ಭಕ್ತರಲ್ಲಿ ಭಗವಂತನನ್ನು ಕಾಣುವ ಚೇತನ ಸಿದ್ದಗಂಗಾ ಶ್ರೀ: ಸುತ್ತೂರು ಶ್ರೀ

Update: 2018-04-01 11:41 GMT

ತುಮಕೂರು,ಏ.01: ತುಮಕೂರು ನಗರದ ಐತಿಹಾಸಿಕ ಪ್ರಸಿದ್ಧ ಸಿದ್ದಗಂಗಾ ಕ್ಷೇತ್ರದ ಶತಮಾನದ ಶಕಪುರುಷ, ಪದ್ಮಭೂಷಣ, ಕರ್ನಾಟಕ ರತ್ನ,ಅಭಿನವ ಬಸವಣ್ಣ ಎಂದೇ ಕರೆಯಲ್ಪಡುವ ಡಾ.ಶ್ರೀಶಿವಕುಮಾರ ಸ್ವಾಮೀಜಿ ಅವರ 111 ನೇ ಜನ್ಮದಿನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮಕ್ಕೆ 111 ಜ್ಯೋತಿಗಳನ್ನು ಬೆಳಗಿಸುವ ಮೂಲಕ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಿದರು.

ಕಾರ್ಯಕ್ರಮ ಉದ್ಘಾಟನೆ ನಂತರ ಆಶೀರ್ವಚನ ನೀಡಿದ ಅವರು, ಬದುಕಿರುವಾಗಲೇ ಇತರರಿಗೆ ನೆರವಾಗುವುದು ಶ್ರೇಷ್ಠ ವಾದ ಕೆಲಸ. ಯೌವ್ವನದಲ್ಲಿ ಕಾಣಬೇಕಾದ ಎಲ್ಲವನ್ನು ತಿರಸ್ಕರಿಸಿ ದೇವರ ಸ್ಥಾನದಲ್ಲಿ ಪೂಜಿಸಲ್ಪಡುತ್ತಿದ್ದಾರೆ. 111 ದೀಪಗಳನ್ನು ಬೆಳಗಿಸಿದ್ದೇವೆ. ಶ್ರೀಗಳ ಆಶೀರ್ವಾದದಿಂದ ಲಕ್ಷಾಂತರ ಜ್ಯೋತಿಗಳ ಬಾಳಲ್ಲಿ ಬೆಳಕು ಕಂಡಿವೆ. ಅವರು ನೂರಾರು ವರ್ಷಗಳ ಕಾಲ ಬದುಕುವ ಅವರ ದಿವ್ಯ ಜ್ಯೋತಿಗೆ ಹೆಸರಾಗಿದೆ. ಲಿಂಗ ಪೂಜೆ, ತಪಸ್ಸಿನ ಮೂಲಕ ಮಹಾನ್ ಚೇತನರಾಗಿರುವ ಶ್ರೀಗಳು ನಾಡಿನ  ಲಕ್ಷಾಂತರ ಮಕ್ಕಳಲ್ಲಿ ಪರಮಾತ್ಮನನ್ನು ಕಂಡ ಶ್ರೇಷ್ಠ ಸಂತ ಎಂದರು.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶ್ರೀಗಳಿಗೆ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶ್ರೀಗಳು ನೂರಾರು ವರ್ಷಗಳ ಕಾಲ ಬದುಕಬೇಕು ಎಂದರೆ ನಾವೆಲ್ಲರು ನಮ್ಮ 1 ದಿನವನ್ನು ಅವರಿಗೆ ಅರ್ಪಿಸಬೇಕು ಎಂದಿದ್ದರು. ಆದರೆ ಇಂದು ಇಲ್ಲಿ ನೆರೆದಿರುವವರು ಒಂದು ಕ್ಷಣವನ್ನು ಶ್ರೀಗಳಿಗೆ ಅರ್ಪಿಸಿದರೆ ಸಾಕು ಇನ್ನೂ ಹತ್ತಾರು ವರ್ಷಗಳ ಕಾಲ ಬದುಕಿ ನಮಗೆ ಮಾರ್ಗದರ್ಶ ಮಾಡುತ್ತಾರೆ ಶ್ರೀಗಳು ನುಡಿದರು.

ಶ್ರೀಗೌರಿಶಂಕರ ಶ್ರೀಗಳ ನೆನಪು: ಶ್ರೀಮಠದ ಪರಂಪರೆ ನೆನೆದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ಶ್ರೀ.ಶಿವಕುಮಾರ ಸ್ವಾಮೀಜಿ ಹಾಗೂ  ಶ್ರೀಗೌರಿಶಂಕರ ಸ್ವಾಮೀಜಿ ಅವರು, ಸಿದ್ದಗಂಗಾ ಮಠದ 2 ಕಣ್ಣುಗಳಂತೆ ಇದ್ದರು. ಅದರಲ್ಲಿ ನಾವು ಈಗಾಗಲೇ ಒಂದು ಕಣ್ಣು ಕಳೆದುಕೊಂಡಿದ್ದೇವೆ. ಇರುವ ಒಂದು ಕಣ್ಣನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕಿದೆ ಎಂದು ಮಠದ ಇತಿಹಾಸವನ್ನು ಮೆಲುಕು ಹಾಕಿದರು.

ಗುರುವಂದನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಜೀವವನ್ನು ತಂದೆ ತಾಯಿ ಅವರು ಕೊಟ್ಟರೆ, ಜೀವನವನ್ನು ಸ್ವಾಮೀಜಿಗಳು ಕೊಟ್ಟಿದ್ದಾರೆ. ಕಾಯವನ್ನು ಕಾಯಕವನ್ನಾಗಿ ಒಪ್ಪಿಕೊಂಡು ಶ್ರೀ ಶಿವಕುಮಾರ ಸ್ವಾಮೀಜಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಕಾಣದ ಕೈ ಹಾಗೆ ಸಾಮಾಜಿಕ ಸೇವೆ ಮಾಡಿದ್ದಾರೆ ಎಂದರು.

ಶ್ರೀಗಳು ಮಠದಲ್ಲಿ ಕಸ ಗುಡಿಸಿದ್ದಾರೆ, ಉಳುಮೆ ಮಾಡಿದ್ದಾರೆ, ಅಡಿಗೆ ಮಾಡಿದ್ದಾರೆ, ಪಾಠ ಮಾಡಿದ್ದಾರೆ, ಗ್ರಾಮೀಣ ಪ್ರದೇಶದ ಮಕ್ಕಳ ಶ್ರೇಯೋಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಅದರ ಪರಿಣಾಮವಾಗಿಯೇ ಗ್ರಾಮೀಣ ಪ್ರದೇಶದಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣ ಸೇವೆ ಮಾಡಿದ್ದಾರೆ. ಶಿವಕುಮಾರ ಸ್ವಾಮೀಜಿಗಳು ಮಠದ ಜವಾಬ್ದಾರಿ ಹೊತ್ತಾಗ 40 ಜನ ಮಕ್ಕಳು ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ ಪ್ರಸ್ತುತ 10 ಸಾವಿರಕ್ಕೆ ಹೆಚ್ಚು ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿದ್ದಾರೆ.ಸುತ್ತೂರು ಮಠಕ್ಕೂ ಸಿದ್ದಗಂಗಾ ಮಠಕ್ಕೂ ಅವಿನಾನುಬಂಧವಿದೆ. ಕಷ್ಟ, ಸುಖ ಎಲ್ಲ ಸಂದರ್ಭದಲ್ಲೂ ಜೊತೆಯಾಗಿದೆ. ಹಾಗೆಯೇ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಗಳು ಶ್ರೀಗಳ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದಾರೆ. ಆದಿಚುಂಚನಗಿರಿ ಹಾಗೂ ಸಿದ್ದಗಂಗಾ ಮಠದ ನಡುವೆ ಸೇತುವೆಯಾಗಿ ಕೆಲಸ ನಿರ್ವಹಣೆ ಮಾಡುತ್ತಿದೆ. ಶ್ರೀಗಳ ಬಗ್ಗೆ ಅಪಾರವಾದ ಭಕ್ತಿ ಹೊಂದಿರುವ ಅವರು, ಶ್ರೀಗಳ ಆರೋಗ್ಯ ವಿಚಾರದಲ್ಲಿ ಮುಂದೆ ನಿಂತು ಆಸಕ್ತಿಯಿಂದ ವ್ಯವಸ್ಥೆ ಮಾಡಿಕೊಟ್ಟರು ಎಂದು ಶ್ರೀಸಿದ್ದಲಿಂಗಸ್ವಾಮೀಜಿ ನೆನಪಿಸಿಕೊಂಡರು.

ಆದಿಚುಂಚನಗಿರಿ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ನಮ್ಮ ನಿಮ್ಮ ಎಲ್ಲರ ಆರಾಧ್ಯ ದೇವ ಶ್ರೀಗಳು ಪರಮ ಪೂಜ್ಯ ಜಗದ್ಗುರುಗಳಾಗಿದ್ದಾರೆ. ಸಿದ್ದಗಂಗಾ ಶ್ರೀಗಳು ಪ್ರಕೃತಿಯನ್ನು ಮೆಟ್ಟಿ ನಿಂತು ಬೆಳೆದವರು. ಆದರೆ ನಾವು ಪ್ರಕೃತಿಯ ವಿರುದ್ಧವಾಗಿ ಬದುಕು ಹೊರಟರೆ ಬೇಗ ಜಗತ್ತು ಬಿಟ್ಟು ಹೋಗ ಬೇಕಾಗುತ್ತದೆ. ತಾಯಿ ಹಾಗು ಗುರುವಿನ ಸಂಬಂಧ ಅತಿ ಶ್ರೇಷ್ಠ. ಒಂದು ವೇಳೆ ತಾಯಿ ಮಗುವನ್ನು ಕೈ ಬಿಟ್ಟರೂ ಗುರು ಕೈ ಬಿಡುವುದಿಲ್ಲ. ನಾನು ಬಾಲ್ಯದಲ್ಲಿ ತುಮಕೂರಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ವಾರ ಅಥವಾ 15 ದಿನಕ್ಕೆ ಒಮ್ಮೆ ಮಠಕ್ಕೆ ಬಂದು ಶ್ರೀಗಳ ಆಶಿರ್ವಾದ ಪಡೆದು ಹೋಗುತ್ತಿದ್ದೆ ಎಂದು ತಮ್ಮ ಬಾಲ್ಯವನ್ನು ನೆನಪು ಮಾಡಿಕೊಂಡರು. 

ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಮಹೋನ್ನತ್ಸವದಲ್ಲಿ ಶ್ರೀಗಳು ಸಂತೋಷದಿಂದ ಇದ್ದರೆ ಭಕ್ತರು ಮಂಕಾಗಿದ್ದಾರೆ. ನೀತಿ ಸಂಹಿತೆ ಇರುವುದರಿಂದ ರಾಜಕೀಯ ಶಕ್ತಿಗಳ ಹೊರತಾಗಿ ಶ್ರೀಗಳ ಗುರುವಂದನೆಗೆ ನಡೆಯುತ್ತಿರುವುದು ನನಗೆ ವೈಯುಕ್ತಿಕವಾಗಿ ಸಂತೋಷವಾಗಿದೆ. ಬಸವ ತತ್ವವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದವರು ಯುಗದ ಉತ್ಸಾಹಿಗಳಾಗುತ್ತಾರೆ. ಇದಕ್ಕೆ ನಮಗೆ ತಾಜಾ ಹಾಗೂ ನಮ್ಮೆದುರಿನ ಸಾಕ್ಷೀಭೂತರೇ ಸಿದ್ದಗಂಗಾ ಮಠದ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದ ಶ್ರೀಶಿವಕುಮಾರ ಸ್ವಾಮೀಜಿ ಎಂದು ಅವರು ಬಣ್ಣಿಸಿದರು.

ಅಂತರಂಗದಲ್ಲಿ ಶಿವಯೋಗಿ ಬಹಿರಂಗವಾಗಿ ಕಾಯಕ ಯೋಗಿ. ಬಹಿರಂಗದಲ್ಲಿ ಕಾಯಕ ಯೋಗಿ ಅಗಿರುವ ಪರಿಣಾಮವೇ ಇಂದಿಗೂ ಅವರಿಗೆ ಒಂದು ಚಿಕ್ಕ ಕಾಯಿಲೆ ಇಲ್ಲ. ನಮ್ಮ ನಿಮ್ಮ ನಡುವೆ ಸ್ವಾಮೀಜಿಗಳು ಇನ್ನು ನೂರುಕಾಲ ಬದುಕಬೇಕು. ಇಂತಹ ಗುರುವಂದನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಭಾಗ್ಯವನ್ನು ಶ್ರೀಗಳು ಕರುಣಿಸಬೇಕು ಎಂದರು.

ಬೇಲಿಮಠದ ಶಿವರುದ ಸ್ವಾಮಿಜಿ, ಕನಕಪುರದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಇದ್ದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವ ಸಿ.ಪಿ.ಯೋಗೇಶ್ ಅವರು, ಮಹೇಂದ್ರರ್ ಸಿಂಗ್ ಬಟ್ಟಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದ ವೇದಿಕೆಗೆ ಆಗಮಿಸಿ ಸಿದ್ದಗಂಗಾ ಶ್ರೀಗಳಿಗೆ ಗುರು ವಂದನೆ ಸಲ್ಲಿಸಿದರು. 

ಹರಿದು ಬಂದ ಜನಸಾಗರ: ಸಿದ್ದಗಂಗಾ ಮಠ ಅಕ್ಷರಶಃ ಗುರುವಂದನಾ ಜಾತ್ರೆಯಂತೆ ಕಾಣುತ್ತಿತ್ತು. ಸುಮಾರು 1.5 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ ನಿರೀಕ್ಷೆಗೂ ಮೀರಿ ಭಕ್ತರು ನಡೆದಾಡುವ ದೇವರ ಜನ್ಮದಿನೋತ್ಸವಕ್ಕೆ ಸಾಕ್ಷಿಯಾದರು.

9 ಕಡೆ ಪ್ರಸಾದ ವ್ಯವಸ್ಥೆ: ಗುರುವಂದನಾ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗಾಗಿ 9 ಕಡೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಮಠದ ಬುಂದಿ ಊಟದ ಸವಿ ಸವಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ಹಳೆ ಮಠದ ಆವರಣದಲ್ಲಿ ಡಾ.ಶ್ರೀಶಿವಕುಮಾರ ಸ್ವಾಮೀಜಿಗಳಿಗೆ ಸಾಮೂಹಿಕ ಪಾದಪೂಜೆ ಕಾರ್ಯಕ್ರಮ ನಡೆಯಿತು. ಅಲ್ಲಿಂದ ಪೂರ್ಣಕುಂಭ ಸ್ವಾಗತ ಹಾಗೂ ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಶ್ರೀಗಳು ಕಾರಿನಲ್ಲೇ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News