ಕೇಜ್ರಿವಾಲ್ ಎಂಬ ಜಟಿಲ ಒಗಟು

Update: 2018-03-28 18:36 GMT

ಒಂದು ವೇಳೆ ಪಕ್ಷವು ವಿವಿಧ ಹಂತದ ವೈವಿಧ್ಯವುಳ್ಳ ನಾಯಕತ್ವವನ್ನು ಬೆಳೆಸಿದ್ದರೆ ಪಕ್ಷಕ್ಕೆ ಈ ದುಃಸ್ಥಿತಿ ಬರುತ್ತಿರಲಿಲ್ಲ. ಭಾರತದ ಸಣ್ಣ ಪ್ರತಿರೂಪದಂತಿರುವ ದಿಲ್ಲಿಯಲ್ಲಿ ಆಪ್ ಪಕ್ಷ ಉತ್ತಮ ಫಲಿತಾಂಶಗಳನ್ನು ನೀಡಿದೆ ಎಂಬುದು ಬಡವರಿಗೆ ಮತ್ತು ಪಾರದರ್ಶಕತೆಗೆ ಬದ್ಧವಾಗಿರುವ ಒಂದು ವೇದಿಕೆಗೆ ಇರುವ ಸಾಧ್ಯತೆಯನ್ನು ಎತ್ತಿ ತೋರಿಸುತ್ತದೆ. ತಮ್ಮ ಮೇಲಿರುವ ಹೊರೆಯನ್ನು ಇಳಿಸಿಕೊಳ್ಳಲು ಕೇಜ್ರಿವಾಲ್‌ಒಂದು ವ್ಯಾವಹಾರಿಕ ದಾರಿಯನ್ನು ಕಂಡುಕೊಂಡಿರಬಹುದಾದರೂ ಅವರು ಕಳೆದುಕೊಂಡಿರುವ ಐತಿಹಾಸಿಕ ಕ್ಷಣಗಳನ್ನು ಮಾತ್ರ ಮತ್ತೆ ಗಳಿಸಿಕೊಳ್ಳಲಾರರು.

ಭಾರತದ ರಾಜಕೀಯ ರಂಗದಲ್ಲಿ ಆಮ್ ಆದ್ಮಿ ಪಕ್ಷವು (ಆಪ್) ಮಿಕ್ಕ ಪಕ್ಷಗಳಿಗಿಂತ ಎಷ್ಟು ಭಿನ್ನವೆಂಬುದಕ್ಕೆ ಅದರ ಅಂತರಿಕ ಬಿಕ್ಕಟ್ಟುಗಳು ಬಹಿರಂಗವಾಗಿ ಎಷ್ಟು ಬೆತ್ತಲುಗೊಳ್ಳುತ್ತವೆ ಎಂಬುದು ಕೂಡಾ ಉದಾಹರಣೆಯಾಗಿಬಿಡುತ್ತಿದೆ. ಒಂದು ಭ್ರಷ್ಟಾಚಾರ ವಿರೋಧಿ ನೆಲೆಯಿಂದ ಕಟ್ಟಲ್ಪಟ್ಟ, ವಿವಿಧ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಗಳುಳ್ಳ ಸಾವಿರಾರು ಸ್ವಯಂಸೇವಕ ಕಾರ್ಯಕರ್ತರಿಂದ ಪ್ರೇರೇಪಿಸಲ್ಪಟ್ಟ ಮತ್ತು ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳಿಗಿಂತ ಭಿನ್ನವಾದ ಮೂರನೇ ದಾರಿಯೊಂದರ ರಾಜಕೀಯ ಅನ್ವೇಷಣೆಯಲ್ಲಿದ್ದ ಈ ಪಕ್ಷವು ದಿಲ್ಲಿಯಲ್ಲಿ ಅಧಿಕಾರದ ಗದ್ದುಗೆಯನ್ನು ಹಿಡಿದ ನಂತರದಲ್ಲೂ ಚಳವಳಿಯ ಹವಾದಿಂದ ಹೊರಬಂದಿರಲಿಲ್ಲ. ಕಾಲಕಳೆದಂತೆ ಈ ಪಕ್ಷದಲ್ಲೂ ಸಾಧ್ಯವಿದ್ದಷ್ಟು ಅವಕಾಶವಾದಿಗಳು ಸೇರಿಕೊಂಡರು. ಆದರೆ ಈಗಲೂ ಆಮ್ ಆದ್ಮಿ ಪಕ್ಷವು ಒಂದು ಪರ್ಯಾಯ ರಾಜಕಾರಣದ ಪ್ರತೀಕವೆಂದು ಭಾವಿಸುವ ಹಲವಾರು ಕಾರ್ಯಕರ್ತರ ಉತ್ಸಾಹದಿಂದಲೇ ನಡೆಸಲ್ಪಡುತ್ತಿದೆ.
ಆದರೆ ದಿಲ್ಲಿಯ ಮುಖ್ಯಮಂತ್ರಿ ಕೇಜ್ರಿವಾಲ್, ತಾವು ಈ ಹಿಂದೆ ಯಾವ ರಾಜಕೀಯ ಎದುರಾಳಿಗಳ ಮೇಲೆ ಬಹಿರಂಗ ದಾಳಿ ನಡೆಸಿದ್ದರೋ ಅವರೆಲ್ಲರ ಬಳಿ ಬಹಿರಂಗವಾಗಿ ಕ್ಷಮೆ ಕೋರುವ ತೀರ್ಮಾನವನ್ನು ತೆಗೆದುಕೊಳ್ಳುವ ಮೂಲಕ ತನ್ನ ಬೆಂಬಲಿಗರಲ್ಲಿ ತೀವ್ರ ಅಸಮಾಧಾನವನ್ನು ಹುಟ್ಟುಹಾಕಿದ್ದಾರೆ. ಅವರು ಕುಖ್ಯಾತವಾದ ಮಾದಕ ವಸ್ತುಗಳ ವ್ಯಾಪಾರದಲ್ಲಿ ತೊಡಗಿದ್ದಾರೆಂದು ಆರೋಪ ಹೊರಿಸಿದ್ದ ಪಂಜಾಬಿನ ಶಿರೋಮಣಿ ಅಕಾಲಿ ದಳದ ನಾಯಕರಾದ ಬಿಕ್ರಂ ಸಿಂಗ್ ಮಜೀಥಿಯಾ ಅವರ ಬಳಿ ಮತ್ತು ಟೆಲಿಕಾಂ ಸಂಸ್ಥೆಯೊಂದರ ಪರವಾಗಿ ವಕಾಲತ್ತು ವಹಿಸಿದ್ದರಿಂದ ಹಿತಾಸಕ್ತಿಗಳ ಘರ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆಂದು ಆರೋಪ ಹೊರಿಸಿದ್ದ ಕಪಿಲ್ ಸಿಬಲ್ ಮತ್ತು ಅವರ ಮಗ ಅಮಿತ್‌ರ ಬಳಿ ಮತ್ತು ಭ್ರಷ್ಟಾಚಾರಿಗಳ ಪಟ್ಟಿಯಲ್ಲಿ ಕೇಂದ್ರ ಮಂತ್ರಿ ನಿತಿನ್ ಗಡ್ಕರಿಯವರ ಹೆಸರನ್ನು ಸೇರಿಸಿದ್ದಕ್ಕಾಗಿ ಗಡ್ಕರಿ ಅವರ ಬಳಿಯೂ ಕ್ಷಮೆಯಾಚಿಸಿದ್ದಾರೆ.
ಕೇಜ್ರಿವಾಲ್‌ರ ಈ ಕ್ಷಮಾಯಾಚನೆಗಳು ಆಪ್ ಬೆಂಬಲಿಗರಿಗೆ ಅದರಲ್ಲೂ 2017ರ ಚುನಾವಣೆಗಳಲ್ಲಿ ಮಾದಕ ವಸ್ತುಗಳ ಮಾರಾಟವನ್ನು ತಮ್ಮ ರಾಜಕೀಯ ಪ್ರಚಾರದ ಕೇಂದ್ರೀಯ ವಸ್ತುವನ್ನಾಗಿ ಮಾಡಿಕೊಂಡಿದ್ದ ಆಪ್ ಪಕ್ಷದ ಪಂಜಾಬ್ ಘಟಕಕ್ಕೆ ತೀವ್ರ ಭ್ರಮನಿರಸನವನ್ನುಂಟುಮಾಡಿದೆ. ಪಕ್ಷದ ಕೆಲವು ಪ್ರಮುಖ ಬೆಂಬಲಿಗರು ಇದರಿಂದಾಗಿ ಪಕ್ಷದಿಂದ ದೂರ ಉಳಿದಿದ್ದಾರೆ. ಆಪ್ ಪಕ್ಷದ ಮಾಜಿ ನಾಯಕಿ ಅಂಜಲಿ ದಮಾನಿಯಾ ಅವರು ಕೇಜ್ರಿವಾಲ್‌ರ ಈ ನಡೆಯಿಂದ ತಾನು ಮೋಸ ಹೋಗಿದ್ದೇನೆ ಎಂದು ಹೇಳಿದ್ದಾರೆ. ಕೇಜ್ರಿವಾಲ್‌ರು ಈ ರೀತಿ ಕ್ಷಮಾಯಾಚನೆ ಮಾಡುವ ಮೂಲಕ ಪಟ್ಟಭದ್ರ ಹಿತಾಸಕ್ತಿಗಳಿಗೆ ಶರಣಾಗಿದ್ದಾರೆ ಮತ್ತು ಇದರಿಂದ ಪಕ್ಷದ ಪ್ರತಿಷ್ಠೆಗೆ ಮತ್ತು ಭವಿಷ್ಯಕ್ಕೆ ದೊಡ್ಡ ಪೆಟ್ಟಾಗಿದೆ ಎಂಬುದು ಇವರೆಲ್ಲರ ಟೀಕೆಗಳ ಸಾರಾಂಶವಾಗಿದೆ.
ಆದರೂ ಕೇಜ್ರಿವಾಲ್‌ರ ಬೆಂಬಲಿಗರು ಅವರನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಾರೆ. ಅವರ ಪ್ರಕಾರ ತಮ್ಮಮೇಲೆ ಹೂಡಲಾಗಿರುವ ವಿವಿಧ ಮಾನನಷ್ಟ ಮೊಕದ್ದಮೆಗಳಿಗಾಗಿ ದೇಶಾದ್ಯಂತ ಓಡಾಡುತ್ತಾ ಸಮಯ ವ್ಯರ್ಥಗೊಳಿಸುವ ಬದಲಿಗೆ ಕೇಜ್ರಿವಾಲ್‌ರು ಆಡಳಿತದ ಮೇಲೆ ಗಮನಹರಿಸಲು ತೀರ್ಮಾನಿಸಿರುವುದರಿಂದಲೇ ಈ ಕ್ಷಮಾಯಾಚನೆಗಳನ್ನು ಮಾಡುತ್ತಿದ್ದಾರೆ. ಮಾನನಷ್ಟ ಮೊಕದ್ದಮೆಗಳು ಹೋರಾಟಗಾರರನ್ನು ನಿತ್ರಾಣಗೊಳಿಸುವ ಸಾಧನವೆಂದು ಅವರು ವಾದಿಸುತ್ತಾರೆ. ಅಂತಹ ಪ್ರಕರಣಗಳಲ್ಲಿ ಶಿಕ್ಷೆಯಾದಲ್ಲಿ ಹಲವಾರು ವರ್ಷಗಳ ಜೈಲು ಶಿಕ್ಷೆಯಾಗುವ ಸಂಭವವೂ ಇರುತ್ತದೆ. ಕೇಜ್ರಿವಾಲ್‌ರು ಪಕ್ಷದ ಅಮೂಲ್ಯ ಆಸ್ತಿಯಾಗಿರುವುದರಿಂದ ಈ ಹಂತದಲ್ಲಿ ಅಂಥದ್ದೇನಾದರೂ ಸಂಭವಿಸಿದರೆ ಪಕ್ಷಕ್ಕೆ ದೊಡ್ಡ ನಷ್ಟವಾಗುತ್ತದೆಂಬುದು ಅವರ ಅಭಿಪ್ರಾಯ. ತಂತ್ರೋಪಾಯಗಳು ಸಹ ವೀರಕೌಶಲ್ಯದ ಭಾಗವೆಂಬುದು ಅವರ ವಾದ.
ಈ ವಾದದಲ್ಲೂ ಒಂದಷ್ಟು ತಥ್ಯವಿದೆ. ಆಪ್ ಸರಕಾರವು ದಿಲ್ಲಿಯಲ್ಲಿ ಅಪಾರವಾದ ಒತ್ತಡವನ್ನು ಎದುರಿಸುತ್ತಿದೆ. ದಿಲ್ಲಿಯ ರಾಜ್ಯಪಾಲರು ಹಲವಾರು ಬಾರಿ ಕೇಜ್ರಿವಾಲ್‌ರ ಸರಕಾರದ ಹಲವು ನೀತಿತೀರ್ಮಾನಗಳನ್ನು ತಿರಸ್ಕರಿಸುವ ಮೂಲಕ ದಿಲ್ಲಿ ಸರಕಾರದ ಮೇಲಿನ ಅಂತಿಮ ಪರಮಾಧಿಕಾರ ತಮ್ಮದೇ ಹೊರತು ರಾಜ್ಯ ಸರಕಾರದ್ದಲ್ಲವೆಂಬುದನ್ನು ಹಲವಾರು ಬಾರಿ ಸ್ಪಷ್ಟಪಡಿಸಿದ್ದಾರೆ. ದಿಲ್ಲಿ ಸರಕಾರದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ವೃತ್ತಿಜೀವನದ ಮೇಲೆ ಕೇಂದ್ರ ಸರಕಾರಕ್ಕಿರುವಷ್ಟು ಅಧಿಕಾರ ದಿಲ್ಲಿ ಸರಕಾರಕ್ಕಿಲ್ಲ. ಇತ್ತೀಚಿನ ದಿನಗಳಲ್ಲಿ ಆಪ್ ಸರಕಾರವು ಅಧಿಕಾರಿಗಳಿಂದ ಅನುಭವಿಸಿದಷ್ಟು ಕಿರುಕುಳವನ್ನು ಯಾವ ವಿರೋಧಿ ಪಕ್ಷಗಳ ಸರಕಾರವೂ ಅನುಭವಿಸಿರಲಿಕ್ಕಿಲ್ಲ.
ಹೀಗಾಗಿ ದಿಲ್ಲಿಯಲ್ಲಿ ತನ್ನ ಪಕ್ಷದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದರ ಜೊತೆಗೆ ವಿದ್ಯುತ್ ದರಗಳ ಕಡಿತ, ದಿಲ್ಲಿಯ ಸರಕಾರಿ ಶಾಲೆಗಳಲ್ಲಿ ತಂದಿರುವ ಅಚ್ಚರಿಯ ಸುಧಾರಣೆಗಳು ಮತ್ತು ಮೊಹಲ್ಲ ಕ್ಲಿನಿಕ್‌ಗಳ ಯಶಸ್ವಿ ಕಾರ್ಯಾಚರಣೆಗಳಿಂದ ದಿಲ್ಲಿಯ ಬಡವರಿಂದ ತಾವು ಗಳಿಸಿರುವ ಬೆಂಬಲವನ್ನು ಕಾಪಾಡಿಕೊಂಡರೆ ಸಾಕೆಂಬ ತೀರ್ಮಾನಕ್ಕೆ ಪಕ್ಷವು ಬಂದಂತಿದೆ. ಆಗ ಅದರ ಕಾರ್ಯಕ್ಷೇತ್ರವು ಸೀಮಿತವಾಗಿ ಪರಿಣಾಮಕಾರಿ ಕೆಲಸಗಳು ಸಾಧ್ಯವಾಗಬಹುದು. ಇದಕ್ಕೆ ತದ್ವಿರುದ್ಧವಾಗಿ 2014ರಲ್ಲಿ ಅದು ದೇಶವ್ಯಾಪಿ ವಿಸ್ತರಿಸಿಕೊಳ್ಳಬೇಕೆಂಬ ಮಹದಾಶೆಯನ್ನು ಇಟ್ಟುಕೊಂಡಿತ್ತು. ಇದಲ್ಲದೆ ಕೇಜ್ರಿವಾಲ್‌ರ ಎದುರಿಗೆ ಇನ್ನೊಂದು ನಾಟಕೀಯ ಸಾಧ್ಯತೆಯೂ ತೆರೆದುಕೊಂಡಿದೆ. ಅವರು ತಮ್ಮ ಎದುರಾಳಿಗಳ ವಿರುದ್ಧ ತಮ್ಮ ದಾಳಿಗಳನ್ನು ಮುಂದುವರಿಸುತ್ತಾ, ಅದರ ಪರಿಣಾಮವಾಗಿ ಜೈಲು ಶಿಕ್ಷೆಯನ್ನೂ ಅನುಭವಿಸುತ್ತಾ ತಮ್ಮ ಅಧಿಕಾರವನ್ನು ಕಳೆದುಕೊಳ್ಳಬಹುದು. ಆದರೆ ಅದರಿಂದಾಗಿ ಮೊದಲೊಮ್ಮೆ ದಿಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದನ್ನು ಮನ್ನಿಸಿ ದಿಲ್ಲಿಯ ಜನತೆ ಎರಡನೇ ಬಾರಿ ವಿಶ್ವಾಸವಿಟ್ಟು ಕೊಟ್ಟ ಅಧಿಕಾರದ ಜವಾಬ್ದಾರಿಯನ್ನು ನಿರ್ವಹಿಸದ ಆರೋಪಕ್ಕೆ ಕೇಜ್ರಿವಾಲ್‌ರು ಗುರಿಯಾಗಬೇಕಾಗುತ್ತದೆ.
ಪಕ್ಷ ಇಂದಿನ ಸ್ಥಿತಿಗತಿಗಳಲ್ಲಿ ರಾಷ್ಟ್ರೀಯ ಪರಿಣಾಮಗಳನ್ನೂ ಸಹ ಕಡೆಗಣಿಸುವ ಪರಿಸ್ಥಿತಿಯಿಲ್ಲ. ಈ ಬಿಕ್ಕಟ್ಟು ಪಕ್ಷಕ್ಕೆ ಗಮನಾರ್ಹ ಬೆಂಬಲವಿರುವ ಮಹಾರಾಷ್ಟ್ರ ಮತ್ತು ಪಂಜಾಬಿನ ಕಾರ್ಯಕರ್ತರ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದೆ. ಸಾರ್ವತ್ರಿಕ ಚುನಾವಣೆಯು ಸಮೀಪವಾಗುತ್ತಿರುವ ಈ ಹೊತ್ತಿನಲ್ಲಿ ಆಪ್ ಪಕ್ಷದ ಧ್ವನಿಯು ಕ್ಷೀಣವಾದರೆ ವಿರೋಧ ಪಕ್ಷದ ಧ್ವನಿಯ ಒಟ್ಟು ಶಕ್ತಿಯೂ ಕುಗ್ಗಿದಂತಾಗುತ್ತದೆ. ದಿಲ್ಲಿಯ ಮೇಲಿನ ಅಧಿಕಾರ ಮತ್ತು ಜನಬೆಂಬಲವನ್ನು ದೃಢೀಕರಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ವಿಸ್ತರಣೆಯನ್ನು ಮಾಡಿಕೊಳ್ಳಬಹುದೆಂದು ಆಪ್ ನಾಯಕರು ಭಾವಿಸುತ್ತಿರಬಹುದು. ದಿಲ್ಲಿಯ ಬಡಜನರು ಬೆಂಬಲಿಸುತ್ತಿರುವ ಮಾತ್ರಕ್ಕೆ ದಿಲ್ಲಿ ಆಪ್ ಪರವಾಗಿಯೇ ಉಳಿಯುತ್ತದೆ ಎಂಬುದು ಖಾತರಿಯೇನಲ್ಲ.
ಈ ಬಿಕ್ಕಟು ಮುಂದಿಡುತ್ತಿರುವ ಅಸಲಿ ಪ್ರಶ್ನೆಯೇನೆಂದರೆ ಭವಿಷ್ಯದಲ್ಲಿ ಕೇಜ್ರಿವಾಲ್‌ರು ಎಂತಹ ರಾಜಕಾರಣಿಯಾಗಲಿದ್ದಾರೆಂಬುದಾಗಿದೆ. ಅವರು ರಾಜಕೀಯ ಪೈಪೋಟಿಯಲ್ಲಿರಬೇಕಾದ ರೋಷಾವೇಶಗಳಿಲ್ಲದ ಸೌಮ್ಯ ಪ್ರಚಾರಕರ್ತನಾಗುಳಿಯುವರೇ? ಆಗ ಅವರ ಸಂಘರ್ಷದ ತೋರಾವಳಿಗಳನ್ನು ನಂಬಿಕೊಂಡಿರುವ ಆಪ್ ಪಕ್ಷದ ಕಾರ್ಯಕರ್ತರುಗಳೇನು ಮಾಡುವರು? 2019ರ ಚುನಾವಣೆಯಲ್ಲಿ ದಿಲ್ಲಿಯನ್ನು ಗೆದ್ದುಕೊಳ್ಳುವ ತುರ್ತಿನಿಂದ ಮೊದಲಿನ ಸಂಘರ್ಷಪ್ರಿಯ ಕೇಜ್ರಿವಾಲ್ ರಂಗಕ್ಕೆ ಮರಳಬಹುದು. ಆದರೆ ಇದು ಕೇಜ್ರಿವಾಲ್‌ರ ವ್ಯಕ್ತಿತ್ವದ ಮೇಲೆ ಸಂಪೂರ್ಣವಾಗಿ ಆಧರಿಸಿರುವ ಆಪ್ ಪಕ್ಷದ ದೌರ್ಬಲ್ಯವನ್ನೂ ಎತ್ತಿತೋರಿಸುತ್ತದೆ. ವಿರೋಧಿಗಳು ಕೇಜ್ರಿವಾಲ್‌ರನ್ನು ನಿಯಂತ್ರಿಸಲು ಸಾಧ್ಯವಾಗಿಬಿಟ್ಟರೆ ಇಡೀ ಆಪ್ ಪಕ್ಷದ ಪರಿಣಾಮಕಾರಿತನವೇ ಪ್ರಶ್ನೆಗೊಳಗಾಗಿಬಿಡುತ್ತದೆ. ಒಂದೊಮ್ಮೆ ಕೇಜ್ರಿವಾಲ್‌ರ ಜೊತೆ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಉಳಿದುಕೊಂಡಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತೇ? ಒಂದು ವೇಳೆ ಪಕ್ಷವು ವಿವಿಧ ಹಂತದ ವೈವಿಧ್ಯತೆಯುಳ್ಳ ನಾಯಕತ್ವವನ್ನು ಬೆಳೆಸಿದ್ದರೆ ಪಕ್ಷಕ್ಕೆ ಈ ದುಃಸ್ಥಿತಿ ಬರುತ್ತಿರಲಿಲ್ಲ. ಭಾರತದ ಸಣ್ಣ ಪ್ರತಿರೂಪದಂತಿರುವ ದಿಲ್ಲಿಯಲ್ಲಿ ಆಪ್ ಪಕ್ಷ ಉತ್ತಮ ಫಲಿತಾಂಶಗಳನ್ನು ನೀಡಿದೆ ಎಂಬುದು ಬಡವರಿಗೆ ಮತ್ತು ಪಾರದರ್ಶಕತೆಗೆ ಬದ್ಧವಾಗಿರುವ ಒಂದು ವೇದಿಕೆಗೆ ಇರುವ ಸಾಧ್ಯತೆಯನ್ನು ಎತ್ತಿ ತೋರಿಸುತ್ತದೆ. ತಮ್ಮ ಮೇಲಿರುವ ಹೊರೆಯನ್ನು ಇಳಿಸಿಕೊಳ್ಳಲು ಕೇಜ್ರಿವಾಲ್‌ರು ಒಂದು ವ್ಯಾವಹಾರಿಕ ದಾರಿಯನ್ನು ಕಂಡುಕೊಂಡಿರಬಹುದಾದರೂ ಅವರು ಕಳೆದುಕೊಂಡಿರುವ ಐತಿಹಾಸಿಕ ಕ್ಷಣಗಳನ್ನು ಾತ್ರ ಮತ್ತೆ ಗಳಿಸಿಕೊಳ್ಳಲಾರರು.
ಕೃಪೆ: Economic and Political Weekly


Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News

ಜಗದಗಲ
ಜಗ ದಗಲ