ಮಂಡ್ಯ: ಜೆಡಿಎಸ್ ಬೈಕ್ ರ‍್ಯಾಲಿಗೆ ತಡೆ; ಪೊಲೀಸರು-ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

Update: 2018-04-01 16:26 GMT

ಮಂಡ್ಯ, ಎ.1: ಜೆಡಿಎಸ್ ಟಿಕೆಟ್ ಆಕಾಂಕ್ಷಿ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಗಂಟಗೌಡನಹಳ್ಳಿ ಪ್ರಭಾ ನೇತೃತ್ವದಲ್ಲಿ ರವಿವಾರ ನಡೆದ ಬೈಕ್ ರ್ಯಾಲಿಗೆ ಪೊಲೀಸರು ತಡೆಯೊಡ್ಡಿದರು.

ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ 'ರೈತರ ಜತೆಗೆ ಕುಮಾರ ಪರ್ವದ ಕಡೆಗೆ' ಘೋಷಣೆಯೊಂದಿಗೆ ನಗರಕ್ಕೆ ಆಗಮಿಸಿದ ಬೈಕ್ ರ್ಯಾಲಿಗೆ ಪೊಲೀಸರು ಬ್ರೇಕ್ ಹಾಕಿದರು.

ಉಮ್ಮಡಹಳ್ಳಿ ಗೇಟ್‍ನಿಂದ ಹೆದ್ದಾರಿಯಲ್ಲಿ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಬರುತ್ತಿದ್ದಂತೆ ರ್ಯಾಲಿ ತಡೆದ ಪೊಲೀಸರು ಕೆಲವು ಬೈಕ್ ಮತ್ತು ಪಕ್ಷದ ಬಾವುಟಗಳನ್ನು ವಶಕ್ಕೆ ಪಡೆದರು.

ಈ ಸಂದರ್ಭದಲ್ಲಿ ಪೊಲಿಸರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಹಲವರು ಪೊಲೀಸರಿಂದ ತಪ್ಪಿಸಿಕೊಂಡ ಜಾಗ ಖಾಲಿ ಮಾಡಿದರು. ಪಕ್ಷದ ಬಾವುಟಗಳು ಚೆಲ್ಲಾಪಿಲ್ಲಿಯಾದವು.

ರ್ಯಾಲಿಗೆ ಅನುಮತಿ ಪಡೆಯಲಾಗಿತ್ತು. ಆದರೆ, ಶನಿವಾರ ತಡರಾತ್ರಿ ಅನುಮತಿ ಹಿಂಪಡೆಯಲಾಗಿದೆ ಎಂದು ನೊಟೀಸ್ ಕೊಟ್ಟಿದ್ದರಿಂದ ಕಾರ್ಯಕರ್ತರಿಗೆ ಮಾಹಿತಿ ನೀಡಲಾಗಲಿಲ್ಲವೆಂದು ಪ್ರಭಾ ಸುದ್ದಿಗಾರರಿಗೆ ತಿಳಿಸಿದರು.

ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷೆಯಾಗಿ 6 ವರ್ಷಗಳಿಂದ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿದ್ದೇನೆ. ಮಹಿಳಾ ಸ್ವಸಹಾಯ ಸಂಘಗಳು, ಸೀಶಕ್ತಿ ಸಂಘಗಳ ಮೂಲಕ ಪಕ್ಷ ಬಲವರ್ಧನೆ ಮಾಡುತ್ತಿದ್ದೇನೆ. ಆದ್ದರಿಂದ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕು ಎಂದು ಅವರು ಜೆಡಿಎಸ್ ವರಿಷ್ಠರನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News