ಬಹುತ್ವದ ಕನಸಿನ ಜೊತೆಗೆ ‘ಸಂಗಾತ’ ಸಾಹಿತ್ಯ ಪತ್ರಿಕೆ

Update: 2018-03-25 18:47 GMT

ನ್ನಡ ಸಾಹಿತ್ಯ ಸಾಂಸ್ಕೃತಿಕ ಚರ್ಚೆಗಳಿಗೆ ಸಾಹಿತ್ಯಕ ಪತ್ರಿಕೆಗಳು ಗಂಭೀರವಾಗಿ ಸ್ಪಂದಿಸಿದ್ದವು. ಚಂಪಾ ಅವರ ಸಂಕ್ರಮಣ, ಅನಂತಮೂರ್ತಿಯವರ ಋಜುವಾತು ಸೇರಿದಂತೆ ಹಲವು ಸಾಹಿತ್ಯಕ ಪತ್ರಿಕೆಗಳು ಗಂಭೀರ ಓದುಗರನ್ನು ಬೆಸೆಯುವ ಕೆಲಸ ಮಾಡಿದ್ದನ್ನು ನಾವು ಸದಾ ನೆನಪಿಸಿಕೊಳ್ಳಬೇಕಾಗಿದೆ. ಚಂದಾದಾರರ ಮೂಲಕವೇ ಪತ್ರಿಕೆಯ ಪ್ರಸರಣವನ್ನು ಮಾಡಿ, ಒಂದು ದೊಡ್ಡ ಓದುಗ ಬಳಗವನ್ನು ಇಂತಹ ಪತ್ರಿಕೆಗಳು ನಿರ್ಮಿಸಿದವು. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಾಹಿತ್ಯ ಪತ್ರಿಕೆಗಳು ನೆಲೆಕಳೆದುಕೊಳ್ಳುತ್ತಿವೆ. ಸಾಹಿತ್ಯಾಸಕ್ತರು ಕೂಡ ಈ ಬಗ್ಗೆ ನಿರಾಸಕ್ತಿಯನ್ನು ತಾಳುತ್ತಿದ್ದಾರೆ. ಬಹುಶಃ ಸಾಹಿತ್ಯ, ಸಂಸ್ಕೃತಿಯನ್ನು ಗಂಭೀರವಾಗಿ ಅಧ್ಯಯನ ಮಾಡುವವರ ಕೊರತೆಯೂ ಈ ಅನಾಸಕ್ತಿಗೆ ಕಾರಣವಾಗಿರಬಹುದು. ಇವೆಲ್ಲದರ ನಡುವೆಯೂ ಕಥೆಗಾರ ವಿವೇಕ್ ಶಾನುಭಾಗ ಅವರು ‘ದೇಶಕಾಲ’ ಪತ್ರಿಕೆಯನ್ನು ಕೆಲ ಸಮಯ ನಡೆಸಿದರು. ಹಾಗೆಯೇ ಇತ್ತೀಚೆಗೆ ಯುವ ಬರಹಗಾರರೊಬ್ಬರು ‘ಸಂಕಥನ’ವನ್ನು ನಡೆಸುತ್ತಾ ಬರುತ್ತಿದ್ದಾರೆ. ಇದೀಗ ಈ ಸಾಹಸಕ್ಕೆ ಮತ್ತೊಬ್ಬ ಯುವ ಲೇಖಕ ಕೈ ಹಾಕಿದ್ದಾರೆ. ಟಿ. ಎಸ್. ಗೊರವರ ಅವರ ಸಂಪಾದಕತ್ವದಲ್ಲಿ ಹೊರ ಬರುತ್ತಿರುವ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ‘ಸಂಗಾತ’ ತನ್ನ ವಿಭಿನ್ನ ನಿರೂಪಣಾ ಶೈಲಿಯ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆಯುತ್ತಿದೆ. 2018ರ ಮೊದಲ ಸಂಚಿಕೆ ಹೊರ ಬಂದಿದ್ದು, ಬಿಡಿ ಸಂಚಿಕೆಯ ಬೆಲೆ 150 ರೂಪಾಯಿ. ವಾರ್ಷಿಕ ಚಂದಾ(ನಾಲ್ಕು ಸಂಚಿಕೆ) ರೂ. 500. ಸಂಪಾದಕೀಯ ಬಳಗದಲ್ಲಿ ಆರಿಫ್ ರಾಜಾ, ಸುರೇಶ್ ನಾಗಲಮಡಿಕೆ, ರಮೇಶ್ ಅರೋಲಿ ಅವರು ಜೊತೆಯಾಗಿದ್ದಾರೆ. ಮೊದಲ ಸಂಚಿಕೆ ತನ್ನ ಸಮೃದ್ಧ ಸಾಹಿತ್ಯ ಮತ್ತು ಆಕರ್ಷಕ ಪುಟ ವಿನ್ಯಾಸಗಳಿಂದ ಗಮನ ಸೆಳೆದಿದೆ. ಸುಮಾರು 20 ಹಿರಿ-ಕಿರಿ ಲೇಖಕರು ಈ ಸಂಚಿಕೆಯಲ್ಲಿ ಬರೆದಿದ್ದಾರೆ. ‘‘ಸಾಹಿತ್ಯವೆಂದರೆ ಬರೀ ಕತೆ, ಕಾವ್ಯ, ಹೂ ಹಗುರ ಭಾವನೆಗಳಷ್ಟೇ ಅಲ್ಲ, ಅದು ಬಹುಮುಖಿ. ಸುಡುವ ಬಿಸಿಲು ಮತ್ತು ಬೆಳದಿಂಗಳಿಗೆ ಫರುಕಿದೆ. ನಮ್ಮದು ‘ಬಹುತ್ವ ಭಾರತ’. ಆ ವಿಭಿನ್ನ ಆಲಕ್ಷಿತ ಅನುಭವಗಳ ಧಾರೆ ಹರಿದು ಬಂದಾಗಲೇ ಸಾಹಿತ್ಯ ವಿಶಿಷ್ಟವಾಗುವುದು. ಸುಭಗವಾಗುವುದು. ಜೀವಕಳೆ ಚಿಮ್ಮುವುದು. ಈ ಗ್ರಹಿಕೆಯೊಂದಿಗೆ ಪ್ರತೀ ಸಂಚಿಕೆ ರೂಪುಗೊಳ್ಳಲಿದೆ’’ ಎಂದು ಸಂಪಾದಕ ಟಿ. ಎಸ್. ಗೊರವರ ತಮ್ಮ ಸಂಪಾದಕೀಯದಲ್ಲಿ ಹೇಳಿಕೊಂಡಿದ್ದಾರೆ. ರಾಜಕೀಯ, ಸಂಸ್ಕೃತಿ, ಸಿನೆಮಾ, ಪದ್ಯ, ಕತೆ, ಆತ್ಮಕಥನ, ಸಂದರ್ಶನ ಹೀಗೆ ವೈವಿಧ್ಯಗಳ ಆಗರವಾಗಿದೆ ಈ ಸಂಚಿಕೆ.

ಆಸಕ್ತರು 9341757653 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News