ಮಂಡ್ಯ : ಪ್ರಚೋದನಕಾರಿ ಪ್ರಚಾರ ಸಾಮಗ್ರಿ ಮುದ್ರಿಸದಂತೆ ಸೂಚನೆ

Update: 2018-03-31 16:24 GMT

ಮಂಡ್ಯ, ಮಾ.31: ಪ್ರಚೋದನಕಾರಿ ವಿಷಯ, ಜಾತಿ ಧರ್ಮಗಳನ್ನು ನಿಂದಿಸುವ ಮತ್ತು ಸಾಮರಸ್ಯವನ್ನು ಕದಡುವ ಮಾಹಿತಿಯುಳ್ಳ ಮುದ್ರಣ ಸಾಮಗ್ರಿಗಳನ್ನು ಮುದ್ರಕರು ಮುದ್ರಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುಶ್ರೀ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲೆ ಹಾಗೂ ತಾಲೂಕು ಮುದ್ರಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣೆಯ ಈ ಸಂದರ್ಭದಲ್ಲಿ ಕಿಡಿಗೇಡಿಗಳು ಸಮಾಜದ ಸಾಮರಸ್ಯವನ್ನು ಕದಡುವ ಕೆಲಸಕ್ಕೆ ಮುಂದಾಗುವ ಸಂಭವವಿದ್ದು, ಮುದ್ರಕರು ಎಚ್ಚರಿಕೆ ವಹಿಸಬೇಕು ಎಂದರು. 

ಜಿಲ್ಲೆಯ ಮುದ್ರಕರು ಮಾದರಿ ನೀತಿ ಸಂಹಿತೆ ಅಡಿಯಲ್ಲಿ ಕಾರ್ಯ ನಿರ್ವಹಿಸಿಬೇಕು. ಚುನಾವಣಾ ಆಯೋಗದ ಸಲಹೆ ಹಾಗೂ ಸೂಚನೆಗಳಡಿ ಮುದ್ರಕರು ಕಾರ್ಯ ನಿರ್ವಹಿಸಬೇಕಿದ್ದು, ನಿಯಮ ಉಲ್ಲಂಘನೆಯಾದಲ್ಲಿ, ಅಂತಹ ಮುದ್ರಕರ ವಿರುದ್ದ ಕಾನೂನು ಕ್ರಮವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಚುನಾವಣೆಯಲ್ಲಿ ಸ್ಪರ್ಧಿಸುವ ಆಭ್ಯರ್ಥಿಗಳ ಪರವಾಗಿ ಪ್ರಚಾರ ಸಾಮಾಗ್ರಿಗಳನ್ನು ಮುದ್ರಿಸುವ ಮುನ್ನ, ಪ್ರಕಾಶಕರುಗಳಿಂದ ಕಾರ್ಯಾದೇಶ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಮುದ್ರಣ ಸಾಮಾಗ್ರಿಗಳ ಮೇಲೆ ಮುದ್ರಕರು ಮತ್ತು ಪ್ರಕಾಶಕರ ಹೆಸರು, ಪ್ರತಿಗಳ ಸಂಖ್ಯೆ, ದೂರವಾಣಿ ಸಂಖ್ಯೆ ಮತ್ತು ವಿಳಾಸದ ವಿವರ ಕಡ್ಡಾಯವಾಗಿ ಮುದ್ರಣಗೊಂಡಿರಬೇಕು ಎಂದರು.

ಜಿಪಂ ಸಿಇಓ ಬಿ.ಶರತ್ ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News