ರಾಜ್ಯ ಸರ್ಕಾರದ ಶಿಫಾರಸು ಅಂಗೀಕರಿಸುವಂತೆ ಶಾಗೆ ಮನವಿ ಸಲ್ಲಿಸಿದ ಶಿವಮೂರ್ತಿ ಶರಣರು

Update: 2018-03-28 06:14 GMT

ಬೆಂಗಳೂರು,ಮಾ.28 : ಸದ್ಯವೇ ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿ ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ವಿಚಾರ  ಬಿಜೆಪಿಗೆ ಮಾಡು ಇಲ್ಲವೇ ಮಡಿ  ಸನ್ನಿವೇಶ ಸೃಷ್ಟಿಸಿದೆ. ಕರ್ನಾಟಕದ ಕಾಂಗ್ರೆಸ್ ಸರಕಾರದ ತೀರ್ಮಾನವನ್ನು ಕೇಂದ್ರ ಒಪ್ಪಿಕೊಳ್ಳುವಂತೆ ನೋಡಿಕೊಳ್ಳಲು ರಾಜ್ಯದ ಪ್ರಭಾವಶಾಲಿ ಮಠಾಧೀಶರಾದ ಮುರುಘರಾಜೇಂದ್ರ ಮಠದ  ಶಿವಮೂರ್ತಿ ಮುರುಘ ಶರಣರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಮನವಿಯೊಂದನ್ನು ಸಮರ್ಪಿಸಿದ್ದಾರೆ.

ಕಳೆದ ಮೂರು ದಶಕಗಳಿಂದ ಬಿಜೆಪಿಯ ಕಟ್ಟಾ ಬೆಂಬಲಿಗರಾಗಿರುವ ಲಿಂಗಾಯತರು ಕರ್ನಾಟಕದ ಒಟ್ಟು 6.5 ಕೋಟಿ ಜನಸಂಖ್ಯೆ ಹಾಗು 4.96 ಕೋಟಿ ಮತದಾರರ ಪೈಕಿ ಶೇ. 14ರಷ್ಟಿದ್ದಾರೆ. ಈ ಸಮುದಾಯಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತಂತೆ ರಾಜ್ಯದ ಕಾಂಗ್ರೆಸ್ ಸರಕಾರ ಕೈಗೊಂಡ  ತೀರ್ಮಾನ ಲಿಂಗಾಯತರಿಗೆ ಸಮಾಧಾನ ಮೂಡಿಸಿದೆಯಾದರೂ ಇತರ ಹಿಂದುಳಿದ ವರ್ಗಕ್ಕೆ (ಕುರುಬ)  ಸೇರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮೂಲಕ  ಸಮುದಾಯವನ್ನು ಒಡೆಯುವ ಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆಪಾದಿಸುತ್ತಿದೆ.

ಮಧ್ಯ ಕರ್ನಾಟಕದ ಲಿಂಗಾಯತ ಪ್ರಾಬಲ್ಯದ ಪ್ರದೇಶಗಳಲ್ಲಿ ಮಂಗಳವಾರ ತಮ್ಮ ಪ್ರವಾಸದ ಎರಡನೇ ದಿನದಂದು ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ “ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಡ್ಡಿಯೂರಪ್ಪರನ್ನು ಗೌಣವಾಗಿಸುವ ಪ್ರಯತ್ನವನ್ನು ಕಾಂಗ್ರೆಸ್ ತನ್ನ ನಿರ್ಧಾರದಿಂದ ಮಾಡಿದೆ,'' ಎಂದಿದ್ದಾರೆ. ಯಡ್ಡಿಯೂರಪ್ಪ ಈಗಿರುವ ಸಂದಿಗ್ಧ ಪರಿಸ್ಥಿತಿಯತ್ತ ಇದು ಬೊಟ್ಟು ಮಾಡಿದೆ. ಸರಕಾರದ ತೀರ್ಮಾನವನ್ನು ಒಪ್ಪಿದ್ದೇ ಆದಲ್ಲಿ ಯಡ್ಡಿಯೂರಪ್ಪ ಅಲ್ಪಸಂಖ್ಯಾತ ಸಮುದಾಯದ ನಾಯಕರಾಗಿ ಬಿಡುತ್ತಾರಲ್ಲದೆ ಬಿಜೆಪಿಯ ಬಹುಸಂಖ್ಯಾತ ಪರ ನಿಲುವಿಗೂ ಇದು ತದ್ವಿರುದ್ಧವಾಗಲಿದೆ.

ಇದು ಸಾಲದೆಂಬಂತೆ ಮುರುಘರಾಜೇಂದ್ರ ಮಠದ ಸ್ವಾಮಿ ಶಾಗೆ ಸಲ್ಲಿಸಿದ ತಮ್ಮ ಮನವಿಯಲ್ಲಿ  “ರಾಜ್ಯ ಸರಕಾರ ತನ್ನ ಕೆಲಸ ಮಾಡಿದೆ. ಈಗ ನೀವು ನಿಮ್ಮ ಕೆಲಸ ಮಾಡಿ ನಮಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿ''ಎಂದು ಕೇಳಿಕೊಂಡಿದ್ದಾರೆ.

ರಾಜ್ಯ ಸರಕಾರವನ್ನು ಪ್ರಶಂಸಿಸುತ್ತಾ ಅಲ್ಪಸಂಖ್ಯಾತ ಸ್ಥಾನಮಾನ ಸಮುದಾಯದ ಯುವಕರಿಗೆ ಅನುಕೂಲಕರವಾಗಲಿದೆ ಎಂದಿದ್ದಾರೆ. ``ಇದು ಸಮುದಾಯವನ್ನು ಒಡೆಯುವಂತಹ ಕ್ರಮವಲ್ಲ, ಬದಲಾಗಿ ಈಗಾಗಲೇ ಹಲವಾರು ಉಪ ಪಂಗಡಗಳಿಂದಾಗಿ ಒಡೆದಿರುವ ಸಮುದಾಯವನ್ನು ಒಂದುಗೂಡಿಸಲಿದೆ,'' ಎಂದೂ ಅವರು ಹೇಳಿದ್ದಾರೆ.

ಬಿಜೆಪಿ ತನಗೆ ಹಿಂದುತ್ವ ಬೇಕೇ ಅಥವಾ ಲಿಂಗಾಯತರು ಬೇಕೇ ಎಂದು ತೀರ್ಮಾನಿಸಬೇಕಿದೆ ಎಂದು ಬಿಜೆಪಿಯ ಲಿಂಗಾಯತ ನಾಯಕರೊಬ್ಬರು 'ಇಕನಾಮಿಕ್ ಟೈಮ್ಸ್' ಗೆ ಪ್ರತಿಕ್ರಿಯಿಸಿದ್ದಾರೆ.

ಈ ಸಮಸ್ಯೆ ಸಾಲದೆಂಬಂತೆ ದಾವಣೆಗೆರೆಯಲ್ಲಿ ಸುದ್ದಿಗಾರರೊಡನೆ ಮಾತನಾಡಿದ  ಸಂದರ್ಭ ಅಮಿತ್ ಶಾ ಬಾಯ್ತಪ್ಪಿ  ``ಅತ್ಯಂತ ಭ್ರಷ್ಟ ಸರಕಾರಗಳ ನಡುವೆ ಸ್ಪರ್ಧೆ ಏರ್ಪಟ್ಟರೆ ಯಡ್ಡಿಯೂರಪ್ಪ ಸರಕಾರ ಗೆಲ್ಲುತ್ತದೆ,''ಎಂದು ಹೇಳುವ ಮೂಲಕ ಯಡ್ಡಿಯೂರಪ್ಪಗೆ ಮತ್ತಷ್ಟು ಮುಜುಗರ ಸೃಷ್ಟಿಸಿದರೂ ನಂತರ ಸಾವರಿಸಿಕೊಂಡು ತಮ್ಮ ತಪ್ಪನ್ನು ತಿದ್ದಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News