ಬೆಕ್ಕಿನ ಮರಿಗಳು ಮತ್ತು ಪುಟಾಣಿ ತಾಯಂದಿರು
ವಿಶೇಷ ಪ್ರಕರಣಗಳ ಸಂಬಂಧದಲ್ಲಿ ಕಷ್ಟ ಸುಖಕ್ಕೆ ಆಗುವ ಮೂರ್ತಿಯನ್ನು ಹುಡುಗಿಯರು, ‘ಅಣ್ಣಾ, ಅಣ್ಣಾ ಬೆಕ್ಕನ್ನು ಇಳಿಸೋಣ’ ಎಂದು ಗೋಗರೆದರು. ಮೂರ್ತಿ ಹೆಚ್ಚಿಗೆ ಮಾತಾಡದೆ ಮುಗುಳ್ನಗುತ್ತಾ ಶಿಥಿಲಾವಸ್ಥೆಯಲ್ಲಿರುವ ಏಣಿಯನ್ನು ತಂದ. ಹುಡುಗಿಯರು ತುಂಬಾ ಖುಷಿಯಾದರು. ಭಯವಾಗಿದ್ದು ಮಾತ್ರ ನಮಗೆ. ಏಣಿಯೇನಾದರೂ ಮುರಿದು ಅದರ ಮೇಲೆ ಹತ್ತಿದ ಹುಡುಗಿ ಬಿದ್ದರೆ ನಾವು 24X7 ನ್ಯೂಸ್ ಚಾನಲ್‌ಗಳ ಬ್ರೇಕಿಂಗ್ ನ್ಯೂಸ್‌ಗೆ ಆಹಾರವಾಗಬೇಕಿತ್ತು. ಅದಕ್ಕಿಂತ ಸರಳ, ಸುಂದರ ಹೃದಯದ ಹೆಣ್ಣುಮಗಳಿಗೆ ಏನಾದರೂ ಆದರೆ? ಇತ್ಯಾದಿ..
ನಾನು ತರಗತಿ ಮುಗಿಸಿ ಹೊರಬಂದಾಗ ವಿಶೇಷ ದೃಶ್ಯ ಕಾದಿತ್ತು. ನಮ್ಮ ಕಾಲೇಜುಅಷ್ಟೇನೂ ದೊಡ್ಡದಲ್ಲದಿದ್ದರೂ ಬಹಳ ಸುಂದರವಾದ ಆವರಣ ಹೊಂದಿದೆ. ಕ್ಯಾಂಪಸ್ ತುಂಬಾ ಮರಗಳಿವೆ. ನಾಲ್ಕಾರು ನಾಯಿಗಳು ಮತ್ತು ಅವುಗಳ ಮರಿಗಳಿವೆ. ಕ್ಯಾಂಪಸ್ ಒಳಗೆ ಬಂದ ಕೂಡಲೇ ನಮ್ಮ ಕಾಲೇಜಿನ ಹೆಣ್ಣುಮಕ್ಕಳು ಈ ನಾಯಿಮರಿಗಳನ್ನು ಮುದ್ದಾಡುತ್ತಲೋ ಅಥವಾ ಏನಾದರೂ ತಿಂಡಿ ತಿನ್ನಿಸುತ್ತಲೋ ಇರುವುದನ್ನು ಕಾಣ ಬಹುದು. ಇದು ಹೆಣ್ಣು ಮಕ್ಕಳ ಕಾಲೇಜಾದ್ದರಿಂದ ಆಪ್ತ, ಆತ್ಮೀಯ ದೃಶ್ಯಗಳಿಗೇನೂ ಕೊರತೆ ಇರುವುದಿಲ್ಲ. ಓದುಗರಿಗೂ ಇಷ್ಟವಾಗಬಹುದೆಂದು ಅಂಥ ಕೆಲವು ಪ್ರಕರಣಗಳನ್ನು ತಿಳಿಸಬಹುದೆನಿಸುತ್ತದೆ.
ಕಾಲೇಜಿನ ಮುಖ್ಯ ಗೇಟಿನಿಂದ ಹುಡುಗಿಯೊಬ್ಬಳು ಬಂದಳೆಂದಿಟ್ಟುಕೊಳ್ಳಿ. ಕ್ಯಾಂಟೀನ್ ಬಳಿ ಕುಳಿತಿರುವ ಗೆಳತಿ ಅವಳನ್ನು ನೋಡುತ್ತಾಳೆ. ಧಡಕ್ಕನೆದ್ದು ಓಡೋಡಿ ಹೋಗಿ ಅವಳನ್ನು ಅಪ್ಪಿಕೊಳ್ಳುತ್ತಾಳೆ. ಅವರೇನೂ ಪರಸ್ಪರ ಭೇಟಿಯಾಗಿ ತುಂಬಾ ದಿನಗಳಾಗಿರುವುದಿಲ್ಲ, ನಿನ್ನೆ ಸಂಜೆಯಷ್ಟೇ ಒಬ್ಬರಿಗೊಬ್ಬರು ಬೀಳ್ಕೊಟ್ಟಿರುತ್ತಾರೆ. ಈ ಆಲಿಂಗನ, ಪ್ರೀತಿ ಪ್ರತೀ ದಿನವೂ ಹೊಸದಾಗಿ ಭೇಟಿಯಾಗುತ್ತಿದ್ದಾರೇನೋ ಎನ್ನುವಷ್ಟು ತೀವ್ರವಾಗಿರುತ್ತದೆ.
ಮೊನ್ನೆ ಕಾರ್ ಪಾರ್ಕಿಂಗ್ ಭಾಗದಲ್ಲಿ ನಾಲ್ಕೈದು ಹುಡುಗಿಯರು ನಿಂತಿದ್ದರು. ಸ್ಕೂಟಿ ಯೊಂದರ ಮೇಲೆ ಪುಟ್ಟ ಕೇಕ್ ಜೊತೆಗೆ ಮೇಣದ ಬತ್ತಿ. ಮೊಬೈಲ್‌ನಲ್ಲಿ ಮ್ಯೂಸಿಕ್. ಹೊಸ ಬಟ್ಟೆ ತೊಟ್ಟ ಯುವರಾಣಿಯೊಬ್ಬಳ ಹುಟ್ಟು ಹಬ್ಬದ ಆಚರಣೆ. ಜೊತೆಗೆ ಸೆಲ್ಫಿ. ಇಂಥ ಸಣ್ಣ ಸಣ್ಣ ಖುಷಿ, ಸಂಭ್ರಮ ವರ್ಷದುದ್ದಕ್ಕೂ ಇರುತ್ತದೆ.
ಕೆಲವು ಗೆಳತಿಯರಂತೂ ಒಂದೇ ರೀತಿಯ ಬಟ್ಟೆಗಳನ್ನು ಹಾಕಿಕೊಂಡು ಬರುವ ಹವ್ಯಾಸ ಇಟ್ಟುಕೊಂಡಿರುತ್ತಾರೆ. ಇಬ್ಬರು ಹುಡುಗಿಯರಂತೂ ಪದವಿ ಮುಗಿಯುವವರೆಗೂ ಈ ಹವ್ಯಾಸವನ್ನು ವ್ರತದಂತೆ ಪಾಲಿಸುತ್ತಿದ್ದರು.
ಒಂದು ದಿವಸ ಒಬ್ಬ ಹುಡುಗಿಯ ಕಣ್ಣು ಅತ್ತೂ ಅತ್ತೂ ಊದಿಕೊಂಡಿತ್ತು. ಅವಳ ಕಣ್ಣು ನೋಡಿ ನನಗಂತೂ ಆತಂಕವೇ ಆಯಿತು. ‘ಯಾಕಮ್ಮಾ, ಏನಾಯ್ತು?’ ಎಂದು ಕೇಳಿದೆ. ಅವಳು ಉತ್ತರಿಸದೆ ದುಃಖಿಸುತ್ತಲೇ ಇದ್ದಳು. ಒತ್ತಾಯ ಮಾಡಿದ ನಂತರ ಬಾಯಿಬಿಟ್ಟಳು. ಕಾಲೇಜಿ ನಲ್ಲಿ ಪ್ರವಾಸ ಆಯೋಜಿಸಲಾಗಿತ್ತು. ಆ ಪ್ರವಾಸಕ್ಕೆ ಮೊದಲು ಬರುತ್ತೇನೆಂದು ಹೇಳಿದ್ದ ಗೆಳತಿ ಈಗ ಬರಲು ಸಾಧ್ಯವಿಲ್ಲವೆಂದು ಹೇಳಿದ್ದಳು. ಈ ಅಪಾರವಾದ ಪ್ರೀತಿ ಮತ್ತು ಆಧ್ರ ಹೃದಯ ಈ ಮಕ್ಕಳಲ್ಲಿ ಹೇಗೆ ಮೂಡುತ್ತದೆ ಎಂದು ಆಶ್ಚರ್ಯವಾಗುತ್ತದೆ.
ಈ ಭಾವನೆಗಳ ಉತ್ತುಂಗ ಸ್ಥಿತಿಯನ್ನು ಮೊನ್ನೆ ನಡೆದ ಘಟನೆಯಲ್ಲಿ ನೋಡಿದೆ. ನಾನು ತರಗತಿಯಿಂದ ಹೊರಬಂದಾಗ ಇಪ್ಪತ್ತರಿಂದ ಇಪ್ಪತ್ತೈದು ಹುಡುಗಿಯರು ಗುಂಪು ಗುಂಪಾಗಿ ಕಾಲೇಜಿನ ಕಟ್ಟಡದ ಮೂರನೇ ಮಹಡಿಯಲ್ಲಿರುವ ಕಿಟಕಿಯ ಪ್ಯಾರಾಪಟ್ ಗೋಡೆ ನೋಡುತ್ತಾ ನಿಂತಿದ್ದರು. ಒಬ್ಬಳು ಉಕ್ಕಿ ಬರುವ ಅಳುವನ್ನು ನಿಯಂತ್ರಿಸಿಕೊಳ್ಳುತ್ತಿದ್ದಳು. ಎಲ್ಲರ ಕಣ್ಣಲ್ಲೂ ಭಯ, ಆಶ್ಚರ್ಯ, ಆತಂಕ ಮನೆ ಮಾಡಿತ್ತು. ನಾನೂ ನನ್ನ ಗೆಳೆಯ ಏನೆಂದು ಕೇಳಿದೆವು. ಅಲ್ಲಿ ಆಗಿದ್ದಿಷ್ಟು:
ನಮ್ಮ ಕಾಲೇಜಿನ ಆವರಣದಲ್ಲಿರುವ ಬೆಕ್ಕೊಂದು ನಾಲ್ಕು ಮರಿಗಳನ್ನು ಹಡೆದಿತ್ತು. ಎರಡನೇಅಂತಸ್ತಿನ ಮೆಟ್ಟಲಿನ ಮೂಲೆಯೊಂದರಲ್ಲಿ ಮರಿಗಳು ಅಳುತ್ತಾ ಮಲಗಿದ್ದವು. ಅವು ಹುಟ್ಟಿ ಒಂದು ದಿವಸವಾಗಿರಬೇಕು. ನಮ್ಮ ಕಾಲೇಜು ಹುಡುಗಿಯರಲ್ಲಿ ಕೆಲವರು ಆ ಮರಿಗಳ ತಾಯಿಗಾಗಿ ಹುಡುಕಾಡಿದ್ದಾರೆ. ತಾಯಿ ಸಿಗುತ್ತಿಲ್ಲ. ಕಾಲೇಜಿನ ಮೂಲೆ ಮೂಲೆ ತಡಕಾಡಿದರೂ ಅದರ ಸುಳಿವೇ ಇಲ್ಲ. ಬೆಕ್ಕಿನ ಮರಿಗಳ ರೋಧನವೋ ಮುಗಿಲು ಮುಟ್ಟುತ್ತಿದೆ. ನಮ್ಮ ಪುಟಾಣಿ ತಾಯಂದಿರ ಹೃದಯ ಕರಗಿ ನೀರಾಗಿದೆ. ಕ್ಯಾಂಟೀನಿಂದ ಹಾಲು ತಂದು ನೀಡಿದ್ದಾರೆ. ಆ ಮರಿಗಳು ಅದೇಕೋ ಏನೋ ಅಥವಾ ಅಮ್ಮನನ್ನು ನೆನಪಿಸಿಕೊಂಡು ಇವರು ನೀಡಿದ ಹಾಲನ್ನು ಮೂಸಿ ನೋಡಿಯೂ ಇಲ್ಲ. ಇದು ಈ ಹೆಣ್ಣುಮಕ್ಕಳ ದುಃಖವನ್ನು ಇಮ್ಮಡಿಯಾಗಿಸಿದೆ. ಕೊನೆಗೆ ಯಾರೋಒಬ್ಬ ವಿದ್ಯಾರ್ಥಿನಿಯು ಕಾಲೇಜಿನ ಟೆರೇಸಿ ಗೆ ಹೋಗಿ ಕೆಳಗೆ ಇಳಿಯುತ್ತಿರುವಾಗ ತಾಯಿ ಬೆಕ್ಕು ನೋವಿನಿಂದ ಮುಲುಗು ಟ್ಟುತ್ತಿರುವ ಸದ್ದು ಕೇಳಿಸಿ ತಕ್ಷಣ ಕಿಟಕಿಯ ಪಾರಾಪಟ್‌ನಲ್ಲಿ ಇಳಿಯಲೂ ಆಗದೆ ಹತ್ತಲೂ ಆಗದೆ ಇರುವ ಬೆಕ್ಕನ್ನು ನೋಡಿ ದ್ದಾಳೆ. ತಕ್ಷಣವೇ ಮಿಂಚಿನ ವೇಗದಲ್ಲಿ ಅವಳ ಗೆಳತಿಯರಿಗೆ ವಿಷಯ ತಿಳಿಯಿತು. ಹಾಗಾಗಿಯೇ ಅವರೆಲ್ಲರೂ ಮೂರನೇ ಅಂತಸ್ತಿನಲ್ಲಿರುವ ಕಿಟಕಿಯ ಪ್ಯಾರಾಪಟ್ ಕಡೆ ನೋಡುತ್ತಾ ತಾಯಿ ಬೆಕ್ಕನ್ನು ಕೆಳಗಿಳಿಸುವ ಉಪಾಯ ಮಾಡುತ್ತಿದ್ದರು. ಕೆಲವು ಹುಡುಗಿಯರು ಟೇಬಲ್ ಮೇಲೆ ಟೇಬಲ್ ಇಟ್ಟು ಹತ್ತಲು ನೋಡಿದರು. ಗೋಡೆಯ ಪಕ್ಕದ ನೆಲವು ಅಂಕುಡೊಂಕಾಗಿದ್ದರಿಂದ ಆ ಪ್ರಯತ್ನ ಪ್ರಾಯೋಗಿಕವಾಗಿರಲಿಲ್ಲ, ನಾವೂ ಅದನ್ನು ಬೆಂಬಲಿಸಲಿಲ್ಲ. ತಾಯಿ ಬೆಕ್ಕನ್ನು ಉಳಿಸುವ ಪ್ರಯತ್ನದಲ್ಲಿ ನಮ್ಮ ಲೇಡಿ ಕಮಾಂಡೋ ಗಳೇ ಗಾಯಗೊಳ್ಳುವ ಸಾಧ್ಯತೆಗಳಿದ್ದವು. ಕೊನೆಗೆ ನಮ್ಮ ಕಾಲೇಜಿನ ಸೂಪರ್‌ಮ್ಯಾನ್ ಮೂರ್ತಿ ಬಂದ. ಮೂರ್ತಿ ನಮ್ಮ ಕಾಲೇಜಿನ ಸಹಾಯಕ. ಮೂರ್ತಿ ಮನೆ ಕಾಲೇಜಿನ ಕ್ಯಾಂಪಸ್‌ನಲ್ಲೇ ಇದೆ. ಕಾಲೇಜಿನ ಪ್ಲಂಬರ್, ಇಲೆಕ್ಟ್ರೀಷಿಯನ್. ಇಂತಹ ವಿಶೇಷ ಪ್ರಕರಣಗಳ ಸಂಬಂಧದಲ್ಲಿ ಕಷ್ಟ ಸುಖಕ್ಕೆ ಆಗುವ ಮೂರ್ತಿ ಯನ್ನು ಹುಡುಗಿಯರು, ‘ಅಣ್ಣಾ, ಅಣ್ಣಾ ಬೆಕ್ಕನ್ನು ಇಳಿಸೋಣ’ ಎಂದು ಗೋಗರೆದರು. ಮೂರ್ತಿ ಹೆಚ್ಚಿಗೆ ಮಾತಾಡದೆ ಮುಗುಳ್ನಗುತ್ತಾ ಶಿಥಿಲಾವಸ್ಥೆಯಲ್ಲಿರುವ ಏಣಿಯನ್ನು ತಂದ. ಹುಡುಗಿಯರು ತುಂಬಾ ಖುಷಿಯಾದರು. ಭಯವಾಗಿದ್ದು ಮಾತ್ರ ನಮಗೆ. ಏಣಿಯೇನಾದರೂ ಮುರಿದು ಅದರ ಮೇಲೆ ಹತ್ತಿದ ಹುಡುಗಿ ಬಿದ್ದರೆ ನಾವು 24X7 ನ್ಯೂಸ್ ಚಾನಲ್‌ಗಳ ಬ್ರೇಕಿಂಗ್ ನ್ಯೂಸ್‌ಗೆ ಆಹಾರವಾಗಬೇಕಿತ್ತು. ಅದಕ್ಕಿಂತ ಸರಳ, ಸುಂದರ ಹೃದಯದ ಹೆಣ್ಣುಮಗಳಿಗೆ ಏನಾದರೂ ಆದರೆ? ಇತ್ಯಾದಿ.. ಆದರೆ, ಗೀದರೆ ಯಾವುದನ್ನೂ ನಮ್ಮ ಲೇಡಿ ಕಮಾಂಡೋಗಳು ಕೇಳುವ ಸ್ಥಿತಿಯಲ್ಲಿರಲಿಲ್ಲ. ಟೇಬಲ್ ಒಂದನ್ನು ಹಾಕಿ ಅದರ ಮೇಲೆ ಏಣಿ ಹಾಕಿದ ಮೂರ್ತಿ. ಏಣಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುವಂತೆ ನಮಗೆಲ್ಲ ಹೇಳಿ ಹತ್ತಿಯೇ ಬಿಟ್ಟಳು. ಮೇಲೆ ಹೋದ ನಂತರ ಪಾರಾಪಟ್ ಮೇಲೆ ಹತ್ತಲು ಆಗಲಿಲ್ಲ. ಅವಳಿಗೆ ಅಳುವೇ ಬಂದುಬಿಟ್ಟಿತು. ತಾನು ಹತ್ತಲಾಗಲಿಲ್ಲ ಎಂದಲ್ಲ, ಬದಲಾಗಿ ಬೆಕ್ಕನ್ನು ತನ್ನಿಂದ ಇಳಿಸಲು ಆಗಲಿಲ್ಲ ಎಂಬುದೇ ಅವಳ ದುಃಖಕ್ಕೆ ಕಾರಣವಾಗಿತ್ತು. ಕೆಳಗಡೆ ಕೆಲವು ಹುಡುಗಿಯರು ತಮ್ಮ ವೇಲ್‌ಗಳನ್ನೆಲ್ಲಾ ಒಟ್ಟುಗೂಡಿಸಿ ವೃತ್ತಾಕಾರದಲ್ಲಿ ನಿಂತು ಬೆಕ್ಕನ್ನು ಮೇಲಿಂದ ಎಸೆದರೆ ಅದಕ್ಕೆ ನೋವಾಗದಂತೆ ವೇಲ್‌ಗಳಿಂದ ರಕ್ಷಾಕವಚ ನಿರ್ಮಿಸಿದ್ದರು. ಕೊನೆಗೆ ಮತ್ತೊಬ್ಬ ಹುಡುಗಿ ಧೈರ್ಯವಾಗಿ ಏಣಿ ಹತ್ತಿ ಪ್ಯಾರಾಪಟ್ ಹತ್ತಿ ನಿಂತುಬಿಟ್ಟಳು. ಬೆಕ್ಕನ್ನು ಕೈಗೆತ್ತಿಕೊಂಡಳು. ಬೆಕ್ಕು ಇವಳನ್ನು ಗಟ್ಟಿಯಾಗಿ ಅಪ್ಪಿಕೊಂಡಿತು.
ಕೆಳಗೆ ನಿಂತಿದ್ದ ಹೆಣ್ಣುಮಕ್ಕಳು ಸಂತೋಷ, ದುಃಖ ತುಂಬಿದ ಅಪೂರ್ವ ಉದ್ಗಾರ ಮಾಡುತ್ತಿದ್ದರು. ತಾಯಿ ಬೆಕ್ಕನ್ನು ಕೆಳಗೆ ವೇಲ್‌ಗಳ ರಕ್ಷಾಕವಚಕ್ಕೆ ಎಸೆಯಲು ಹೋದರೆ ಅದು ಆ ಹುಡುಗಿಯನ್ನು ಬಿಡುತ್ತಲೇ ಇಲ್ಲ. ಅವಳು ಅದನ್ನು ಹಿಡಿದುಕೊಂಡು ಕೆಳಗೆ ಇಳಿಯುವುದು ಕಷ್ಟ. ಕೊನೆಗೆ ಸಮತೋಲನದಿಂದ ಕೆಳಗಿಳಿಯುವಾಗ ಮತ್ತೊಬ್ಬ ಹುಡುಗಿ ಅರ್ಧಕ್ಕೆ ಹತ್ತಿ ಜೋಪಾನವಾಗಿ ಬೆಕ್ಕನ್ನು ತೆಗೆದುಕೊಂಡಳು. ಅವಳನ್ನೂ ಬೆಕ್ಕು ಅಪ್ಪಿಕೊಂಡಿತು. ಮೇಲೆ ನಡೆಯುತ್ತಿದ್ದ ಪ್ರತಿಯೊಂದು ಘಟನೆಗೂ ಹೆಣ್ಣು ಮಕ್ಕಳು ವಿವಿಧ ಕರುಣಾಮಯ ರೀತಿಯ ಮುಖಭಾವದಿಂದ ಪ್ರತಿಕ್ರಿಯಿಸುತ್ತಿದ್ದ ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.
ಬೆಕ್ಕು ಕೆಳಗೆ ಬಂದ ಮೇಲೆ ಇವರೆಲ್ಲರಿಗೂ ಅದನ್ನು ಎತ್ತಿ ಮುದ್ದಾಡಬೇಕೆಂಬ ಆಸೆಯಿ ತ್ತೇನೋ, ಆದರೆ ಅದು ಚಕ್ಕಂತ ಜಿಗಿದು ತನ್ನ ಮರಿಗಳ ಕಡೆಗೆ ಓಡಿ ಹೋಯಿತು. ನನಗಂತೂ ಇಡೀ ಘಟನೆ ಎಂದೂ ಇರದ ಹೆಮ್ಮೆಯ ಭಾವ ಮೂಡಿಸಿತು. ನಮ್ಮ ಕಾಲೇಜಿನ ಹೆಣ್ಣುಮಕ್ಕಳ ಔದಾರ್ಯ, ಸಮಯ ಪ್ರಜ್ಞೆ, ಸಾಹಸ ಎಲ್ಲಕ್ಕೂ ಮಿಗಿಲಾದ ತಾಯ್ತನ ನನಗೂ ಬರಲಿ ಎಂದುಕೊಳ್ಳುತ್ತಿರುವಾಗಲೇ ನನಗೇ ತಿಳಿಯದಂತೆ ನನ್ನ ಕಣ್ಣು ತೇವವಾಯಿತು.