ಬುಲೆಟ್ ರೈಲು ಯೋಜನೆಯ ಸೇತುವೆಗಳು, ಸುರಂಗಗಳ ಶೇ.80ರಷ್ಟು ವಿನ್ಯಾಸ ಪೂರ್ಣ

Update: 2018-03-26 15:07 GMT

ಹೊಸದಿಲ್ಲಿ,ಮಾ.26: ಅಹ್ಮದಾಬಾದ್-ಮುಂಬೈ ನಡುವೆ ದೇಶದ ಮೊದಲ ಬುಲೆಟ್ ರೈಲು ಯೋಜನೆಯ ಕಾಮಗಾರಿಯು ತ್ವರಿತಗತಿಯಿಂದ ನಡೆಯುತ್ತಿದ್ದು, ಸೇತುವೆಗಳು ಮತ್ತು ಸುರಂಗಗಳ ವಿನ್ಯಾಸಕಾರ್ಯ ಶೇ.80ರಷ್ಟು ಪೂರ್ಣಗೊಂಡಿದೆ ಎಂದು ಯೋಜನೆಯನ್ನು ಜಾರಿಗೊಳಿ ಸುತ್ತಿರುವ ನ್ಯಾಷನಲ್ ಹೈಸ್ಪೀಡ್ ರೇಲ್ ಕಾರ್ಪೊರೇಷನ್ (ಎನ್‌ಎಚ್‌ಎಸ್‌ಆರ್‌ಸಿ)ನ ಆಡಳಿತ ನಿರ್ದೇಶಕ ಅಚಲ್ ಖರೆ ಅವರು ತಿಳಿಸಿದರು. ಮಹಾರಾಷ್ಟ್ರ ಮತ್ತು ಗುಜರಾತ್‌ಗಳಲ್ಲಿ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯೂ ಆರಂಭ ಗೊಂಡಿದೆ ಎಂದರು.

 ಯೋಜನೆಯು 2022ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಈ ಹೈ ಸ್ಪೀಡ್ ರೈಲು ಉಭಯ ನಗರಗಳ ನಡುವಿನ 500 ಕಿ.ಮೀ.ಗೂ ಅಧಿಕ ದೂರವನ್ನು ಈಗಿನ ಏಳು ಗಂಟೆಗಳ ಬದಲು ಮೂರು ಗಂಟೆಗೂ ಕಡಿಮೆ ಅವಧಿಯಲ್ಲಿ ಕ್ರಮಿಸಲಿದೆ. ಬುಲೆಟ್ ರೈಲು ಮಹಾರಾಷ್ಟ್ರದಲ್ಲಿ ನಾಲ್ಕು ಕಡೆ ಸೇರಿದಂತೆ 12 ನಿಲ್ದಾಣಗಳಲ್ಲಿ ನಿಲ್ಲಲಿದೆ. ಉದ್ದೇಶಿತ ರೈಲು ಮಾರ್ಗವು ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಿಂದ ಆರಂಭಗೊಂಡು ಅಹ್ಮದಾಬಾದ್‌ನ ಸಾಬರಮತಿ ರೈಲ್ವೆ ನಿಲ್ದಾಣದಲ್ಲಿ ಅಂತ್ಯಗೊಳ್ಳಲಿದೆ.

ಭಾರತೀಯ ರೈಲ್ವೆ ಮತ್ತು ಜಪಾನಿನ ಶಿಂಕನ್ಸೆನ್ ಟೆಕ್ನಾಲಜಿ ಸಹಭಾಗಿತ್ವದ ಈ ಯೋಜನೆಗೆ ಜಪಾನ್ ಮೃದುಸಾಲವನ್ನು ನೀಡಿದೆ.

ರೈಲುಮಾರ್ಗದ ಸರ್ವೆ ಮತ್ತು ಮಣ್ಣುಪರೀಕ್ಷೆ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಖರೆ, ಮಾರ್ಗವು ಮಹಾರಾಷ್ಟ್ರದ 108 ಗ್ರಾಮಗಳ ಮೂಲಕ ಹಾದು ಹೋಗಲಿದ್ದು, ಈ ಪೈಕಿ ಹೆಚ್ಚಿನವು ಪಾಲಘರ ಜಿಲ್ಲೆಯಲ್ಲಿವೆ. 17 ಗ್ರಾಮಗಳಲ್ಲಿ ಭೂಸ್ವಾಧೀನಕ್ಕಾಗಿ ನೋಟಿಸ್‌ನ್ನು ಹೊರಡಿಸಲಾಗಿದ್ದು, ಇದಕ್ಕಾಗಿ ಎನ್‌ಎಚ್‌ಎಸ್‌ಆರ್‌ಸಿ 10,000 ಕೋ.ರೂ.ಗಳನ್ನು ಮೀಸಲಿರಿಸಿದೆ ಎಂದರು.

ಇಡೀ ಯೋಜನೆಯು ಬೆಂಕಿ ಮತ್ತು ಭೂಕಂಪ ಪ್ರತಿರೋಧಕ ವಾಗಿರಲಿದೆ. ರೈಲಿನ ವೇಗವು ಗಾಳಿಯ ವೇಗವನ್ನು ಅವಲಂಬಿ ಸಿರುತ್ತದೆ. ಪ್ರತಿ ಸೆಕೆಂಡ್‌ಗೆ 30 ಮೀ.ವೇಗದಲ್ಲಿ ಗಾಳಿಯು ಬೀಸುತ್ತಿದ್ದರೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುವುದು. ಯಾವುದೇ ಅಪಘಾತ ಸಂಭವಿಸಿದರೆ ಪರಿಹಾರ ರೈಲು 8ರಿಂದ 10 ನಿಮಿಷಗಳಲ್ಲಿ ಸ್ಥಳವನ್ನು ತಲುಪಲಿದೆ ಎಂದ ಅವರು, ರೈಲು 320 ಸೆಕೆಂಡ್‌ಗಳಲ್ಲಿ 320 ಕಿ.ಮೀ.ಗರಿಷ್ಠ ವೇಗವನ್ನು ಪಡೆಯಲಿದೆ ಮತ್ತು ಈ ಅವಧಿಯಲ್ಲಿ ಅದು 18 ಕಿ.ಮೀ. ದೂರವನ್ನು ಕ್ರಮಿಸಿರುತ್ತದೆ ಎಂದು ತಿಳಿಸಿದರು.

ರೈಲು ಮುಂಬೈನ ಬಿಕೆಸಿಯಿಂದ ನೆರೆಯ ಥಾಣೆಗೆ ಕೇವಲ 10 ನಿಮಿಷಗಳಲ್ಲಿ ಮತ್ತು ಪಾಲಘರ ಜಿಲ್ಲೆಯ ವಿರಾರ್‌ಗೆ 24 ನಿಮಿಷಗಳಲ್ಲಿ ತಲುಪಲಿದೆ. ಪ್ರಯಾಣಿಕರ ದಟ್ಟಣೆಯ ಅವಧಿಯಲ್ಲಿ ಮೂರು ರೈಲುಗಳು ಮತ್ತು ಇತರ ಅವಧಿಯಲ್ಲಿ ಎರಡು ರೈಲುಗಳನ್ನು ಓಡಿಸಲು ಉದ್ದೇಶಿಸಲಾಗಿದೆ. ಕೆಲವು ರೈಲುಗಳು ಸೀಮಿತ ನಿಲುಗಡೆಗಳನ್ನು ಹೊಂದಿದ್ದರೆ, ಇನ್ನು ಕೆಲವು ಮುಂಬೈ(ಬಿಕೆಸಿ) ಮತ್ತು ಅಹ್ಮದಾಬಾದ್ ನಡುವಿನ ಎಲ್ಲ ನಿಲ್ದಾಣಗಳಲ್ಲಿ ನಿಲ್ಲಲಿವೆ. 10 ಬೋಗಿಗಳನ್ನು ಹೊಂದಿರುವ ರೈಲುಗಳು ಉಭಯ ದಿಕ್ಕುಗಳಲ್ಲಿ ದಿನಕ್ಕೆ ಒಟ್ಟು 70 ಟ್ರಿಪ್‌ಗಳನ್ನು ನಡೆಸಲಿವೆ ಮತ್ತು 40,000 ಪ್ರಯಾಣಿಕರ ನಿರೀಕ್ಷೆಯಿದೆ ಎಂದು ಖರೆ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News