ಮಂಡ್ಯ: ಜಾನಪದ ಸಂಭ್ರಮ, ಅಭಿನಂದನಾ ಕಾರ್ಯಕ್ರಮ

Update: 2018-03-29 18:00 GMT

ಮಂಡ್ಯ, ಮಾ.29: ಜಾನಪದ ಸಾಹಿತ್ಯ ನೆಲದ ಸಂಸ್ಕೃತಿಯನ್ನು ಜೀವಂತವಾಗಿರಿಸಿದೆ. ಎಲ್ಲಾ ಸಾಹಿತ್ಯದ ಮೂಲ ಬೇರು ಜಾನಪದ ಹಾಡುಗಳಾಗಿವೆ ಎಂದು ಬಿಜೆಪಿ ನಗರಾಧ್ಯಕ್ಷ ಎಚ್.ಆರ್, ಅರವಿಂದ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಹರ್ಡೀಕರ್ ಭವನದಲ್ಲಿ ಸಿಂಧುಶ್ರೀ ಕಲಾ ಸಂಸ್ಥೆ ಗುರುವಾರ ಆಯೋಜಿಸಿದ್ದ ಜಾನಪದ ಸಿರಿ-ಸಂಭ್ರಮ-ಗೀತಗಾಯನ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಹಾಡುಗಳು ಮನುಷ್ಯನ ಜೀವನ ಮತ್ತು ಪರಿಸರದ ಸೊಗಡನ್ನು ಪ್ರತಿಬಿಂಬಿಸುವ ತಾಯ್ತತದ ಸಾಹಿತ್ಯ ಸಂಪತ್ತಾಗಿದೆ, ನೆಲ-ಜಲ, ಮನುಷ್ಯನ ಹಾವಭಾವ, ಪ್ರಕೃತಿಯ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ ಎಂದು ಅವರು ಹೇಳಿದರು.

ಮನಸಿನ ನೋವು ಮತ್ತು ಬೇಸರವನ್ನು ನೀಗಿಸಿ ಸುಜ್ಞಾನದ ಅರಳಿಸುವ ದಿವ್ಯೌಷಧವಾಗಿ ಜಾನಪದ ಹಾಡುಗಳು ಕಾರ್ಯನಿರ್ವಹಿಸುತ್ತವೆ. ಇಂತಹ ಜನಪದ ಹಾಡು, ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು.

ಕೃಷಿಕ ಲಯನ್ಸ್ ಸಂಸ್ಥೆ ಪ್ರಧಾನ ಪೋಷಕ ಕೆ.ಟಿ.ಹನುಮಂತು ಮಾತನಾಡಿ, ಪಾಶ್ಚಾತ್ಯ ರಾಷ್ಟ್ರಗಳಂತೆ ದೇಶದಲ್ಲಿ ಜಾನಪದ ಸಾಹಿತ್ಯವನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿ ಪೋಷಿಸಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಜಾನಪದ ಹಿರಿಯ ಕಲಾವಿದರನ್ನು ರಾಜ್ಯ ಸರಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎಂ.ಅಪ್ಪಾಜಪ್ಪ ಮತ್ತು ಗಣ್ಯರು ಅಭಿನಂದಿಸಿದರು.

ಗಾಯಕರಾದ ಜಿ.ಆರ್.ಗಂಗಾಧರ್, ಚಂದ್ರಶೇಖರ ಗೊರವಾಲೆ, ರಾಜು ಸಂತೆಕಸಲಗೆರೆ, ದೇವರಾಜು ಕೊಪ್ಪ ಮತ್ತಿತರರು ಜನಪದಗೀತೆ, ಭಾವಗೀತೆ, ಹೋರಾಟಗೀತೆ,ತತ್ವಪದ ಗೀತೆಗಳನ್ನು ಹಾಡಿ ಸಭಿಕರನ್ನು ರಂಜಿಸಿದರು. ಚಲನಚಿತ್ರ ಹಾಸ್ಯ ನಟ ಮಂಡ್ಯ ಸತ್ಯ ಮತ್ತು ಶಿವಣ್ಣ ಅವರು ಹಾಸ್ಯ-ಲಾಸ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಲೇಖಕ ಪ್ರೊ.ಜಿ,ಟಿ,ವೀರಪ್ಪ. ಸಂಸ್ಥೆಯ ಅಧ್ಯಕ್ಷ ಶಿವಣ್ಣ ಸಾದೊಳಲು, ಸೂನಗಹಳ್ಳಿ ಗ್ರಾಪಂ ಅಧ್ಯಕ್ಷ ನಾಗೇಂದ್ರ ಹೆಮ್ಮಿಗೆ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News