ಯಕ್ಷಗಾನ ತನ್ನ ಚೌಕಟ್ಟನ್ನು ಮೀರಿ ಬೆಳೆದಿದೆ : ಎಂ.ಅನಂತರಾವ್

Update: 2018-03-25 11:14 GMT

ತುಮಕೂರು.ಮಾ.25:ಯಕ್ಷಗಾನ ತಮ್ಮ ಸಾಂಸ್ಕೃತಿಕ ಚೌಕಟ್ಟಿನೊಳಗೆ ಇದ್ದುಕೊಂಡೇ ಅದನ್ನು ಮೀರಿ ಬೆಳೆದು ದೇಶ,ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿದೆ.ಚೌಕಟ್ಟಿನೊಳಗೆ ಇದ್ದುಕೊಂಡೇ ಅದನ್ನು ಮೀರಿ ಬೆಳೆಯುವ ಪರಿಯನ್ನು ಯಕ್ಷಗಾನ ಕರಗತ ಮಾಡಿ ಕೊಂಡಿದೆ ಎಂದು ಪ್ರಾಂಶುಪಾಲರು ಹಾಗು ಯಕ್ಷಗಾನ ಕಲಾವಿದರಾದ ಎಮ್.ಅನಂತರಾವ್ ತಿಳಿಸಿದ್ದಾರೆ.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ದೇಶಿ ಪ್ರಸಿದ್ದಿ ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ಅವರ ಸಾರಥ್ಯದಲ್ಲಿ ಆಯೋಜಿಸಿದ್ದ ಕೃಷ್ಣ ಸಂಧಾನ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಯಕ್ಷಗಾನ ಇಂದು ದಕ್ಷಿಣ ಭಾರತದ ಪ್ರಮುಖ ಪ್ರದರ್ಶನ ಕಲೆಯಾಗಿದೆ. ದಕ್ಷಿಣ ಕನ್ನಡದ ಜನತೆ ಯಕ್ಷಗಾನವನ್ನು ತಮ್ಮ ಕುಟುಂಬದ ಕಲೆ ಎಂಬಂತೆ ಪೋಷಿಸುತ್ತಾ ಬಂದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ದೇಶಿ ಪ್ರಸಿದ್ದಿ ರಂಗನಿರ್ದೇಶಕ ಗೋಪಾಲಕೃಷ್ಣನಾಯರಿ, ಹಿರಿಯ ರಂಗನಿರ್ದೇಶಕ ಬಿ.ವಿ.ಕಾರಂತರಿಂದ ಪರಿಚಯವಾದ ತುಮಕೂರಿನ ನಾಟಕಮನೆ ತುಮಕೂರಿಗೂ ನನಗೂ ಇಂದಿನವರೆಗೆ ಅವಿನಾಭಾವ ಸಂಬಂಧವನ್ನು ಉಂಟುಮಾಡಿದೆ. ಹಳೆಬೇರು, ಹೊಸಚಿಗುರು ಕೂಡಿರಲು ಮರ ಸೊಬಗು ಎಂಬಂತೆ ಹಲವಾರು ಹೊಸ ಆಲೋಚನೆಗಳಿಗೆ ತುಮಕೂರು ವೇದಿಕೆಯಾಗಿದೆ. ಆದರೆ ಇಂದಿನ ದಿನಗಳಲ್ಲಿ ರಂಗಭೂಮಿ ಸೇರಿದಂತೆ ಪ್ರದರ್ಶನ ಕಲೆಗಳ ಕ್ಷೇತ್ರದಲ್ಲಿ ಅಧುನಿಕತೆಯ ಹೆಸರಿನಲ್ಲಿ ಹಳೆಬೇರುಗಳನ್ನು ಬದಿಗಿರಿಸಿ,ಪ್ರಕೃತಿಯನ್ನು ವಿಕೃತಿಯನ್ನಾಗಿಸುವ ಪ್ರಕ್ರಿಯೆ ಹೆಚ್ಚಾಗಿದೆ.ಯಕ್ಷಗಾನ ಸೇರಿದಂತೆ ಎಲ್ಲಾ ಕಲಾಪ್ರಕಾರಗಳ ಕಲಾವಿದರು ಹಿಂದಿಗಿಂತಲೂ ಅರ್ಥಿಕವಾಗಿ ಸಬಲರಾಗು ತ್ತಿದ್ದಾರೆ.ರಂಗಸೌಂದರ್ಯ ಕ್ಷೀಣಿಸುತ್ತಾ ಸಾಗಿದೆ.ಪ್ರೇಕ್ಷಕರ ಕಣ್ಣು ಕೊರೈಸುವಂತಹ ಬೆಳಕು,ವೇಷಭೂಷಣ,ಅಬ್ಬರದ ದ್ವನಿಗಳಿಂದ ಪಾತ್ರದಾರಿಯ ದ್ವನಿ ಪ್ರೇಕ್ಷಕರಿಗೆ ಮುಟ್ಟುತ್ತಿಲ್ಲ ಎಂದು ವಿಷಾದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಕವಿತಾಕೃಷ್ಣ ಮಾತನಾಡಿ,ಆತ್ಮದ ಹಸಿವು ನೀಗಿಸಲು ಕಲೆ,ಸಾಹಿತ್ಯದ ಅವಶ್ಯಕತೆ ಇದೆ.ಕಲಾವಿದ ಸ್ವಯಂ ಬೆಳಕಾಗಿ ಇತರರ ಬಾಳಿನಲ್ಲಿ ದೀಪ ಹಚ್ಚುವ ಕೆಲಸ ಮಾಡಬೇಕೆಂದರು.

ವೇದಿಕೆಯಲ್ಲಿ ಭರತನಾಟ್ಯ ಕಲಾವಿದೆ ಶ್ರೀಮತಿ ಬಾಲಾ ವಿಶ್ವನಾಥ್,ಯಕ್ಷಗಾನ ಕಲಾಪೋಷಕರಾದ ಶ್ರೀನಿವಾಸ ಹತ್ವಾರ,ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪ್ಪಿನಕಟ್ಟೆ, ಹಿರಿಯ ರಂಗಕರ್ಮಿ ಚನ್ನಬಸಯ್ಯಗುಬ್ಬಿ, ರಂಗನಟಿ ಹಾಗೂ ಗಾಯಕಿ ರಾಧಾ ಸಂಪತ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ದೇಶಿ ಪ್ರಸಿದ್ದಿ ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ಅವರ ಸೂತ್ರದಾರಿಕೆಯಲ್ಲಿ ಕೃಷ್ಣಸಂಧಾನ ಯಕ್ಷಗಾನ ಪ್ರಸಂಗ ಜರುಗಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News