ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಎ.14 ರ ವರೆಗೆ ಅವಕಾಶ

Update: 2018-03-30 14:43 GMT

ಬೆಂಗಳೂರು, ಮಾ.30: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಲು 18 ವರ್ಷ ಮೇಲ್ಪಟ್ಟವರಿಗೆ ರಾಜ್ಯ ಚುನಾವಣಾ ಆಯೋಗವು ಮತ್ತೊಂದು ಅವಕಾಶ ನೀಡಿದ್ದು, ಎಪ್ರಿಲ್ 14ರವರೆಗೆ ಕಾಲಾವಕಾಶವನ್ನು ವಿಸ್ತರಣೆ ಮಾಡಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿದ್ದರೆ ಕೂಡಲೆ ಅರ್ಜಿ ನಮೂನೆ 6 ಅನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ಪಡೆದುಕೊಂಡು ಅದನ್ನು ಭರ್ತಿ ಮಾಡಿ ವಾರ್ಡ್ ಕಚೇರಿ, ಚುನಾವಣಾಧಿಕಾರಿಯ ಕಚೇರಿಗೆ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕಿದೆ.

ಎಪ್ರಿಲ್ 17ರಂದು ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಹೊರಬೀಳಲಿದ್ದು, ಎಪ್ರಿಲ್ 14ರ ನಂತರ ಮತದಾರರ ಅಂತಿಮ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಲಿದೆ. ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯೋ ಇಲ್ಲವೊ ಎಂಬುದನ್ನು ತಿಳಿದುಕೊಳ್ಳಲು ಮೊಬೈಲ್‌ನಲ್ಲಿ KAEPIC

EPIC Number ಟೈಪ್ ಮಾಡಿ 9731979899 ಸಂಖ್ಯೆಗೆ ಎಸ್‌ಎಂಎಸ್ ರವಾನಿಸಬೇಕು.

ಆನಂತರ, ನಿಮ್ಮ ಮೊಬೈಲ್‌ಗೆ ನಿಮ್ಮ ಮತಕ್ಷೇತ್ರ, ಮತಗಟ್ಟೆ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವ ಕ್ರಮ ಸಂಖ್ಯೆ ಸೇರಿದಂತೆ ಇನ್ನಿತರ ವಿವರಗಳನ್ನು ಒಳಗೊಂಡ ಮಾಹಿತಿಯು ಎಸ್‌ಎಂಎಸ್ ಮೂಲಕ ಲಭ್ಯವಾಗುತ್ತದೆ.

ಮತದಾರರ ಗುರುತಿನ ಚೀಟಿ ಇದ್ದ ಮಾತ್ರಕ್ಕೆ ಯಾರೂ ಮತ ಚಲಾಯಿಸಲು ಸಾಧ್ಯವಿಲ್ಲ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೆ ಇಲ್ಲವೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಈ ಮೇಲಿನ ಪದ್ಧತಿಯನ್ನು ಅನುಸರಿಸಬೇಕಿದೆ.

ಈಗ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದವರಿಗೆ ಗುರುತಿನ ಚೀಟಿ ಸದ್ಯಕ್ಕೆ ಲಭ್ಯವಾಗುವುದಿಲ್ಲ. ದಾಖಲೆಗಳು ಸಮರ್ಪಕವಾಗಿದ್ದರೆ ಮತದಾರರ ಪಟ್ಟಿಯಲ್ಲಿ ಹೆಸರು ಸೇಪರ್ಡೆಯಾಗುತ್ತದೆ. ಆನಂತರ, ಚುನಾವಣಾ ಆಯೋಗ ನಿಗದಿಪಡಿಸುವ ಪರ್ಯಾಯ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದಾಗಿದೆ.

2013ರ ವಿಧಾನಸಭಾ ಚುನಾವಣೆಯಲಿಲ್ಲ 7.18 ಲಕ್ಷ ಹೊಸ ಯುವ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು. ಅದೇರೀತಿ 2018ರ ಚುನಾವಣೆಗಾಗಿ 15.42 ಲಕ್ಷ ಹೊಸ ಯುವ ಮತಾರರು ನೋಂದಣಿಯಾಗಿದ್ದಾರೆ.

ರಾಜ್ಯದಲ್ಲಿ ಕಳೆದ 2013ನೆ ಸಾಲಿನ ವಿಧಾನಸಭಾ ಚುನಾವಣೆ ಸಮಯದಲ್ಲಿ ಒಟ್ಟು 4,36,85,739 ಮತದಾರರಿದ್ದರು. ಇದರಲ್ಲಿ 2,23,15,727 ಪುರುಷರು ಹಾಗೂ 2,13,67,912 ಮಹಿಳೆಯರು ಮತ್ತು 2100 ತೃತೀಯಲಿಂಗಿಗಳು ಮತದಾರರಿದ್ದರು. ಪ್ರಸ್ತುತ 2018ನೆ ಸಾಲಿನಲ್ಲಿ ಒಟ್ಟು 4,96,82,351 ಮತದಾರರಿದ್ದು, ಇದರಲ್ಲಿ 2,52,05,820 ಪುರುಷರು ಹಾಗೂ 2,44,71,979 ಮಹಿಳೆಯರು ಮತ್ತು 4552 ತೃತೀಯ ಲಿಂಗಿಗಳು ಒಳಗೊಂಡಿದ್ದಾರೆ. ಕಳೆದ ರಾಜ್ಯ ವಿಧಾನಸಭೆ ಚುನಾವಣೆಗೆ ಹೋಲಿಸಿದ್ದಲ್ಲಿ ಶೇ.9ಷ್ಟು ಮತದಾರರು ಹೆಚ್ಚಾಗಿದ್ದಾರೆ.

ಅರ್ಜಿ ನಮೂನೆ 6: ಹೊಸದಾಗಿ ಹೆಸರು ಸೇರಿಸಲು
ಅರ್ಜಿ ನಮೂನೆ 7: ಮತದಾರರ ಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆ ಸಲ್ಲಿಸಲು
ಅರ್ಜಿ ನಮೂನೆ 8: ಮತದಾರರ ಪಟ್ಟಿಯಲ್ಲಿನ ನ್ಯೂನತೆ ಸರಿಪಡಿಸಲು
ಅರ್ಜಿ ನಮೂನೆ 8 ಎ: ಮತದಾರರ ಪಟ್ಟಿಯಲ್ಲಿರುವ ಹೆಸರನ್ನು ಬೇರೆಡೆ ವರ್ಗಾಯಿಸಲು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News