ಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಅರಿವು ಅಗತ್ಯ: ಎ.ಎನ್.ಮಹೇಶ್

Update: 2018-03-25 13:13 GMT

ಚಿಕ್ಕಮಗಳೂರು,ಮಾ.24: ಪತ್ರಕರ್ತರು ಮತ್ತು ಮಾಧ್ಯಮಗಳು ಮೌಢ್ಯವನ್ನು ಬಿತ್ತರಿಸುವ ಕಾರ್ಯ ಮಾಡಬಾರದು ಎಂದು ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್ ಕಿವಿಮಾತು ಹೇಳಿದ್ದಾರೆ.

ಅವರು ಮೂಡಿಗೆರೆ ತಾಲೂಕಿನ ಕೆಸವಳಲು ಗ್ರಾಮದಲ್ಲಿ ರವಿವಾರ ಏರ್ಪಡಿಸಲಾಗಿದ್ದ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘದ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಜನರಲ್ಲಿ ಭಯ ಹುಟ್ಟಿಸುವ ಮತ್ತು ಪದೇ ಪದೇ ತಿಳಿಯಲು ಬಯಸದಿರುವ ಸುದ್ದಿಗಳನ್ನು ಪ್ರಸಾರ ಮಾಡುವುದು ಅನಗತ್ಯ ಎಂದ ಅವರು, ಪತ್ರಕರ್ತರು ತಮ್ಮ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಜಾಗೃತರಾಗಿರಬೇಕು. ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನು ಸತ್ಯ ಎಂದು ಜನ ನಂಬುತ್ತಿದ್ದಾರೆ. ಈ ಕಾರಣಕ್ಕೆ ಅದನ್ನು ಬಿತ್ತರಿಸುವ ಮೊದಲು  ಸುದ್ದಿಯ ಸತ್ಯಾಸತ್ಯತೆಗಳ ಬಗ್ಗೆ ಪತ್ರಕರ್ತರು ಖಚಿತ ಪಡಿಸಕೊಳ್ಳಬೇಕು. ಅಧ್ಯಯನ ಮಾಡಬೇಕು. ಇದರಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನೆ ಸಾಧ್ಯ. ಉತ್ತಮ ಸಮಾಜ ನಿರ್ಮಾಣವೂ ಸಾಧ್ಯ ಎಂದವರು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಪತ್ರಕರ್ತರಿಗೆ ಸಾಮಾಜಿಕ ಬದ್ಧತೆ ಇರಬೇಕು. ಸುದ್ದಿಗಳನ್ನು ಬಿತ್ತರಿಸುವ ಆತುರದಲ್ಲಿ ಸುಳ್ಳುಗಳನ್ನು ಹರಡುವ ಮೂಲಕ ಸಾಮಾಜದ ಶಾಂತಿಭಂಗಕ್ಕೆ ಅವಕಾಶ ನೀಡಬಾರದು. ಸುದ್ದಿಗಳ ಸೂಕ್ಷ್ಮತೆ ಅರಿತು ಅವುಗಳಿಂದಾಗುವ ಒಳಿತು ಕೆಡುಕುಗಳ ಬಗ್ಗೆಪರಾಮರ್ಶಿಸಿ ಸುದ್ದಿ ಪ್ರಕಟಿಸಬೇಕು ಎಂದ ಅವರು, ಪತ್ರಕರ್ತರಿಗೆ ಹೆಚ್ಚು ಹೊಣೆಗಾರಿಕೆ ಇದೆ. ಪತ್ರಕರ್ತರ ಆರ್ಥಿಕ ಮತ್ತು ಜೀವನ ಮಟ್ಟವನ್ನು ಹೆಚ್ಚಿಸಿಕೊಳ್ಳವ ನಿಟ್ಟಿನಲ್ಲಿ ಸಮಾಜಕ್ಕೆ ಮತ್ತು ಸರಕಾರಕ್ಕೂ ಬದ್ಧತೆ ಇರಬೇಕು ಎಂದರು.

ಮುಖ್ಯಮಂತ್ರಿಗಳ ಮಾಧ್ಯಮ ಸಮನ್ವಯಾಧಿಕಾರಿ ಕೆ.ವಿ.ಪ್ರಭಾಕರ್ ಮಾತನಾಡಿ, ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ದೊರಕಿಸಕೊಡುವಲ್ಲಿ ರಾಜ್ಯ ಸರಕಾರ ಮುಕ್ತ ಮನಸ್ಸು ಹೊಂದಿದೆ. ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸುವ  ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ ನೀಡುವ ಆದೇಶ ಜಾರಿಯ ಹಂತದಲ್ಲಿದೆ. ಎಲ್ಲ ಪತ್ರಕರ್ತರಿಗೂ ಜಿಲ್ಲೆಯಾದ್ಯಂತ ಓಡಾಡಲು ಬಸ್ ಪಾಸ್ ನೀಡುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿದೆ ಎಂದವರು ತಿಳಿಸಿದರು.

ಪತ್ರಕರ್ತರು ಒಗ್ಗಟ್ಟಾಗಿರುವುದರಿಂದ ಸರಕಾರದ ಸಾಕಷ್ಟು ಸೌಲಭ್ಯಗಳನ್ನು ಪಡೆಯಬಹುದು ಮತ್ತು  ವಸ್ತುನಿಷ್ಟ ವರದಿಗಳನ್ನು ಸಂಗ್ರಹಿಸುವಲ್ಲಿ ಪತ್ರಕರ್ತರಿಗೆ ಬೇಕಾದ ಸೌಲಭ್ಯ ಮತ್ತು ಸಲಕರಣೆಗಳನ್ನು ಉಚಿತವಾಗಿ ದೊರಕಿಸಿಕೊಡುವಲ್ಲಿ ಸರಕಾರಗಳು ಚಿಂತನೆ ನಡೆಸಬೇಕು. ಪತ್ರಕರ್ತರು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಬೇಕೆಂದು ಪ್ರಭಾಕರ್ ಕರೆ ನೀಡಿದರು.

ಸಂಘದ ಅಧ್ಯಕ್ಷ ಎಂ.ಎಸ್.ಮಣಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಂ.ಹುಲಿಯಪ್ಪಗೌಡ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬ್ಯಾರಿ ಒಕ್ಕೂಟದ ಅಧ್ಯಕ್ಷ ಕೆ.ಮುಹಮದ್ ,ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರ ಸಂಘದ ಮಂಜುನಾಥ ಬೊಮ್ಮನಹಳ್ಳಿ, ಪ್ರಧಾನ ಕಾರ್ಯದರ್ಶಿ  ವೆಂಕಟಸಿಂಗ್, ಕಾರ್ಯದರ್ಶಿ ವಿಷ್ಣು, ವಕೀಲ ಡಿ.ಸಿ.ಪುಟ್ಟೇಗೌಡ, ಜನ್ನಾಪುರ ರಘು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿಂದುಳಿದ ಮತ್ತು  ತುಳಿತಕ್ಕೊಳಗಾಗಿರುವ ಸುಮುದಾಯಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಉತ್ತಮ ಕಾರ್ಯಗಳನ್ನು ಮಾಡುವವರಿಗೆ ಬೆನ್ನು ತಟ್ಟುವ ಕೆಲಸವನ್ನು ಮಾದ್ಯಮಗಳು ಮಾಡಬೇಕು. ಸತ್ಯಕ್ಕೆ ದೂರವಾದ ಅಂಶಗಳನ್ನು ಪ್ರಸಾರ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದು ಆತಂಕ ಪಡುವ ವಿಷಯವಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ ಈ ಬಗ್ಗೆ ವಿಚಾರ ಮಂಥನ ಆಗಬೇಕು.
- ಮೋಟಮ್ಮ, ವಿಧಾನ ಪರಿಷತ್ ಸದಸ್ಯೆ, ಮಾಜಿ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News