ಚುನಾವಣಾ ಆಯೋಗ ಸರಕಾರದ ಒತ್ತಡದಲ್ಲಿದೆ

Update: 2018-03-29 13:26 GMT

ಮುಂಬೈ, ಮಾ.29: ಕರ್ನಾಟಕ ರಾಜ್ಯ ಚುನಾವಣೆಯ ಮತದಾನದ ದಿನಾಂಕ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ, ಪ್ರಜಾಪ್ರಭುತ್ವದ ಆಧಾರಸ್ತಂಭಗಳನ್ನು ಅಪವಿತ್ರಗೊಳಿಸಲಾಗುತ್ತಿದೆ ಎಂದು ಕಿಡಿಕಾರಿದೆ. ಚುನಾವಣಾ ಆಯೋಗವು ಸರಕಾರದ ಒತ್ತಡದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ ಸೇನೆ, ಆಯೋಗವು ಬಿಜೆಪಿಗೆ ಸರಿಹೊಂದುವಂತೆ ಕೆಲಸ ಮಾಡಲು ನಿರ್ಧರಿಸಿದೆಯೇ ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದೆ.

 ಚುನಾವಣಾ ಆಯೋಗವು ಕರ್ನಾಟಕದ ಚುನಾವಣಾ ದಿನಾಂಕವನ್ನು ಘೋಷಿಸುವುದಕ್ಕೂ ಮೊದಲೇ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವಿಯ ನಿಗದಿತ ದಿನಾಂಕಗಳನ್ನು ಟ್ವೀಟ್ ಮಾಡಿರುವ ಹಿನ್ನೆಲೆಯಲ್ಲಿ ಸೇನೆ ಈ ಹೇಳಿಕೆಯನ್ನು ನೀಡಿದೆ. ಚುನಾವಣಾ ಆಯೋಗವು ಪಕ್ಷಾತೀತವಾಗಿದೆ ಎಂದು ನಂಬಲಾಗುತ್ತಿತ್ತು. ಆದರೆ ವಾಸ್ತವದಲ್ಲಿ ಹಾಗಿಲ್ಲ. ಇದು ಕರ್ನಾಟಕದ ಚುನಾವಣೆಯ ಸಮಯದಲ್ಲಿ ಸಾಬೀತಾಗಿದೆ ಎಂದು ಸೇನೆ ತಿಳಿಸಿದೆ. ಆಯೋಗದ ಮಾಜಿ ಮುಖ್ಯಸ್ಥರಿಗೆ ರಾಜ್ಯಸಭಾ ಟಿಕೆಟ್‌ಗಳನ್ನು ನೀಡಲಾಗುತ್ತಿದೆ, ಮಂತ್ರಿಗಳನ್ನಾಗಿ ಮಾಡಲಾಗುತ್ತಿದೆ ಮತ್ತು ಉನ್ನತ ಹುದ್ದೆಗಳನ್ನು ನೀಡಲಾಗುತ್ತಿದೆ. ಇದು ಇವರೆಲ್ಲ ಪಕ್ಷಾತೀತರಾಗಿರಲಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಸೇನೆ ಆರೋಪಿಸಿದೆ.

ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಈಗಾಗಲೇ ಚುನಾವಣಾ ಆಯೋಗವು ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡಿದೆ. ಈಗ ಕರ್ನಾಟಕದಲ್ಲಿ ನಡೆದಿರುವ ಘಟನೆ ಆಯೋಗದ ಮೇಲೆ ಇದ್ದ ಅಲ್ಪಸ್ವಲ್ಪ ನಂಬಿಕೆಯನ್ನು ಕೂಡಾ ನಾಶ ಮಾಡಿದೆ ಎಂದು ಬಿಜೆಪಿಯ ಮಿತ್ರಪಕ್ಷವಾಗಿರುವ ಶಿವಸೇನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News