ಬೇದಭಾವ ಮಾಡದೇ ಕಾನೂನು ಬದ್ದವಾಗಿ ಸಾಗುವಳಿ ಚೀಟಿಗಳನ್ನು ವಿತರಿಸಲಾಗಿದೆ. ಸಾಗುವಳಿ ಚೀಟಿ ವಿತರಣೆಗೆ ವಿಳಂಬವಾಗಿರುವುದು ನಿಜ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೂರ್ಣ ಪ್ರಮಾಣದ ಸಾಗುವಳಿ ಚೀಟಿ ವಿತರಣೆ ಸಾಧ್ಯವಾಗಿಲ್ಲ. ಅಧಿಕಾರಿಗಳು ಅರಣ್ಯ ಮತ್ತು ಗೋಮಾಳ ಭೂಮಿಯನ್ನು ಗಡಿ ಗುರುತು ಕಾರ್ಯವನ್ನು ಸರಿಯಾದ ಸಮಯಕ್ಕೆ ಮಾಡಿದ್ದೇ ಆಗಿದ್ದರೆ ಇನ್ನೂ ಹೆಚ್ಚಿನ ಜನರಿಗೆ ಸಾಗುವಳಿ ಚೀಟಿ ನೀಡಲು ಸಾಧ್ಯವಾಗುತ್ತಿತ್ತು ಎಂದರು.

ಅಕ್ರಮ ಸಕ್ರಮ ಸಮಿತಿ ಎಲ್ಲ ಸದಸ್ಯರು ಅರ್ಜಿದಾರರಿಗೆ ಅನ್ಯಾಯವಾಗಬಾರದೆಂಬ ಕಾರಣಕ್ಕೆ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದಾರೆ. ಉಳಿದ ಅರ್ಜಿಗಳ ಸಮರ್ಪಕ ಪರಿಶೀಲನೆಗೂ ಹಗಲು ರಾತ್ರಿ ಕೆಲಸ ಮಾಡಲು ಸಿದ್ಧರಿದ್ದಾರೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯವೇ ಹಿನ್ನಡೆಗೆ ಕಾರಣವಾಗಿದೆ. ಅರ್ಜಿಗಳ ಪರಿಶೀಲನೆಗೆ ಸಾಕಷ್ಟು ಬಾರಿ ಒತ್ತಡ ತಂದರೂ ಸರಿಯಾದ ಸಮಯಕ್ಕೆ ಅಧಿಕಾರಿಗಳು ಫೈಲ್ ಪುಟ್‍ಆಫ್ ಮಾಡದೇ ಇದ್ದುದರಿಂದ ವಿಳಂಬಕ್ಕೆ ಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಹಲವು ದಶಕಗಳಿಂದ ಸಾಗುವಳಿ ಚೀಟಿಗಾಗಿ ಅಕ್ರಮ ಸಕ್ರಮ ಸಮಿತಿಗೆ ಅರ್ಜಿ ಹಾಕಿದ ಬಡವರನ್ನು ಗುರುತಿಸಿ ಅವರಿಗೆ ಸಾಗುವಳಿ ಚೀಟಿ ನೀಡಿರುವ ಆತ್ಮತೃಪ್ತಿ ತಮಗಿದೆ ಎಂದು ತಿಳಿಸಿದರು. 

ಸಾಗುವಳಿ ಚೀಟಿ ನೀಡುವ ಕಾರ್ಯದಲ್ಲಿ ಸಣಣ್ಣ ಭ್ರಷ್ಟಚಾರಕ್ಕೂ ಅವಕಾಶ ನೀಡದೆ ಜಾಗೃತೆ ವಹಿಸಿ ನೀಡಲಾಗಿದೆ. ಭ್ರಷ್ಟಚಾರಕ್ಕೆ ಅವಕಾಶ ನೀಡದಂತೆ ಅಧಿಕಾರಿಗಳಿಗೂ ಎಚ್ಚರಿಸಲಾಗಿತ್ತು. ಇಷ್ಟರ ನಡುವೆಯೂ ಅಧಿಕಾರಿಗಳೇನಾದರೂ ಭ್ರಷ್ಟಚಾರ ನಡೆಸಿದ್ದರೆ ಅದರ ಪಾಪದ ಫಲವನ್ನು ಅವರೇ ಅನುಭವಿಸುತ್ತಾರೆ ಎಂದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News