ಪಿಂಚಣಿ ಎಂಬ ಮೂರು ಕಾಸು!
ಓರ್ವ ಹಿರಿಯ ಸಾಮಾಜಿಕ ಕಾರ್ಯಕರ್ತ ಹಾಗೂ ಎಲ್ಲ ನೌಕರರಿಗೆ ಪಿಂಚಣಿಗಳನ್ನು ನೀಡಬೇಕೆಂದು ಹೋರಾಡುತ್ತಿರುವ ಒಂದು ಸ್ವಯಂ ಸೇವಾ ಸಂಸ್ಥೆಯಾಗಿರುವ ‘ಪೆನ್ಷನ್ ಪರಿಷತ್’ನ ಸಂಯೋಜಕ ನಿಕಿಲ್ ಡೇ ಹೇಳುವಂತೆ ‘‘ಇಷ್ಟೊಂದು ಸಣ್ಣ ಮೊತ್ತದ ಪಿಂಚಣಿ ಎಷ್ಟೋ ಸಮಯದಿಂದ ಬದಲಾಗದೆ ಹಾಗೆಯೇ ಇದೆ ಎಂಬುದು, ಸರಕಾರ ಹಣದ ಅತ್ಯಂತ ಆವಶ್ಯಕತೆ ಇರುವ ಹಿರಿಯ ನಾಗರಿಕರ ಬಗ್ಗೆ ನಿಜವಾಗಿಯೂ ಎಷ್ಟು ಕಾಳಜಿ ಹೊಂದಿದೆ ಎಂಬುದನ್ನು ತೋರಿಸುತ್ತದೆ.’’
ಹಿರಿಯ ನಾಗರಿಕರಿಗೆ ವಿಶೇಷ ಆರೈಕೆ ಹಾಗೂ ಗಮನ ನೀಡಬೇಕೆಂಬುದನ್ನು ಒಪ್ಪುತ್ತಲೇ ಸರಕಾರವು ಅತ್ಯಂತ ಬಡ ಕುಟುಂಬಗಳ ಹಿರಿಯ ನಾಗರಿಕರನ್ನು ಉಪೇಕ್ಷಿಸುತ್ತಾ ಬಂದಿದೆ. ಪ್ರತೀ ಹಿರಿಯ ನಾಗರಿಕರಿಗೆ ತಿಂಗಳೊಂದರ ಕೇವಲ 200 ರೂಪಾಯಿಯನ್ನು ನೀಡುವ ಅದರ ಕ್ರಮದಿಂದಲೇ ಅದರ ಮನೋಧರ್ಮ ಸ್ಪಷ್ಟವಾಗುತ್ತದೆ. ಸರಕಾರದ ಅತ್ಯಂತ ಬೃಹತ್ತಾದ ಪಿಂಚಣಿ ಯೋಜನೆಯಾಗಿರುವ ಈ ಯೋಜನೆ ಕೂಡ ಇಂತಹ ಪಿಂಚಣಿಯ ಅಗತ್ಯವಿರುವ 10.3 ಕೋಟಿ ಮಂದಿಯ ಪೈಕಿ ಕೇವಲ 3.5 ಕೋಟಿ ಜನರಿಗಷ್ಟೆ ದೊರಕುತ್ತಿದೆ.
ಓರ್ವ ಹಿರಿಯ ಸಾಮಾಜಿಕ ಕಾರ್ಯಕರ್ತ ಹಾಗೂ ಎಲ್ಲ ನೌಕರರಿಗೆ ಪಿಂಚಣಿಗಳನ್ನು ನೀಡಬೇಕೆಂದು ಹೋರಾಡುತ್ತಿರುವ ಒಂದು ಸ್ವಯಂ ಸೇವಾ ಸಂಸ್ಥೆಯಾಗಿರುವ ‘ಪೆನ್ಷನ್ ಪರಿಷತ್’ನ ಸಂಯೋಜಕ ನಿಕಿಲ್ ಡೇ ಹೇಳುವಂತೆ ‘‘ಇಷ್ಟೊಂದು ಸಣ್ಣ ಮೊತ್ತದ ಪಿಂಚಣಿ ಎಷ್ಟೋ ಸಮಯದಿಂದ ಬದಲಾಗದೆ ಹಾಗೆಯೇ ಇದೆ ಎಂಬುದು, ಸರಕಾರ ಹಣದ ಅತ್ಯಂತ ಆವಶ್ಯಕತೆ ಇರುವ ಹಿರಿಯ ನಾಗರಿಕರ ಬಗ್ಗೆ ನಿಜವಾಗಿಯೂ ಎಷ್ಟು ಕಾಳಜಿ ಹೊಂದಿದೆ ಎಂಬುದನ್ನು ತೋರಿಸುತ್ತದೆ.’’
ಕೇಂದ್ರ ಸರಕಾರವು ಇಂದಿರಾಗಾಂಧಿ ‘ಓಲ್ಡ್ ಏಜ್ ಪೆನ್ಷನ್ ಸ್ಕೀಮ್’ನ ಅಡಿಯಲ್ಲಿ ಈ ಪಿಂಚಣಿಗಳನ್ನು ನೀಡುತ್ತದೆ. ಇದರ ಉಸ್ತುವಾರಿಯನ್ನು ವ್ಯಾಪಕವಾದ ‘ನ್ಯಾಷನಲ್ ಸೋಷಿಯಲ್ ಅಸಿಸ್ಟೆನ್ಸ್ ಪ್ರೋಗ್ರಾಂ’ (ಎನ್‌ಎಸ್‌ಎಪಿ) ಅಂದರೆ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದ ಅಡಿಯಲ್ಲಿ ಗ್ರಾಮೀಣ ಅಭಿವೃದ್ಧಿ ಸಚಿವಾಲಯವು ನೋಡಿಕೊಳ್ಳುತ್ತದೆ. ಈ ಯೋಜನೆಗೆ 2017-18ರಲ್ಲಿ ಮೊದಲು 6,126.8 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಆದರೆ ಈ ಮೊತ್ತವನ್ನು ಕೂಡ ಪರಿಷ್ಕೃತ ಅಂದಾಜಿನಲ್ಲಿ 5,657 ಕೋಟಿ ರುಪಾಯಿಗೆ ಇಳಿಸಲಾಯಿತು ಈ ವರ್ಷದ (2018-2019) ಬಜೆಟ್‌ನಲ್ಲಿ ಸ್ವಲ್ಪವಷ್ಟೇ ಮೊತ್ತ ಏರಿಸಿ 6,564 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಪಿಂಚಣಿಯಲ್ಲಿ ರಾಜ್ಯಗಳು ನೀಡುವ ಪಾಲನ್ನು ಸೇರಿಸಿ 200 ರೂಪಾಯಿ ಅಲ್ಪ ಮೊತ್ತವನ್ನು ನೀಡಲಾಗುತ್ತದೆ. ರಾಜ್ಯಗಳು ನೀಡುವ ತಮ್ಮ ಪಾಲಿನಿಂದಾಗಿ ಆಗುವ ಪಿಂಚಣಿ ಮೊತ್ತದ ಹೆಚ್ಚಳ ಗೋವಾ ಮತ್ತು ದಿಲ್ಲಿಯಂತಹ ಕೆಲವೇ ರಾಜ್ಯಗಳ ಮಟ್ಟಿಗೆ ಮಾತ್ರ ಮಹತ್ವಪೂರ್ಣ.
ಅದೇ ವೇಳೆ, (ವಿತ್ತ ಸಚಿವಾಲಯದ ಅಡಿಯಲ್ಲಿ) ಅಟಲ್ ಪಿಂಚಣಿ ಯೋಜನೆಗೆ ನೀಡಲಾಗುವ ಮೊತ್ತವನ್ನು ಕೂಡ 170 ಕೋಟಿಯಿಂದ 155 ಕೋಟಿ ರೂ. ಗೆ ಇಳಿಸಲಾಗಿದೆ. ಅದೇ ರೀತಿಯಾಗಿ ಹಿರಿಯ ನಾಗರಿಕರಿಗೆ ಪಿಂಚಣಿ ಯೋಜನೆಗಾಗಿ ಜೀವ ವಿಮಾ ನಿಗಮಕ್ಕೆ ನೀಡುವ ಬಡ್ಡಿ ಸಬ್ಸಿಡಿಯನ್ನು ಕಳೆದ ವರ್ಷ ಇದ್ದ 250 ಕೋಟಿ ರೂಪಾಯಿಯಿಂದ ಈ ವರ್ಷ ಇನ್ನೂ 228.2 ಕೋಟಿಗೆ ಇಳಿಸಲಾಗಿದೆ. ಇದೆಲ್ಲದರ ಜೊತೆಗೆ ಈ ಎಲ್ಲ ಪಿಂಚಣಿ ಯೋಜನೆಗಳಿಗೆ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡಿರುವುದರಿಂದ ಹಿರಿಯ ನಾಗರಿಕರಿಗೆ ಬರಬೇಕಾದ ಮೂರು ಕಾಸಿನ ಪಿಂಚಣಿಯನ್ನು ಕೂಡ ಅವರು ಪಡೆಯುವುದು ತುಂಬಾ ಕಷ್ಟವಾಗಿದೆ.
ಇಂದಿರಾಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆಯು ಎನ್‌ಎಸ್‌ಎಪಿಯ ಇನ್ನೊಂದು ಭಾಗವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ವಿಧವಾ ಪಿಂಚಣಿ ಮೊತ್ತ ಇದ್ದಷ್ಟೇ ಇದೆ.
ಎನ್‌ಎಸ್‌ಎಪಿಯ ಮೂರನೇ ಘಟಕವಾದ ಇಂದಿರಾ ಗಾಂಧಿ ರಾಷ್ಟ್ರೀಯ ಅಸಾಮರ್ಥ್ಯ ವಿಕಲಾಂಗ ಯೋಜನೆಗೆ ಮೀಸಲಿಟ್ಟ ಮೊತ್ತದಲ್ಲಿ ಕೂಡ ಇಳಿಕೆಯಾಗಿದೆ. ಸರಕಾರದ ಈಗಿನ ಪ್ರವೃತ್ತಿಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಈ ಮೊತ್ತಗಳಲ್ಲಿ ಇನ್ನಷ್ಟು ಕಡಿತವಾಗುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಎನ್‌ಎಸ್‌ಎಪಿಯ ವಿವಿಧ ಘಟಕಗಳಿಗೆ ಮೀಸಲಿಟ್ಟ ಒಟ್ಟು ಮೊತ್ತವನ್ನು ಗಮನಿಸಿದಾಗ ಕಳೆದ ವರ್ಷ ಅದಾಗಲೇ ಕಡಿಮೆ ಮೊತ್ತವಾಗಿದ್ದ 9,500 ಕೋಟಿ ರುಪಾಯಿ ಬಳಿಕ 8,794.6 ಕೋಟಿಗೆ ಕಡಿತಗೊಂಡಿರುವುದು ಕಂಡುಬರುತ್ತದೆ. ಈ ಎಲ್ಲ ಯೋಜನೆಗಳ ಫಲಾನುಭವಿಗಳು ತೀರಾ ದುರ್ಬಲರು ಹಾಗೂ ಅಸಹಾಯಕರಾಗಿರುವುದರಿಂದ ಸರಕಾರದ ಈ ಕ್ರಮ ಖಂಡಿತವಾಗಿಯೂ ನ್ಯಾಯಯುತವಾದುದಲ್ಲ.
ದೇಶದ ಹಿರಿಯ ನಾಗರಿಕರ ದೃಷ್ಟಿಯಿಂದ ಒಂದು ಬಹಳ ಮುಖ್ಯ ಕಾರ್ಯಕ್ರಮವಾಗಿರುವ ಎನ್‌ಎಸ್‌ಎಪಿ ಈಗ ತುಂಬಾ ಅಸಮರ್ಪಕವಾಗಿ ನಡೆಯುತ್ತಿದೆ. ಈ ಯೋಜನೆಗೆ ಬೇಕಾದ ಸಂಪನ್ಮೂಲಗಳನ್ನು ಹೆಚ್ಚಿಸುವುದರ ಜೊತೆಗೆ ಯೋಜನೆಯ ವ್ಯಾಪ್ತಿಯೊಳಗೆ ಬರುವ ಹಿರಿಯ ನಾಗರಿಕರ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಬೇಕು. ಪಿಂಚಣಿಯ ಮೊತ್ತದಲ್ಲೂ ಏರಿಕೆಯಾಗಬೇಕು. ಕಳೆದ ವರ್ಷಗಳಲ್ಲಿ ಪಿಂಚಣಿ ಯೋಜನೆಗಳಿಗೆ ಮಂಜೂರು ಮಾಡಿರುವ ಮೊತ್ತಗಳಲ್ಲಿ ಏರಿಕೆಗೆ ಬದಲಾಗಿ ಕಡಿತಗಳಾದುದರ ಪರಿಣಾಮವಾಗಿ ದೇಶದ ದುರ್ಬಲ ವರ್ಗಗಳಿಗಾಗಿ ಜಾರಿಗೆ ತರಲಾದ ಸರಕಾರದ ಯೋಜನೆ ನಿರೀಕ್ಷಿತ ಯಶಸ್ಸು ಕಾಣಲು ವಿಫಲವಾಗಿದೆ. ಹಾಗಾಗಿ, ಸರಕಾರ ಈ ವರ್ಷ ಈ ಯೋಜನೆಗೆ ಯಾಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿನ ಮೊತ್ತವನ್ನು ಮಂಜೂರು ಮಾಡಬಾರದು? ಇಂತಹ ಒಂದು ಹೆಚ್ಚಳದ ಆವಶ್ಯಕತೆ ನಿಜವಾಗಿಯೂ ಇದೆ ಮತ್ತು ಸರಕಾರ ಇಂತಹ ಕ್ರಮ ಕೈಗೊಂಡಲ್ಲಿ ದೇಶದ ಕೋಟಿಗಟ್ಟಲೆ ಹಿರಿಯ ನಾಗರಿಕರು ಸರಕಾರದ ಕ್ರಮವನ್ನು ವ್ಯಾಪಕವಾಗಿ ಮೆಚ್ಚುತ್ತಾರೆ ಮತ್ತು ಸ್ವಾಗತಿಸುತ್ತಾರೆ. ಸರಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಬೇಕಾಗಿದೆ.
ಕೃಪೆ: thewire.in