ತೋರಿ ಕೋರಿ
ಭಾಗ-9
► ವಿಧ ವಿಧ ವರ್ತನೆಗಳು
ರೆಡ್ ಅಲರ್ಟ್
ಬೆಳೆಯುವ ಪೈರು ಅಂಕಣವನ್ನು ಬಿಡದೇ ಗಮನಿಸುತ್ತಿರುವ ಹಲವಾರು ಓದುಗರು ತಮ್ಮ ಮಕ್ಕಳ ಕುರಿತಾಗಿ ಕರೆಗಳನ್ನು ಮಾಡುತ್ತಾರೆ. ಆ ಒಂದೊಂದು ಕರೆಯೂ ಕೂಡಾ ತೀರಾ ಗಂಭೀರವಾದದ್ದು. ವ್ಯಕ್ತಿಗತವಾಗಿ ಅವರ ಮಕ್ಕಳ ವಿಷಯವನ್ನು ಚರ್ಚಿಸಲು ದೂರದೂರುಗಳಿಂದ ಬರುತ್ತಾರೆ. ಆದರೆ, ಅವರು ಎಷ್ಟೇ ವ್ಯಕ್ತಿಗತ ಅಥವಾ ಖಾಸಗಿ ಎಂದರೂ, ತಮ್ಮದೊಂದೇ ಮಗುವಿನ ಸಮಸ್ಯೆ ಎಂದರೂ ಅವು ಎಲ್ಲರದ್ದೇ ಆಗಿದೆ. ಈ ಅನುಭವದಲ್ಲಿ, ಸಮಾಲೋಚನೆಗಳಲ್ಲಿ ನಾನು ಕಂಡುಕೊಂಡಿರುವ ವಿಷಯವೇನೆಂದರೆ, ಬಹುಪಾಲು ಪೋಷಕರ ಸಾಮಾನ್ಯ ಸಮಸ್ಯೆಯೇ ಅದಾಗಿದೆ. ಮಕ್ಕಳ, ಅದರಲ್ಲೂ ಹದಿಹರೆಯದವರ ವಿಷಯಗಳಲ್ಲಿ ಇರುವ ಸಮಸ್ಯೆಯು ಇಷ್ಟು ಸಾಮಾನ್ಯವಾಗಿದೆ, ಇಷ್ಟರಮಟ್ಟಿಗೆ ಬಹುತೇಕ ಪೋಷಕರು ಹೆಣಗಾಡುತ್ತಿದ್ದಾರೆ ಎಂದರೆ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನಾವು ಮಕ್ಕಳ ಪಾಲನೆ, ಪೋಷಣೆ ಮತ್ತು ಶಿಕ್ಷಣದಲ್ಲಿ ಸಮಗ್ರವಾಗಿ ಎಡವಿದ್ದೇವೆಂದೇ ಅರ್ಥ. ಸಮಾಜದ ಮೂಲಘಟಕವಾದ ಕುಟುಂಬ ಮತ್ತು ಅದರ ವಿಸ್ತೃತರೂಪವಾದ ಸಮಾಜ; ಈ ಎರಡೂ ನೆಲೆಗಳಿಗೆ ಇದೊಂದು ಬಹಳ ಗಂಭೀರ ಸಮಸ್ಯೆ.
ನಮ್ಮ ದೇಶದಲ್ಲಿ ನಾನು ಗಮನಿಸಿದಂತೆ ಮಕ್ಕಳ ಸಮಸ್ಯೆಗಳನ್ನುಗಂಭೀರವಾಗಿ ಪರಿಗಣಿಸದೇ ಇರುವ ಮುಖ್ಯ ಕಾರಣವೆಂದರೆ ಮಗುವಿನ ಮನೋವಿಜ್ಞಾನದ ಬಗ್ಗೆ ಪೋಷಕರಿಗೆ ಸಾಧಾರಣ ತಿಳುವಳಿಕೆಯೂ ಇಲ್ಲದಿರುವುದು. ಮಕ್ಕಳು ತಮ್ಮ ಅಂಕೆ ಮತ್ತು ಅಧೀನದಲ್ಲಿರುವ ಕಾರಣದಿಂದ ತಾವೇ ಅವರ ಎಲ್ಲಾ ಆಗುಹೋಗುಗಳನ್ನು ನೋಡಿಕೊಳ್ಳುತ್ತೇವೆ ಎಂಬ ಮನೋಭಾವನೆ. ಮಕ್ಕಳನ್ನು ಗಂಭೀರವಾಗಿ ಪರಿಗಣಿಸದೇ ತೀರಾ ಲಘುವಾಗಿ ಅಥವಾ ಹುಡುಗಾಟದಿಂದ ಅಲಕ್ಷಿಸುವುದು. ಮಕ್ಕಳ ಆಟಕ್ಕೆ, ಪಾಟಕ್ಕೆ, ಊಟಕ್ಕೆ ಕೊರತೆಯಿಲ್ಲದಂತೆ ಒದಗಿಸಿಬಿಟ್ಟರೆ ಅಲ್ಲಿಗೆ ತಮ್ಮ ಜವಾಬ್ದಾರಿ ಮುಗಿಯಿತು ಎನ್ನುವ ಧೋರಣೆ.
ನನಗೆ ಮೆಚ್ಚು
ಮಗುವು ಮನೆಯಲ್ಲಿ ಅಪ್ಪನ ಆಶಯಗಳಿಗೆ ಮತ್ತು ಆದೇಶಗಳಿಗೆ ಪೂರಕವಾಗಿರುತ್ತದೆ, ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಅಥವಾ ಹೇಳಿದಂತೆ ಕೇಳುತ್ತದೆ. ಆದರೆ, ತಾಯಿ ಹೇಳುವುದನ್ನು ಕೇಳುವುದಿಲ್ಲ. ಅವಳ ಮಾತುಗಳಿಗೆ ಸದಾ ಎದುರಾಡುತ್ತಿರುತ್ತದೆ. ವಿರೋಧಿಯಾಗಿರುತ್ತದೆ. ಜಗಳವಾಡುತ್ತಿರುತ್ತದೆ. ಆಗ ಅದು ತಾಯಿಯೊಬ್ಬಳ ಸಮಸ್ಯೆ ಮಾತ್ರವಲ್ಲ. ಮನೆಯ ಸಣ್ಣ ಮತ್ತು ಹಿರಿಯ ಸದಸ್ಯರವರೆಗೂ ಎಲ್ಲರೂ ಸೇರಿ ಕುಟುಂಬವೆಂಬ ಸಂಬಂಧದ ಸೌಹಾರ್ದದ ವಾತಾವರಣ ನಿರ್ಮಾಣ ಮಾಡುವುದರಿಂದ ವ್ಯಕ್ತಿಗತವಾಗಿ ಒಂದು ವ್ಯಕ್ತಿಯಿಂದ ಮತ್ತೊಂದು ವ್ಯಕ್ತಿಗೆ ಮನಸ್ತಾಪಗಳು, ಸಂಘರ್ಷಗಳು ಇದ್ದಾಗ ಇಡೀ ಕುಟುಂಬದ ಸೌಹಾರ್ದಭಾವಕ್ಕೆ ಧಕ್ಕೆಯಾಗುತ್ತದೆ. ಆದರೆ ಬಹಳಷ್ಟು ಮಂದಿಗೆ ಇದು ಅರ್ಥವಾಗುವುದಿಲ್ಲ. ‘‘ಇದು ಅವರ ಸಮಸ್ಯೆ’’ ಎಂದಿರುತ್ತಾರೆ. ಇನ್ನೂ ಕೆಲವರು ಅದರಲ್ಲಿ ಹೆಮ್ಮೆಪಟ್ಟುಕೊಳ್ಳುತ್ತಿರುತ್ತಾರೆ. ‘‘ಮಗುವು ನಿನ್ನ ಮಾತನ್ನು ಕೇಳುವುದಿಲ್ಲ. ನನ್ನ ಮಾತನ್ನು ಕೇಳುತ್ತದೆ. ಮಗುವಿಗೆ ಅವರನ್ನು ಕಂಡರೆ ಆಗುವುದಿಲ್ಲ. ನನ್ನ ಕಂಡರೆ ಇಷ್ಟ’’. ಈ ರೀತಿಯಾಗಿ ತಮ್ಮ ಕಡೆಗೆ ವಿಶೇಷ ಒಲವನ್ನು ತೋರಿಸುವ ಮಗುವನ್ನು ಮತ್ತಷ್ಟು ಇಷ್ಟಪಡುತ್ತಾ, ತನ್ನೊಂದಿಗೆ ಇಲ್ಲದಿರುವ ರಗಳೆ ಮತ್ತು ಸಮಸ್ಯೆ ನಿನ್ನೊಂದಿಗೆ ಇದೆ ಎಂದರೆ, ನಿನ್ನದೇ ಸಮಸ್ಯೆ ಎಂದು ಅವರನ್ನು ಕೀಳರಿಮೆ ತಳ್ಳುವಂತಹ ಸಂದರ್ಭಗಳು ಉಂಟಾಗುತ್ತವೆ.
ಮಗಳ ಮಾತನ್ನು ಕೇಳುವ ಅಪ್ಪಂದಿರು ಹೆಮ್ಮೆಯಲ್ಲಿ, ತಮ್ಮ ಮಗಳ ಮೇಲಿನ ಅಭಿಮಾನದಲ್ಲಿ ತಾಯಿಗೇ ಬುದ್ಧಿ ಹೇಳುವ, ಅವಳಿಗೇ ಆಡುವ ಹಂಗಿಸುವ ಕೆಲಸಗಳಾಗುತ್ತಿದ್ದರೆ, ತಾಯಿ ತನ್ನ ಹಚ್ಚಿಕೊಂಡಿರುವ, ಮೆಚ್ಚಿಕೊಂಡಿರುವ, ನೆಚ್ಚಿಕೊಂಡಿರುವ ಮಗನ ಪರವನ್ನು ವಹಿಸುತ್ತಾ, ಅವನು ಮಾತಾಡಲು ಹಿಂಜರಿಯುವ ಅಥವಾ ವಿರೋಧಿಸುವ ತಂದೆಯನ್ನು ದೂರುತ್ತಾಳೆ. ಇಲ್ಲಿಗೆ ಕುಟುಂಬದಲ್ಲಿ ಶಾಶ್ವತ ಸಂಘರ್ಷಕ್ಕೆ ಎಡೆ ಮಾಡಿದಂತಾಯ್ತು. ಯಾವುದೇ ಕುಟುಂಬದಲ್ಲಿ ಇಬ್ಬರ ನಡುವಿನ ಸಮಸ್ಯೆ ಅಥವಾ ಸಂಘರ್ಷವೆಂದರೆ ಅದು ಅವರಿಬ್ಬರದು ಮಾತ್ರವೇ ಅಲ್ಲ. ಅದು ಇಡೀ ಕುಟುಂಬದ ಸಮಸ್ಯೆಯೇ. ಇಡೀ ಕುಟುಂಬದ ಇತರ ಸದಸ್ಯರು ಅವರಿಬ್ಬರ ಸಮಸ್ಯೆಯ ಕಡೆಗೆ ಗಮನ ಕೊಡಲೇ ಬೇಕು. ಆದರೆ ಕೌಟುಂಬಿಕ ಸಾಮರಸ್ಯದ ತಳಪಾಯ ಗಟ್ಟಿಯಾಗುವುದು. ತಮ್ಮಿಡನೆ ಮಾತ್ರವೇ ಚೆನ್ನಾಗಿದ್ದಾರೆ, ಇತರರೊಂದಿಗೆ ಚೆನ್ನಾಗಿಲ್ಲ ಎಂದು ಹೆಮ್ಮೆಯಿಂದ ಇತರರೊಂದಿಗಿನ ಸಂಬಂಧವನ್ನು ಉದಾಸೀನ ಮಾಡಿದ್ದೇ ಆದಲ್ಲಿ ಇಂದಲ್ಲ ನಾಳೆ ಆ ಕುಟುಂಬದ ಸೌಹಾರ್ದದ ವಾತಾವರಣ ಖಂಡಿತ ಕುಸಿದುಬೀಳುತ್ತದೆ. ಇದೇ ಸಮಾಜಕ್ಕೂ ಅನ್ವಯಿಸುತ್ತದೆ. ಸಮಾಜದ ಆತಂಕಗಳು, ಸಂಘರ್ಷಗಳು ಮತ್ತು ವೈಫಲ್ಯಗಳ ಮೂಲ ಕೌಟುಂಬಿಕ ಸಮಸ್ಯೆಗಳಲ್ಲಿದೆ.
ಸವಕಲು ವಿಧಾನ ಹೊಸತಿಗೆ
ಮಕ್ಕಳು ಏನೇ ತಪ್ಪು ಮಾಡಿದರೂ, ಅಥವಾ ಏನನ್ನೇ ಹೇಳಿಕೊಡುವಂತಿದ್ದರೂ ಜೀವನ ಪರ್ಯಂತ ಎನ್ನುವಂತೆ ಬೋಧಿಸುವುದು ಬಹಳ ಹಳೆಯ ಮತ್ತು ಸವಕಲು ವಿಧಾನ. ಅಲ್ಲದೇ ಹೀಗೆ ಆಡಬಾರದು, ಮಾಡಬಾರದು, ಇಂತದ್ದು ಕೇಳಬಾರದು, ಹೀಗೆ ಹೇಳಬಾರದು ಎಂದು ಇಡೀ ಜೀವನ ಪೂರ್ತಿ ಅನುಸರಿಸಬೇಕೆನ್ನುವಂತೆ ಬೋಧಿಸುವುದು ಅತ್ಯಂತ ಹಳೆಯ ವಿಧಾನ. ಆ ಹೊತ್ತಿಗೆ, ಆ ಸಮಯಕ್ಕೆ, ಆ ಕೆಲಸಕ್ಕೆ ಬೇಕಾದ ಸೂಚನೆಗಳನ್ನು ಪರಿಣಾಮಕಾರಿಯಾಗಿ ಹೇಳುವುದು ಹೊಸ ಮತ್ತು ವೈಜ್ಞಾನಿಕ ವಿಧಾನ. ಯಾವತ್ತೂ ಸುಳ್ಳು ಹೇಳಬಾರದು, ಎಂದಿಗೂ ಕದಿಯಬಾರದು; ಹೀಗೆ ಜೀವನಪೂರ್ತಿ ನಡೆದುಕೊಳ್ಳಲು ರೀತಿ ನೀತಿಗಳನ್ನು ಬೋಧಿಸಬಾರದು. ಆ ಹೊತ್ತಿಗೆ, ಆ ಒಂದು ವಿಷಯಕ್ಕೆ ಮಾತ್ರವೇ ಅವರಿಗೆ ತಿಳಿ ಹೇಳಬೇಕು. ಬೋಧನೆ ಮಾಡುವುದಕ್ಕಿಂತ ಒಂದು ತಂತ್ರದ (ಟೆಕ್ನಿಕ್) ರೀತಿಯಲ್ಲಿ ಹೇಳಿಕೊಡಬೇಕು.
ಉದಾಹರಣೆಗೆ; ನಮ್ಮ ಸ್ನೇಹಿತರ ಮಗುವೊಂದು ವಸ್ತುಗಳನ್ನು ಬೇಕೆಂದು ಹಟ ಹಿಡಿಯುವುದರಲ್ಲಿ ಬಹಳ ಮುಂದು. ಕೇಳುವ ವಸ್ತುವನ್ನು ಆಮೇಲೆ ಕೊಡಿಸುತ್ತೇವೆ ಎಂದೋ ಅಥವಾ ಇನ್ನೊಮ್ಮೆ ಕೊಡಿಸುತ್ತೇವೆ ಅಥವಾ ಈಗ ಬೇಡ ಎಂದು ಯಾವುದೇ ರೀತಿಯಲ್ಲಿ ನಕಾರಾತ್ಮಕವಾಗಿ ಹೇಳಿದರೆ ಜೋರಾಗಿ ಬೊಬ್ಬೆ ಹೊಡೆಯುತ್ತಾ, ಕೈ ಕಾಲು ಬಡಿದುಕೊಂಡು ಅಳುತ್ತಾ ನೆಲದ ಮೇಲೆ ಹೊರಳಾಡುತ್ತಿದ್ದ. ಅದು ಸಣ್ಣವನಿದ್ದಾಗ, ಈಗ ಸ್ಪಲ್ಪ ಬೆಳೆದಿದ್ದಾನೆ. ಎರಡನೆಯ ಅಥವಾ ಮೂರನೆಯ ತರಗತಿಗೆ ಹೋಗುವ ವಯಸ್ಸು. ಈಗಲೂ ಅಷ್ಟು ಪ್ರಮಾಣದಲ್ಲಿ ಇಲ್ಲವಾದರೂ, ಹಟ ಹಿಡಿಯುವುದಂತೂ ತಪ್ಪಿಲ್ಲ. ಅಳುವುದು, ಚಂಡಿ ಹಿಡಿಯುವುದು ಚೂರೂ ಕಡಿಮೆಯಾಗಿಲ್ಲ. ಅವನಿಗೆ ಈ ಒಂದು ತಂತ್ರವನ್ನು ಉಪಯೋಗಿಸಲಾಯಿತು. ನಿನಗೆ ಬೇಕಾದ ವಸ್ತುವನ್ನು ನೀಟಾಗಿ ಬರೆದುಕೊಡು. ನಾನು ಚೀಟಿಯನ್ನು ಜೇಬಿನಲ್ಲಿಟ್ಟುಕೊಂಡು ನಿನಗೆ ಬರುವಾಗ ತರುತ್ತೇನೆ. ಈಗ ಆ ಹುಡುಗ ಚೀಟಿಯಲ್ಲಿ ಬರೆಯುತ್ತಾನೆ. ಬರೆಯಲು ಅವನಿಗೆ ಸಮಸ್ಯೆಯಾದರೆ ಅಪ್ಪನ ಅಥವಾ ಅಮ್ಮನ ಸಹಾಯ ಪಡೆಯುತ್ತಾನೆ. ನಾನೊಮ್ಮೆ ಸೂಚಿಸಿದೆ. ನಿನಗೆ ಏತಕ್ಕೆ ಅದು ಬೇಕೆಂದು ಬರೆಯುತ್ತೀಯಾ ಎಂದು. ಅವನಿಗೆ ಬರೆಯಲು ಬರಲಿಲ್ಲ. ಆ ಸಣ್ಣ ಹುಡುಗನಿಗೆ ಜಾಸ್ತಿಯಾಯಿತು ಎಂದುಕೊಂಡು ಸುಮ್ಮನಾದೆ. ಆದರೆ ಕೆಲವು ದಿನಗಳ ನನ್ನ ಸ್ನೇಹಿತ ನೀಡಿದ ವರದಿಯ ಪ್ರಕಾರ, ಆ ಹುಡುಗ ಈಗ ವಸ್ತುವಿನ ಹೆಸರನ್ನು ಬರೆಯುವುದರ ಜೊತೆಗೆ ಅದರ ಚಿತ್ರವನ್ನೂ ಕೂಡ ಬರೆದಿದ್ದನಂತೆ. ಜೊತೆಗೆ ಅದು ತನಗೆ ಏಕೆ ಬೇಕೆಂದು ಕೂಡ ಒಂದು ಸಾಲಿನಲ್ಲಿ ಬರೆದಿದ್ದನಂತೆ. ಹಟ ಮಾಡಬೇಡ. ಯಾವತ್ತೂ ಹಟ ಮಾಡಬಾರದು. ನೀನು ಹಟ ಮಾಡಿದರೆ ನಾನು ಏನೂ ಕೊಡಿಸುವುದಿಲ್ಲ, ಹಟ ಮಾಡಿದರೆ ಎರಡು ಬೀಳತ್ತೆ; ಈ ಯಾವ ಮಾತುಗಳೂ ಮಗುವಿಗೆ ನಗಣ್ಯ. ಮೊದಲನೆಯದಾಗಿ ಹಟ ಎಂದರೇನೆಂದೇ ಅದಕ್ಕೆ ತಿಳಿಯದು. ಇನ್ನೊಂದು ತಂತ್ರವೆಂದರೆ, ಮಗುವು ಯಾವುದೇ ವಸ್ತುವನ್ನು ಬೇಕೆಂದು ಹಟ ಹಿಡಿದರೂ, ಅದು ಯಾಕೆ ಬೇಕು ಎಂದು ಕೇಳಬಾರದು. ಬದಲಿಗೆ, ಅದನ್ನು ತಂದಾದ ಮೇಲೆ ಏನು ಮಾಡುತ್ತೀಯಾ? ಹೇಗೆ ಆಡುತ್ತೀಯಾ ಎಂದೇ ಕೇಳಬೇಕು. ಮಗುವು ತಾನು ಅದನ್ನು ಉಪಯೋಗಿಸುವ ಸಾಧ್ಯತೆಗಳ ಬಗ್ಗೆ ಹೇಳುತ್ತದೆ. ಆಗ ಅದಕ್ಕೆ ಹಿರಿಯರೂ ಕೂಡ ತಮ್ಮ ಆಲೋಚನೆಯನ್ನು ವಿಶ್ಲೇಷಣೆಯನ್ನುಸೇರಿಸಬಹುದು. ಮತ್ತೊಂದು ತಂತ್ರವೆಂದರೆ, ಮಗುವು ಬೇಕೆಂದು ಒತ್ತಾಯ ಪೂರ್ವಕವಾಗಿ ಕೇಳುವ ವಸ್ತುವಾಗಲಿ, ಅಥವಾ ಸಾಧಾರಣವಾಗಿ ಒಂದು ವಸ್ತುವಿನ ಬಗ್ಗೆ ಮಗುವಿಗೆ ಏಕೆ ಇಷ್ಟ ಎಂದು ಕೇಳಬೇಕು. ಅದು ಆ ವಸ್ತುವನ್ನು ಇಷ್ಟಪಡಲು ಕಾರಣಗಳನ್ನು ಕೇಳಬೇಕು. ಆಗ ಮಗುವು ವಸ್ತುವನ್ನು ಪ್ರಶಂಸಿಸುವುದರ ಜೊತೆಗೆ, ಅದರ ಉಪಯೋಗಗಳ ಸಾಧ್ಯತೆಗಳನ್ನು ಕೂಡಾ ಮುಂದಿಡುತ್ತಾ ಹೋಗುತ್ತದೆ. ಇದರಲ್ಲಿ ಮುಖ್ಯವಾಗಿ ಮಗುವಿನ ಮನಸ್ಥಿತಿ ಅರ್ಥವಾಗುತ್ತದೆ. ಹಟ ಮಾಡುವುದು ಕೂಡಾ ಒಂದು ಬಗೆಯ ಶಕ್ತಿಯ ವ್ಯಯವೇ. ಆದರೆ, ಅದನ್ನು ಕೌಶಲ್ಯವಾಗಿ ಬಳಸುವುದನ್ನು ಹೇಳಿಕೊಟ್ಟಲ್ಲಿ, ಹಟದ ಶಕ್ತಿಯ ಸ್ವರೂಪವು ರೂಪಾಂತರಗೊಂಡು ರಚನಾತ್ಮಕವಾಗಿ ಮತ್ತು ಸಕಾರಾತ್ಮಕವಾಗಿ ಅನಾವರಣಗೊಳ್ಳುತ್ತದೆ. ಮಗುವಿಗೆ ಯಾವುದೇ ರೀತಿಯ ಬೋಧನೆ ಮಾಡುವ ಅಗತ್ಯ ಬಂದಾಗ ಕೂಡಲೇ ಅದನ್ನು ಕೌಶಲ್ಯವಾಗಿ ಪರಿವರ್ತಿಸುವ ಬಗೆಯನ್ನು ಪೋಷಕರು ಕಲಿತುಕೊಳ್ಳಬೇಕು. ಆಗ ಮಕ್ಕಳು ಅದನ್ನು ರೂಢಿಗೊಳಿಸಿಕೊಳ್ಳುವರು. ಒಂದೊಂದು ವಿಷಯವನ್ನು ಒಂದೊಂದು ರೀತಿಯಲ್ಲಿ ನಿಬಾಯಿಸಬೇಕಾಗಿರುವುದರಿಂದ, ಕೆಲಸ ಮಾಡಲು ಸಿದ್ಧ ಸೂತ್ರಗಳನ್ನು ಹೇಳಿಕೊಡುವುದಕ್ಕಿಂತ ಕೆಲಸಗಳನ್ನು ಮಾಡುವಂತಹ, ವಿಚಾರ ಮಾಡುವಂತಹ ಮನಸ್ಸನ್ನು ಸಿದ್ಧಗೊಳಿಸಬೇಕು. ಇದು ಮಕ್ಕಳ ಬೆಳವಣಿಗೆಯಲ್ಲಿ ಬಹಳ ಮಹತ್ತರವಾದಂತಹ ಪರಿಣಾಮಕಾರಿಯಾದ ವಿಷಯವಾಗಿರುತ್ತದೆ. ಹಾಗೆಯೇ ಇದಕ್ಕೂ ಸಿದ್ಧಸೂತ್ರವಿಲ್ಲ. ಕೆಲವು ಸರಳವಾದ ಮಗುವಿನ ಮನೋವೈಜ್ಞಾನಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಿರಿಯರು ಪ್ರತಿಸಲವೂ ಯೋಜಿಸಬೇಕು. ಅದಕ್ಕೇ ಪದೇಪದೇ ಪುನರುಚ್ಚರಿಸುವುದು ಮಕ್ಕಳ ಪೋಷಣೆ ಮಕ್ಕಳಾಟವಲ್ಲ ಎಂದು.
ಬಯಸುವುದನ್ನು ಮಾಡಬೇಕು
ನಾವು ಮಕ್ಕಳಿಂದ ಏನನ್ನು ಬಯಸುತ್ತೇಮೋ ಅದನ್ನು ನಾವು ಅವರಿಗೆ ಮೊದಲು ಮಾಡಿ ನಾವು ಹೇಳುವುದರ ಅನುಭವದ ವಾತಾವರಣವನ್ನು ಅವರಿಗೆ ನಿರ್ಮಿಸಿ ಕೊಡಬೇಕು. ಉದಾಹರಣೆಗೆ, ಹೇಳಿದ ಮಾತು ಕೇಳು, ಎಂದು ಹೇಳುವ ಬದಲು ಮೊದಲು ಅವರು ಹೇಳುವ ಮಾತನ್ನೆಲ್ಲಾ ಕೇಳುವ ತಾಳ್ಮೆಯನ್ನು ಮತ್ತು ವಿಧಾನವನ್ನು ಅವರಿಗೆ ಪ್ರದರ್ಶಿಸಬೇಕು. ಅವರು ಹೇಳುವುದೆಲ್ಲಾ ಪೂರ್ತಿ ಆದಮೇಲೆ ತಾವೇನು ಹೇಳಬೇಕು ಎಂದಿರುತ್ತದೆಯೋ ಅದನ್ನು ಹೇಳಬೇಕು. ಹೀಗೆ, ಒಂದು ತಂದೆ ತನ್ನ ಮಗನೊಂದಿಗೆ ವಾಗ್ವಾದ ನಡೆಸಿದ್ದ. ಮಗ ಏನನ್ನೇ ಹೇಳಲು ಹೋದರೂ ತಂದೆ ಬಿಡುತ್ತಿರಲಿಲ್ಲ. ನಾನು ತಂದೆಯೊಂದಿಗೆ ಹೇಳಿದೆ, ಅವನು ಏನು ಹೇಳುತ್ತಾನೋ ಒಮ್ಮೆ ಕೇಳೋಣ ಎಂದು. ಅದಕ್ಕೆ ಆ ತಂದೆಯು ಹೇಳಿದ್ದೇನೆಂದರೆ, ‘‘ಅವನೇನು ಹೇಳ್ತಾನೆ ಎಂದು ನನಗೆ ಗೊತ್ತು. ನನಗೂ ಕೇಳಿ ಕೇಳಿ ಸಾಕಾಗಿದೆ. ಮೊದಲಾಗಿ ನಾನೇಕೆ ಅವನ ಮಾತು ಕೇಳಬೇಕು? ನಾನು ಅವನಿಗಿಂತ ಹಿರಿಯ, ಅವನಪ್ಪ. ಅವನು ನನ್ನ ಮಾತನ್ನು ಬಾಯ್ಮುಚ್ಚಿಕೊಂಡು ಕೇಳಬೇಕು’’.
ನಾನು ಹುಡುಗನಿಗೆ ಹೇಳಿದೆ. ‘‘ಹೋಗಲಿ, ನೀನೇ ಸುಮ್ಮನಿದ್ದು. ಅವರ ಮಾತೆಲ್ಲಾ ಮುಗಿದ ಮೇಲೆ ಮಾತಾಡು’’. ಹುಡುಗ ಸುಮ್ಮನಾದ. ಅಪ್ಪ ಹೇಳುವುದನ್ನೆಲ್ಲಾ ಹೇಳಿದ. ಒಂದು ಹಂತಕ್ಕೆ ಮುಗಿಸಿದ. ಈಗ ಹುಡುಗನಿಗೆ ಹೇಳು ಎಂದೆ. ಆದರೆ, ಅಪ್ಪ, ‘‘ಅವನೇನು ಹೇಳುವುದು?’’ ಎಂದು ಅಲ್ಲಿಂದ ಹೊರಟೇ ಹೋದ. ಆಗ ಆ ಹುಡುಗ ಹೇಳಿದ, ‘‘ನಂಗೊತ್ತಿತ್ತು ಸರ್ ಇದೇ ಆಗೋದು ಅಂತ. ಅವರು ನಾವು ಹೇಳುವುದನ್ನು ಕೇಳೋದಿಕ್ಕೆ ರೆಡಿ ಇರೋದಿಲ್ಲ. ನಾವು ಮಾತ್ರ ಯಾವಾಗ್ಲೂ ರೆಡಿಯಾಗಿರಬೇಕು. ಇದೆಂಗಾಗತ್ತೆ ಸರ್?’’ ಇಂತಹ ಸಮಯದಲ್ಲಿ ಸಮಾಲೋಚಕರ ಬಾಯಿ ಸದ್ಯಕ್ಕೆ ಕಟ್ಟಿ ಹಾಕಿದಂತಾಗುತ್ತದೆ. ಸಮಾಲೋಚಕರ ಕೆಲಸ ಬೋಧನೆಗಳನ್ನು ಮಾಡುವುದಲ್ಲ. ಪ್ರವಚನ ನೀಡುವುದಲ್ಲ. ಮೊದಲು ಕೇಳುವುದು. ವಿಷಯವನ್ನು ಅವರಿಗೇ ಅರಿವು ಮಾಡಿಸುವುದು. ಎಲ್ಲಾ ಪೋಷಕರಿಗೂ ನಾನು ಯಾವಾಗಲೂ ಹೇಳುವು ದಿಷ್ಟೇ. ತೋರದಿರುವ ಗುಣವನ್ನು ಅವರಿಂದ ಕೋರಬೇಡಿ. ಇದೊಂದು ಸಾಮಾಜಿಕ ಅಪರಾಧ. ಸಂಬಂಧ ಘಾತಕ.
ಯಾವುದೇ ಕುಟುಂಬದಲ್ಲಿ ಇಬ್ಬರ ನಡುವಿನ ಸಮಸ್ಯೆ ಅಥವಾ ಸಂಘರ್ಷವೆಂದರೆ ಅದು ಅವರಿಬ್ಬರದು ಮಾತ್ರವೇ ಅಲ್ಲ. ಅದು ಇಡೀ ಕುಟುಂಬದ ಸಮಸ್ಯೆಯೇ. ಇಡೀ ಕುಟುಂಬದ ಇತರ ಸದಸ್ಯರು ಅವರಿಬ್ಬರ ಸಮಸ್ಯೆಯ ಕಡೆಗೆ ಗಮನ ಕೊಡಲೇ ಬೇಕು. ಆದರೆ ಕೌಟುಂಬಿಕ ಸಾಮರಸ್ಯದ ತಳಪಾಯ ಗಟ್ಟಿಯಾಗುವುದು. ತಮ್ಮಿಡನೆ ಮಾತ್ರವೇ ಚೆನ್ನಾಗಿದ್ದಾರೆ, ಇತರರೊಂದಿಗೆ ಚೆನ್ನಾಗಿಲ್ಲ ಎಂದು ಹೆಮ್ಮೆಯಿಂದ ಇತರರೊಂದಿಗಿನ ಸಂಬಂಧವನ್ನು ಉದಾಸೀನ ಮಾಡಿದ್ದೇ ಆದಲ್ಲಿ ಇಂದಲ್ಲ ನಾಳೆ ಆ ಕುಟುಂಬದ ಸೌಹಾರ್ದದ ವಾತಾವರಣ ಖಂಡಿತ ಕುಸಿದುಬೀಳುತ್ತದೆ.