ಕಾಂಗ್ರೆಸ್ ಆ್ಯಪ್ ನಿಂದಲೂ ಬಳಕೆದಾರರ ಮಾಹಿತಿ ಸೋರಿಕೆ: ಬಿಜೆಪಿ ಆರೋಪ

Update: 2018-03-26 16:25 GMT

ಹೊಸದಿಲ್ಲಿ, ಮಾ. 26: ಕಾಂಗ್ರೆಸ್ ಸಿಂಗಾಪುರ ಮೂಲದ ಸಂಸ್ಥೆಯೊಂದಿಗೆ ಬಳಕೆದಾರರ ಮಾಹಿತಿ ಹಂಚಿಕೊಳ್ಳುತ್ತಿದೆ ಎಂದು ಬಿಜೆಪಿ ಸೋಮವಾರ ಆರೋಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೊಬೈಲ್ ಆ್ಯಪ್ ಬಳಕೆದಾರರ ಇಮೇಲ್ ಐಡಿ, ಭಾವಚಿತ್ರ, ಲಿಂಗ ಹಾಗೂ ಹೆಸರು ಸೇರಿದಂತೆ ವೈಯುಕ್ತಿಕ ವಿವರಗಳನ್ನು ಅನುಮತಿ ಇಲ್ಲದೆ ಮೂರನೇ ವ್ಯಕ್ತಿಗೆ ರವಾನಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸರಣಿ ಟ್ವೀಟ್ ಮಾಡಿದ ಬಳಿಕ ಈ ಹೇಳಿಕೆ ಹೊರಬಿದ್ದಿದೆ.

ರಾಹುಲ್ ಗಾಂಧಿ ವಿರುದ್ಧ ಪ್ರತಿದಾಳಿ ನಡೆಸಿರುವ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥರಾಗಿರುವ ಅಮಿತ್ ಮಾಳವೀಯ, ಕಾಂಗ್ರೆಸ್ ಆ್ಯಪ್ ಬಳಕೆದಾರರ ಮಾಹಿತಿಯನ್ನು ಸಿಂಗಾಪುರ ಮೂಲದ ಕಂಪೆನಿಗೆ ರವಾನೆ ಮಾಡುತ್ತಿದೆ ಎಂದಿದ್ದಾರೆ. ‘‘ಹಾಯ್, ನಾನು ರಾಹುಲ್ ಗಾಂಧಿ. ನಾನು ದೇಶದ ಅತಿ ಹಳೆಯ ರಾಜಕೀಯ ಪಕ್ಷದ ಅಧ್ಯಕ್ಷ. ನೀವು ನಮ್ಮ ಅಧಿಕೃತ ಅಪ್ಲಿಕೇಶನ್‌ಗೆ ಸಹಿ ಮಾಡಿದರೆ, ನಾನು ನಿಮ್ಮ ಎಲ್ಲಾ ಮಾಹಿತಿಗಳನ್ನು ಸಿಂಗಾಪುರದಲ್ಲಿರುವ ನನ್ನ ಗೆಳೆಯನಿಗೆ ರವಾನಿಸುತ್ತೇನೆ’’ ಎಂದು ಸರಣಿ ಟ್ವೀಟ್ ಮಾಡಿರುವ ಬಿಜೆಪಿಯ ಅಮಿತ್ ಮಾಳವೀಯ, ಇದರೊಂದಿಗೆ ಕಾಂಗ್ರೆಸ್ ವೆಬ್‌ಸೈಟ್‌ನ ಖಾಸಗಿ ನೀತಿಗೆ ಸಂಬಂಧಿಸಿದ ವಿಚಾರಗಳ ಸ್ಕ್ರೀನ್‌ಶಾಟ್ ಅನ್ನು ಲಗತ್ತಿಸಿದ್ದಾರೆ.

ಸಮಾನ ಮನಸ್ಕ ಜನರಿಗೆ ಮಾಹಿತಿ ಹಂಚಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಹೇಳುತ್ತದೆ. ಅಂದರೆ, ಅದು ಮಾವೋವಾದಿಗಳು, ಕಲ್ಲು ತೂರಾಟಗಾರರು, ಚೀನಾದ ರಾಯಭಾರಿ ಕಚೇರಿ ಹಾಗೂ ಕೇಂಬ್ರಿಜ್ ಅನಾಲಿಟಿಕಾಕ್ಕೆ ಮಾಹಿತಿ ನೀಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ‘ಯಾವ ಅಧಿಕಾರಕ್ಕೂ ಉತ್ತರಾಧಿಕಾರ ಇಲ್ಲ’ ಎಂಬ ಸೋನಿಯಾ ಗಾಂಧಿ ಅವರ ಹೇಳಿಕೆಯಿಂದ ಪ್ರೇರಣೆ ಹೊಂದಿರುವ ಕಾಂಗ್ರೆಸ್ ನಿಮ್ಮ ಎಲ್ಲ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕೇಂಬ್ರಿಜ್ ಅನಾಲಿಟಿಕಾದಂತಹ ಜಗತ್‌ವ್ಯಾಪಿ ಸಂಘಟನೆಯೊಂದಿಗೆ ಹಂಚಿಕೊಳ್ಳುತ್ತದೆ. ಇದರ ಬಗ್ಗೆ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಕಾಂಗ್ರೆಸ್‌ನ ಸ್ವಂತ ನೀತಿ ಇದನ್ನು ಹೇಳುತ್ತದೆ ಎಂದು ಮಾಳವೀಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News