ಶಿವಮೊಗ್ಗ: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಯೇ ಹರತಾಳು ಹಾಲಪ್ಪ?

Update: 2018-04-01 15:05 GMT

ಶಿವಮೊಗ್ಗ, ಏ. 1: ಸಾಗರ ವಿಧಾನಸಭಾ ಕ್ಷೇತ್ರದಿಂದ ಬೇಳೂರು ಗೋಪಾಲಕೃಷ್ಣ ಬಿಜೆಪಿ ಅಭ್ಯರ್ಥಿಯಾಗುವುದು ಖಚಿತವಾಗುತ್ತಿದ್ದಂತೆ ಆ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಹರತಾಳು ಹಾಲಪ್ಪ ಭಿನ್ನಮತದ ರಣ ಕಹಳೆ ಮೊಳಗಿಸಿದ್ದಾರೆ. ಬಿಜೆಪಿ ತೊರೆಯುವ ಗಂಭೀರ ಚಿಂತನೆ ನಡೆಸಲಾರಂಭಿಸಿದ್ದು, ಬಹುತೇಕ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಗಳು ದಟ್ಟವಾಗುತ್ತಿವೆ. 

ಮತ್ತೊಂದೆಡೆ ಬಿಜೆಪಿ ವರಿಷ್ಠರು ಹರತಾಳು ಹಾಲಪ್ಪ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಪಕ್ಷ ತೊರೆಯುವ ನಿರ್ಧಾರ ಪ್ರಕಟಿಸದಂತೆ ಮನವೊಲಿಸಲಾರಂಭಿಸಿದ್ದಾರೆ. ಸಾಧ್ಯವಾದರೆ ಸೊರಬ ಕ್ಷೇತ್ರದಿಂದ ಟಿಕೆಟ್ ನೀಡುವ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆಸೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂಬ ಮಾಹಿತಿಗಳು ಹಾಲಪ್ಪರವರ ಆಪ್ತ ಮೂಲಗಳು ಮಾಹಿತಿ ನೀಡುತ್ತಿವೆ. 

ಮತ್ತೊಂದೆಡೆ ಹಾಲಪ್ಪರವರು ಈ ಬಗ್ಗೆ ಯಾವುದೇ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ. ಈ ಮೊದಲು ನೀಡಿದ್ದ ಭರವಸೆಯಂತೆ ಸಾಗರ ಕ್ಷೇತ್ರದಿಂದ ತಮಗೆ ಅಖಾಡಕ್ಕಿಳಿಯುವ ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ತಮ್ಮ ಬೆಂಬಲಿಗರ ಜೊತೆ ಸಮಾಲೋಚನೆ ನಡೆಸುತ್ತೇನೆ. ಆದಷ್ಟು ಶೀಘ್ರವಾಗಿ ತಮ್ಮ ನಿಲುವು ಏನೆಂಬುವುದನ್ನು ಪ್ರಕಟಿಸುತ್ತೇನೆ ಎಂದು ಹಾಲಪ್ಪರವರು ಬಿಜೆಪಿ ಮುಖಂಡರಿಗೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು ಹಾಲಪ್ಪ ಸೇರ್ಪಡೆಗೆ ಉತ್ಸುಕವಾಗಿದೆ. ಆ ಪಕ್ಷದ ಶಿವಮೊಗ್ಗ ಜಿಲ್ಲೆಯ ಮುಖಂಡರು ಕೂಡ ಓಕೆ ಎಂದಿದ್ದಾರೆ. ಸೊರಬ ಅಭ್ಯರ್ಥಿಯಾಗಿ ಅಖಾಡಕ್ಕಿಳಿಸುವ ಭರವಸೆ ಕೂಡ ಹಾಲಪ್ಪರವರಿಗೆ ಆ ಪಕ್ಷ ನೀಡಿದೆ. ಹಾಲಪ್ಪ ಪಕ್ಷಕ್ಕೆ ಆಗಮಿಸಿದರೆ ಸಾಗರ, ಸೊರಬ ಭಾಗದಲ್ಲಿ ಪಕ್ಷದ ಮತಗಳಿಕೆಗೆ ಸಹಕಾರಿಯಾಗಲಿದೆ. ಬಿಜೆಪಿಗೆ ತಕ್ಕ ಎದಿರೇಟು ನೀಡಬಹುದು. ಎರಡೂ ಕ್ಷೇತ್ರದಲ್ಲಿಯೂ ಜಯ ಸಂಪಾದಿಸಬಹುದೆಂಬ ಲೆಕ್ಕಾಚಾರ ಕೈ ಪಾಳೇಯದ್ದಾಗಿದೆ. 

ಚುನಾವಣೆ ಸಂದರ್ಭದಲ್ಲಿ ಹಾಲಪ್ಪರವರು ಬಿಜೆಪಿ ತೊರೆದರೆ ಪಕ್ಷಕ್ಕೆ ಸಾಕಷ್ಟು ಹಾನಿಯಾಗುವುದನ್ನರಿತಿರುವ ಬಿಜೆಪಿಯು, ಅಂತಿಮ ಕ್ಷಣದವರೆಗೂ ಅವರನ್ನು ಮನವೊಲಿಸುವ ಕಸರತ್ತು ನಡೆಸಲಾರಂಭಿಸಿದೆ. ಹಾಗೆಯೇ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರ ಜೊತೆಯೂ ಸಮಾಲೋಚನೆ ನಡೆಸುತ್ತಿದೆ. ಇಬ್ಬರ ನಡುವೆ ಮನೆ ಮಾಡಿರುವ ಅಸಮಾಧಾನ ಪರಿಹರಿಸಿ, ಒಮ್ಮತ ಮೂಡಿಸುವ ಕೆಲಸ ನಡೆಸುತ್ತಿದೆ. ಆದರೆ ಈ ಇಬ್ಬರು ಸಾಗರ ಕ್ಷೇತ್ರದ ಟಿಕೆಟ್‍ಗೆ ಪಟ್ಟು ಹಿಡಿದಿದ್ದಾರೆ. ತಮ್ಮ ನಿಲುವುಗಳಿಗೆ ಬದ್ದವಾಗಿದ್ದಾರೆ. ಟಿಕೆಟ್ ಕೈ ತಪ್ಪುವವರಿಗೆ ಮುಂದಿನ ದಿನಗಳಲ್ಲಿ ವಿಧಾನ ಪರಿಷತ್‍ಗೆ ಆಯ್ಕೆ ಮಾಡುವ ಆಫರ್ ಗೂ ಇಬ್ಬರು ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಇಬ್ಬರಲ್ಲಿ ಯಾರಿಗೆ ಟಿಕೆಟ್ ಕೈ ತಪ್ಪಿದರೂ ಓಬ್ಬರು ಬಂಡಾಯವೇಳುವ ಸಾಧ್ಯತೆಯಿದೆ. ಇದು ಬಿಜೆಪಿ ವರಿಷ್ಠರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವಂತೆ ಮಾಡಿದೆ. 

'ಕೈ' ಖಚಿತ?: 'ಹಾಲಪ್ಪರ ಜೊತೆ ಬಿಜೆಪಿ ನಡೆಸುತ್ತಿರುವ ಸಂಧಾನ ಮಾತುಕತೆ ಬಹುತೇಕ ವಿಫಲವಾಗಿದೆ. ಸಾಗರ ಕ್ಷೇತ್ರದಿಂದ ಟಿಕೆಟ್ ನೀಡುವ ಬಗ್ಗೆ ಖಚಿತ ಅಭಿಪ್ರಾಯಗಳು ವ್ಯಕ್ತವಾಗುತ್ತಿಲ್ಲ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು ಸೊರಬದಿಂದ ಟಿಕೆಟ್ ನೀಡುವ ಆಫರ್ ಮುಂದಿಟ್ಟಿದೆ. ಈ ಕಾರಣದಿಂದ ಹಾಲಪ್ಪರವರು ಬಹುತೇಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಸನ್ನಿಹಿತವಾಗಿದೆ' ಎಂದು ಹಾಲಪ್ಪರವರ ಆಪ್ತ ಮೂಲಗಳು ಮಾಹಿತಿ ನೀಡುತ್ತಿವೆ. 

ಎಲ್ಲ ಅಂದುಕೊಂಡಂತೆ ನಡೆದರೆ ಎ. 3 ರಂದು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿರುವ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿಯೇ ಹಾಲಪ್ಪ ವಿಧ್ಯುಕ್ತವಾಗಿ ಕಾಂಗ್ರೆಸ್ ಸೇರ್ಪಡೆಯಾದರೂ ಅಚ್ಚರಿಯಿಲ್ಲ. ಈ ಮಾಹಿತಿ ಅರಿತಿರುವ ಬಿಜೆಪಿ ವರಿಷ್ಠರು, ಹಾಲಪ್ಪರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. 

ಚುನಾವಣಾ ಕಣಕ್ಕಿಳಿಯುತ್ತಾರಾ? 
ಒಂದು ವೇಳೆ ಹಾಲಪ್ಪರೇನಾದರೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರೆ ಸೊರಬ ಕ್ಷೇತ್ರದಿಂದ ಅಭ್ಯರ್ಥಿಯಾಗುವ ಸಾಧ್ಯತೆ ಕಡಿಮೆ ಎಂಬ ಮಾತುಗಳು ಕೇಳಿಬರುತ್ತಿವೆ. ತಮ್ಮ ಅಜನ್ಮ ಶತ್ರುವಾಗಿ ಪರಿಣಮಿಸಿರುವ ಬೇಳೂರು ಗೋಪಾಲಕೃಷ್ಣರನ್ನು ಸೋಲಿಸುವ ನಿಟ್ಟಿನಲ್ಲಿ ಸಾಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲಿರುವ ಕಾಗೋಡು ತಿಮ್ಮಪ್ಪ ಪರವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೆ ಮತ್ತೆ ಕೆಲ ಮೂಲಗಳು ಹೇಳುವ ಪ್ರಕಾರ, ಬಿಜೆಪಿ ಒಪ್ಪಿದರೆ ಸಾಗರ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ. ಒಂದು ವೇಳೆ ಸಾಗರದ ಟಿಕೆಟ್ ಸಿಗದಿದ್ದರೆ, ಕಾಂಗ್ರೆಸ್ ಪಕ್ಷದಿಂದ ಸೊರಬ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 

ಸಾಗರ-ಸೊರಬದಲ್ಲಿ ಗೊಂದಲ
ಪ್ರಸ್ತುತ ಚುನಾವಣೆಯಲ್ಲಿ ಸೊರಬದಿಂದ ಅಖಾಡಕ್ಕಿಳಿಯಲು ಕಳೆದ ಹಲವು ವರ್ಷಗಳಿಂದ ಹರತಾಳು ಹಾಲಪ್ಪ ಸಿದ್ದತೆ ಮಾಡಿಕೊಂಡಿದ್ದರು. ಆದರೆ ಕಾಂಗ್ರೆಸ್‍ನಿಂದ ಬಿಜೆಪಿಗೆ ಆಗಮಿಸಿದ ಮಾಜಿ ಸಚಿವ ಕುಮಾರ್ ಬಂಗಾರಪ್ಪಗೆ ಸೊರಬ ಟಿಕೆಟ್ ನೀಡಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದರು. ಹಾಲಪ್ಪಗೆ ಸಾಗರದಿಂದ ಕಣಕ್ಕಿಳಿಸುವ ನಿರ್ಧಾರ ಮಾಡಿದ್ದರು. ಅದರಂತೆ ಹಾಲಪ್ಪ ಕೂಡ ಕಳೆದ ಹಲವು ತಿಂಗಳುಗಳಿಂದ ಸಾಗರ ಕ್ಷೇತ್ರದಾದ್ಯಂತ ಓಡಾಡಿಕೊಂಡಿದ್ದರು. ಮತ್ತೊಂದೆಡೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಟಿಕೆಟ್‍ಗೆ ತೀವ್ರ ಪ್ರಯತ್ನ ಮುಂದುವರಿಸಿದ್ದರು. ಹಾಲಪ್ಪ ಅಭ್ಯರ್ಥಿಯಾಗಲು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ನಡುವೆ ಬಿಜೆಪಿ ವರಿಷ್ಠರು ಬೇಳೂರಿಗೆ ಟಿಕೆಟ್ ಖಚಿತ ಪಡಿಸಿದ್ದರು. ಇದು ಹಾಲಪ್ಪರ ಆಕ್ರೋಶಕ್ಕೆ ಕಾರಣವಾಗಿದ್ದು, ಬಂಡೇಳುವಂತೆ ಮಾಡಿದೆ. ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳಿಂದ ಸಾಗರ ಹಾಗೂ ಸೊರಬ ಬಿಜೆಪಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗುವಂತೆ ಮಾಡಿದೆ. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News