ಕೇಂಬ್ರಿಡ್ಜ್ ಅನಲಿಟಿಕಾ ಪ್ರಕರಣ: ವಿಜ್ಞಾನ ಲಾಭದ ಗುಲಾಮನಾಗಿ ದುಡಿದಾಗ

Update: 2018-03-26 18:31 GMT

ಭಾಗ-2

ಮನೋವಿಜ್ಞಾನ ಸಂಶೋಧಕನಾದ ಕೋಗ್ನ್‌ನ್‌ನ ವರ್ತನೆಯು ಆತಂಕಕಾರಿಯಾಗಿದೆ. ಜಗತ್ತಿನ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ತನ್ನ ಮನೋವೈಜ್ಞಾನಿಕ ಸಂಶೋಧನೆಗಳ ಫಲವನ್ನು ಪಾಠದ ರೂಪದಲ್ಲಿ ಹಂಚಿಕೊಳ್ಳುವ ಕೋಗ್ನ್‌ನ್ ಇಡೀ ಶೈಕ್ಷಣಿಕ ಸಮುದಾಯಕ್ಕೆ ದ್ರೋಹ ಬಗೆದಿರುವುದು ಎದ್ದು ಕಾಣುತ್ತದೆ. ವಿಜ್ಞಾನಿಯಾಗಿ ಜ್ಞಾನಕ್ಕೆ ಶರಣನಾಗಬೇಕಿದ್ದ ಕೋಗ್ನ್‌ನ್ ಹಣಕ್ಕೆ ದಾಸನಾಗಿರುವುದು ಇಲ್ಲಿ ಕಾಣುತ್ತದೆ. ಆಧುನಿಕ ಮಾನವ ನಾಗರಿಕತೆಯನ್ನು ಕಟ್ಟಲು ಬೆಂಬಲವಾಗಿದ್ದ ವಿಜ್ಞಾನ, ಇತ್ತೀಚಿನ ದಿನಗಳಲ್ಲಿ ಹಾದಿ ತಪ್ಪುತ್ತಿರುವ ಸ್ಪಷ್ಟ ಉದಾಹರಣೆ ಇದಾಗಿದೆ.

‘ಕೇಂಬ್ರಿಡ್ಜ್ ಅನಲಿಟಿಕಾ’ ಕಂಪೆನಿಯು ಟ್ರಂಪ್ ಪರವಾಗಿ ನಿರ್ವಹಿಸಿದ ಕಾರ್ಯದ ಕುರಿತು ಜಗತ್ತಿಗೆ ತಿಳಿಸಿದ ಕ್ರಿಸ್ಟೋಫರ್ ವೈಲಿ ಸಾಮಾನ್ಯ ವ್ಯಕ್ತಿಯಲ್ಲ. ಈತ ಮನೋವಿಜ್ಞಾನ ಮತ್ತು ವರ್ತನಾ ವಿಜ್ಞಾನಗಳಲ್ಲಿ ಪರಿಣತನಾದವನು. ಮನುಷ್ಯರ ವ್ಯಕ್ತಿತ್ವ ಮತ್ತು ಆ ವ್ಯಕ್ತಿತ್ವದ ಕಾರಣದಿಂದ ಉಂಟಾಗುವ ವರ್ತನೆಗಳ ಕುರಿತು ಸಂಪೂರ್ಣ ಜ್ಞಾನವನ್ನು ಹೊಂದಿರುವಾತ. ಮೂಲತಃ ಕಂಪೆನಿಗಳ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಂತ್ರಗಳನ್ನು ರೂಪಿಸುವಾತ. ತನ್ನಲ್ಲಿದ್ದ ಪರಿಣತಿಯನ್ನು ಮತದಾರರ ಮನಸ್ಸು ಉದ್ದೇಶಿತ ಗ್ರಾಹಕನಿಗೆ (ಅಧ್ಯಕ್ಷಿಯ ಅಭ್ಯರ್ಥಿ) ಅನುಕೂಲವಾಗುವಂತೆ ವರ್ತಿಸುವಂತೆ ಮಾಡಲು ಕೇಂಬ್ರಿಡ್ಜ್ ಅನಲಿಟಿಕಾದಿಂದ ದೊಡ್ಡ ಸಂಬಳ ಪಡೆದವನು. ಕಾನೂನು ವಿರೋಧಿ ಕೆಲಸವನ್ನು ಮಾಡಿದ ಮೂರ್ನಾಲ್ಕು ವರ್ಷ (ಚುನಾವಣೆ ನಡೆದದ್ದು 2016ರಲ್ಲಿ) ಉರುಳಿದ ಮೇಲೆ ಸತ್ಯವನ್ನು ಸಾರ್ವಜನಿಕವಾಗಿ ಹೇಳುತ್ತಾ ತಾನು ತಪ್ಪುಮಾಡಿದೆ ಎನ್ನುತ್ತಾನೆ ವೈಲಿ.

ಇಷ್ಟು ವರ್ಷಗಳು ಕಳೆದ ಮೇಲೆ ಸತ್ಯ ಹೇಳಲು ಮುಂದಾಗಿದ್ದಕ್ಕೆ ಆತ ಎರಡು ಕಾರಣಗಳನ್ನು ನೀಡುತ್ತಾನೆ: ತಾನು ಮಾಡಿದ ಕೃತ್ಯದ ಕುರಿತು ಮೂಡಿದ ಪಾಪಪ್ರಜ್ಞೆ ಒಂದಾದರೆ, ಇನ್ನೊಂದು ಇಂತಹ ಮೋಸಕ್ಕೆ ಅವಕಾಶ ನೀಡಿದ ಫೇಸ್‌ಬುಕ್ ಕಂಪೆನಿ ತನ್ನ ದೋಷವನ್ನು ನಿರಾಕರಿಸಲು ಪ್ರಯತ್ನ ಮಾಡಿದ್ದು(ಫೇಸ್‌ಬುಕ್ ಕಂಪೆನಿಯ ಮಾಲಕ ಝುಕರ್‌ಬರ್ಗ್ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದು ನಂತರದ ಬೆಳವಣಿಗೆ ಎನ್ನುವುದು ವೈಲಿಯ ವಾದ). ತನ್ನಲ್ಲಿದ್ದ ಜ್ಞಾನವನ್ನು ಗ್ರಾಹಕನ ಅಗತ್ಯಕ್ಕೆ ತಕ್ಕಂತೆ ಮತದಾರರಲ್ಲಿ ಬದಲಾವಣೆ ತಂದ ವೃತ್ತಿಪರ ಸಂತಸ ಆರಂಭದಲ್ಲಿ ಇತ್ತಾದರೂ, ನಂತರದ ದಿನಗಳಲ್ಲಿ ಇದೇ ಪ್ರಕ್ರಿಯೆ ಪಾಪಪ್ರಜ್ಞೆಗೆ ಕಾರಣವಾಯಿತು. ‘‘ತಕ್ಷಣವೇ ಮಾತನಾಡಲು ಆಗದ ಸ್ಥಿತಿಯಲ್ಲಿ ನಾನಿದ್ದೆ. ಏಕೆಂದರೆ ಕಂಪೆನಿಯೊಂದಿಗಿನ ಒಪ್ಪಂದದ ಕರಾರುಗಳಿದ್ದವು. ಹಾಗಾಗಿ ನಿಧಾನವಾಗಿ ಕಾನೂನು ತಜ್ಞರ ಸಲಹೆ ಪಡೆಯುತ್ತಾ ನಿರ್ಧಾರ ತಳೆದೆ. ಇದರಿಂದಾಗಿ ಸ್ವಲ್ಪ ಸಮಯ ಬೇಕಾಯಿತು.’’ ಎನ್ನುವುದು ವೈಲಿಯ ವಾದವಾಗಿದೆ.

ವೈಲಿಯ ಈ ಕೃತ್ಯಕ್ಕೆ ಬೆಂಬಲವಾಗುವುದು ಕೋಗ್ನನ್ ಎನ್ನುವ ಮನೋವಿಜ್ಞಾನಿ. ಸಣ್ಣಪ್ರಾಯದಲ್ಲೇ ಜಗತ್ತಿನ ಪ್ರಮುಖ ಮನೋವಿಜ್ಞಾನಿಗಳಲ್ಲಿ ಒಬ್ಬನೆಂದು ಹೆಸರು ಮಾಡಿರುವಾತ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುವ ಮನುಷ್ಯ ವರ್ತನೆಗಳನ್ನು ಅರಿಯುವ ಗುರಿಯನ್ನು ಹೊಂದಿರುವವನು. ಕೋಗ್ನ್‌ನ್‌ನ ಸಂಶೋಧನೆಯ ಆರಂಭಿಕ ಹಂತದಲ್ಲಿ ‘ಕೇಂಬ್ರಿಡ್ಜ್ ಅನಲಿಟಿಕಾ’ದ ಮಾತೃ ಕಂಪೆನಿಯಾದ ಎಸ್.ಸಿ.ಎಲ್. ಜೊತೆಯಾಗುತ್ತದೆ. ಇವರಿಬ್ಬರ ಜೊತೆಗೆ ಫೇಸ್‌ಬುಕ್ ಕಂಪೆನಿಯ ವಿಜ್ಞಾನಿಗಳು ಅಧಿಕೃತವಾಗಿ ಇರುತ್ತಾರೆ. ಮುಂದೆ ಫೇಸ್‌ಬುಕ್ ಸಂಶೋಧನೆಯ ಎಲ್ಲಾ ಜ್ಞಾನವನ್ನು ತನ್ನ ವ್ಯಾವಹಾರಿಕ ಅಗತ್ಯಗಳಿಗೆ ಬಳಸಿಕೊಳ್ಳುತ್ತದೆ.

ತನ್ನ ಹಾಗೂ ಕೋಗ್ನ್‌ನ್ ನಡುವೆ ಇದ್ದಂತಹ ಸಂಬಂಧವನ್ನು ಫೇಸ್‌ಬುಕ್ ಕಂಪೆನಿ ಒಪ್ಪಿಕೊಳ್ಳುತ್ತದೆ. ತನ್ನ ಬಳಕೆದಾರರಿಗೆ ಉತ್ತಮವಾದ ಅನುಭವವನ್ನು ಮತ್ತು ಸೇವೆಯನ್ನು ಸೃಷ್ಟಿಸುವ ಸಲುವಾಗಿ ಕೈಗೊಂಡಿದ್ದ ಸಂಶೋಧನಾ ಕಾರ್ಯವಿದು ಎನ್ನುವುದು ಅದರ ಈಗಿನ ನಿಲುವು. ಇದರಲ್ಲಿ ಯಾರಿಗೂ ಯಾವುದೇ ತಕರಾರು ಇರಲು ಸಾಧ್ಯವಿಲ್ಲ. ಆದರೆ ಇಂತಹದೊಂದು ಕಾರಣಕ್ಕಾಗಿ ನಿಮ್ಮ ಮಾಹಿತಿಯನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಫೇಸ್‌ಬುಕ್ ಆಗಲಿ ಇಲ್ಲವೇ ಕೋಗ್ನ್‌ನ್ ಆಗಲಿ ಬಳಕೆದಾರರ ಗಮನಕ್ಕೆ ತರಲಿಲ್ಲ. ಇದು ವೈಜ್ಞಾನಿಕ ಸಂಶೋಧನೆಗಳನ್ನು ನಡೆಸುವ ವಿಧಿವಿಧಾನಗಳ ಉಲ್ಲಂಘನೆಯಾಗುತ್ತದೆ.

ವಾಣಿಜ್ಯ ಉದ್ದೇಶಕ್ಕಾಗಿ ಫೇಸ್‌ಬುಕ್ ಕಂಪೆನಿ ಇದನ್ನು ಮೀರಿದೆ ಎಂದು ಒಪ್ಪಿಕೊಂರೂ ಓರ್ವ ಶೈಕ್ಷಣಿಕ ಸಂಶೋಧಕನಾಗಿ ಕೋಗ್ನ್‌ನ್ ಇದರ ಉಲ್ಲಂಘನೆ ಮಾಡಿರುವುದು ದೊಡ್ಡ ಅಪರಾಧವಾಗುತ್ತದೆ. ತನಗೆ ಬೇಕಾದ ವ್ಯಕ್ತಿಗತ ಮಾಹಿತಿಯನ್ನು ಪಡೆಯಲು ಕೋಗ್ನ್‌ನ್ ಬಳಕೆದಾರರ ವ್ಯಕ್ತಿತ್ವ ವಿಶೇಷತೆಯನ್ನು (ಪರ್ಸನಾಲಿಟಿ ಟೆಸ್ಟ್) ಪರೀಕ್ಷಿಸುವ ನೆಪದಲ್ಲಿ ಆ್ಯಪ್(ಕಿರು ತಂತ್ರಾಂಶ) ಒಂದನ್ನು ಸೃಷ್ಟಿಸಿ, ಫೇಸ್‌ಬುಕ್ ಬಳಕೆದಾರರ ಮುಂದಿಡುತ್ತಾನೆ. ಅವರು ಪರೀಕ್ಷೆಯನ್ನು ತೆಗೆದುಕೊಂಡ ಹಂತದಲ್ಲಿ, ಕೋಗ್ನ್‌ನ್‌ನ ಆ್ಯಪ್ ಬಳಕೆದಾರರ ವೈಯಕ್ತಿಕ ವಿವರಗಳಷ್ಟೇ ಅಲ್ಲದೆ ಅವರ ಖಾತೆಯಲ್ಲಿ ಫ್ರೆಂಡ್ಸ್ ಆಗಿದ್ದವರ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತದೆ.

ಹೀಗೆ ಕೋಗ್ನ್‌ನ್ 50 ಮಿಲಿಯನ್ ಬಳಕೆದಾರರ ಮಾಹಿತಿಯನ್ನು ದೋಚುತ್ತಾನೆ. ಮನೋವಿಜ್ಞಾನ ಸಂಶೋಧಕನಾದ ಕೋಗ್ನ್‌ನ್‌ನ ವರ್ತನೆಯು ಆತಂಕಕಾರಿಯಾಗಿದೆ. ಜಗತ್ತಿನ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ತನ್ನ ಮನೋವೈಜ್ಞಾನಿಕ ಸಂಶೋಧನೆಗಳ ಫಲವನ್ನು ಪಾಠದ ರೂಪದಲ್ಲಿ ಹಂಚಿಕೊಳ್ಳುವ ಕೋಗ್ನ್‌ನ್ ಇಡೀ ಶೈಕ್ಷಣಿಕ ಸಮುದಾಯಕ್ಕೆ ದ್ರೋಹ ಬಗೆದಿರುವುದು ಎದ್ದು ಕಾಣುತ್ತದೆ. ವಿಜ್ಞಾನಿಯಾಗಿ ಜ್ಞಾನಕ್ಕೆ ಶರಣನಾಗಬೇಕಿದ್ದ ಕೋಗ್ನ್‌ನ್ ಹಣಕ್ಕೆ ದಾಸನಾಗಿರುವುದು ಇಲ್ಲಿ ಕಾಣುತ್ತದೆ. ಆಧುನಿಕ ಮಾನವ ನಾಗರಿಕತೆಯನ್ನು ಕಟ್ಟಲು ಬೆಂಬಲವಾಗಿದ್ದ ವಿಜ್ಞಾನ, ಇತ್ತೀಚಿನ ದಿನಗಳಲ್ಲಿ ಹಾದಿ ತಪ್ಪುತ್ತಿರುವ ಸ್ಪಷ್ಟ ಉದಾಹರಣೆ ಇದಾಗಿದೆ. ವೈಜ್ಞಾನಿಕತೆಯು ಪಾರದರ್ಶಕತೆಯನ್ನು ಬೇಡುತ್ತದೆ. ವಿಜ್ಞಾನಿಗಳು ಛಲಬಿಡದೆ ಪಾರದರ್ಶಕವಾಗಿ ಉಳಿದಿರುವ ಕಾರಣಕ್ಕಾಗಿಯೇ ವೈಚಾರಿಕ ಚಿಂತನೆಗಳು ಸಮಾಜದಲ್ಲಿರಲು ಅವಕಾಶವಾಗಿರುವುದು. ಕೋಗ್ನ್‌ನ್ ಓರ್ವ ವಿಜ್ಞಾನಿಯಾಗಿ ವಿಜ್ಞಾನದ ಮೂಲ ತತ್ವವನ್ನೇ ಉಲ್ಲಂಘಿಸಿರುವುದು ಆಧುನಿಕ ಜಗತ್ತಿನ ಬದಲಾದ ನೈತಿಕ ಮಾನದಂಡಗಳ ಪ್ರತೀಕವಾಗಿದೆ.

Writer - ಸದಾನಂದ ಆರ್.

contributor

Editor - ಸದಾನಂದ ಆರ್.

contributor

Similar News

ಜಗದಗಲ
ಜಗ ದಗಲ